Home / ಕಥೆ / ಸಣ್ಣ ಕಥೆ / ಶಿರುವಾಳದ ಕನ್ನ (ಈ ಸಾರಿ)

ಶಿರುವಾಳದ ಕನ್ನ (ಈ ಸಾರಿ)

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ.

“ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು.

ಗೌರಿ ತುಂಬು ಗರ್‍ಭಿಣಿ, ದಿನ ತುಂಬಿ ಇನ್ನೂ ಹೆಚ್ಚು ದಿನ ಆಗಿವೆಯೇನೋ ಎಂದು ಕಾಣುವಷ್ಟು ದೊಡ್ಡ ಹೊಟ್ಟೆ, ಆಕೆಯನ್ನು ಕಂಡು “ನಿನಗೆ ಗಂಡೇ ವುಟ್ಟುವುದು ಕಣೇ” ಎಂದು ಎಲ್ಲರೂ ಹೇಳುತ್ತಿದ್ದರು. ಆಕೆಗೆ ಖುಷಿಯೋ ಖುಷಿ, ಏಕೆಂದರೆ ಗಂಡನೂ, ಅತ್ತೆಯೂ ಗಂಡು ವುಟೈತೆ’ ಎಂದು ಆಸೆ ಪಟ್ಟಿದ್ದರು. ಗೌರಿಯ ಬಯಕೆಯೂ ಅದೇ ಆಗಿತ್ತು.

ಅಲ್ಲೇ ಪಕ್ಕದಲ್ಲಿ ಹೆಂಡತಿ ಊರು. ಎರಡು ಫರ್‍ಲಾಂಗು ದೂರ ಅಷ್ಟೆ. ಹೆರಿಗೆಗೆ ಒಂದೆರೆಡು ದಿನ ಮುಂಚೆ ಕನ್ನಪ್ಪ ಹೆಂಡತಿ ಊರಿಗೆ ಹೋಗಿದ್ದ.

ಬಾಗಿಲಲ್ಲೇ ನಿಂತಿದ್ದ ಗೌರಿಯನ್ನು ಕಂಡು ತನ್ನ ಕೈಯಲ್ಲಿದ್ದ ಚೀಲ ಕೊಡುತ್ತಾ “ಘನಾಗಿದ್ದೀಯೇನೆ ಗೌರಾ” ಎಂದು ಅವಳ ಗಲ್ಲ ಚಿವುಟಿದ. ನಾಚಿಕೆಯಿಂದ,

“ವೂ ಕಣ್ರೀ ಘನಾಗಿದ್ದೀನಿ, ನೀವು ಎಂಗಿದೀರಿ?” ಎಂದಳು.

“ನೋಡು, ನಾ ಎಂಗಿದೀನಿ” ಎಂದು ಅಕೆಯ ಹೊಟ್ಟೆ ಮುಟ್ಟಿ ನೋಡಿ-

“ಗಂಡು ಮಗ ಅಕೈತೇನಾ” ಎಂದು ಕೇಳಿದ.

“ವೂ ಕಂಡ್ರಿ ಎಂದಳು.

“ಸರಿಯಾಗಿ ಆರೋಗ್ಯ ನೋಡಕಾ. ಅಳ್ಸಿದ್ದು ಪಳ್ಸಿದ್ದು ತಿನ್ಬ್ಯಾಡ” ಎಂದು ಅವನು ಅತ್ತೆಯನ್ನು ಮಾತಾಡಿಸಿ-

“ಅತ್ತೆಮ್ಮ, ಈಗ್ಲೆ ಊರಿಗೆ ವೋಗ್ತೀನಿ”

“ರಾತ್ರಿ ಇದ್ದು ಬೆಳಗಾ ಮುಂಚೆ ವೋಗಿ” ಎಂದಳು.

