Home / ಲೇಖನ / ಪತ್ರ / ಪೂರ‍್ಣಿಮ – ೫

ಪೂರ‍್ಣಿಮ – ೫

ನಳಿನ ನಯನೆ,

ಎಲ್ಲವೂ ತಿಳಿಯಿತು. ಸ್ವಲ್ಪ ಸಮಾಧಾನದಿಂದ ಪತ್ರವನ್ನು ಬರೆದಿರುವಂತಿದೆ. ರಘು ನಗುತ್ತಿರಬಹುದು? ಲೀಲ ಹಠಮಾಡಿ ಮೋರೆಯುಬ್ಬಿಸಿ ಗೊಂಡಿಲ್ಲದಿರಬಹುದು? ಉದಯ ಸರಿಯಾಗಿ ಶಾಲೆಗೆ ಹೋಗುತ್ತಿದ್ದಿರಬಹುದು? ಇವೆಲ್ಲವೂ ಸರಿಯಾಗಿದ್ದಾಗ ಕುಳಿತು ಬರೆದ ಪತ್ರದಂತಿದೆ.

ಇಷ್ಟೊಂದು ಧೈರ್ಯ, ಇಷ್ಟೊಂದು ಸಹನೆ, ನಿನಗೆ ಬಂದಿರುವುದೆಂದರೆ ಯಮನ ಸಾವಿರ ಕೋರೆಗಳನ್ನಾದರೂ ಹಿಡಿದು ಅಲುಗಿಸಬಲ್ಲೆನು.

ಅದಿರಲಿ, ನೀನೀಗ ನನ್ನ ಪರೀಕ್ಷೆಯನ್ನೆ ನಡೆಸಲಾರಂಭಿಸಿರುವೆಯಲ್ಲ? “ಪ್ರಪಂಚದಲ್ಲಿ ಯಾರು ಸುಖಿ” ಎಂಬ ಪ್ರಶ್ನೆಗೆ ನನ್ನಿಂದ ಉತ್ತರವನ್ನು ಕೇಳಿರುವೆ. ಈ ಪ್ರಶ್ನೆ ನನ್ನನ್ನು ಕೇಳಬಾರದ ಪ್ರಶ್ನೆ. ನನ್ನನ್ನು ಉತ್ತರಿಸಲು ತೊಡಗಿಸಬಾರದ ವಿಷಯವಿದು. ಆದರೂ ನಿನ್ನ ಮುಂದೆ ಮುಚ್ಚಿಟ್ಟುಕೊಳ್ಳುವುದೇನಿದೆ?

ಸುಖಿಯಾರು ಎಂದು ಹುಡುಕುವುದಕ್ಕಿಂತದಲು ಸುಖವೆಂದರೇನೆಂಬುದನ್ನು ತಿಳಿದುಕೊಂಡರೆ ಅರ್ಧ ಕಷ್ಟ ತಪ್ಪಿದಂತಾಗುವದು.

