Home / ಕಥೆ / ಸಣ್ಣ ಕಥೆ / ಕಾಡಹಳ್ಳಿ ಗೌಡ

ಕಾಡಹಳ್ಳಿ ಗೌಡ

ಕಾಡಹಳ್ಳಿ ಒಂದು ಚಿಕ್ಕ ಹಳ್ಳಿ. ಆ ಹಳ್ಳಿಯಲ್ಲಿ ಪಾಠಶಾಲೆ ಬಹಳ ವರ್ಷಗಳಿಂದಲೂ ಇರಲಿಲ್ಲ. ಗ್ರಾಮಸ್ಥರು ಸರ್ಕಾರದವರನ್ನು ಆಗಾಗ್ಗೆ ಕೇಳಿಕೊಳ್ಳುತ್ತಿದ್ದರು. ಆದರೆ ಅದು ಪ್ರಯೋಜನವಾಗಲಿಲ್ಲ. ಕಟ್ಟಕಡೆಗೆ ಊರಿನ ಮುಖಂಡರೆಲ್ಲಾ ಸೇರಿ, ಪಟೇಲ್ ತಿಮ್ಮೇಗೌಡನನ್ನು ಮುಂದಿಟ್ಟು ಕೊಂಡು ಇನ್‌ಸ್ಪೆಕ್ಟರ್‍‌ರವರ ಆಫೀಸಿಗೆ ದಂಡು ಹೊರಟರು. ಈ ಹೊರಡುವ ಅವಾಂತರದಲ್ಲಿ ಒಬ್ಬನನ್ನು ಮಾತ್ರ ಮರೆತೇಬಿಟ್ಟರು. ಅಂದು ಇನ್‌ಸ್ಪೆಕ್ಟರೂ ಆಫೀಸಿಗೆ ಬಂದಿದ್ದರು. ಮಾತುಕತೆ ಆದಮೇಲೆ ಗ್ರಾಮಸ್ಥರು “ಸ್ವಾಮಿ, ನಮ್ಮ ಹಳ್ಳಿಗೆ ಒಂದು ಸ್ಕೂಲು ಕೊಡಬೇಕು. ಇಲ್ಲದಿದ್ದರೆ ನಾವು ನಾಶವಾಗುವುದು ಖಂಡಿತ” ಎಂದು ಪ್ರಾರ್ಥಿಸಿದರು.
ಏನೋ ಕಾಗದ ಓದುತ್ತಾ, ಇವರ ಮಾತು ಕೇಳಿ ಇನ್‌ಸ್ಪೆಕ್ಟರು, “ನಿಜ, ನೀವು ಮನಸ್ಸು ಮಾಡಿ ಒಂದು ಸೊಗಸಾದ ಕಟ್ಟಡ ಕಟ್ಟಿಸಿಕೊಡಿ. ತಕ್ಷಣ ಒಂದು ಪ್ರೈಮರಿ ಸ್ಕೂಲನ್ನು ಕೊಡಿಸುತ್ತೇನೆ” ಎಂದು ವಿನಯವಾಗಿ ಉತ್ತರ ಕೊಟ್ಟರು.
ಪುನಃ ಗ್ರಾಮಸ್ಥರು “ಬಹಳ ಸಂತೋಷ ಸ್ವಾಮಿ, ನೀವು ದಯವಿಟ್ಟು ಹಾಗೆ ಮಾಡಿ, ನಾವು ಖಂಡಿತ ಕಟ್ಟಡ ಕಟ್ಟಿಸಿಕೊಡುತ್ತೇವೆ” ಎಂದು ಹೇಳಿದರು. ಕಡೆಗೆ ಗ್ರಾಮಸ್ಥರೇ ಕಟ್ಟಡದ ಜವಾಬ್ದಾರಿ ಹೊರುವುದಾಗಿಯೂ, ಸರ್ಕಾರದವರು ಪಾಠಶಾಲೆಯನ್ನು ಕೊಡುವುದಾಗಿಯೂ ತೀರ್ಮಾನವಾಯಿತು. ಊರಿನ ಮುಖಂಡರು ಗ್ರಾಮಕ್ಕೆ ಹಿಂದಿರುಗಿ ಕಟ್ಟಡ ಕಟ್ಟಿಸುವ ಯೋಚನೆಯಲ್ಲಿ ಮಗ್ನರಾದರು.
