ತಾರಾ

ಆ ಸಂಗತಿ ನಡೆದು ಒಂದು ವರುಷವಾಗಿ ಹೋದರೂ ವೆಂಕಣ್ಣನ ತಲೆಯಿಂದ ಅದು ತುಸುವೂ ಮಾಸದು. ಏತಕ್ಕೂ ಇಲ್ಲದೆ ಒಂದು ಕೆಟ್ಟ ಹೆಸರು ಬಂದಿತೆಂದು ಅವನು ಬಹಳ ನೊಂದುಕೊಂಡಿದ್ದಾನೆ. ಇಂದಿಗೂ ಆ ಸಂಗತಿಯನ್ನು ಹೇಳಿ ತನಗೆ ಬೊಟ್ಟು ಮಾಡಿ ತೋರಿಸುವವರಿದ್ದಾರೆ; ತಾನು ಆಣೆ ಮಾಡಿ ಹೇಳಿದರೂ ಜನ ನಂಬುವದಿಲ್ಲ; ಏನೋ ಪೂರ್ವಜನ್ಮದ ಪಾಪ
ಕಾಡುತ್ತದೆ ಎಂದು ಅವನು ಹಲಬಿಕೊಳ್ಳುತ್ತಾನೆ.

ಒಂದು ಹೆಣ್ಣು ಒಬ್ಬನನ್ನು ನಾಚಿಕೆಗೇಡು ಮಾಡುವದು ಎಷ್ಟು ಸುಲಭ! ತನ್ನ ಮೈ ಮೇಲೆ ಕೈ ಮಾಡಿದನೆಂದು ಕೂಗಿದರೆ ಸಾಕು. ಜನ ನಂಬಿಬಿಡುತ್ತದೆ. ಆದರೆ ಗಂಡಸು ಸತ್ಯವನ್ನೇ ಹೇಳಿದರೂ ನಂಬುವದಿಲ್ಲ. ಎಲ್ಲಿಯವರೆಗೆ ಜಗ ಹೆಣ್ಣನ್ನು ಪೂಜಿಸುವದೋ ಅಲ್ಲಿಯವರೆಗೆ ಈ ಬಗೆಯ ಕೊಳಕು ತಪ್ಪಿದಲ್ಲ…. ಹೆಣ್ಣು ಗಂಡಸಿನ ಸರಿಸಮಾನಳೆಂದು ಒಪ್ಪಿಕೊಂಡು ನಡೆಯಬಹುದು. ಆದರೆ ಅವಳನ್ನು ಪೂಜಿಸುವದರಲ್ಲಿ ಅರ್ಥವಿಲ್ಲ. ಅವಳ ಅಬಲತೆಯನ್ನೇ ತನ್ನನ್ನು ಇರಿಯುವ ಕೋಡನ್ನಾಗಿ ಮಾಡಿಕೊಂಡ ಗಂಡು !….ಆರಾಮ ಕುರ್ಚಿಯ ಮೇಲೆ ಕುಳಿತು ಹೀಗೆ ವಿಚಾರಿಸುತ್ತಿದ್ದ ವೆಂಕಣ್ಣ,ಸಿಗರೇಟಿನ ತಿಳಿ ಹೊಗೆ ಕೋಣೆಯಲ್ಲೆಲ್ಲ ಹಬ್ಬಿತ್ತು. ಅವನ ತಲೆ ಶಾಂತವಾಗುವ ಮುಂಚೆಯೇ ಅವನ ಹೆಂಡತಿ “ನೋಡಿದಿರಾ, ಮದುವೆಯಾಗಿ ಇನ್ನೂ ವರ್ಷ ವಾಗುವದಕ್ಕಿಂತ ಮುಂಚೆ ವಿಧವೆಯಾದಳು ನಿಮಗೆ ಕಲಂಕ ತಂದ ತಾರಾ. ದೇವರು ಯೋಗ್ಯ ಶಿಕ್ಷೆ ಕೊಡದೆ ಬಿಡುತ್ತಾನೆಯೇ?” ಅನ್ನುತ್ತ ಬಂದಳು.

