(ಮುಗಿಲಂಗಳದಲ್ಲಿ ಕೂಡಹತ್ತಿರುವ ಮೋಡಗಳ ಕಡೆಗೆ ನಿರ್ಹೇತುಕವಾಗಿ ನೋಡುತ್ತಿರುವಾಗ ಮನಸ್ಸಿಗೆ ಒಲ್ಲೆನಿಸುತ್ತಿದ್ದರೂ, ಪರ್ಯುತ್ಸುಕತೆಯು ವಿಷದಂತೆ ಅಂತಃಕರಣವನ್ನೆಲ್ಲ ತುಂಬಹತ್ತಲು, ಪ್ರಸವೀಶಕ್ತಿಯ ಸ್ಥಿತಿಯು ಏನಾಗುತ್ತಿದ್ದೀತು?)
ನಾಲಿಗಿಲ್ಲದ ಗಂಟೆಯಂತಾಯಿತೀ ಬಾಯಿ,
ಜಾಲದೊಳು ಸಿಕ್ಕು ಹಕ್ಕಿಯವೊಲಾಯಿತು ಮನವು,
ತಾಲವಿರಹಿತವಾಯಿತರ್ಥವೂ ಶಿವಶಿವಾ!
ಜೀವ ನಿರ್ಜೀವವಾಯ್ತುು
ವಿವಿಧ ಬಣ್ಣಗಳಾಟ ಕಾಣಿಸದು ಕಂಗಳಿಗೆ,
ನವರಸದ ಸಂಗೀತ ಕೇಳಿಸದು ಕಿವಿಗಳಿಗೆ,
ಸವಿಯನರಿಯದು ಜಿಹ್ವೆ, ಪರಿಮಳಂಗಳ ತಾರ-
ತಮ್ಯ ತಿಳಿಯದು ಮೂಗಿಗೆ
ವಿಶ್ವಮೋಹನಕರೀ! ಶ್ರೀ ನಿಶಾದೇವಿಯೇ!
ನಶ್ವರದ ಪರಿಚಯವು ಬಹಳಾಯ್ತು. ಇನ್ನೆನೆಗೆ
ಶಾಶ್ವತದ ಪದದೋರು, ನಿದ್ರೆ ಮರಣಗಳೆಂಬ
ಮೊಲೆಯುಣಿಸು; ಬಂದೆ ನಾನು
ಹಸಿದು ಬಂದಿಹೆನುಣಿಸು, ನೀರಡಿಸಿ ಬಂದಿಹೆನು
ತುಸು ನೀರ ಕುಡಿಸೆನಗೆ, ತೂಕಡಿಸಿದೊಡನೆ ನಾ
ಹೊಸಲಾಲಿಯನ್ನಂದು ನಿನ್ನ ತೊಡೆಯನು ಹಾಸಿ
ಮಲಗಿಸೆನಗದರ ಮೇಲೆ
ಹುಣ್ಣಿಮೆಯ ಚಂದ್ರಮನು ಹಲವು ಸಲ ಕೃತ್ತಿಕೆಯ
ಹೆಣ್ಣಿಗಾನಂದವನಿತ್ತರೂ, ಹಲವು ಸಲ
ಹಣ್ಣೆಲೆಗಳುದುರಿ ಬನ ಹಸುರಾದರೂ ತಿರುಗಿ
ನಿದ್ರಿಸುವೆ ನಿನ್ನ ಬಳಿಗೆ
ಜಲ್ಪನೆಯ ಬೇಸರಿಕೆ ಬಂತೆನಗೆ, ಸೊಗಯಿಸುವ
ಕಲ್ಪನೆಯು ಕೂಡ ಬಳಲಿತು, ಶ್ರಾಂತನಾದೆ ನಾ,
ಕಲ್ಪಾಂತಕಾಲ ಬಂದರು ನಿನ್ನ ನಂಬುವೆನು,
ನನ್ನ ವಟಪತ್ರವಾಗು
*****