ಆ ಹಳ್ಳಿಯಲ್ಲಿ ಮುನೇಗೌಡ ಎಂಬುವನು ಬಹಳ ಮುಖ್ಯನಾದವನು. ಮುಖಂಡರೆಲ್ಲಾ ಸೇರಿ ಇನ್ಸ್ ಪೆಕ್ಟರ್ ಆಫೀಸಿಗೆ ಹೋದ ದಿನ ಇವನನ್ನು ಕರೆದಿರಲಿಲ್ಲ. ಆದ್ದರಿಂದ ಅವನಿಗೆ ಸ್ವಲ್ಪ ಅಸಮಾಧಾನ. ಕೆಲವರು ಹೋಗಿ ಅವನ ಸಂಗಡ ನಡೆದ ಸಂಗತಿಯನ್ನು ಹೇಳಿದರು. ಅದಕ್ಕೆ ಅವನು “ನಂಗೆಲ್ಲಾ ಗೊತ್ತು, ಕಟ್ಟಡ ಯಾರು ಕಟ್ಟಿಸಿಕೊಡೋರು? ಇವರು ಹೋಗಿ ಕಟ್ಟಡದ ಜವಾಬ್ದಾರಿ ಹೊತ್ತುಕೊಂಡು ಬಂದರಲ್ಲಾ ಇವರನ್ನು ಯಾರು ಈ ಕೆಲಸ ಮಾಡಿಕೊಂಡು ಬಾ ಎಂದವರು? ಕಟ್ಟಡವನ್ನು ಸರ್ಕಾರದವರೇ ಕೊಡಬೇಕು” ಎಂದು ಮುಂತಾಗಿ ಗೊಣಗಲು ಆರಂಭಿಸಿದ.
ಸ್ವಲ್ಪ ದಿನಗಳು ಕಳೆದವು ಕಟ್ಟಡದ ಕೆಲಸ ಆರಂಭವಾಯಿತು. ಕೆಲವರು ಶ್ರದ್ದೆಯಿಂದ ಕೆಲಸ ಮಾಡಿದರು. ಇನ್ನು ಕೆಲವರು ಮುನೇಗೌಡನ ಮಾತು ಕೇಳಿಕೊಂಡು ಸುಮ್ಮನಾದರು. ಕಟ್ಟಡದ ಕೆಲಸ ಸರಿಯಾಗಿ ಮುಂದುವರಿಯಲೇ ಇಲ್ಲ. ಇಷ್ಟರಲ್ಲೇ ಪಟೇಲ್ ತಿಮ್ಮೇಗೌಡನಿಗೆ ಖಾಯಿಲೆ ಬಂದುಬಿಟ್ಟಿತು. ಕೆಲಸ ಇನ್ನೂ ಹಿಂದಕ್ಕೆ ಬಿತ್ತು. ಇದೇ ಸಮಯವೆಂದರಿತು ಮುನೇಗೌಡ ಜನಗಳಿಗೆಲ್ಲಾ ಉಪದೇಶ ಮಾಡಿ ಸರ್ಕಾರದವರೇ ಸ್ಕೂಲು ಕೊಡಬೇಕು. ಅದರ ಖರ್ಚೆಲ್ಲಾ ಅವರೇ ವಹಿಸಬೇಕು ಎಂದು ಸಾರಿದ. ತಿಳಿಯದ ರೈತರು “ಹೌದು ಹೌದು” ಎಂದರು. ಹೀಗಾಗಿ ಕಟ್ಟಡದ ಕೆಲಸ ಅರ್ಧಕ್ಕೇ ನಿಂತಿತು.
