ಎಲ್ಲೆಡೆಗೆ ಈ ಚಿತ್ರ ನಿನ್ನಂತೆ ಸರ್ವವ್ಯಾಪಿ
ಗೆಲ್ಲವೇ ಇದು ನಿನ್ನ ವಿಭುತನಕೆ ವಿಶ್ವರೂಪಿ ?
ಬೇಸಗೆಯ ಉರಿಬಿಸಿಲು, ರಣಗುಡುವ ಬರಿಬಯಲು
ತುಳಿತುಳಿದು ನೆಗ್ಗಿರುವ ದಾರಿಯೊಂದು
ತನಗೆ ತಾ ನೆರಳಾಗಿ ನಿಂತಿಹುದು ಅದರಲ್ಲಿ
ಮನುಜನೆನೆ ಕರೆಗೊಳ್ವ ಪರಿಜದೊಂದು. ೧
ಮೈಯೆಂತೆ? ಎಲುಬುಹಂದರ ಹೊದಿಸಿದಂತಿರುವ
ಮುದುಡುತೊಗಲಿನ ಬೆದರುಬೆಚ್ಚವೇ ಸೈ.
ಮೈ ಮೇಲೆಯೆ? ತೆರವಿಲ್ಲ ತುಂಬೆಲ್ಲ ಹರಹರಕು
ಚಿಂದಿಗಳ ಗೊಂದಣವು ಹೇಳಲೇನೈ. ೨
ಮುಸುಡಿಯಲಿ ಜಡೆಗೂದಲಿನ ಇರುಳು, ಕಣ್ಣಲ್ಲಿ
ಕುರುಡುಕಗ್ಗತ್ತಲೆಯು, ಕೈಗೆ ಕೋಲು
ಮುದಿಗಾಲ್ಗೆ ಕೊಳೆಚಿಂದಿಗಳ ಕಾಲ ಕುಪ್ಪಸವು
ಮುನ್ನಡೆಯಲೆಳಸುತಿದೆ ಜೀವ ಮೇಲು. ೩
ನಿಮಿಷನಿಮಿಷಕೆ ತಡೆದು ಅಡಿಯೊಂದನಎತ್ತಿಡುತ-
ನಡೆವುದೆಂದರೆ ಎಂಥ ದಂದುಗವದು !
ಹಿರಿಯ ಹವ್ಯಾಸಕ್ಕೆ ಕಿರಿಕಿರಿದು ಬಲವಾಗಿ
ಹೊರಟ ಚೇತನದ ಗತಿ ಮಂದವಹುದು ! ೪
ನಿನ್ನ ಸೃಷ್ಟಿಗೆ ಮುಕುಟಮಣಿಯೆಂದು ಕನವರಿಸಿ
ಮಾನವನ ನಿರ್ಮಿಸಿದ ನೆಲದಲ್ಲಿಯೆ
ಮಸಣಕ್ಕೆ ಹೇವರಿಸಿ ಹೊಡೆಮರಳಿ ಹೊರಟಿದ್ದ
ಹೆಣದಂಥ ಮೈ ಕಂಡೆ ಎದೆಯು ಬೇಯೆ. ೫
ಗತಿಮಂದ ಮತಿಮಂದ, ಬದುಕಲಾರದೆ ಬದುಕಿ
ಕಾಣದೆಡೆ ಹೊರಟರುವ ನೀ ಕಂಗಳ,
ನೆಲಬಾನುಗಳ ನಿಚ್ಚ ಚೆಲುವಿಕೆಯ ಮೊಗದಲ್ಲಿ
ತೊಡೆಯುತ್ತ ತನ್ನಿ ರವಿನಾ ಕಜ್ಜಳ. ೬
ಅವನೊಬ್ಬನೇ? ತಂದೆ! ಹೋದಲ್ಲಿ ಬಂದಲ್ಲಿ
ಅವನಂಥ ನೂರಾರು ಚಿತ್ರ ಕಂಡೆ
ನೂರು ಚಿತ್ರದ ಒಳಗೆ ನಿಂತು ಕಾಣುತಲಿರುವ
ಮಾನವತೆಯಿಂದಿನಾ ಚಿತ್ರ ಕಂಡೆ. ೭
ಹೊಲೆತನದ ಬಲಹೀನ ಬೊಂಬೆಗಳ ಅಲುಗಾಟ
ಎಲ್ಲೆಲ್ಲು ಕಣ್ಣಾಲಿಯನು ತುಂಬಿದೆ
ಹೇಸಿಕೆಯ ವಾರಾಶಿಯಲಿ ಹವಳಮುತ್ತಿನೊಲು
