ಡೌಡವ ಡೌಡವ ಎನ್ನುತ
ದೇಹಯಂತ್ರ ದುಡಿಯುತಿದೆ:
ಈ ಸ್ವತಂತ್ರ ತಂತ್ರವೆನ್ನ
ಮನಕೆ ದಿಗಲುಒಡಿಸುತಿದೆ.
ಎಲ್ಲಿ ಮುಟ್ಟಿಲಲ್ಲಿ ಮಿಡಿದು,
ಕಿವಿಯ ಬಳಿಯೆ ನುಡಿದು ದುಡಿದು
ವಿರತಿಯಿಲ್ಲದೊಂದೆ ರೀತಿ,
ಎನಗಾಲಿಸಲಾಗೆ ಭೀತಿ;
ಡವಡವೆಂದು ಡವಡವೆಂದು
ದೇಹಯಂತ್ರ ದುಡಿಯುತಿದೆ.
ಇರುಳ ಕತ್ತಲೆನ್ನ ಬಳಸಿ
ಹಬ್ಬಿರುವುದು ಸುತ್ತಲೂ,
ಬಿಟ್ಟ ಕಣ್ಣ ಬಾನು ನನ್ನ
ನಿಟ್ಟಿಸುತಿಹುದೆತ್ತಲೂ,
ಒಳಗು ಹೊರಗು ಗಾಳಿಯಾಡಿ
ಏನೊ ಗೈಯುತಿಹುದು ಮೋಡಿ;
ಯಾರಾಣೆಯ ಹೊತ್ತೊ ಕಾಣೆ
ದುಡಿಯುತಿಹುದು ತನಗೆ ತಾನೆ.
ಇರುಳ ಕತ್ತಲೆನ್ನ ಬಳಸಿ
ಹಬ್ಬಿರುವುದು ಸುತ್ತಲೂ.
ನೆಲೆಕಾಣದ ತಿರುಕನಂತೆ
“ನಾನೆ”ನ್ನುವ ತತ್ತ್ವವು
ತಿರಿಯುತಿಹುದು ಪ್ರಶ್ನಿಸುತ್ತ
“ಎಲ್ಲೆನ್ನಯ ಸ್ಪತ್ವವು?”
ವಿಷಯೇಂದ್ರಿಯವೆರಡು ನನ್ನ-
ನಣಕಿಸುತಿವೆ ನಾಚುವನ್ನ
`ನಾವೊಂದಲು ನೀ ನಿಮಿತ್ತ
ನಂಟರಾವು ಹ್ಹಹ’ ಎನುತ್ತ.
ನೆಲೆಯರಿಯದ ತಿರುಕನಂತೆ
“ನಾನೆ”ನ್ನುವ ತತ್ತ್ವವು
ತಿರಿಯುತಿಹುದು ಪ್ರಶ್ನಿಸುತ್ತ
“ಎಲ್ಲೆನ್ನಯ ಸ್ವತ್ವವು?”
*****