ಶ್ರೀಮಂತಿಕೆಯು ಸುಖವೆಂದು ಕೆಲವರು ಅನ್ನುವರು, ಬಡವನಾಗಿರುವ ನನಗೆ ಈ ಮಾತು ನಿಜವೆನಿಸಿದರೆ, ಶ್ರೀಮಂತನನ್ನು ಹೋಗಿ ಕೇಳಿದರೆ ಅವನ ಅತೃಪ್ತಿಗೆ ಮೇರೆಯೇ ಇರುವುದಿಲ್ಲ. ಒಂದು ತಕ್ಕಡಿಯ ಪಕ್ಕದಲ್ಲಿ ಧನವಿದ್ದರೆ ಇನ್ನೊಂದರಲ್ಲಿ ರೋಗ ರುಜಿನ, ಭಯ, ಸಂದೇಹ, ಪಿತ್ತ, ಅಜೀರ್ಣ, ಸಮೇತವಾದ ಹಲವು ದುಃಖಗಳ ಕಂತೆಯೇ ಇರುವುದು. ಹಣದ ತೂಕಕ್ಕಿಂತ ಹೆಚ್ಚು ತೂಗುತ್ತಿರುವ ಇವನಿಗೆ ಸಿರಿವಂತಿಕೆ ತಲೆಗೆ ಭಾರವಾಗಿರುವುದು. ಆದರೂ ಸಿರಿವಂತಿಕೆ ಸಡಿಲಿದರೆ ಅವನ ಮೈ ಚರ್ಮ ಸುಲಿದಂತಾಗುವುದು. ಹೀಗಾಗಿ ಧನ ಬೇಕು, ಅದರ ಜೊತೆಗೆ ಪರಿವಾರ ದೇವತೆಯಾಗಿ ನಿಲ್ಲುವ ಈ ಉಪದ್ರವಗಳು ಬೇಡ. ಈ ಬೇಕು ಬೇಡಗಳ ಮಧ್ಯೆ ಕಂಗಾಲಾಗಿ ತೋರಿಕೆಗೆ ಕಾರು, ತೋರಿಕೆಗೆ ಉಪ್ಪರಿಗೆ, ಜರತಾರಿ ಉಡುಪು ಇದ್ದರೂ ಇವನು ಸದಾ ಅಸಂತುಷ್ಟಿಯಾಗಿಯೇ ಇರುವನು. ಆದ್ದರಿಂದ ಧನದಿಂದ ಸುಖ ಬರುವುದೆಂದರೆ ನಂಬುವುದೆಂತು? ನಿನಗೆ ನಿದರ್ಶನವಾಗಿ ಒಂದು ಉದಾಹರಣೆಯನ್ನು ಹೇಳಬೇಕೆಂದರೆ ನಮ್ಮೂರಿನ ಸಲಭಯ್ಯನವರು. ಅವರಿಗೇನು ಕಡಿಮೆ? ಆದರೆ ಅವರ ಕೊರಗಾಟ ನಮ್ಮ ಮಾವನವರ ಮನೆಯ ಜಗುಲಿಯಲ್ಲಿ ನಿಂತರೆ ಅಹೋರಾತ್ರಿಯೂ ಕೇಳುತ್ತಿತ್ತಲ್ಲವೆ? ಅವರ ಉಬ್ಬುಸ ರೋಗಕ್ಕೆ ಮದ್ದೇ ಇಲ್ಲ. ಉಸಿರಾಡುವವರೆಗೂ ಉಸ್ಸೆನ್ನುತ್ತಲೇ ಸಾಯುವುದೊಂದೇ ಉಳಿದಿದೆ. ಲಕ್ಷ್ಮಿ ಒಲಿದು ಮಾಡಿದ ಉಪಕಾರವಾದರೂ ಏನು.

ನನ್ನ ಬಡತನದಿಂದ ಸುಖವಿದೆ ಎಂಬುದಕ್ಕೆ ನಾನು ನೀನು ಇಬ್ಬರೇ ಒಳ್ಳೆಯ ಸಾಕ್ಷಿಯಾಗಿರುವೆವು. ನಮಗೆ ಸಿರಿತನ ಬಂದರೆ ಸುಖವಾಗಿರುವೆವೆಂದು ನಮಗನ್ನಿಸುವುದಾದರೂ, ಉಂಡ ಊಟಕ್ಕಷ್ಟೇ, ತೊಟ್ಟ ಅರಿವಿಗಷ್ಟೇ ತೃಪ್ತಿ ಇರುವವರಿಗೆ ಸಿರಿತನದಿಂದ ಸುಖ ಕಂಡೀತು. ಆದರೆ ಇಷ್ಟು ಸಿಕ್ಕಿದರೆ ಇನ್ನಷ್ಟು ಬೇಕು ಎನ್ನುವುದು, ಇನ್ನಷ್ಟು ಸಿಕ್ಕಿದರೆ ಮತ್ತಷ್ಟು ಬೇಕು ಅನ್ನುವ ಮಾನವನ ಆಸೆಯ ಒತ್ತಡಕ್ಕೆ ಒಯ್ಯುವ ಈ ಸಿರಿತನ ಬೇಡವೆಂದೂ ನಾನು ಮೊದಲಿನಿಂದ ನಿನಗೆ ಹೇಳುತ್ತಲೇ ಇದ್ದೇನೆ. ಸುಖಪಡುವವರನ್ನೂ ನೋಡಿ ಸಂತೋಷಪಡುವ ಸ್ವಭಾವ ನಮಗೆ ಬಂದರೆ ಸಾಕು. ಆಗ ನಾವೂ ಎಲ್ಲರಿಗಿಂತಲೂ ಸುಖಿಗಳೇ. ಪರಹಿತ ಸಹಿಷ್ಣುತೆ ಇಲ್ಲದ ವಿದ್ಯೆ, ಸಂಪತ್ತು, ಸೌಂದರ್ಯ, ಯೌವನ ಇವೆಷ್ಟಿದ್ದರೂ ಅವು ಮಾನವನ ನೆಮ್ಮದಿಯ ದಾರಿಯಲ್ಲಿ ಕರುಳಿನ ಬೇನೆಯಂತೆಯೇ ಸರಿ ಎಂಬುದು ನನ್ನ ಸಿದ್ಧಾಂತ. ನೆಮ್ಮದಿ, ಸುಖ, ಸಂತೋಷಗಳ ಬಗ್ಗೆ ಹಲವರು ಹಲವಾರು ವಿಧದಲ್ಲಿ ವ್ಯಾಖ್ಯೆ ಬರೆದಿರುವರು. ಅವರೆಲ್ಲರೂ ದೊಡ್ಡ ಮನುಷ್ಯರೆ, ಅಪಾರ ಅನುಭವಿಗಳೇ! ಆದರೆ ಒಬ್ಬೊಬ್ಬರ ಅನುಭವ ಒಂದೊಂದು ಮುಖವಾಗಿದೆ. ಅವುಗಳಲ್ಲಿ ಆಯ್ದುಕೊಂಡು ನಾಲೈದನ್ನು ಇಲ್ಲಿ ಬರೆದಿರುವೆನು. ಓದಿಕೊಂಡು ಅರಗಿಸಿಕೊ, ಅವುಗಳ ಸಾರವನ್ನು ಗ್ರಹಿಸು.