ಆಗಾಗ ಚೆಲುವುಗೆಲವಿಗೆ ಇಂಬಿದೆ. ೮
ನೆಲಕಾಗಿ ಬಲಕಾಗಿ ಹಣಕಾಗಿ ಹೆಣಗುತಿಹ
ಜನಜಂಗುಳಿಯ ಕರುಡುಹೋರಾಟದಿ
ಕಾಡುಮೃಗಗಳ ಹಾಗೆ ಕಾದಾಡಿ ಮಡಿಯುತಿಹ
ಮಾನವರ ಕಾಡುಬಾಳಿನ ಆಟದಿ- ೯
ಮರಮರಳಿ ಅಳಿಯಾಸೆ- ಅಹಂಕಾರಗಳ ಸುಳಿಗೆ
ಸಿಲುಕಿ ಮುಂದರಿಯದಿಹ ಜೀವಗಣದಿ
ಬೆಳಿಗೆ ಬರಿಕನಸಾದ ಮನೆಮಗುವಿನಲಿ ನನ್ನ
ಜಡಜೀವನದಿ ಅದುವೆ ಚಿತ್ರ ಮನದಿ. ೧೦
* * *
ಎಲ್ಲವೂ ಸುಂದರವು ದರುಶನಕೆ ನಿನ್ನ ಲೀಲೆ.
ಹೊಲ್ಲಕೂ ಚೆಲುವುಂಟು ಲೀಲೆಯಲಿ ಮಿಂದ ಮೇಲೆ.
ಹೊರಗಣ್ಗೆ ಹೊಲೆಯಾದ ಕಂಗಳನ ನೋಟವದು
ತೆರೆದ ಕಣ್ಣಿಗೆ ನಿನ್ನ ಆಟಬಗೆಯು,
ಚೆಲುವಿಕೆಯ ನಿಧಿಯಾಗಿ ನೀ ಪಡೆದ ಚಂದ್ರನಲಿ
ಚೆಲ್ಲಕಿರಿಸಿದ ಒ೦ದು ಕುಂದುಕಲೆಯು. ೧೧
ಕಣ್ಗೆ ಕಾಡಿಗೆಯಂತೆ ಮೊಗಕೆ ಮಚ್ಚದ ಹಾಗೆ
ಚೆಲುವಿಗೀ ಹೊಲೆ ಚೆಲುವ ಹೆಚ್ಚಿಸುವುದು.
ಎಂದಿನಿಂದಲೋ ಏನೋ ವಿಧವಿಧದ ಆಟಿಗೆಯ
ವಿಶ್ವದಾಟವು ನಿನ್ನ ಮೆಚ್ಚಿಸಿಹುದು. ೧೨
ಹೆರರ ಕಣ್ಣಲಿ ಬೆರಳು ಚುಚ್ಚಿ ನಲಿಯವ ಅಗಡು-
ತನದಾಟವಲ್ಲವೈ ನಿನ್ನ ಲೀಲೆ
ಎಲ್ಲದರ ಎದೆಯಲ್ಲಿ ಹುದುಗಿರುವ ಹಿರಿಯೊಲವೆ !
ಪ್ರೀತಿಸುತ ಆಡುತಿಹೆ ಮನವು ಸೋಲೆ. ೧೩
ಪರ-ಅವರ ಪ್ರಕೃತಿಯನ್ನು ನಿನ್ನಾಟಬುಗುರಿಯನು
ಮಾಡಿ ನೀ ತಿರುಗಿಸಲು ಪೂರ್ಣ ಪುರುಷ
ಅದರ ನಸುಬೀಳೇಳು ಕಾಲಶಕಲದ ಕಣ್ಗೆ
ಹಾಳೆಂದು ತೋರುವವು ಅಳಿಯೆ ಹರುಷ. ೧೪
ಗುಣತ್ರಯದ ತರತರದ ಜೀವಜಾತವ ನೀನು
ದೇಹದೋಣಿಗಳಲ್ಲಿ ತೇಲಿಬಿಡಲು
ಬಾಳ ಹೊನಲಿನ ಮೇಲೆ ಮುಂದೆ ಸಾಗುತಲಿಹವು
ಕಾಣದಾ ನಾವಾಡಿ ನೀನೆ ಇರಲು. ೧೫
ನೀನೆ ವಾಹಕ ನೀನೆ ತಾರಕನೆ ಆದರೂ
ನೀನಿತ್ತ ಸ್ವಚ್ಛಂದ ಬಲದಿ ಬೆರೆದು
ಮೂಡುವವು ಮುಳುಗುವವು ಪ್ರಕೃತಿಯನು ಬೆಂಬತ್ತಿ