ಒಂದು ದಿನ ಇನ್‌ಸ್ಪೆಕ್ಟರು ಹಳ್ಳಿಗೆ ಬಂದರು. ಗ್ರಾಮಸ್ಥರನ್ನು ಭೇಟಿ ಮಾಡಿದರು. ಪಟೇಲ್ ತಿಮ್ಮೇಗೌಡನಿಗೆ ಖಾಯಿಲೆ ಎಂದು ತಿಳಿದ ಮೇಲೆ ಕೂಡಲೆ ಅವನ ಮನೆಗೆ ಹೋಗಿ ಯೋಗಕ್ಷೇಮ ವಿಚಾರಿಸಿದರು. ಆಗ ಗೌಡ “ಸ್ವಾಮಿ ಈ ಊರಿನಲ್ಲಿ ಒಬ್ಬ ಸೇರಿಕೊಂಡು ಇಸ್ಕೂಲ್ ಕೆಲಸ ಎಲ್ಲಾ ಹಾಳು ಮಾಡಿದ. ಅವನೇ ಉದ್ಧಾರ ಆಗಲಿ, ನಮಗೇನು? ನಾನೂ ಖಾಯಿಲೆ ಮಲಗಿಬಿಟ್ಟೆ. ಕೆಲಸ ಅಷ್ಟಕ್ಕೇ ನಿಂತುಬಿಟ್ಟೈತೆ? ಆಗಲಿ. ನಮ್ಮ ತಂದೆಯವರ ಹೆಸರಿನಲ್ಲಿ ಒಂದು ಕಟ್ಟಡ ಕಟ್ಟಿಸಿಕೊಟ್ಟು ಬಿಡ್ತೀನೆ. ಸ್ವಾಮಿ, ನಿಮಗೆ ನಂಬಿಕೆ ಇಲ್ಲದಿದ್ದರೆ, ಬೇಕಾದರೆ ಪತ್ರ ಬರೆದುಕೊಡ್ತೇನೆ” ಎಂದು ಹೇಳುತ್ತಾ ಕಣ್ಣೀರು ಹಾಕಿದ.
ಇನ್‌ಸ್ಪೆಕ್ಟರು ಸಮಾಧಾನ ಹೇಳಿ, ಮೇಲಕ್ಕೆ ಶಿಫಾರಸು ಕಳುಹಿಸಿರುವುದಾಗಿಯೂ ವಿದ್ಯಾ ಇಲಾಖಾ ಡೈರೆಕ್ಟರು ಒಪ್ಪಿ ತಿಳಿಸಿರುವುದಾಗಿಯೂ ಹೊರಟು ಬಂದರು. ತಿಮ್ಮೇಗೌಡನು ಕೂಡಲೇ ಮನೆಮಕ್ಕಳೆಲ್ಲರನ್ನೂ ಕರೆದು “ನೋಡಿ, ಊರೊಳಗಿನ ಮಕ್ಕಳೆಲ್ಲಾ ಓದುಬರಹ ಕಲಿತು ಕೊಳ್ಳಲಿ ಅಂತ ನಮ್ಮ ಅಯ್ಯನ ಹೆಸರಿನಲ್ಲಿ ಒಂದು ಇಸ್ಕೂಲ್ ಕಟ್ಟಿಸ ಬೇಕು ಅಂತ ಇದ್ದೀನಿ. ಖರ್ಚೆಲ್ಲಾ ನನ್ನದೇ. ನಮ್ಮ ಅಯ್ಯನ ಹೆಸರು ಶಾಶ್ವತವಾಗಿ ಇರ್‍ತೈತೆ. ಅಲ್ಲವೆ ? ನಿಮ್ಮ ಅಭಿಪ್ರಾಯವೇನು?” ಎಂದ.