“ಏನು ತಾರೆಯ ಗಂಡ ತೀರಿಕೊಂಡನಂತೇ?”

“ಹೌದು, ಈಗಷ್ಟೆ ಶಾಮರಾಯರ ಮನೆಯಲ್ಲಿ ಹೇಳುತ್ತಿದ್ದರು.”

“ದೇವರು ಕಟುವಾಗಿ ಶಿಕ್ಷಿಸಿದ…. ಇನ್ನು ಏನೇನು ಮಾಡುವಳೋ ಮಾಮುಂಡೆ.”

“ಯಾರ ಬೆನ್ನಿಗಾದರೂ ಹೋಗುತ್ತಾಳೆ. ಮತ್ತೇನು ಅವಳು ಮಾಡುವದು?“

“ಒಬ್ಬನ ಬೆನ್ನಿಗೆ ಹೋದರೆ ಚಿಂತೆಯಿಲ್ಲ. ಮತ್ತೆ ಒಬ್ಬನಿಂದ ಪಾಪ ಹೊತ್ತು ಅದನ್ನು ಇನ್ನೊಬ್ಬನಿಗೆ ಹೇರಿ ನನಗೆ ಮಾಡಿದಂತೆ ಮಾಡಬಾರದು.”

“ಹೋಗಲಿ ಅವಳು ಹಾಳು ಬಾವಿಗೆ ಬಿದ್ದು, ಪಾಪ ಅವಳ ಗಂಡ ಕಲ್ಲಬಂಡೆಯ ಹಾಗಿದ್ದ. ಏನಾಯಿತೋ ಏನೋ. ಹೆಂಡತಿಯ ಚರಿತ್ರೆ ಕೇಳಿ ಮನಸ್ಸಿಗೆ ಹಿಡಿಸಿಕೊಂಡಿರಬಹುದೇ?”

“ಚರಿತ್ರೆ ಕೇಳುವದೇನು? ಮದುವೆಯ ಮುಂಚೇ ಕೇಳಿದ್ದ. ಯಾರೆದುರಿಗೋ ಹೇಳಿದ್ದನಂತಲ್ಲ. ತನ್ನ ಹೆಂಡತಿ ಅಂಥವಳಾದರೆ ತಾನೂ ಶುಭಗಾನೇನಲ್ಲ; ಒಳ್ಳೇ ಜೋಡಿಯಾಯಿತು ಅಂತ. ತಿಳಿದೂ ತಿಳಿದೂ ಮದುವೆಯಾಗಿದ್ದ ಅವ.”

“ತಿಳಿದೂ ತಿಳಿದೂ ಸತ್ತುಕೊಂಡನೋ ಏನೋ ಅಂದೆ.”

“ಮದುವೆಯಾದ ಮೇಲೂ ಅವಳು ಅಡ್ಡ ಹಾದಿ ಹಿಡಿದಿದ್ದರೆ ಅವಳನ್ನೇ ಸೀಳುವ ಪೈಕಿ ಅವ.”

“ಅಂತಹದೇನಾದರೂ ಇದ್ದರೆ ಸುದ್ದಿ ಹಬ್ಬದೇ ಹೋಗುತ್ತದೆಯೇ?”
X X X X

“ಯಾರು ಅದು?”

“ನಾನು.”

“ನಾನು ಅಂದರೆ”

“ತಾರಾ”

ಹೊರಗೆ ಬಾಗಿಲು ಬಡಿಯುತ್ತ ನಿಂತಳು ಅವಳು.

“ಬಾಗಿಲು ತೆರೆಯಬೇಡಿ, ನಿಮಗೆ ಮತ್ತೆ ಏನು ಮಾಡಬಂದಿದ್ದಾಳೋ ಏನೋ ಮಾರಿ” ಪಿಸು ಮಾತಿನಿಂದ ಗಂಡನನ್ನು ತಡೆದಳು ಯಮುನೆ.

ಆದರೆ ವೆಂಕಣ್ಣ ದೀಪ ಹಿಡಿದು ಬಂದು ಬಾಗಿಲು ತೆರೆದ. ಕಣ್ಣೀರು ಸುರಿಸುತ್ತ ನಿಂತಿದ್ದಾಳೆ ತಾರೆ.