ತಮ್ಮ ಕರ್ಮದ ಕಥೆಯ ತಾನೆ ಬರೆದು. ೧೬
ನಾ ಕಂಡ ಕಂಗಳನು ತನ್ನ ಕರ್ಮದ ಹೊಲೆಯ
ಹೊತ್ತ ಹೊರೆಕಾರನಾಗಿಂತು ಇಹನು
ಜನ್ಮಯಾತ್ರೆಯಲೀಗ ಕರ್ಮಕರಗಿಸುತಿದ್ದು
ಸರಿದಾರಿಯಲಿ ಮುಂದೆ ಬಂದೆ ಬಹನು. ೧೭
ಕರೆದುಕೊಳ್ಳುವುದಯ್ಯ ಕೈ ಚಾಚಿ ನಿನ್ನೊಲವು
ಹನಿಯ ಬೇಡಲು ಹಿರಿಯ ಹೊಳೆಯು ಹರಿಸಿ
ಕರ್ಮನಿಯತಿಯ ಮೀರಿ ನಿಂತ ಪ್ರೀತಿಯ ಋತದ
ಸತ್ಯ ಸೌಂದರ್ಯವನ್ನು ಪ್ರಕಟಗೊಳಿಸಿ. ೧೮
ಹೊಲೆಯಂತರಂಗದಲಿ ಕರ್ಮದಾಂತರ್ಯದಲಿ
ನೆಲೆನಿಂತ ಚೆಲುವೊಲವಗಮ್ಯವಹುದು
ಅರಿತವರಿಗೂ ಅರಿದು ಅನುಭವಕೆ ಹಿರಿಹಿರಿದು
ಬಾಳುವೆಯ ಮಾಯಾತ್ರೆ ದಿವ್ಯವಹುದು. ೧೯
ಇಂದು ನಾ ಕಾಣುತಿಹ ಎಲ್ಲೆಡೆಯ ಹೊಲೆತನವು
ಮುಂದೆ ಬಹ ಚೆಲುವಿಕೆಗೆ ಸಂಚಕಾರ
ಎಂಬ ಭಾವವು ಮುತ್ತಿ ತುಂಬಿದಾನಂದದಲಿ
ತಲ್ಲೀನವಾಗುವೆನು ಇಳಿದು ಭಾರ. ೨೦
ಇಂದು ನನ್ನಲಿ ನನ್ನ ಸಂಸಾರ ಚಿತ್ರದಲಿ
ಸುತ್ತಲಿಹ ಮಾನವತೆಯಿರವಿನಲ್ಲಿ
ತೋರುತಿಹ ಮಂದಗತಿ ತಾಮಸದ ಜಂಜಡವು
ಕರಗುವುದು ನೇಸರನ ಇದಿರಿನಲ್ಲಿ. ೨೧
ಹೊಲೆಯೆನಿತು ಹಿರಿದನಿತು ಚೆಲುವಿಕೆಯ ಬರವಿಂಗೆ
ತಪದ ದಾರಿಯ ತುಳಿದು ನಡೆಯಬೇಕು
ದಾರಿಹರಳುಗಳೆಂದು ಜನ್ಮಗಳ ತುಳಿದೊಗೆದು
ಕೊನೆಯ ಸಿದ್ಧಿಯನೆಳಸಿ ಪಡೆಯಬೇಕು ೨೨
ಎಲ್ಲ ಚೇತನಗಳಲಿ ಮಾನವತೆಯೆದೆಯಲ್ಲಿ
ನೀ ನೆಲಸಿ ನಡೆದಿರುವೆ ವಿಶ್ವಾತ್ಮನೆ !
ಹಿರಿಯ ಸಿದ್ಧಿಗೆ ಹಿರಿಯ ಯಾತನೆ ದಿಟವು
ನಿಂತುದೆಂಬುದು ಕೂಡ ಗತಿಯು ತಾನೆ. ೨೩
ಮಾತಾಯಿ! ಮಾಕರುಣಿ ! ನಿನ್ನ ದರುಶನವೆಂದೊ
ಈ ನಿನ್ನ ಬಾಳ ದರುಶನವು ನನಗೆ
ಹಿರಿದಾರಿದೀಪದೊಲು ಕರೆದೊಯುತಿರಲೆನ್ನ
ಮನದಿ ನಡೆನುಡಿಯಲ್ಲಿ ಮಿನುಮಿನುಗೆ. ೨೪
*****








