Home / ಲೇಖನ / ಇತರೆ / ಪೌರುಷ-ಜಾದು

ಪೌರುಷ-ಜಾದು

ತಮ್ಮನ್ನು ತಾವೇ ಹೊಗಳಿಕೊಳ್ಳುವದು ಕೆಲವರಿಗೆ ಸೇರುತ್ತದೆ. ಎರಡನೇಯವರನ್ನು ಹೊಗಳುವದು ಕೆಲವರ ರೀತಿ, ಎರಡನೇಯವರು ತಮ್ಮನ್ನು ಹೊಗಳಬೇಕೆಂದು ಕೆಲವರ ಇಚ್ಛೆ. ಈ ಮೂರು ತರಗತಿಯ ಜನರಲ್ಲಿ ತೀರ ಕನಿಷ್ಟರಾರೆಂಬುದನ್ನು ಹೇಳುವಷ್ಟು ಜಾಣನಿದ್ದೇನೆಂದು ನಾನು ಸ್ವತಃ ನನ್ನನ್ನು ಹೊಗಳಿಕೊಳ್ಳುವದಿಲ್ಲ !
     *     *     *
ಯಾರು ತೀರ ಕನಿಷ್ಠರೆಂಬದನ್ನು ವಿಚಾರಿಸಹತ್ತಿದರೆ ಮೊದಲು ಎಲ್ಲರೂ ಕನಿಷ್ಠರೆಂದು ಒಪ್ಪಿದಂತಾಗುತ್ತದೆ. ಆ ಮೇಲೆ ಅದರಲ್ಲಿ ಕನಿಷ್ಠರಾರು ? ಹೆಚ್ಚು ಕನಿಷ್ಟರು ಯಾರು ? ತೀರ ಕನಿಷ್ಠರು ಯಾರು ? ಎಂಬವನು ನಿರ್ಣಯಿಸಬೇಕಾಗುತ್ತದೆ. ಇದನ್ನು ವಾಚಕವೃಂದವೇ ನಿರ್ಣಯಿಸಲಿ. ವಾಚಕರು ಇಷ್ಟು ಜಾಣರಿರುವರೆಂದು ಹೊಗಳಲು ಸಿದ್ಧನಿದ್ದೇನೆ!
     *     *     *
ಆದರೆ ನನಗಾದರೂ ನನ್ನ ಪ್ರಾಮಾಣಿಕ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅಡ್ಡಿ ಏನಿದೆ ? ಅಂದರೆ ಉಳಿದ ಸಮಯದಲ್ಲಿ ಅಪ್ರಾಮಾಣಿಕ ಅಭಿಪ್ರಾಯ ಕೊಡುತ್ತೇನಂತಲ್ಲ. ಹೀಗೆ ಅನ್ನುವ ರೂಢಿ, ವಿಶೇಷತಃ ಅಪ್ರಾಮಾಣಿಕ ಅಭಿಪ್ರಾಯವನ್ನು ಕೊಡುವಾಗ ಅದಕ್ಕೆ ಪ್ರಾಮಾಣಿಕ ಮತವೆಂದು ಒತ್ತಿ ಹೇಳುವದು ರೂಢಿ !
* * * *
ಅದೇನೇ ಇರಲಿ, ನನ್ನ ಪ್ರಾಮಾಣಿಕ ಅಭಿಪ್ರಾಯವು ಹೀಗೆ ಇರುತ್ತದೆ: ಮೇಲೆ ಕಾಣಿಸಿದ ಮೂರು ಗುಣಗಳು (ದುರ್ಗುಣಗಳು) ಇರುವವನು ಅಂದರೆ ಸ್ವತಃ ಹೊಗಳಿಕೊಂಡು, ಎರಡನೆಯವರನ್ನು ಹೊಗಳಿ, ಎರಡನೆಯವರು ತನ್ನನ್ನು ಹೊಗಳಬೇಕೆಂದು ಬಯಸುವವನು ತೀರ ಕನಿಷ್ಠ !!
****
ಇದ್ದದ್ದನ್ನು ಇಲ್ಲದಂತೆ ಮಾಡುವದಕ್ಕೆ ಜಾದು ಅನ್ನುತ್ತಾರೆ. ಇಲ್ಲದಲ್ಲಿ ಇರುವಂತೆ ಮಾಡುವದೂ ಜಾದು. ಆದರೆ ಒಂದೇ ವೇಳೆಯಲ್ಲಿ ಇದ್ದಲ್ಲಿ ಇಲ್ಲದಂತೆ ಮಾಡಿ, ಇಲ್ಲದಲ್ಲಿ ಇರುವಂತೆ ಮಾಡಿದರೆ ಅದು “ಡಬ್ಬಲ್ ಜಾದು ”.