ಹೆಂಡತಿ ಮಕ್ಕಳೆಲ್ಲಾ ಮರುಮಾತಾಡದೆ “ಆಗಲಿ” ಎಂದರು. ಸ್ವಲ್ಪ ದಿನಗಳಲ್ಲಿಯೇ ತಿಮ್ಮೇಗೌಡನಿಗೆ ಖಾಯಿಲೆ ಸ್ವಲ್ಪ ಹುಷಾರಾಯಿತು. ಸ್ಕೂಲ್‌ಕೆಲಸ ಮೊದಲಾಯಿತು. ಇಟ್ಟಿಗೆ, ಕಲ್ಲು, ಜಲ್ಲಿ, ಎಲ್ಲಾ ಬಂದು ಬಿತ್ತು, ಗಾರೆ ಕೆಲಸದವರನ್ನೂ, ಕೂಲಿ ಜನರನ್ನೂ ಗೊತ್ತು ಮಾಡಿದ್ದಾಯಿತು. ಸುಮಾರು ಏಳೆಂಟು ತಿಂಗಳಲ್ಲಿ ಕಟ್ಟಡವೂ ಸಿದ್ಧವಾಯಿತು. ಅಷ್ಟು ಹೊತ್ತಿಗೆ ಹೊಸ ಸ್ಕೂಲ್ ಇನ್‌ಸ್ಪೆಕ್ಟರು (ಹಿಂದಿನವರು ವರ್ಗವಾಗಿದ್ದ ಪ್ರಯುಕ್ತ) ಬಂದು, ತಿಮ್ಮೇಗೌಡನ ಬಹು ಶ್ಲಾಘಿಸಿ ಗೌರವಿಸಿದರು. ಅಲ್ಲದೆ “ಗೌಡರೇ ಇಂತಹ ಕಟ್ಟಡವನ್ನು ವಿದ್ಯಾಮಂತ್ರಿಗಳ ಸಮ್ಮುಖದಲ್ಲಿ ತೆರೆದು, ಅದರ ಆರಂಭೋತ್ಸವವನ್ನು ನಡೆಸಬೇಕು. ನೀವೆಲ್ಲರೂ ಸ್ವಲ್ಪ ಶ್ರದ್ಧೆ ವಹಿಸಿದರೆ ಅದು ಸಾಧ್ಯ” ಎಂದು ಹುರಿದುಂಬಿಸಿದರು. ತಿಮ್ಮೇಗೌಡ ಸ್ವಲ್ಪ ಯೋಚಿಸಿ “ನಿಜ” ಎಂದ.
ಸ್ವಲ್ಪ ದಿನಗಳಲ್ಲಿಯೇ ಈ ವಿಚಾರ ಊರೆಲ್ಲಾ ಹಬ್ಬಿತು. ಉತ್ಸವದ ದಿನ ಎಲ್ಲೆಲ್ಲಿ ನೋಡಿದ್ದರೂ ಹುಡುಗರ ಸಡಗರ; ಹೆಂಗಸರ ಪಿಸುಮಾತು ; ಗಂಡಸರ ಓಡಾಟ; ದೊಡ್ಡ ಹಸರುವಾಣಿ ಚಪ್ಪರ ಸಿದ್ಧವಾಯಿತು. ಮುಂಭಾಗದಲ್ಲಿ ಕಾಂತಿಕೊಡುವ ಬಾಳೆಯ ಕಂಬಗಳು, ಅದರಲ್ಲಿ ಜೋಲಾಡುವ ಗೊನೆಗಳು, ಚಪ್ಪರದ ಮಧ್ಯದಲ್ಲಿ ಕಂಗೊಳಿಸುವ ಹೂಗಳ ಗೊಂಚಲು. ಅಗ್ರಭಾಗದಲ್ಲಿ ದೊಡ್ಡ ವೇದಿಕೆ, ಅದರ ಮೇಲೆ ಸೊಗಸಾದ ಆಸನಗಳು.
ವಿದ್ಯಾಮಂತ್ರಿಗಳು, ಉನ್ನತಾಧಿಕಾರಿಗಳು, ಖಾಸಗಿ ದೊಡ್ಡ ಮನುಷ್ಯರು, ಪ್ರಜಾಪ್ರತಿನಿಧಿ, ನ್ಯಾಯವಿಧಾಯಕ ಸಭಾಸದಸ್ಯರು ಮೊದಲಾಗಿ ಅನೇಕರು ಪೀಠಗಳನ್ನು ಅಲಂಕರಿಸಿದರು. ಬಿನ್ನವತ್ತಳೆ, ಭಾಷಣ, ಸಂಗೀತ ಎಲ್ಲವೂ ನಿರ್ವಿಘ್ನವಾಗಿ ನಡೆದುವು.