ಒಬ್ಬರನ್ನುವರು:-ತಾನು ಸುಖಿಯೆಂದು ತಿಳಿದುಕೊಂಡಿರುವನೊಬ್ಬನೇ ಜಗತ್ತಿನಲ್ಲಿ ಸುಖಿಯು.

ಇನ್ನೊಬ್ಬರು: ನಮ್ಮಲ್ಲಿ ಸಂಪತ್ತು ಎಷ್ಟು ಇದೆ ಎಂಬುದು ನೆಮ್ಮದಿಯ ಅಳತೆಗೋಲಲ್ಲ. ನಾವೆಷ್ಟು ಅನುಭವಿಸುತ್ತಿರುವೆವು ಎಂಬುದೇ ಅದರ ಅಳತೆಯ ಗೋಲು.

ಮತ್ತೊಬ್ಬರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, “ಬುದ್ಧಿವಂತನಿಗೆ ಸುಖಿಯಾಗಿರಲು ಕೆಲವೇ ಸ೦ಪತ್ತು ಸಾಕು. ಅವಿವೇಕಿಗೆ
ಯಾವುದೂ ಎಷ್ಟಾದರೂ ಸುಖವೀಯುವುದಿಲ್ಲ. ಆದ್ದರಿಂದಲೇ ಮಾನವ ಜನಾಂಗದಲ್ಲಿ ಬಹು ಜನರು ದುಃಖಿಯಾಗಿರುವರು.” ಯೆಂದು ಹೇಳಿರುವರು.

ನೆಮ್ಮದಿಯು ವ್ಯಕ್ತಿಯ ಅಭಿರುಚಿಯನ್ನು ಅವಲಂಬಿಸಿರುವದೇ ಹೊರತು ಅವನು ಹೊಂದಿರುವ ಸಾಧನ ಸಂಪತ್ತುಗಳನ್ನು ಹೊಂದಿಕೊಂಡಿರುವುದಿಲ್ಲವೆಂಬುದು ಇನ್ನೊಬ್ಬರ ಅನುಭವ.

ಸುಖಿಯಾಗಬೇಕೆಂದು ಸತತ ಸಂತಪಿಸಬೇಡ. ಅನೆಮ್ಮದಿ, ಅಸುಖ ಬಂದರೆ, ಅದನ್ನು ಸ್ವಾಗತಿಸಲು ಹೆದರಬೇಡ. ಧೈರ್ಯವಾಗಿ ಸ್ವಾಗತಿಸು. ಇದೇ ನೀನು ಸುಖಿಯಾಗುವ ಸುಲಭ ಮಾರ್ಗವೆಂದು ಮತ್ತೊಬ್ಬ ಪಂಡಿತರು ತಮ್ಮ ಜೀವನ ರಸಾಯನವಿದೆಂದು ಹೇಳಿಕೊಂಡಿರುವರು.

