೧
ಶೃಂಗಾರದ ಸರಸಿರುಹವೆ
ಭೃಂಗದ ಬಾಯ್ದನಿಯೊಳಿರುವೆ
ಬಂಗಾರದ ಬನದ ಚೆಲುವೆ
ನಕ್ಕು ನಲಿದು ಬಾ!
೨
ಮೋಡದ ಸೆಳೆಮಿಂಚಿನಂತೆ
ಹಾಡಿನ ರಸದೂಟೆಯಂತೆ
ಕಾಡಿನ ಬೆಳದಿಂಗಳಂತೆ
ಚಿಮ್ಮಿ ಹೊಮ್ಮಿ ಬಾ!
೩
ಒಲವಿನ ಉಯ್ಯಾಲೆಯಲ್ಲಿ
ನಲುಮೆಯ ನವರಾಗದಲ್ಲಿ
ಉಲಿದೊಲಿಯುವ ಮೋಡಿಯಲ್ಲಿ
ತೂಗಿ ತೂಗಿ ಬಾ!
೪
ಜಗದನುಭವ ತೇಲುವಲ್ಲಿ
ಮುಗಿಲಗಲದ ಭಾವದಲ್ಲಿ
ಸೊಗಸಿನಲರಕಂಪಿನಲ್ಲಿ
ಮೈದುಂಬುತೆ ಬಾ!
೫
ಸೂರ್ಯ ಚಂದ್ರರೀಜುವಲ್ಲಿ
ತೂರ್ಯ ಸ್ವನ ತುಂಬುವಲ್ಲಿ
ಆರ್ಯರ ಘನಮಂತ್ರದಲ್ಲಿ
ತೇಲಿ ತೇಲಿ ಬಾ!
೬
ನಗೆ ಮುಗುಳಿನ ರೂಪದಲ್ಲಿ
ಸೊಗದ ಸುಸಿಲು ಸೂಸುವಲ್ಲಿ
ಬಗೆಯ ಭಾಗ್ಯ ತೆರೆಯುವಲ್ಲಿ
ನಿಂತು ನಿಂತು ಬಾ!
೭
ಪರಿಪೂರ್ಣನ ಪ್ರಾಣದುಸಿರೆ
ಸಿರಿಯೊರತೆಯ ಮಧುರ ನೀರೆ
ಅಮರತ್ವದ ಅರಿವೆ ಬಾ
ಸುಮನೋಹರ ಸುಮವೆ ಬಾ
ನನ್ನಿರವೇ ಬಾ
ನಿನ್ನ ಬೆರೆವೆ ಬಾ!
*****
ಬೆಂಗಳೂರು : ೧೯೪೫








