Home / ಲೇಖನ / ಪತ್ರ / ಪೂರ‍್ಣಿಮ – ೬

ಪೂರ‍್ಣಿಮ – ೬

ಪ್ರಿಯೆ, ಪ್ರಿಯದರ್ಶಿನಿ,

ನಾನು ನಿನ್ನ ಪತ್ರಗಳಿಂದ ನಿರೀಕ್ಷಿಸುತ್ತಿರುವುದು ಸಮಸ್ಯೆಯ ಮೇಲೆ ಸಮಸ್ಯೆಗಳನ್ನಲ್ಲ. ನಿಜವಾದ ಸುಖದ ವ್ಯಾಖ್ಯೆಯನ್ನು ಕೇಳಿ ಅದಕ್ಕೆ ಉತ್ತರ ಪಡೆದ ಮರು ಪತ್ರದಲ್ಲೇ ಮತ್ತೊಂದು ಮಹಾಸಮಸ್ಯೆಯನ್ನು ನನ್ನ ಮುಂದೆ ತಂದೊಡ್ಡಿರುವಿ. ಇದಂತೂ ಬಿಡಿಸಲಾಗದ, ಆದರೆ ಬಿಡಿಸಲೇಬೇಕಾದ ಸಮಸ್ಯೆಯಾಗಿದೆ.

ನಿಜ! ನಾನು ಹೋದಸಾರಿ ಬಂದಾಗಲೇ ತೀರ್ಥಾನಂದರು ಬಂದಿದ್ದರು. ಅವರು ನನ್ನ ಮುಖ ನೋಡಿದ ಕೂಡಲೇ ನಿಸ್ತೇಜರಾಗಿ ತುಟಿ ಒಣಗಿಸಿದರು. ಆಡುವ ಮಾತು ಹಿಡಿ ಹಿಡಿದು ಆಡುವಂತಿದ್ದಿತು. ಇವರು ನನ್ನೆದುರಿನಲ್ಲಿ ಹೀಗೆ ಉಗುಳು ನುಂಗಿ ಮಾತಾಡುತ್ತಿದ್ದುದನ್ನು ಅವರ ನನ್ನ ಹತ್ತು ವರುಷಗಳ ಪರಿಚಯದಲ್ಲಿ ಆಗಲೇ ಮೊದಲು. ನಾನು ಕಾರಣವನ್ನು ಊಹಿಸಲಾಗಲಿಲ್ಲ. ಆದರೂ ಇವರನ್ನು ಸಂಶಯ ದೃಷ್ಟಿಯಿಂದ ನೋಡುವ ಧೈರ್ಯ ಬರಲಿಲ್ಲ.

ಎಂತು ಬರಬೇಕು ಪೂರ‍್ಣಿ? ಅಮ್ಮ ಇದ್ದಾಗಿನಿಂದಲೂ ಮನೆಗೆ ಬಂದು ಹೋಗುತ್ತಿದ್ದರು. ಅಮ್ಮನ ಕೈಯ ಊಟ ಇವರಿಗೆ ಬಲು ರುಚಿಯಂತೆ! ಉತ್ತರ ದೇಶದಿಂದ ಇವರು ಬೆಂಗಳೂರಿಗೆ ಬಂದು ಇಪ್ಪತ್ತು ವರುಷಗಳಿಗೇನು ಕಡಿಮೆ ಇಲ್ಲ. ಸಾಧುಸಂತರೆಂದರೆ ತನುಮನಧನಗಳನ್ನು ಧಾರೆಯರೆಯುತ್ತಿದ್ದ ಕಾಲವದು. ರಸಕವಳ, ಮೇಲೆ ಪಾದಗಾಣಿಕೆ, ಇವುಗಳಿಂದ ಬೊಜ್ಜು ಬೆಳೆಸುತ್ತ ರಕ್ತದ ಕಾಂತಿಯಿಂದ ಹೊಳೆವ ಮುಖವನ್ನೇ ಬ್ರಹ್ಮತೇಜಸ್ಸೆಂದು ತಿಳಿದುಕೊಂಡು ಅಡಿಗಡಿಗೆ ಶರಣು ಎನ್ನುತಿದ್ದು ಆ ಕಾಲದಲ್ಲೇ ಈ ಸ್ವಾಮಿಗಳು ಬಂದರು. ಹಿಂದಿಯೊಂದರ ಹೊರತು ಇವರಿಗೆ ಮತ್ತಾವ ಭಾಷೆ ಬರುತ್ತಿದ್ದಿಲ್ಲ. ಇತ್ತೀಚೆಗೆ ಕನ್ನಡವನ್ನು ಕಲಿತುಕೊಂಡಿರುವರು. ತಾವು ಊಟಕ್ಕೆ ಹೋಗುವ ಭಕ್ತೆಯರ ಮನೆಯಲ್ಲಿ ಅವರೊಂದಿಗೆ ಮಾತನಾಡುವಷ್ಟು ಕನ್ನಡ ಮಾತ್ರ ಇವರಿಗೆ ಬರುತ್ತಿದೆ.