ಪೂರ‍್ಣೀ,ನೋಡು ಇವುಗಳಲ್ಲಿ ಯಾವುದು ನಿನಗೆ ಸಮ್ಮತ? ಮಥಿಸು; ಚರ‍್ಚಿಸು, ಪತ್ರವನ್ನು ಮುಗಿಸುವ ಮೊದಲು ನಮ್ಮ ಜೀವನದ ದಾರಿ ಬುತ್ತಿಯಾದ ನೆನಹಿನ ಗಂಟನ್ನು ಸ್ವಲ್ಪ ಬಿಚ್ಚಿ ಚೂರನ್ನು ನಿನಗೆ ಉಣ ಬಡಿಸಲೆ? ಹೊ, ಹೋ! ಈಗ ಗೊತ್ತಾಯಿತು. ನಾನು ಈ ಮೊದಲು ಬರೆದ ಪತ್ರಗಳಲ್ಲಿ ನಿನ್ನ ಮತ್ತು ನನ್ನ ಜೀವನದ ಮೊದಲ ಹಾಳೆಗಳನ್ನು ಪ್ರಕಟಿಸಿದೆನೆಂದು ನಾಚಿಗೆಯೆ? ಈ ವಿಷಯಾಂತರಿಸಲು ಒಂದು ಪ್ರಶ್ನೆಯನ್ನು ಮುಂದೊಡ್ಡಿ ಬಿಟ್ಟೆ. ಇದು ಮೊದಲೇ ಅನ್ನಿಸಿದ್ದರೆ ನಿನ್ನ ಪ್ರಶ್ನೆಗೆ ಉತ್ತರ ಬರಿಯ ಪ್ರಶ್ನಾರ್ಥ ಚಿಹ್ನೆಯಷ್ಟೇ ಆಗುತ್ತಿತ್ತು. ಹೋಗಲಿ ನೀನು ಗೆದ್ದೆ, ನಾನು ಸೋತೆ.

ಅಗೋ, ಸೋಲು ಗೆಲವುಗಳ ಮಾತು ಬಂದಕೂಡಲೇ ನೆನಪಿಗೆ ಬರುತ್ತಿದೆ. ಅಂದಿನ ಆ ದಿನ. ವರುಷ ಉರುಳಿದರೇನು? ನೀನು ಮಾತ್ರ ನನ್ನನ್ನು ಉರುಳಿಸಿದ ದಿನ ನನ್ನ ನೆನಪಿನಿಂದ ಉರುಳದು. ನನ್ನ ಈ ಸೋಲು ನನ್ನ ಮನೆಯಲ್ಲೇ ಸಂಭವಿಸಿದ್ದರೆ ಮರೆತುಹೋಗುತ್ತಿತ್ತೇನೋ? ಅತ್ತೆಯ ಮನೆಯಲ್ಲಿ ನಾದಿನಿಯ ಎದುರಿನಲ್ಲಿ ನಡುಹಗಲಿನಲ್ಲಿ ನನ್ನ ಸೋಲು; ಮರೆಯಬಲ್ಲೆನೆ?

ಅವನು ನಿಮ್ಮೂರ ಕ್ಷೌರಿಕ! ನನಗೆ ಪರಿಚಯವಿದ್ದರೂ ನಿಮ್ಮ ಮನೆಯ ಅನ್ನದ ದಾಕ್ಷಿಣ್ಯ, ನಿಮ್ಮ ಹೊಲಗದ್ದೆಯ ರಾಗಿ ಭತ್ತದ ಋಣವಿದೆ ಅವನಿಗೆ. ಅವನು ಅಂದು ನಿನ್ನ ಮತ್ತು ನಿನ್ನ ತಂಗಿಯ ಮಾತನ್ನು ಕೇಳಿಬಿಟ್ಟನು. ಪಾಪ ಆ ಸಣ್ಣ ಹುಡುಗಿಗೇನು ಗೊತ್ತು? ಆಕೆಯನ್ನು ಮುಂದುಮಾಡಿ ನೀನು ಹಿಂದು ನಿಂತು ಅಂದು ಆಯುಷ್ಕರ್ಮವನ್ನು ನನಗೆ ಮಾಡಿಸಿಯೇ ಬಿಟ್ಟೆ.

