ಕನಸುಗಳನ್ನು ಕೂಗುತಿರಲು
ಏನ ಕೊಳುವಿರಿ?
ಪ್ರಾಣ ತೆರದೆ ಬರವು ಕೆಲವು-
ಏನ ಕೊಳುವಿರಿ?
ಬಾಳ ಹೊಸದು ಹಾರದಿಂದ,
ಸುಯ್ದು ಹೂವಿನೆಸಳನೊಂದ
ಬೀಳಿಸಿದೊಡೆ ಬಹುವು ಕೆಲವು-
ಬೀದಿಬೀದಿ, ಆಳುವ, ನಗುವ
ಕನಸುಗಳು ಕೂಗುತಿರಲು,
ಏನ ಕೊಳುವಿರಿ?
ಮಂದಿ ಸುಳಿಯದೊಂದೆ ಗುಡಿಲು;
ತೋಪು, ನೆರೆಯೊಳು;
ನೆರಳು, ಸಾವತನಕ ನನ್ನ
ನೋವು ತಂಪಲು.
ಬಾಳ ಹೊಸದು ಹಾರದಿಂದ,
ಕಳಚಿಕೊಡುವೆ ಮುತ್ತನೊಂದ-
ಆಯ್ದು , ಮನಸು ಬಯಸಿದಂತೆ
ಕೊಳುವುದಾಗಿ ಕನಸುಗಳನು.
ನನ್ನ ನೋವಿಗಿದೆಯೆ ಮದ್ದು,
ಇದನೆ ಕೊಳುವೆನು.
*****
BEDDOES (1803 – 1849) : Dream Pedlary