ಊರಿಂದೂರಿಗೆ ತಿರುಗುವ ಸನ್ಯಾಸಿಗಳಾಗದೆ ಇವರು ಬೆಂಗಳೂರಲ್ಲಿಯೇ ಕಾಲೂರಿನಿಂತರು. ಬೆಂಗಳೂರಿನ ಲಾಲಬಾಗಿನ ಹವ ಇವರಿಗೆ ಒಗ್ಗಿತು. ಊಟ ಉಪಚಾರ ಇವು ಇವರನ್ನು ಬಿಡಲಿಲ್ಲ. ವಯಸ್ಸಿನ ಆಟ ಇವರ ರಸದೇಹದ ಮೇಲೆ ಏನೂ ಆಗಲಿಲ್ಲ. ವಯಸ್ಸು ಕಳೆದಂತೆ ಇವರು ತರುಣರಾಗುತ್ತಿರುವರು. ಚಿಂತೆಯಿಲ್ಲದೆ ದುಡಿಮೆ ಇಲ್ಲದೆ, ಬೆಳೆದ ದೇಹವದು. ಕರಗುವುದೆಂತು?

ನಮ್ಮ ಮನೆಗೆ ಹೊಸಬರಲ್ಲದ ಈ ಸ್ವಾಮಿಗಳಿಗೆ ಈಗ ಈ ಹೊಸ ದೃಷ್ಟಿ ಬಂದಿತೇಕೆ? ಹೊಸಮಾತು ಕತೆಗಳು ಬಂದಿರುವುದೇಕೆ? “ಪಾರಮಾರ‍್ಥಿಕ ವಿಚಾರದ ಮಾತೊಂದೂ ಇಲ್ಲ. ನವ ತರುಣನ ಆಶಾ ಜೋತಿಯ ಕಿಡಿಯಂತಹ ಮಾತುಗಳು ಈ ಸಾಧುವಿನ ಬಾಯಲ್ಲಿ! ನಮ್ಮ ಮನೆಗೆ ಬರಬೇಡಿ ಎನ್ನುವ ತುದಿನಾಲಿಗೆಯಲ್ಲಿದ್ದೇನೆ. ಹೇಳಿ ಬಿಡಲೇ” ಎಂದು ನೀನು ಪತ್ರದಲ್ಲಿ ಬರೆದಿರುವೆ. ಇದಕ್ಕೆ ನನ್ನಿಂದ ಉತ್ತರವನ್ನು ನೀನು ಆಶಿಸಿರುವಿ.

ಹುಚ್ಚಿಯಲ್ಲವೆ ನೀನು? ಏಕಾಕಿನಿಯಾಗಿರುವ ನೀನು ಹೀಗೆ ಮುಚ್ಚುಮರೆಯಿಲ್ಲದೆ ಬರೆದು ಬಿಟ್ಟರೆ ಓದುವ ನನಗೆ ಸಿಟ್ಟು ಬಂದೀತು, ಸಂದೇಹ ಬಂದೀತು. ಮನಸ್ಸು ತಳಮಳಗೊಂಡಿತು; ಓಡಿಬಂದು ಆ ಬಡ ಸನ್ಯಾಸಿಯು ಕೆನ್ನೆಗೆ ಎರಡು ಬಿಗಿದಾರು ಎಂದು ಊಹಿಸಬಾರದೆ?