  * * * *
ಒಮ್ಮೆ ಒಂದು ಮೇಜವಾನಿಯಲ್ಲಿ ಸುಗ್ರಾಸ ಭೋಜನವಾದ ನಂತರ ಎಲ್ಲರೂ ಹರಟೆ ಹೊಡೆಯುತ್ತ ಕುಳಿತಿದ್ದರು. ಊರಿದ್ದಲ್ಲಿ ಹೊರಗೇರಿ ಇರುವದೇ ! ಕುಳಿತ ಮಂಡಳಿಯಲ್ಲಿ ಒಬ್ಬಿಬ್ಬರು ತುಡುಗರಿದ್ದರು. ಎದುರಿಗೆ ಇದ್ದ ಬೆಳ್ಳಿಯ ತಬಕ, ಪಾತ್ರೆ, ವಾಟಿ, ಚಮಚೆಗಳಲ್ಲಿ ಏನಾದರೂ ಒಂದನ್ನು ನೆಗವಬೇಕೆಂದು ಅಪೇಕ್ಷಿಸುತ್ತಿದ್ದ ಒಬ್ಬ ತುಡುಗನು ಮೆಲ್ಲಗೆ ಒಂದು ಬೆಳ್ಳಿಯ ಚಮಚೆಯನ್ನು ಎತ್ತಿ ತನ್ನ ಬೂಟಿನಲ್ಲಿ ಸೇರಿಸಿದನು. ಸಮಯ ಸಾಧಿಸುತ್ತಿದ್ದ ಮತ್ತೊಬ್ಬ ತುಡುಗನು ಇದನ್ನು ನೋಡಿದನು. ಮತ್ತೊಂದು ಚಮಚೆಯನ್ನು ತಾನು ಕದಿಯುವದು ಅವನಿಗೆ ಕಠಿಣವಾಯಿತು. ತಟ್ಟನೆ ಖುರ್ಚಿಯ ಮೇಲೆ ಎದ್ದು ನಿಂತು ಆತ ಸಾರಿದ : “ಸಭ್ಯಗೃಹಸ್ತರೆ, ನಾನು ಸ್ವಲ್ಪು ಜಾದುವಿನ ಕೆಲಸ ಮಾಡಿ ತೋರಿಸುತ್ತೇನೆ. ನಿಮ್ಮೆದುರಿಗೆ ನಾನು ಒಂದು ಬೆಳ್ಳಿಯ ಚಮಚೆಯನ್ನು ನನ್ನ ಕಿಸೆಯಲ್ಲಿ ಇಡುವೆ. ಅದನ್ನು ನಿಮ್ಮಲ್ಲಿ ಒಬ್ಬರ ಬೂಟಿನೊಳಗಿನಿಂದ ತೆಗೆಯುವೆ” ಹೀಗೆ ಅಂದು ಒಂದು ಬೆಳ್ಳಿಯ ಚಮಚೆ ಯನ್ನು ಕಿಸೆಯಲ್ಲಿ ಹಾಕಿದನು. ಆ ಮೇಲೆ ಅತ್ತಿತ್ತ ಸುಳಿದಾಡಿದಂತೆ ಮಾಡಿ, ಮೊದಲನೆಯ ಕಳ್ಳನ ಹತ್ತಿರ ಬಂದು, ಅವನ ಬೂಟಿನಿಂದ ಚಮಚೆಯನ್ನು ತೆಗೆದನು. ಎಲ್ಲರೂ ಬಿದ್ದು ಬಿದ್ದು ನಕ್ಕರು. ಮೊದಲನೆಯ ಕಳ್ಳನೂ ನಕ್ಕನು!! ಎರಡನೆಯ ಕಳ್ಳನು ಮೀಸೆ ಹುರಿ ಹಾಕುತ್ತ ಕಿಸೆಯಲ್ಲಿಯ ಚಮಚೆಯೊಡನೆ ಹೊರಟು ಹೋದನು!
*****
Tagged:

Leave a Reply

Your email address will not be published. Required fields are marked *

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...