“ಇಲ್ಲ ಒಲ್ದಾಗೆ ಕೆಲಸ ಬಾಳಾ ಐತೆ. ನಾನು ಓಗಾಕೆ ಬೇಕು” ಎಂದು ತಡೀದೆ ಗಂಡು ಮಗನ ಆಸೆಯಿಂದ ಅಂದು ಸಂಜೆ ಊರಿಗೆ ಹಿಂತಿರುಗಿದ.

ಶಿರುವಾಳದ ಕನ್ನಪ್ಪ ಬಡವ ಅಂದ್ರೆ ಬಡವ, ಅವನಿಗಿರೋದು ಅರ್‍ಧ ಎಕರೆ ಹೊಲ ಮಾತ್ರ. ಇದರಿಂದ ಬಂದ ಉತ್ಪನ್ನ ಸಂಸಾರಕ್ಕೆ ಸಾಕಾಗುತ್ತಿರಲಿಲ್ಲ. ಬೇರೆಯವರ ಹೊಲದಲ್ಲಿ ಕೆಲಸ ಮಾಡಿ ಸಂಸಾರ ನಡೆಸಲು ಬಹಳ ಶ್ರಮಿಸುತ್ತಿದ್ದ. ಹೆಂಡತಿಯೂ ಕೂಡ ಅವನ ಜೊತೆಗೂಡುತ್ತಿದ್ದಳು.

ಕನ್ನಪ್ಪ ಪಕ್ಕದ ಹಳ್ಳಿ ಭೀಮನೇರಿಯ ಹೆಣ್ಣನ್ನು ಮದುವೆಯಾಗಿದ್ದ. ಚೊಚ್ಚಲು ಹೆರಿಗೆ, ತೌರು ಮನೆಗೆ ಹೋಗಿದ್ದಾಳೆ ಹೆಂಡತಿ.

ಎರಡು ದಿನ ಕಳೆದ ಮೇಲೆ ಹೆಣ್ಣು ಮಗು ಹುಟ್ಟಿತೆಂದು ವಿಷಯ ತಿಳೀತು. ಬೇಜಾರು ಮಾಡಿಕೊಂಡು ಮನೀಗೆ ಹೋಗದೇ ಹೊಲ್ದಾಗೆ ಕೆಲಸ ಮಾಡ್ತಿದ್ದ. ಮತ್ತೊಮ್ಮೆ ಹೇಳಿ ಕಳಿಸಿದ್ರೂ ಹೆಂಡ್ತಿ ಊರಿಗೆ ಹೋಗಿರಲಿಲ್ಲ. ಅವರವ್ವ ಬಸವ್ವನೇ ಬಂದು “ಏ ಕನ್ನ, ಓಗಿ ಬಾರಾ ಬಾಣಂತೀನ, ಕೂಸ್ನ ನೋಡ್ಕೊಂಡು ಬಾ” ಎಂದು ಗದರಿಸಿದಳು.

ಅವ್ವ ಹೇಳಿದ ಮ್ಯಾಕೆ ಕನ್ನಪ್ಪ ಊರಿಗೆ ಹೋಗಿದ್ದ, ಗೌರ ಸಪ್ಪಗಿದ್ದಳು. ಗಂಡನನ್ನು ಕಂಡು ನಿಧಾನ ದನಿಯಲ್ಲಿ-

“ದ್ಯಾವರು ಈಂಗ ಮಾಡಿಬಿಟ್ಟ. ನಮ್ಮ ಆಸೆ ಈಡೇರಲಿಲ್ಲ. ಮುಂದಿನ ಸಾರಿ ಗಂಡೇ ಅಡಿತೀನಿ” ಎಂದಳು ದೈನ್ಯತೆಯಿಂದ. ಅವನ ಮನಸ್ಸು ಗಂಡು ಮಗುವಾಗಲಿಲ್ಲ ಎಂದು ಹೆಡ್ತಿ ಹತ್ತಿರ ಸರಿಯಾಗಿ ಮಾತನಾಡಲಿಲ್ಲ. ಆ ದಿವ್ಸ ಇದ್ದು ಮಾರನೇ ದಿನ ತನ್ನೂರಿಗೆ ವಾಪಾಸ್ಸಾದ. ಅವನ ತಾಯಿ ಮಗನನ್ನು ಕಂಡು “ಏನ್ಹಾ ಕನ್ನ, ಸೊಸೆ ಎಂಗವಳೆ, ಕೂಸು ಘನಾಗೈತೇನಾ” ಎಂದು ಕೇಳಿದಳು.