ಆದರೆ ನೀನು ಹುಚ್ಚಿಯಲ್ಲ, ಜಾಣೆ. ನಾನು ನಿನ್ನನ್ನು ಸಂದೇಹಿಸುವುದಿಲ್ಲವೆಂಬ ಮರ್ಮವನ್ನು ಅರ್ಧಮಾಡಿಕೊಂಡಿರುವಿ. ಆದರೂ ನಾನೊಮ್ಮೆ ನಿನ್ನನ್ನು ಪರೀಕ್ಷಿಸಲು ನಾನೊಬ್ಬನೇ ಇದ್ದಾಗ, ಒಬ್ಬ ನವತರುಣಿ ಬಂದಿದ್ದಳು. ಆಕೆ ಬಹಳ ಹೊತ್ತು ಮಾತನಾಡಿದಳು. ನೋಡಲು ಬಹು ಸು೦ದರಿಯಾಗಿದ್ದಳು. ವಯಸ್ಸು ನಿನಗಿಂತ ಕಡಿಮೆ ಎಂದು ಇಷ್ಟು ಬರೆದರೆ ಸಾಕು ಮುಖವು ಉದ್ದಿನ ಮೂಡೆಯಾಗಿ ಅತ್ತುಸುರಿದು ಪತ್ರ ಬರೆಯುವದನ್ನೇ ನಿಲ್ಲಿಸಿ ಬಿಡುತ್ತಿದ್ದೆ. ಆದರೆ ನಾನೀಗ ಸ್ವಲ್ಪವೂ ಚಲಿತನಾಗಿಲ್ಲ. ಸಂದೇಹ, ಗಾಬರಿ ಇವಾವೂ ನನ್ನ ತಲೆಗೂ ಸುಳಿದಿಲ್ಲ.