ಮರುದಿನವೇ ವೃತ್ತಪತ್ರಿಕೆಗಳಲ್ಲಿ ಈ ವೃತ್ತಾಂತ ಬೆಳಕಿಗೆ ಬಂತು. ತಿಮ್ಮೇಗೌಡನ ಕೀರ್ತಿ ಹೆಚ್ಚಿತು. ಎಲ್ಲರೂ ತಿಮ್ಮೇಗೌಡನನ್ನು ಕೊಂಡಾಡಿದರು. ಈ ರೀತಿ ಕೀರ್ತಿಯನ್ನು ಗಳಿಸಿದ ಪಟೇಲ್ ತಿಮ್ಮೆಗೌಡನನ್ನು ಕಂಡು ಮುನೇಗೌಡ ಕೊರಗಿದ. ಅವನಿಗೆ ಅಸೂಯೆ ಹೆಚ್ಚಾಯಿತು. ಹಳ್ಳಿಯ ಅಜ್ಞಾನಿಗಳಿಗೆ “ಯಾರೂ ಮಕ್ಕಳನ್ನು ಆ ಶಾಲೆಗೆ ಕಳುಹಿಸಬೇಡಿ” ಎಂದು ಪ್ರೋತ್ಸಾಹಿಸಿದ. ಹಲವರು ನಂಬಿದರು. ಆದರೆ ಪಾಠಶಾಲೆಯು ಕ್ಷೀಣಗತಿಗೆ ಬರಲಿಲ್ಲ. ದಿನೇ ದಿನೇ ಅಭಿವೃದ್ಧಿಗೆ ಬಂದೇ ಬಂತು. ಈ ಶಾಲೆಯ ಉಪಾಧ್ಯಾಯ ಬಹು ಯುಕ್ತಿಪರ ; ಬುದ್ದಿ ಶಾಲಿ ; ಬರುವ ಸಂಬಳ ಅಲ್ಪವಾದರೂ ಬಹು ಚೆನ್ನಾಗಿಯೇ ಬಾಳುತ್ತಿದ್ದ. ವೈದ್ಯ, ಸಂಗೀತ, ಜ್ಯೋತಿಷ್ಯ ಇವುಗಳಲ್ಲಿ ಬಹಳ ನಿಪುಣ, ರೈತರನ್ನೆಲ್ಲಾ ತನ್ನ ವಶದಲ್ಲಿಟ್ಟುಕೊಂಡಿದ್ದ. ಆದಕಾರಣ ಮುನೇಗೌಡನ ಪೌರುಷ ಇವನ ಮುಂದೆ ನಡೆಯಲಿಲ್ಲ.
ಇದನ್ನರಿತು ಮುನೇಗೌಡ ತಕರಾರು ಅರ್ಜಿಗಳನ್ನು ಬರೆಯಿಸಿ, ಆಫೀಸುಗಳಿಗೆ ಕಳುಹಿಸಿದ. ಇಲ್ಲದ ಸಲ್ಲದ ಚಾಡಿ ಮಾತುಗಳನ್ನು ಅಧಿಕಾರಿಗಳಿಗೆ ಹೇಳಿದ. ಪಟೇಲ್ ತಿಮ್ಮೇಗೌಡನ ಮೇಲೆ ದೂರು ಹೇಳಿದ. “ಅವನು ಸ್ಕೂಲ್ ಕಟ್ಟಿಸಿರುವುದು ತನ್ನ ಗ್ರಾಮದ ಮಕ್ಕಳಿಗೋಸ್ಕರ ಅಲ್ಲ. ಅದರ ನೆಪದಲ್ಲಿ ಸರ್ಕಾರದ ಅಧಿಕಾರಿಗಳ ಪ್ರೀತಿಯನ್ನುಗಳಿಸಿ ತನ್ನ ಅಳಿಯನಿಗೆ ಅಮಲ್ದಾರಿ ಕೊಡಿಸಬೇಕು – ಅಂತ” ಎಂಬುದಾಗಿ ಕತೆ ಕಟ್ಟಿದ. ಕೆಲವು ಅಧಿಕಾರಿಗಳು ಎಲ್ಲರೂ ನಿಜವೇನೋ ಅಂದುಕೊಂಡರು. ಆದರೆ ಪಟೇಲ್ ತಿಮ್ಮೇಗೌಡನ ಹೃದಯದ ಆಳವನ್ನು ಬಲ್ಲವರು ಮಾತ್ರ ಖಂಡಿತವಾಗಿಯೂ ನಂಬುತ್ತಿರಲಿಲ್ಲ.