ಅಪ್ಪನಿಗೆ ನನ್ನ ಚೋಟುದ್ದ ತಲೆಯ, ಶಿಖಿಯನ್ನು ಕಂಡರೆಷ್ಟು ಸಮಾಧಾನವಿತ್ತು! ಆಚಾರವಿಚಾರಗಳ ಸ್ಫೂರ್ತಿ ಶಿಖೆ ಇದು ಎಂದು ಅವರು ತಿಳಿದಿದ್ದರು. ಅವರ ಆಜ್ಞೆಯಂತೆ ನಾನು ೨೦ ವರುಷ ಆದನ್ನು ಪೋಷಿಸಿಕೊಂಡು ಬಂದಿದ್ದೆನು. ನಿನಗಂತೂ ಮದುವೆಯಾಗುವ ಮೊದಲಿನಿಂದಲೇ ನನ್ನ ಜುಟ್ಟಿನ ಮೇಲೆ ಕಣ್ಣು ಇದ್ದಿತು. ಎಷ್ಟೋ ಸಾರಿ ನೀನು ಬೇಡಿಕೊಂಡೆ ನಾನು ಕೇಳಬೇಕಲ್ಲ. ಅಪ್ಪನ ಕಡೆ ಕೈ ಮಾಡಿ ಹೆದರಿಸಿದ್ದೆನು. ನೀನು ಅಪ್ಪನಿಗೆ ನನಗಿಂತಲೂ ಹೆಚ್ಚಿಗೆ ಹೆದರುತ್ತಿದ್ದುದರಿಂದ ಎರಡು ವರುಷ ಸುಮ್ಮನಿದ್ದೆ. ಕೊನೆಗೊಮ್ಮೆ ನಿನಗೆ ಧೈರ್ಯ ಬಂದಿತಲ್ಲಾ? ಅದೂ ನಿಮ್ಮ ಅಪ್ಪನ ಮನೆಯಲ್ಲಿ.

ನನಗಂದು ಆಯುಷ್ಕರ್ಮದ ಅವಸರವೇ ಇರಲಿಲ್ಲ. ಏನೋ ಮನೆಯ ಹತ್ತಿರ ಬಂದಿರುವನೆಂದೂ ಅವನಿಗೂ ನನ್ನ ತಲೆಯ ಮೇಲೆ ಕೈಯ್ಯಾಡಿಸಲು ಬಹಳ ಆಸೆ ಇದೆಯೆಂದೂ ನನಗೆ ಸಂಣ ವಯಸ್ಸಿನಿಂದಲೂ ಆಯುಷ್ಕರ್ಮ ಮಾಡುತ್ತಿದ್ದ ಕುಳ್ಳ ಮಂಚನ ಮಗನಿವನೆಂದೂ, ಕಾಫಿಯನ್ನು ಕೊಡದೆ ಅದೂ ನಾನು ಹಾಸಿಗೆಯಿಂದ ಏಳುತ್ತಿರುವಾಗಲೇ ಉಪನ್ಯಾಸಕ್ಕೆ ಆರಂಭಿಸಿದೆ. ನನಗೇನು ಗೊತ್ತಾಗಬೇಕು? ನಿನ್ನ ಮಾತಿನ ಮಾಲೆಯಲ್ಲಿರುವ ಕೀಟಲೆ? ಇದಕ್ಕೇಕೆ ಇಷ್ಟು ಮೇಲುಸಿರು ಬಿಡುವೆ ಎಂದು ಹೇಳಿ ಒಪ್ಪಿಕೊಂಡೆನು. ನಂದಿನಿ ನಗುತ್ತಲೇ ಮಣೆ ಹಾಕಿದಳು, ಸಡಗರ ದಿಂದ ಬಿಸಿನೀರು ಎಲ್ಲವನ್ನೂ ತಂದಿಟ್ಟಳು.