ಅದಿರಲಿ, ನಿನ್ನ ಪ್ರಶ್ನೆಗೆ ಉತ್ತರವೇನೆಂದು ಬರೆಯಲಿ! ಯೋಚಿಸಿ ಉತ್ತರ ಕೊಡಬೇಕಾದ ಸಮಸ್ಯೆ ಇದು. ಆದರೆ ಒಂದು ಮುತ್ತಿನಂತಹ ಮಾತನ್ನು ನಿನ್ನ ಗಮನಕ್ಕೆ ತಂದು ಈ ಪತ್ರವನ್ನು ಬೆಳಸದೆ ಮುಗಿಸುವೆನು. ವಿಕ್ಟರ್ ಹ್ಯೂಗೋ ಎಂಬುವರು ಸ್ತ್ರೀಯರ ಬಗ್ಗೆ ಹೇಳಿರುವ ಮಾತು ಅದೆಷ್ಟು ಸೊಗಸಾಗಿದೆ ನೋಡು. “Men have sight; Women have insight” ಅಂದರೆ ಪುರುಷರಿಗೆ ದೃಷ್ಟಿ ಇದ್ದರೆ, ಸ್ತ್ರೀಯರಿಗೆ ಅಂತರ ದೃಷ್ಟಿ ಇರುವುದು. ಆದ್ದರಿಂದ ನೀನು ನಿನ್ನ ಅಂತರ ದೃಷ್ಟಿಯಲ್ಲಿ ಈ ಸನ್ಯಾಸಿಯ ದೃಷ್ಟಿಯಲ್ಲಿರುವುದೇನೆಂಬುದನ್ನು ಗ್ರಹಿಸು. ನಿಧಾನವಾಗಿ, ಶಾಂತವಾಗಿ, ಗಾಬರಿಯಾಗದೆ ಗ್ರಹಿಸು. ಹೇಗೆ ಗ್ರಹಿಸಬೇಕೆಂಬ ಕಲೆಯನ್ನು ನಿನಗೆ ಕಲಿಸಬೇಕಾಗಿಲ್ಲ. ಒಂದು ವೇಳೆ ಈ ಕೊಬ್ಬಿದ ಕಾವಿಯ ಬ್ರಹ್ಮಚಾರಿಯ ಕಣ್ಣಿನಲ್ಲಿ ಕಾಮದ ತೀಟೆಯಿದ್ದರೆ, ಲೋಕ ಕಲ್ಯಾಣವಾಗುವಂತಹ ಒಂದು ಕೆಲಸವನ್ನು ಮಾಡು. ಇವರಂತಹ ಕಾವಿಯ ವೇಷದ ಕಾಮುಕರೆಲ್ಲರೂ ಬುದ್ಧಿ ಕಲಿತುಕೊಳ್ಳುವಂತೆ ಮಾಡು. ಇನ್ನೊಮ್ಮೆ ಈ ಸ್ವಾಮಿಗಳು ಬಂದಾಗ ಒಳ್ಳೆಯ ಉಪಹಾರ ಮಾಡಿಕೊಡು. ತಂಪಾದ ಹಣ್ಣನ್ನು ಸುಲಿದು ಕೊಡು. ಜೊತೆಗೆ ಒಲೆಯಲ್ಲಿ ಕಬ್ಬಿಣದ ಸಟ್ಟುಗ ಚೆನ್ನಾಗಿ ಕಾಯುತ್ತಿರಲಿ. ಪಕ್ಕದ ಮನೆಯ ಹೆಣ್ಣು ಮಕ್ಕಳನ್ನು ಕರೆದು ಕುಳ್ಳಿರಿಸಿಕೋ, ಅವರ ಎದುರಿನಲ್ಲೇ ಕೆಂಪಗೆ ಕಾಸಿದ ಸೌಟನ್ನು ತಂದು ಹಣ್ಣನ್ನು ಚಪ್ಪರಿಸುತ್ತಿರುವ ತುಟಿಯ ಮೇಲೆ ಇಡು, ಹೆಣ್ಣಿನ ಅನುವನ್ನು ಚಪ್ಪರಿಸುವ ಬ್ರಹ್ಮಚಾರಿಯ ತುಟಿಗೆ ಹಾಕುವ ಮಾರುತಿ ಮುದ್ರೆ ಇದೆಂದು ಹೇಳುತ್ತಲೇ ಹಾಕಿಬಿಡು. ಭಯ ಪಡಬೇಡ. ಸುಟ್ಟು ಮೋರೆಯನ್ನು ಹೊಂದಿದ ಸನ್ಯಾಸಿಗೆ ನಂತರ ಸುಡುಗಾಡೇ ಗತಿ. ಈ ವಿಷಯವು ಜನಜನಿತವಾದರಾಗಲಿ ಭಯ ಪಡಬೇಡ. ನಿನ್ನ ಶೀಲದ ಕಾವಲಿಗೆ ನನ್ನ ಪ್ರೇಮದ ಏಳು ಸುತ್ತಿನ ಕೋಟೆ ಇರುವವರೆಗೆ ಅದಕ್ಕಾವ ಚ್ಯುತಿಯೂ ಇಲ್ಲ.

ಈ ಸನ್ಯಾಸಿಯನ್ನು ಆ ಪರೀಕ್ಷೆಗೊಳ್ಳುವ ಮೊದಲು ಇನ್ನೊಂದು ಅವಕಾಶ ಕೊಟ್ಟು ನೋಡು. ಪೂಜ್ಯರೆಂಬ ಪುರಸ್ಕಾರದ ಬದಲು ಅಯೋಗ್ಯರೆಂಬ ತಿರಸ್ಕಾರದ ದೃಷ್ಟಿಯನ್ನು ಬೀರಿದರೂ, ಅದನ್ನು ಅರ್ಥಮಾಡಿಕೊಳ್ಳದಿದ್ದರೆ ಮೇಲೆ ಹೇಳಿದಂತೆ ಶಾಸ್ತಿಯನ್ನು ಮಾಡಿಬಿಡು.

ಇತಿ ನಿನ್ನ ಪತಿ
*****

Tagged:

Leave a Reply

Your email address will not be published. Required fields are marked *

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...