“ವೂ, ಹೆಣ್ಣು ಕೂಸು ಕಣವ್ವಾ” ಎಂದು ಕೂಗಿದ.

ಮುದುಕಿ ಚಡಪಡಿಸುತ್ತಾ

“ಕೂಸು ಯಾರಂಗೈತ್ಲಾ”

ಸುಮ್ಮನಿದ್ದ. ಮತ್ತೆ ಅವನವ್ವ

“ಯಾರಂಗೈತ್ಲಾ” ಎಂದು ಜೋರಾಗಿ ಕೇಳಿದಳು.

“ವಸಿ ನಿನ್ನಂಗೈತೆ” ಎಂದು ಸಿಡಿಮಿಡಿಗೊಂಡಿದ್ದ.

ಹಿಂಗೆ ದಿನಾ ಹೊಲಕ್ಕೆ ಹೋಗಿದ್ದ ಕನ್ನಪ್ಪ, ಕೆಲಸ ಜೋರಾಗಿದೆ. ಅವನಿಗೆ ಸಾಲಾಗಿ ನಾಲ್ಕು ಹೆಣ್ ಆಗಿವೆ. ಗೌರ ಮತ್ತೀಗ ಬಸುರಿ. ದಿನ ತುಂಬಿವೆ. ಮಗಳ ಅರೈಕೆಗೆ ಬಾಣಂತಿತನಕ್ಕೆ ಅಂತ ಅವನ ಅತ್ತೆ ಇಲ್ಲಿಗೆ ಬಂದಿದ್ದಾಳೆ. ಮೊನ್ನೆ ತಾನೆ ಮಗಳು ಡಾಕ್ಟರ್ ಹತ್ತಿರ ಹೋಗಿ ಬಂದಿದ್ದರು. ಇನ್ನೇನು ಮೂರು ನಾಲ್ಕು ದಿನಗಳಲ್ಲಿ ಹೆರಿಗೆ ಆಗುತ್ತೆಂದು ಡಾಕ್ಟರು ಹೇಳಿದ್ದರು. “ನಿಮ್ಮ ಮಗಳ ಹೆರಿಗೆ ಇದೇ ಆಸ್ಪತ್ರೆಯಲ್ಲಿ ಮಾಡಿಸಿ” ಎಂದಳು ನರ್‍ಸಮ್ಮ, “ನಾವು ಆಸುಪತ್ರೆ, ಗೀಸುಪತ್ರೆಯಲ್ಲಿ ಮಾಡ್ಸಾಕ್ಕಿಲ್ಲಾ ಕಣವ್ವಾ” ಎಂದು ಹೇಳಿ ಮಗಳನ್ನು ಮನೆಗೆ ಕರೆದುಕೊಂಡು ಬಂದಳು.

ಕನ್ನಪ್ಪ ಅಂದು ಬೆಳಿಗ್ಗೆ ಹೊತ್ತೆ ಹೊಲಕ್ಕೆ ಹೋಗಿದ್ದ, ಗೌರೀಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಮನೆಯಲ್ಲಿ ಸೂಲುಗಿತ್ತೇರೆಲ್ಲ ಸೇರಿದ್ದರು. ಮದ್ಯಾಹ್ನ ಊಟಕ್ಕೆ ಬರದೇ ಕನ್ನಪ್ಪ ರೆಟ್ಟೆ ಮುರಿದು ಹೊಲದಲ್ಲಿ ಕೆಲಸ ಮಾಡುತ್ತಿದ್ದ. ಮಗಳು ಊಟಕ್ಕೆ ಕರೆದ್ರೆ,