ಸಾಂಪ್ರದಾಯಕವಾಗಿ ಮುಖವೋ ತಲೆಯೋ ಎಂದು ಕೇಳುವ ಮಾತನ್ನು ಆತ ಎತ್ತದೆ ತಲೆಗೇ ಕೈ ಹಚ್ಚಿದನು. ತಲೆಬಗ್ಗಿಸಿದೆ. ನನ್ನ ಹುಟ್ಟು ಗುಣ ನನ್ನನ್ನು ಅಲ್ಲಿ ಕಾಡಿಸಿಬಿಟ್ಟಿತು. ನಿನಗೆ ಗೊತ್ತಿರುವಂತೆ ನಾನು ತಲೆ ತಗ್ಗಿಸಿದಾಗ ದೃಷ್ಟಿ, ಮನಸ್ಸು, ವಿಚಾರ ಇವುಗಳ ಸಮ್ಮಿಲನದಲ್ಲಿ ಸೇರಿ ಹೋಗುವೆನು, ಅಂದು ಆವುದೋ ವಿಚಾರದ ಝರಿ ಆ ನಾಪಿತನ ಮುಂದೆ ತಲೆ ಬಗ್ಗಿಸಿದಾಗ ಬಂದು ಬಿಟ್ಟಿತು. ಝರಿಯಿಂದ ಎಚ್ಚರಿಕೆ ಯಾಗುವ ಹೊತ್ತಿಗೆ ಆ ಕುಳ್ಳಮಂಚನ ಮಗನು ಎಲ್ಲವನ್ನೂ ಪೂರೈಸಿದ್ದನು.

ನಾನು ಸ್ನಾನದ ಮನೆಗೆ ಬಂದು ನಿನ್ನನ್ನು ಕೂಗಿಕೊಂಡಾಗಲೇ ನನಗೆ ಎಚ್ಚರ. ಎಂದೂ ಸ್ನಾನದ ಮನೆಗೆ ನೀನೇ ಬರುವವಳು, ಅಂದು ನಂದಿನಿ ಬಂದಳು. ತಲೆಗೆ ನೀರು ಹಾಕಿ ಸೀಗೆಯ ಪುಡಿಯನ್ನು ಹಾಕಿದಳು. ತಲೆಯುಜ್ಜುವೆನೆಂದು ತಲೆಯ ಮೇಲೆ ಕೈಯಾಡಿಸಿದೆನು. ಏನೂ ತಡವರಿಸಲಿಲ್ಲ, ಗಾಬರಿಯಾಯಿತು. ಹಿಂದಲೆ ಮುಂದಲೆಯನ್ನು ಸವರಿ ನೋಡಿದೆನು. ನಂದಿನಿಯೂ ಮಾಯವಾಗಿದ್ದಳು. ತಲೆಯ ತುಂಬ ಬಿಸಿ ನೀರನ್ನು ಬಸಿದುಕೊಂಡು ನಾನು ಸಿಟ್ಟಿನಿಂದೇಕೆ ಅಳುವ ಧ್ವನಿಯಲ್ಲಿ (ಆಳಲಿಲ್ಲ) ಹೊರಗೆ ಬಂದೆನು. ನೀನು ಸಿಕ್ಕಲಿಲ್ಲ. ಅಕ್ಕ (ನಿಮ್ಮ ತಾಯಿ)ನು ಅಂದು ಕಾಫಿಯನ್ನು ತಂದುಕೊಟ್ಟಳು. ನೀನು ಅಂದು ಕಾಫಿ ತಂದಿದ್ದರೆ ನಿನ್ನ ಗ್ರಹಚಾರ ಕೂಡಿ ಬಂದಿರುತ್ತಿತ್ತು. ಹುಡಿಕಿದೆನು, ನೀನು ನಿನ್ನ ತಂಗಿ ಇಬ್ಬರೂ ಮಾವನವರ ಮಾವಿನ ತೋಟಕ್ಕೆ ಹೋಗಿಬಿಟ್ಟಿದ್ದಿರಿ. ನಾನು ತಲೆಯ ತುಂಬ ಟೊಪ್ಪಿಗೆಯನ್ನು ಹಾಕಿಕೊಂಡು ಊರ ಹೊರಗೆ ಅಡ್ಡಾಡಿ ಹೊತ್ತಾಗಿ ಬಂದೆನು. ಬರುವ ಹೊತ್ತಿಗೆ ಮಾವನವರು ಮಾತಿಗಾಗಿ ಕಾದಿದ್ದರು, ರಾತ್ರಿ ಹತ್ತಾಯಿತು. ಊಟವನ್ನು ಅಂದು ಅಕ್ಕನೇ ಬಡಿಸಿದಳು. ನಿನ್ನ ಸುಳಿವೇ ಇಲ್ಲ, ನಂದಿನಿಯನ್ನು ಕೇಳಲು ನಾಚಿಗೆ. ಊಟವಾಯಿತು, ಮಂಚದ ಮನೆಗೆ ಹೋದೆ ಅಲ್ಲಿ ನಿನ್ನ ಹಾಸಿಗೆಯೂ ಮಾಯವಾಗಿದ್ದಿತು. ಸಿಟ್ಟು ಎರಡುಪಟ್ಟಾಯಿತು. ಶಿಖೆಯನ್ನು ಕಳೆದುಕೊಂಡ ಅವಮಾನ. ಸಿಟ್ಟು ತೀರಿಸಿಕೊಳ್ಳಲು ನೀನು ಸಿಗದಿದ್ದೂ ಎಲ್ಲವೂ ಸೇರಿ ರಾತ್ರಿಯನ್ನು ಹಗಲಾಗಿ ಕಳೆದು ಬೆಳಗ್ಗೆ ಏಳುವ ಹೊತ್ತಿಗೆ ಸ್ನಾನದ ಮನೆಗೆ ಹೋಗುವ ಹೊತ್ತಿಗೆ ನನ್ನ ಕಚೇರಿಯಿಂದ ನಾನು ಕೂಡಲೇ ಹೊರಟು ಬರುವಂತೆ ತಾರು ಬಂದಿತ್ತು. ಬಂದು ಎರಡು ದಿನಗಳಾಗಿರಲಿಲ್ಲ. ಒಂದು ದಿನದ ಹೈರಾಣ ಇಂತಾಯಿತು. ಈಗ ಹೋಗುವದೆಂದರೆ ಯಾರಿಗೆ ಕಾಲು ಬರ ಬೇಕು. ಹೋಗದಿದ್ದರೆ, ನಿನ್ನ ಕಡೆ ದೈನ್ಯದಿಂದ ನಾನು ತಿರುಗಿ ನೋಡಿದಾಗ ನಿನಗೂ ಕೆಟ್ಟನಿಸಿರಬಹುದಲ್ಲವೆ?