ಗಂಡ ಹೆಂಡರಿಬ್ಬರೂ ಅವಳನ್ನು ಒಳಗೆ ಕರೆದೊಯ್ದು ಕೂಡ್ರಿಸಿ “ಇಷ್ಟು ರಾತ್ರೆಯಲ್ಲೇಕೆ ಬಂದದ್ದು?” ಎಂದು ಕೇಳಿದರು. ಬಿಕ್ಕು ಬಿಕ್ಕು ಅಳುವುದೇ ಅವಳ ಉತ್ತರವಾಯಿತು. ಯಮುನೆಯು ಅವಳ ಮೋರೆಯನ್ನೆತ್ತಿ ಸೆರಗಿನಿಂದ ಕಣ್ಣೊರಸಿ “ಯಾಕೆ ತಾರಾ ಅಳುವದು? ಏನು? ಹೇಳು. ಅವರಿಗೆ ಏನಾದರೂ ಹೇಳಬೇಕಾಗಿದೆಯೇ?”

ಗಂಡ ಹೆಂಡರಿಬ್ಬರೂ ಪ್ರಯತ್ನಪಟ್ಟು ಅವಳನ್ನು ಸಂತೈಸಿದ ಮೇಲೆ ಅಳುದನಿಯಲ್ಲಿ “ನನ್ನನ್ನು ಕ್ಷಮಿಸಿ” ಎಂದು ಅವರಿಬ್ಬರ ಕಾಲಿಗೂ ಎರಗಿದಳು. ಯಮುನೆಯು ಅವಳನ್ನು ಹಿಡಿದು ಎತ್ತಿದಳು.

“ವೆಂಕಣ್ಣ ಮಾಸ್ತರರೆ…ನನ್ನನ್ನು ಕ್ಷಮಿಸಿ, ದೇವರು ನನ್ನ ತಪ್ಪಿಗಾಗಿ ಶಿಕ್ಷೆ ಕೊಟ್ಟಿದ್ದಾನೆ ನಿಮ್ಮ ಮೇಲೆ ಸಲ್ಲದ ಆರೋಪ ಹೇರಿದ್ದಕ್ಕಾಗಿ ನನಗೆ ಈ ಗತಿ ಒಡ್ಡಿದ್ದಾನೆ. ನೀವು ನನ್ನಿಂದಾಗಿ ಜನರ ಬಾಯಿಗೆ ಬಿದ್ದಿರಿ. ನೀವು ನನ್ನ ಅಂದಿನ ಪಾಪಕ್ಕೆ ಕಾರಣರಲ್ಲ” ಮತ್ತೆ ಅವಳ ಕಣ್ಣು ಕೋಡಿಹರಿಸ ಹತ್ತಿತು. “ನನ್ನ ಸಹಪಾಠಿಯೊಬ್ಬನ ಬಲೆಗೆ ಬಿದ್ದು ಪಾಪ ಕಟ್ಟಿಕೊಂಡೆ. ಏನು ಮಾಡಬೇಕೆಂಬುದು ತಿಳಿಯಲಿಲ್ಲ. ಆ ನನ್ನ ಗೆಳೆಯನನ್ನೇ ಕೇಳಿದೆ. ಅವನೇ ಹೇಳಿಕೊಟ್ಟ ಉಪಾಯ ಅದು. ನಿಮ್ಮನ್ನು ಖಾಸಗೀ ಶಿಕ್ಷಣಕ್ಕಾಗಿ ನೇಮಿಸಿಕೊಳ್ಳಲು ತಂದೆಯವರಿಗೆ ಒತ್ತಾಯ ಮಾಡಿದೆ. ಮನೆಯವರಿಗೂ ನನ್ನ ಪಾಪದ ಅರಿವಾಯಿತು. ಹೊರಗೆ ಹಾಕುವೆವೆಂದು ಅಬ್ಬರಿಸಿದರು. ನಿಮ್ಮ ಮೇಲೆ ಆರೋಪಮಾಡಿಬಿಟ್ಟೆ. ನಿಮ್ಮ ಮಾನ ಹಾನಿಯಾಗುವಾಗ ಒಂದೆರಡು ಸಲ ನಾಲಿಗೆ ಎದ್ದಿತು. ಆದರೆ ಏಕೋ ಸತ್ಯ ಹೇಳಲು ಧೈರ್ಯ ಸಾಲಲಿಲ್ಲ..”

