ತಿರೆಯ ಭಾರವ ಹೊತ್ತು ಬಳಲಿರುವ ಫಣಿ ತನ್ನ
ಹೆಡೆಯೊಂದರೊಳು ಎದ್ದು ಉಳಿದುದರೊಳಾಲಸ್ಯ-
ವಡೆವಂತೆ, ಹೆರರ ಸಿರಿಬಾಳ್ತನದ ಭಾರವನು
ಶಿರದಿ ಪೊತ್ತೀ ಜನತೆ ತನ್ನ ಮಿಕ್ಕಂಗದೊಳು
ಪ್ರಾಣಮಾತ್ರಳೆ ಆಗಿ ಜ್ಞಾನಜಡತೆಯ ಪಡೆದು
ಇಲ್ಲಿ ಈ ದೇಗುಲದ ಸರಸತಿಯ ಕೃಪೆಯಿಂದ
ಬಲ್ಲತನವಾಂತಿಹಳು ತನ್ನೊಂದು ಮುಖದೊಳಗೆ-
ತಾನಿಹೆನು, ತನ್ನಳಲು ಹಿರಿದು, ಹೊಣೆ ಹಿರಿದೆಂದು.
ನಿದ್ದೆಯಿಂದೆಚ್ಚರವೆ ಮಿಗಿಲಾತ್ಮ ಸುಸ್ಥಿತಿಗೆ.
ಈ ಧರ‍್ಮವನು ತಿಳಿದು ಬಾಳುವರ ನಡೆ ನುಡಿಯ
ಮಧ್ಯಪೀಠದೊಳಿಟ್ಟು ಪೂಜೆ ಸಲಿಪೆವು ರೂಢ-
ವಿದ್ಯೆಗಳ ಪ್ರಾಕಾರ ಕಟ್ಟುತೀ ದೇಗುಲದಿ!
ಇಂದಿಂತು. ಮುಂದೆಂತೊ? ಇಂದಾಗಲಿಂತೆ ಹರಕೆ
ಜಡವಳಿದು ನಾಡು ಬದುಕಲಿ ಎಂದೆ ಎಲ್ಲರೆರಕೆ.
*****








