[ವಂಗ “ಗೀತಾಂಜಲಿ”ಯಲ್ಲಿ ೮೭ನೆಯ ಗೀತನಾದ “ಛಿನ್ನ ಕರೊ ಲಾಓ ಹೆ ಮೋರ ಆರ್ ಬಿಲಂಬ ನಯ್” ಎಂಬುದರ ಕನ್ನಡ ರೂಪವು]
ತಡವೇಕೆ ತಡವೇಕೆ?
ಈ ಹೂವ ಕೊಯ್ದುಕೊಳ್ಳೈ!
ಹುಡಿಗೂಡಿ ಹೋದೀತು
ಎಂಬ ಈ ಭಯವ ತಳ್ಳೈ!
ನಿನ್ನ ಮಾಲೆಯಲಿ ಈ
ಹೂವಿಗೊಂದಿನಿತು ಸ್ಥಲವು
ಇನ್ನು ದೊರೆಯಲಿ ಬಿಡಲಿ-
ದೇವ ನನಗಿಲ್ಲ ಛಲವು!
ನಿನ್ನ ಕೈ ಕುಲುಕಿನಲಿ
ಕೊಯ್ದ ಆ ಭಾಗ್ಯ ಬರಲಿ!
ನಿನ್ನುಡಿಯಲಿದ್ದ ಸುಖ
ಕೆಲಕಾಲ ಭೋಗ್ಯವಿರಲಿ!
ಹಗಲು ಒಮ್ಮೆಲೆ ಮುಗಿದು
ಕತ್ತಲೆಯು ಕವಿವ ಮುನ್ನ
ನಿನ್ನ ಪೂಜೆಯ ಸಮಯ
ಅರಿಯದಲೆ ಸರಿವ ಮುನ್ನ
ಈ ಹೂವಿನಲಿ ಬಣ್ಣ
ಕಳಕಳಿಸುತಿರುವಾಗಲೇ
ಗಂಧ ಮಕರಂದಗಳು
ನಳನಳಿಸುತಕಿರುವಾಗಲೇ
ಈ ಕಾಲ ಶುಭಕಾಲ
ಇನ್ನೂ ಇದೀಗ ಇರಲು
ಸ್ವೀಕರಿಸು ಸೇವೆಯನು
ಈ ಹೂವು ಸೇವೆಗಿರಲು!
ಇಕೊ ಇಕೋ ಕೊಯ್ದುಕೋ
ಇಲ್ಲದ ವಿಲಂಬ ಬೇಡೈ!
ಬಿನ್ನಹವ ಮನ್ನಿಸೈ
ಕರದಿ ಚುಂಬನವ ನೀಡೈ!
ತಡವೇಕೆ ತಡವೇಕೆ?
ಈ ಹೊವ ಕೊಯ್ದುಕೊಳ್ಳೈ!
ಹುಡಿಗೂಡಿ ಹೋದೀತು
ಎಂಬ ಈ ಭಯವ ತಳ್ಳೈ!
*****