ಇದಾದ ಆರು ತಿಂಗಳನಂತರ ಅಪ್ಪನು ನನ್ನ ಮುಖವನ್ನು ನೋಡುವುದಿಲ್ಲವೆಂದು ಹಠಹಿಡಿದು ಅದನ್ನು ಬಿಟ್ಟ ಬಳಿಕ ಒಂದು ದಿನ ನೀನು ನನ್ನ ತಲೆಯ ಕೂದಲ ಉದ್ದವನ್ನು ಅಳೆಯುತ್ತ ಎಣ್ಣೆ ಹಾಕಿ ಅವುಗಳನ್ನು ಸಂತೈಸುತ್ತಿರುವಾಗ, ಆಗ ಸಣ್ಣ ದನಿಯಲ್ಲಿ ಸೋಲು ಯಾರದು? ಎಂದು ಕೇಳಿದಾಗ ನಾನು ಕೊಟ್ಟ ಉತ್ತರ ನಿನಗದೆಷ್ಟು ಮೆಚ್ಚಿಗೆಯಾಯಿತು. ಸೋಲುವುದೇ ಸರಿ-ಸುದತಿಗೆ ಇದು ತಾಂ ಸತಿವ್ರತಾ, ಎಂದು ನಾನು ಹೇಳಿದಾಗ, ನೆಲಕ್ಕೆ ಬಿದ್ದರೂ, ಮೀಸೆ ಮಣ್ಣಾಗಲಿಲ್ಲವೆನ್ನುವ ಗಂಡಸರು ನೀವಲ್ಲವೇ ಎಂದು ಸೋಲಿನ ಮೇಲೆ ನಿನ್ನ ಗೆಲವನ್ನು ಸ್ಥಾಪಿಸಿಕೊಂಡೆ.

ನಿನ್ನ ಉತ್ತರವನ್ನು ಎದುರು ನೋಡುತ್ತಿರುವ
ನಿನ್ನವನೇ,
*****

Tagged:

Leave a Reply

Your email address will not be published. Required fields are marked *

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...