ಕೆಲವು ದಿನಗಳು ಕಳೆದ ಬಳಿಕ ಅಕ್ಷರ ಪ್ರಚಾರ ಸಮಿತಿಯವರು ಏರ್ಪಡಿಸಿರುವ ರಾತ್ರಿ ಪಾಠಶಾಲೆಗಳ ಪದ್ದತಿಯನ್ನು ಜಾರಿಗೆ ತರಬೇಕೆಂದು ಹಲವರು ಹವಣಿಸಿದರು. ಗ್ರಾಮದ ಮುಖಂಡರು “ರಾತ್ರೆ ಸ್ಕೂಲ್ ಬೇಕೇ ಬೇಕು” ಎಂದರು. ಅವರಲ್ಲಿ ಒಬ್ಬ “ಮುನೇಗೌಡನನ್ನು ಕೇಳಿರಪ್ಪ, ಅವನು ಕೋಪಿಸಿಕೊಂಡಾನು. ಹಿಂದೆ ನಾವು ಅವನನ್ನು ಕೇಳದೇ ಹೋದುದಕ್ಕೆ ಸುಳ್ಳು ಸುದ್ದಿ ಹರಡಿಸಿ ಊರು ಬೇರೆ ಮಾಡಿದ. ಈಗಲಾದರೂ ಒಂದು ಮಾತು ಕೇಳಿ ” ಎಂದು ಸಲಹೆ ಕೊಟ್ಟ, ಇನ್ನಿಬ್ಬರು “ಹೌದು” ಎಂದರು. ಸರಿ, ಮುನೇಗೌಡನನ್ನು ಕೇಳಿದರು. ಅವನು “ನಮ್ಮ ಹಳ್ಳಿಯ ನಾಯಕ ತಿಮ್ಮೇಗೌಡ ಇದ್ದಾನಲ್ಲ ಅವನು ಏನನ್ನುತ್ತಾನೆ” ? ಎಂದು ಕೇಳಿದ.  ಒಬ್ಬ ಮುಖಂಡ (ಸ್ವಲ್ಪ ಯೋಚಿಸಿ) “ಗೌಡನಿಗೆ ರಾತ್ರಿ ಪಾಠಶಾಲೆ ಇಷ್ಟವಿಲ್ಲ. ಹಗಲಿನಲ್ಲಿ ನಡೆಯುವ ಸ್ಕೂಲೇ ಸಾಕಂತೆ” ಎಂದು ಉತ್ತರಕೊಟ್ಟ. ಮುನೇಗೌಡ “ಹಾಗಾದರೆ ರಾತ್ರೆ ಸ್ಕೂಲ್ ನಡೀಲಿ ನಾನೂ ಬತ್ತೀನಿ” ಎಂದ. ಊರಲ್ಲೆಲ್ಲಾ ಮುತುವರ್ಜಿ ವಹಿಸಿದರು. ಮುನೇಗೌಡ ಗ್ರಾಮ ಪಂಚಾಯಿತಿಯಿಂದ ಸ್ವಲ್ಪ ಹಣವನ್ನು ರಾತ್ರಿ ಪಾಠಶಾಲೆಯ ಖರ್ಚಿಗೆ ಕೊಡಿಸಬೇಕೆಂದು ಅಮಲ್ದಾರ್‌ರವರಿಗೆ ಅರ್ಜಿ ಕೊಟ್ಟ. ಅಮಲ್ದಾರರು ಎಷ್ಟು ತಿಂಗಳುಗಳಾದರೂ ಉತ್ತರವನ್ನೇ ಕೊಡಲಿಲ್ಲ. ಈ ವಿಷಯವನ್ನು ತಿಳಿದು “ರಾತ್ರಿ ಪಾಠಶಾಲೆಯ ಪುಸ್ತಕ ಭಂಡಾರ ನನ್ನ ಜವಾಬ್ದಾರಿ, ಅದಕ್ಕಾಗುವ ವೆಚ್ಚ ನಾನೇ ಕೊಡುತ್ತೇನೆ” ಎಂದ. ಪುಸ್ತಕ ಭಂಡಾರ, ವಾಚನಾಲಯ, ಒಂದು ಮಕ್ಕಳ ಶಾಲೆ, ಆಟದ ಬಯಲು, ಎಲ್ಲವೂ ಆ ಗ್ರಾಮಕ್ಕೆ ಒದಗಿತು. ಕಾಡಹಳ್ಳಿ ಗೌಡನ ಕೀರ್ತಿ ಹೆಚ್ಚಿತು. ಎಲ್ಲರೂ ಅವನನ್ನು ಕೊಂಡಾಡಿದರು.