“ಬರಲ್ಲಾ ವೋಗು” ಎಂದು ಸಿಟ್ಟು ಮಾಡಿದ್ದ. ಮಗಳು ಪೆಚ್ಚುಮೋರೆ ಹಾಕಿಕೊಂಡು ಮನೆಗೋಗಿದ್ದಳು. ಆಗಲೇ ಅವರವ್ವಂಗೆ ಹೆರಿಗೆ ನೋವು ಹೆಚ್ಚಾಗಿತ್ತು. ನರಳಾಟ ಜೋರಾಗಿತ್ತು. ಸುಮಾರು ದೂರ ಕೇಳಿತ್ತು.

“ಅವ್ವಾ….. ಅವ್ವಾ……. ಸೊಂಟ ಬಾಳಾ ನೋಯ್ತಾ ಇದೆ ಕಾಣವ್ವಾ………”

“ಊಂ…… ಊಂ……. ಊಂ………”

“ನರಳಬೇಡ ಗೌರ ಇನ್ನೇನು ಎರಿಗೆ ಆಗೋಯ್ತದೆ” ಎಂದು ತಾಯಿ ತಲೆ ಸವರುತ್ತಾ “ನಿಂಗೆ ಈ ಸಾರಿ ಗಂಡು ಮಗಾನೇ ಆಯ್ತದೆ, ಸುಮ್ಮಿರು ಮಗಾ, ಸಮಾಧಾನ ಮಾಡ್ಕಾ ಮಗ” ಎಂದಾಗ ಆಕೆಯ ಕಣ್ಣಲ್ಲಿ ಮಿಂಚು ಬಂದಂಗ್ಹಾಗಿ ಒಂದು ಕ್ಷಣ ಮುಖದಲ್ಲಿ ನಗು ಕಾಣಿಸ್ಕೊಂಡು ಮಾಯವಾಯ್ತು. ಮತ್ತೆ ನರಳಾಟ.

“ಊಂ…… ಊಂ……. ಅವ್ವಾ….. ಅವ್ವಾ….”

ಅವರವ್ವನ ನರಳಾಟ ಕಂಡು ಹೊರಗಡೆ ಇದ್ದ ಹುಡುಗಿಯರು ಗಾಬರಿಯಾಗಿದ್ದರು. “ಏ ಅಕ್ಕಾ, ಅವ್ವನ ನರಳಾಟ ನೋಡಿದ್ರೆ ಗಂಡು ಮಗಾನೆ ಆಗೋದು ಕಣೇ”

ಇನ್ನೊಬ್ಬಳು

“ಹೌದು ಕಣೇ ಈ ಸಾರಿ ಅವ್ವನ ನರಳಾಟ ಜೋರಾಗೈತೆ, ಗಂಡು ಮಗಾನೆ ಆಗೋದು” ಎಂದು ದನಿಗೂಡಿಸಿದಳು.

“ಅಲ್ರೇ ನೀವು ಏಳ್ದಂಗೆ ಆಗ್ತತೇನ್ರೇ. ಎಲ್ಲಾ ಆ ದೇವ್ರ ಆಟಾ” ಎಂದು ತಂಗಿಯರನ್ನು ಗದರಿಸಿದಳು.

ಏನೇ ಆದ್ರೂ ಈ ಹುಡುಗಿಯರು ನಮ್ಮವ್ವನಿಗೆ ಈ ಸಾರಿಯಾದ್ರೂ ಗಂಡು ಮಗುವಾಗಲಿ ಎಂದು ಮನದಲ್ಲಿಯೇ ದೇವರನ್ನು ಧ್ಯಾನಿಸುತ್ತಲೇ ತಮ್ಮ ತಮ್ಮಲ್ಲಿಯೇ ಮಾತಾಡಿಕೊಂಡರು.