“ಇದೆಲ್ಲ ನನಗೆ ಗೊತ್ತಿದ್ದ ವಿಷಯವೇ! ಮತ್ತೇಕೆ ಅದರ ಪಠನ ನಮ್ಮ ಮುಂದೆ, ಇಂಥ ಅಪರಾತ್ರೆಯಲ್ಲಿ?”

“ನಿಮ್ಮೆದುರಿಗೆ ನನ್ನ ತಪ್ಪು ಒಪ್ಪಿಕೊಂಡನಕ ನನ್ನ ಮನಸ್ಸು ಹಗುರಾಗದು. ನೋಡಿ, ಈಗ ನನ್ನ ದುಗುಡ ಅರ್ಧದಷ್ಟು ಇಳಿಯಿತು!”

“ಈಗ ಇಳಿದಷ್ಟು ಭಾರವನ್ನು ಇನ್ನು ಯಾರಿಂದಾದರೂ ಹೇರಿ ಕೊಂಡು ಬಿಡು, ಅಂದರೆ ಸರಿಯಾಗುವದು!”

“ಚುಚ್ಚಬೇಡಿ ದಮ್ಮಯ್ಯ, ಇನ್ನು ನಾನು ಎಂದಿಗೂ ಇಂಥ ಕೆಲಸ ಮಾಡುವದಿಲ್ಲ.”

“ಕಲಿಯುವಾಗಲೇ ಗುರುವಿನ ಮೇಲೆ ಅಪವಾದ ಹೇರಿದವಳು ಇನ್ನು ಯಾರಾರಿಗೆ ಏನೇನು ಮಾಡಿನಲಿರುವೆಯೋ!”

“ನಿಮ್ಮ ಪಾದ ಮುಟ್ಟಿ ಹೇಳುತ್ತೇನೆ…. ” ಅನ್ನುತ್ತ ಅವಳು ಹಾಗೆ ಮಾಡಹೋದಳು.

“ಇದೆಲ್ಲ ನಿಮ್ಮನ್ನು ಮಂಕುಗೊಳಿಸುವ ಕ್ರಮ” ಮತ್ಸರದ ಮೊನೆಯನ್ನು ಹಿರಿದಳು ಯಮುನೆ.

“ಮರ್ಯಾದೆ ಕಳೆದುಕೊಂಡು ಸಾಕಷ್ಟು ಮಂಕು ಹಿಡಿದಿರುವಾಗ ಮತ್ತೆ ಮಂಕುಗೊಳಿಸುವದೇನಿದೆ…. ರಾತ್ರೆ ಬಹಳವಾಯಿತು ಇನ್ನು….”

“ಹೋಗುತ್ತೇನೆ. ನನ್ನನ್ನು ಕ್ಷಮಿಸಿದಿರಲ್ಲ?”

“ನಿಸ್ಸಹಾಯವಾಗಿ ಜನರ ಬಾಯಿಗೆ ಬಿದ್ದಾಗಲೇ ನಿನ್ನನ್ನು ಪೂರ್ತಿಯಾಗಿ ಕ್ಷಮಿಸಿದ್ದೇನೆ! ಇನ್ನುಮೇಲಾದರೂ ನೀನು ನನ್ನಂಥ ಬಡವರ ಮಾನಕ್ಕೆ ಮಸಿಹಚ್ಚದಿದ್ದರೆ ಸಾಕು.”

ತಾರೆಯು ಕತ್ತಲಲ್ಲಿ ಮಾಯವಾದಳು. ಯಮುನೆಯು ಬಾಗಿಲು ಹಾಕಿಕೊಂಡು “ಈ ಹೊತ್ತು ಬೇಕಾದರೆ ಅವಳನ್ನು ಬಯಲಿಗೆ ತರಲು ಬರುತ್ತಿತ್ತು” ಅಂದಳು.