****
ನಾನೊಂದು ದಿನ ಹಳ್ಳಿಗಾಡಿನಲ್ಲಿ ಸಂಚಾರ ಹೊರಟಾಗ ಈ ರಾಮಕ್ಕೆ ಬಂದೆ. ಒಬ್ಬ ಹುಡುಗ ಪಟೇಲರ ಮನೆಯನ್ನು ತೋರಿಸಿದ. ಪಟೇಲ್ ತಿಮ್ಮೇಗೌಡರು ಒಂದೆರಡು ನಿಮಿಷಗಳಲ್ಲಿ ಸ್ಕೂಲ್ ಇತಿಹಾಸವನ್ನು ಹೇಳಿದರು. ನನಗೆ ಬಹಳ ಸಂತೋಷವಾಯಿತು. ಮುನೇಗೌಡನನ್ನು ನೋಡಬೇಕು ಎನ್ನಿಸಿತು. ಆದರೆ ಊರಿನಲ್ಲಿ ಇರಲಿಲ್ಲ. ತನ್ನ ಸ್ವಂತ ಕೆಲಸಕ್ಕಾಗಿ ಮೈಸೂರಿಗೆ ಹೊರಟುಹೋಗಿದ್ದ. ನಾನು ಕಾಡ ಹಳ್ಳಿಗೌಡ ಕಟ್ಟಿಸಿದ ಪಾಠಶಾಲೆ, ಮುನೇಗೌಡನ ಪುಸ್ತಕ ಭಂಡಾರ, ಗ್ರಾಮಸ್ಥರ ಪಂಚಾಯಿತಿ ಮಂದಿರ – ಎಲ್ಲವನ್ನೂ ನೋಡಿ ಹರ್ಷಗೊಂಡೆ. ಆಗ “ಅಸೂಯೆ ಅಳಿದರೆ ಗ್ರಾಮದ ಏಳಿಗೆ ಖಂಡಿತ” ಎಂದು ನನ್ನ ಅಂತರಾತ್ಮ ನುಡಿಯಿತು.
*****
Tagged:

Leave a Reply

Your email address will not be published. Required fields are marked *

ಕಾಡಹಳ್ಳಿ ಒಂದು ಚಿಕ್ಕ ಹಳ್ಳಿ. ಆ ಹಳ್ಳಿಯಲ್ಲಿ ಪಾಠಶಾಲೆ ಬಹಳ ವರ್ಷಗಳಿಂದಲೂ ಇರಲಿಲ್ಲ. ಗ್ರಾಮಸ್ಥರು ಸರ್ಕಾರದವರನ್ನು ಆಗಾಗ್ಗೆ ಕೇಳಿಕೊಳ್ಳುತ್ತಿದ್ದರು. ಆದರೆ ಅದು ಪ್ರಯೋಜನವಾಗಲಿಲ್ಲ. ಕಟ್ಟಕಡೆಗೆ ಊರಿನ ಮುಖಂಡರೆಲ್ಲಾ ಸೇರಿ, ಪಟೇಲ್ ತಿಮ್ಮೇಗೌಡನನ್ನು ಮುಂದಿಟ್ಟು ಕೊಂಡು ಇನ್‌ಸ್ಪ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...