ಅಷ್ಟರಲ್ಲಿಯೇ ಅಜ್ಜಿ ಹೊರಗೆ ಬಂದು, ಆ ಹುಡುಗಿಯರು ಗಾಬರಿಯಿಂದ ಅಜ್ಜೀತಾವ ಓಡಿ ಬಂದರು. “ಏ! ಏ! ಯಾಕಂಗ ಓಡಿಬರ್‍ತೀರಿ, ವಸಿ ನಿಲ್ರಿ. ನಿಮ್ಮವ್ವಂಗೆ ಗಂಡು ಮಗ ಉಟ್ಟೈತೆ ಕಣ್ರೀ. ನಿಮ್ಮಪ್ಪಂಗೆ ವೋಗಿ ಏಳ್ರೇ” ಎಂದಳು. ಅಷ್ಟು ಹೇಳಿದ್ದೇ ತಡ. ಆ ಮಕ್ಕಳು ಖುಷಿಯಿಂದ ಒಂದೇ ಉಸಿರಿಗೆ ಹೊಲಕ್ಕೆ ಓಡಿದರು. ಪಾಪ! ಏದುಸಿರು ಬಿಡುತ್ತಾ ಅವರ ಅಪ್ಪನ ಮುಂದೆ ನಿಂತ್ಯಾರೆ.

“ಅಪ್ಪಾ….”
“ಏ ಅಪ್ಪಾ….”
“ಅಪ್ಪಾ….”
“ಏ ಅಪ್ಪಾ….” ಎಂದು ಕೂಗೇ ಕೂಗಿದರು. ಏನು ಅಂದ್ರು ಕನ್ನಪ್ಪ ಇವರ ಕಡೆ ಮುಖ ತಿರುಗಿಸದೇ ಬದ ಕಡೀತಾನೆ ಇದ್ದ. ಅದಕ್ಕೆ ಆ ಹುಡುಗಿಯರು ಪುನಃ- “ಅಪ್ಪಾ……” ಎಂದು ಒಟ್ಟಿಗೆ ಜೋರಾಗಿ ಕೂಗಿದರು. ಅದಕ್ಕೆ ಅವನು ಕಣ್ಣು ಕೆಂಪಗೆ ಮಾಡಿ-

“ಆ! ಏನ್ರೇ? ಮುಂಡೇರಾ” ಎಂದು ಗದರಿಸಿದ.

ಆ ಮಕ್ಕಳು “ತಮ್ಮಾ ಉಟ್ಯಾನೆ” ಎಂದು ಹೆದರಿಕೆಯಿಂದ ನಿಧಾನವಾಗಿ ಹೇಳಿದರು.

ಕಣ್ಣಗಲಿಸಿ “ಆ! ಅಂಗ! ನಿಜವೇನ್ರೇ” ಎಂದ.

“ವೂ ಕಣಪ್ಪಾ” ಎಂದಾಕ್ಷಣ ಅವ ಹೊಲದ ಕೆಲಸ ಮಾಡೋದನ್ನೇ ನಿಲ್ಲಿಸಿ ಬಿಟ್ಟ.

ಅವನ ತಲೆಗೆ ಮಿಂಚು ಹೊಡೆದಂಗಾಗಿ-

“ಇನ್ನು ನಂಗೇನು ಕೆಲ್ಸ ಈ ಒಲ್ದಾಗೆ, ಬೇಕಾದ್ರೆ ಅವ ಮಾಡ್ಕಂತಾನೆ” ಎಂದು ಗುದ್ದಲಿ, ಪಿಕಾಸಿ, ಎಲ್ಲಾ ಬಿಸಾಕಿ ಮಕ್ಕಳ ಜೊತೆ ಓಡಿದ ಮನೆಗೆ.
*****

Tagged:

Leave a Reply

Your email address will not be published. Required fields are marked *

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...