ಒಬ್ಬ ದೊರೆ ಅಜಮದೇಶದ (ಪಾರಸಿ ದೇಶದ) ಸಾಮಾನ್ಯನೊಡನೆ ಒಂದು ನಾವೆಯನ್ನು ಹತ್ತಿದ. ಆ ಹುಡುಗ ಸಮುದ್ರವನ್ನು ನೋಡಿರಲಿಲ್ಲ. ಹಡಗಿನ ಅನುಭವ ಅವನಿಗೆ ಇರಲಿಲ್ಲ. ಅತ್ತು ಗೋಳಿಟ್ಟ. ಅವನ ಮೈಯೆಲ್ಲ ಅದುರಿ ನಡುಗುತ್ತಿತ್ತು. ದೋಣಿಯಲ್ಲಿದ್ದವರ ಹರುಷವೆಲ್ಲ ಹದಗೆಟ್ಟು ಹೋಯಿತು. ದೊರೆಗೆ, ಅವನ ಪರಿವಾರದವರಿಗೆ ಯಾರಿಗೇನೂ ಉಪಾಯ ಹೊಳೆಯಲಿಲ್ಲ. ನಾವೆಯಲ್ಲಿ ಒಬ್ಬ ವೈದ್ಯ ಇದ್ದ. ಅರಿಕೆ ಮಾಡಿಕೊಂಡ : ‘ಒಡೆಯರು ಆಗಲಿ ಎಂದರೆ ಇವನನ್ನು ಒಂದು ಉಪಾಯದಲ್ಲಿ ಸುಮ್ಮನಾಗಿಸುತ್ತೇನೆ’ ಎಂದು. ‘ ದೊಡ್ಡ ಉಪಕಾರವಾಗುತ್ತದೆ, ಆಗಬಹುದು’ ಎಂದ ದೊರೆ. ಪಂಡಿತನ ಮಾತಿನ ಮೇಲೆ ಕೆಲವರು ಅಳುತ್ತಿದ್ದ ಆಳನ್ನು ಹಿಡಿದು ಅವನನ್ನು ನೀರಿನೊಳಕ್ಕೆ ಎಸೆದುಬಿಟ್ಟರು. ಆಳು ಮುಳುಗಿ ತೇಲಿದ. ಹಲವು ಸಲ ಹೀಗೆ ಮುಳುಗಿ ತೇಲಿದ ಮೇಲೆ ಅವನನ್ನು ಸೆಳೆದುಕೊಂಡು, ಹುಟ್ಟು ಹಾಕುವ ಹಿಡಿಗಳ ಆಸರೆಯಿಂದ ಮೇಲಕ್ಕೆ ಹತ್ತಿಸಿ ನಾವೆಯಲ್ಲಿ ಕೂಡಿಸಿದರು. ಆಳು ಉಸಿರೆತ್ತದೆ ಒಂದು ಮೂಲೆಹಿಡಿದು ಕುಳಿತುಕೊಂಡ. ದೊರೆಗೆ ಆಶ್ಚರ್ಯವಾಯಿತು. ಇದೆಂತಹ ಉಪಾಯವೆಂದು ಕೇಳಿದ.
ಪಂಡಿತ ಉತ್ತರ ಹೇಳಿದ: ‘ಈ ಮನುಷ್ಯ ನೀರಿನಲ್ಲಿ ಮುಳುಗಿ ತೇಲುವ ಕಷ್ಟ ಏನು ಎಂಬುದನ್ನು ಅನುಭವಿಸಿ ಇರಲಿಲ್ಲ. ನಾವೆಯ ಸುಖವೆಷ್ಟು ಎಂಬುದನ್ನು ಅರಿತಿರಲಿಲ್ಲ. ರೋಗವನ್ನು ಅನುಭವಿಸಿದ ಮೇಲೆ ಆರೋಗ್ಯದ ಸುಖವೆಷ್ಟು ಎಂದು ತಿಳಿದ ಜನರಂತೆ ಇವನಿಗೆ ಈಗ ಅರಿವಾಯಿತು. ಗೋಳಿಡುವುದನ್ನು ಬಿಟ್ಟು ಸುಮ್ಮನಾಗಿದ್ದಾನೆ’ ಎಂದು.
ಹಸಿವ ಕಾಣದಗೇನು ಒಂದು ರೊಟ್ಟಿಯ ರುಚಿಯು,
ಎನ್ನ ಪ್ರೀತಿಯ ವಸ್ತು ನಿನಗೆ ಕಾಣದ ರೂಪು.
ಸಗ್ಗವಾಸಿಗೆ ಅಹುದು ಅಂತರಾಳವು ನರಕ,
ನರಕವಾಸಿಯ ಕೇಳೆ ಸಗ್ಗವೇ ಇದುಯೆಂಬ
*****








