ಒಮ್ಮೆ ಒಂದು ನಾಯಿ ಯೋಚಿಸಿತು. ಇದೇನು? ನಾನು ಸರ್ವ ವಿಧದಲ್ಲಿ ನನ್ನ ಒಡೆಯನನ್ನು ಪ್ರೀತಿಸುವೆ, ಆದರೆ ನನ್ನ ಬಾಲ ನನ್ನ ದೇಹಕ್ಕೆ ತೊಟ್ಟಿನಂತೆ ಅಂಟಿಕೊಂಡು ನನ್ನ ಹೃದಯದ ಪ್ರೀತಿಗಿಂತ ತಾನು ಅಳ್ಳಾಡಿಸುವ ಬಾಲದ ಪ್ರೀತಿಯೇ ಹೆಚ್ಚು ಎಂದು ತಿಳಿಯುತ್ತಿದೆ. ಪುಟಗೋಸಿ ಬಾಲಕ್ಕೆ ಅದೆಷ್ಟು ಜಂಭ! ಸೊಟ್ಟಗಿದ್ದರು ತನ್ನ ಪ್ರೀತಿ ಬಲು ನೆಟ್ಟಗೆ ಎಂಬ ಅಹಂಭಾವ ಅದಕ್ಕೆ. ನನ್ನ ಹಿಂದೆ ನನಗೇ ಪಿತೂರಿ ಮಾಡುತ್ತದೆ. ಇದಕ್ಕೇನು ನನ್ನೊಡೆಯ ಕೊಡುವ ಆಹಾರ ತಿನ್ನುವ ಯೋಗ್ಯತೆ ಇಲ್ಲ. ನನ್ನ ಬಾಯಿಯಂತೆ ಬೊಗಳಲೂ ಬರುವುದಿಲ್ಲ. ಬರಿ ಬಾಲ ಅಲ್ಲಾಡಿಸಿದರೆ ಆಯಿತೇ? ನನ್ನ ಇಡೀ ದೇಹಕ್ಕಿಂತ ತಾನೇ ಹೆಚ್ಚು ಎನ್ನುವಂತೆ ಕಳ್ಳ ನಟನೆ ಮಾಡುತ್ತದೆ. ಇದಂತಹ ನ್ಯಾಯ? ಬಹಳಷ್ಟು ದಿನ ನಾಯಿ ತನ್ನ ಬಾಲದ ಬಗ್ಗೆ ಚಿಂತನೆ ಮಾಡಿತು. ಬಾಲದ ಮೇಲೆ ಈರ್ಷೆ ಇದ್ದೇ ಇತ್ತು.
ಒಮ್ಮೆ ಬೇಲಿ ಹಾರಿ ಬರುವಾಗ ನಾಯಿ ಬಾಲ ಸಿಕ್ಕಿ ಹಾಕಿಕೊಂಡಿತು. ಅಪಾರ ನೋವಾಯಿತು. ಇದೇನು ನನ್ನಿಂದ ತುಸುದೂರ ಇರುವ ಈ ಬಾಲ ಸಿಕ್ಕಿಕೊಂಡು ನನ್ನ ಮುಂದೆ ಬರಲು ಬಿಡುತ್ತಿಲ್ಲ. ನನಗೇಕೆ ಇದು ನೋವು ಮಾಡುತ್ತಿದೆ ಎಂದು ಕೊಂಡಿತು. ಒಡೆಯ ಬಂದು ಬಾಲವನ್ನು ಬೇಲಿಯ ಮುಳ್ಳಿನಿಂದ ತೆಗೆದಾಗ “ಓಹೋ! ಇದು ನನ್ನ ದೇಹದ ಅಂಗ”. ನಾನು ಇಷ್ಟು ದಿನ ನನ್ನತನದ ಅರಿವಿಲ್ಲದವನಾಗಿದ್ದೆ. “ಬಾಲದಲ್ಲಿ ನಾನು, ನನ್ನಲ್ಲೂ ಬಾಲ, ನನ್ನ ಹಿಂಭಾಗವು ನಾನು, ನನ್ನ ಮುಂಭಾಗವು ನಾನು.” ಒಳಹೊರಗು ಎಲ್ಲಾ ಒಂದಾದಾಗ ನನ್ನಿರುವು ಎಂಬ ಸತ್ಯವನ್ನು ಅರಿತುಕೊಂಡಿತು.
*****








