ದಾಸ್ಮಯ್ಯ ನೇದ ದೇವಂಗದ್ವಸ್ತರವ ||ಪ||
ಜಗದೀಶ ಸಂಗಯ್ಯ ತಾ ಬೇಡಬಂದ
ದಾಸ್ಮಯ್ಯ ನೇದ ದೇವಂಗದ್ವಸ್ತರವ ||ಅ.ಪ.||
ಹರಬ್ರಹ್ಮಕೃಷ್ಣಯ್ಯ ವುಂಕೀಯ ಹೂಡಿ
ಹದಿನಾರು ಗಾವೂದ ಎಳೆಗಳ ಕೆಚ್ಚಿ
ಲಾಕೇಶನಂಬು ಲಾಳೀಯ ತಿರುವಿ
ಭೂಮಿತೂಕದೊಂದ್ವಸ್ತರ ನೇದ ೧
ದಂಡಕೋಲುಗಳ ಜೋಳಿಗಿ ನೇತು
ದುಂಡುಗರ ಪುತ್ರಿ ಸೂಲವ ನೇದು
ಆರೊಂದು ನಿಂಬೀಯ ನೂರೊಂದು ವರಿಯಾಗಿ
ತಂಡಕ ತಂಡಕ ಶಿವನೋಲಗ ನೇದ ೨
ಅಡ್ಡುಣಗಿ ಹರಿವಾಣ ಗಿಡ್ಡ ಮಜ್ಜುರಿ ಸರ
ಏಕಂತ್ರ ಪಂಚಾರುತಿ ಕಡ್ಡೀಯ ಬತ್ತಿ
ಸಾಕ್ಷೇತ ನುಡಿವ ಶರಣರ ನೇದ
ಮಂದಿರಕ ಬರುವಂತ ಮಂದೀಯ ನೇದ ೩
ಊರ ಊರ ನೇದ ಊರ ಗೌಡನ ನೇದ
ಊರ ಮಧ್ಯದ ಶಿವಲಿಂಗವ ನೇದ
ತನ್ನಯ್ಯನ ನೇದ ತಮ್ಮಣ್ಣನ ನೇದ
ಕಣ್ಣಿಗಿ ಕಂಡ ಚೆನ್ನಬಸವನ ನೇದ ೪
ಆರು ಮಾರುದ್ದ ಕೊರಿಗಳ ಕೋದು
ಗಟ್ಟೀಸಿ ಗಮ್ಮನೆ ಗಳಗೀಯ ಮಾಡಿ
ಸಂಗಮೇಸೂರ ಪ್ಯಾಟಿಗೆ ಒಯ್ದ
ಕೊಂಬುವರು ಶರಣಂಬುವರಯ್ಯ ೫
*****