“ಹೇಗೆ?”

“ಅವಳು ಒಳಗೆ ಬಂದಕೂಡಲೆ ಹೋ ಎಂದು ಕೂಗಿ, ಗಂಡ ಸತ್ತನೆಂದು ನಿಮ್ಮ ಬೆನ್ನು ಹತ್ತಿದಳೆಂದು ಕೇರಿಯವರಿಗೆ ಹೇಳಿದರೆ….”

ವೆಂಕಣ್ಣನಿಗೆ ನಗೆ ತಡೆಯಲಾಗಲಿಲ್ಲ.

ಹುಚ್ಚು! “ಇವರೇ ಮಧ್ಯರಾತ್ರೆಯು ಮೇಲೆ ನನಗೆ ಬಾ ಅಂದಿದ್ದರು” ಎಂದು ಅವಳು ನನ್ನ ಕಡೆಗೆ ಬೊಟ್ಟು ಮಾಡಿ ಬಿಟ್ಟರೆ ತೀರಿತು. ಮೊದಲಿನ ಅಪವಾದಕ್ಕೆ ಬಲ ಸಿಕ್ಕ ಹಾಗೆ. “ಜಗತ್ತು ಹೆಂಗಸರ ಮಾತನ್ನು ಸುಲಭವಾಗಿ ನಂಬುತ್ತದೆ.”

“ನಾನು ಇರುವಾಗ ಹಾಗೆಲ್ಲ ಅವಳು ಹೇಳುವದಾಗಲಿ, ಜನರು….”

“ನಿನ್ನ ಮಾತಿಗೆಲ್ಲಿ ಬೆಲೆ? ಹಿಂದೆ ಅಪವಾದ ಬಂದಾಗಲೂ ನೀ ಇದ್ದೆ. ಗಂಡಸಿಗೆ ಹಲವು ಹೆಣ್ಣುಗಳ ಚಪಲ ಎಂಬ ಸಿದ್ಧಾಂತವಿರುವಾಗ ನಿನ್ನ ಸಾಕ್ಷಿ ಫುಸ್.”

“ಗಂಡಸಿಗೆ ಅಂಥ ಚಪಲ ಇರುವದು ನಿಜವೇ?” ದೀಪ ಆರಿಸಿ ಮಲಗಿಕೊಂಡರೂ ಅವರ ಮಾತುಕತೆ ಮುಗಿಯಲಿಲ್ಲ.

“ಒಮ್ಮೆ ಅಂಥ ಚಟ ಬಿದ್ದಿತೆಂದರೆ ಗಂಡಸೂ ಹಾಗೆ ಹೆಂಗಸೂ ಹಾಗೇ”

“ಅದು ಹೋಗಲಿ, ಅಲ್ಲ, ರಾತ್ರೆ ಇಲ್ಲೇ ಇರು ಅಂತ ಹೇಳಲಿಲ್ಲವೆಂದು ಆ ಮುಂದೆ ನಿಮ್ಮ ಮೇಲೆ ಹಗೆತನ ಸಾಧಿಸಿ ಮತ್ತೇನಾದರೂ ಮಾಡ ಬಹುದೇ?”

“ಅಯ್ಯೋ. ಹೆಣ್ಣು ಒಮ್ಮೆ ವಿಧವೆಯಾಯಿತೆಂದರೆ ಜನ ಅವಳ ಪಕ್ಷ ಕಟ್ಟುತ್ತಾರೆಂದು ತಿಳಿದಿದ್ದೀಯಾ?”

ಯಮುನೆ ಏನೋ ವಿಚಾರಕ್ಕೆ ಬಿದ್ದು ಸುಮ್ಮನಾದಳು. ಹಾಗೇ ಅವಳಿಗೆ ನಿದ್ದೆ ಹತ್ತಿತು.
*****

Tagged:

Leave a Reply

Your email address will not be published. Required fields are marked *

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...