Home / ಕವನ / ಕವಿತೆ / ತವರು ಮನೆ

ತವರು ಮನೆ

ಕಡಗವಿಲ್ಲದ ಕೈಯು, ದಿಡಗವಿಲ್ಲದ ಹೊಳೆಯು
ಹಡದವ್ವ ಇಲ್ಲದ ತವರಿ‌ಽಗೆ | ಹೋದಽರ
ನಡುದಾರ್ಯಾಗ ವಸ್ತಿ ಹೋದ್ಹಾಂಗ ||

ಮಳೆಯು ಬಂದರು ಬರಲಿ, ಮರದಽ ಮೇಲಿರುವೆ
ಮಳೆ ನಿಂತ್ರು ಮರದ ಹನಿ ಬಿಡದ | ಹಡದವ್ವ
ನೀಬಿಟ್ರ ನಿನ್ನ ಮನ ಬಿಡದ ||

ಕಾಸಿಗೆ ಹೋಗುದಕ, ಏಸುದಿನ ಬೇಕವ್ವ
ತಾಸ್ಹೊತ್ತಿನ ಹಾದಿ ತವರಿಽಗೆ | ಹೋದಽರ
ಕಾಸಿ ಅದಾಳ ಹಡದವ್ವ ||

ಹಡದವ್ವದಾಳೆಂದು, ಬಡಬಡ ಒಳಗ್ಹೋದೆ
ಒಳಗ ಹಡದವ್ನ ಸೊಸ್ತೆಽರ | ಸಪ್ಪಳಕ
ತುದಿಗಟ್ಟಿತಳಗ ತಿರುಗೇನ ||

ಬಡವರು ಬಗ್ಗರು, ಹೆಡಗಿ ಬುಟ್ಟಿಯವರು
ಹೋಗರಿ ನನ್ನ ತವರಿಗೆ | ಅಣ್ಣಯ್ಯ
ದರುಮದ ಹಗೆಯ ತಗೆದಾನ ||

ಹಾಲುಂಡ ತವರೀಗೆ, ಏನೆಂದು ಹಾಡಲೆ
ಹೊಳೆದಂಡೆಲಿರುವ ಕರಕೀಯ | ಕುಡಿಯಂಗ
ಹಬ್ಬಲೆ ಅವರ ರಸಬಳ್ಳಿ ||

ಒಳ್ಳಸುತ್ತಲಕ್ಕಿ, ಕಲ್ಲಸುತ್ತಲಿ ಜೋಳ
ನಾಲಗೆ ಸುತ್ತಲು ಸುಲಿಹಲ್ಲು | ತಾಯವ್ವ
ನಾರಿ ನಿನಸುತ್ತ ಸರುಬಳಗ |

ಅಕ್ಕಿ ಕಿಚಡಿ ಮಾಡಿ, ತುಪ್ಪ ಬೆಚ್ಚಗೆ ಮಾಡಿ
ಸುತ್ತೇಳು ನಿರಿಗೆ ಮರೆಮಾಡಿ | ಉಣಿಸುವ
ಹೆತ್ತವ್ವನಿಲ್ಲ ಮನೆಯಾಗ ||

ಉಂಡೇನ ಉಟ್ಟೇನೆ, ತಂದೆಯ ಪುಣ್ಯೇವ
ಉಂಡೀನೆ ತಾಯಿ ಮೊಲೆಹಾಲ | ಅದರ್ಹಂಗ
ಗಂಡ ಮಗನೇನ-ಗಳೆಯಾಕ ||

ಕಣ್ಣು ಕಾಣುವತನಕ, ಬೆನ್ನು ಬಾಗುವತನಕ
ತಾಯಿಯಿರಲಿ ನನಗ ತವರಿರಲಿ | ನನ್ನವ್ವ
ಅಣ್ಣಯ್ಯರಿರಲಿ ಕರಿಸಾಕ ||

ತಂಗಾಳಿ ನೆನದಽರ ತಂಗಳು ಬಿಸಿಯಾದೆ
ತಿಂಗಳದ ತಲೆಯು ಮಡಿನಾದೆ | ತಾಯವ್ವ
ಗಂಗಾದೇವಿಯ ನೆನೆದಾಗ ||

ಯಾರು ಇದ್ದರು ನನ್ನ, ತಾಯವ್ನ ಹೋಲಾರ
ಸಾವಿರದಕೊಳ್ಳಿ ಒಲಿಮುಂದ | ಇದ್ದರ
ದೀವಿಽಗೆ ನಿನ್ನ ಹೋಲಾವ ||

ತಾಯಗಲಿ ಬಂದೀನಿ, ತಾಳಲಾರೆನು ಬಿಸಲ
ಬೇಗ ಹಾಸಣ್ಣ ಹರಗೋಲ | ಗಂಗವ್ವ
ನಿನ್ನಂಥ ತಾಯಿ ಅಗಲೇನ ||

ಊರ ಮುಂದಣ ಗಾಳಿ, ಏನಂತ ಬೀಸ್ಯಾವ
ಆಲೀಸಿ ಕೇಳ ಹಡದವ್ವ | ನಿನ ಮಗ
ಹಾಡ್ಯಾಡಿ ಹಂತಿ ಹೊಡದಾನ ||

ಲಿಂಬಿಹಣ್ಣಿನ್ಹಾಂಗ, ತುಂಬೇತಿ ನನ ಬಳಗ
ಹಂಗೂಸಿ ರಾಯ ಬೈಬ್ಯಾಡ | ತವರೂರ
ಹಿಂಡಿನನ್ನಾಕಿ ಅಗಲೇನ ||

ನೀರ್ಹೊಳಿ ದಾರ್ಯಾಗ, ತಾಯವ್ನ ಕಂಡೀರೆ
ಯಾರಂತಾಕಿ ನನ್ನ ಹಡದವ್ವ | ಮೂಗುತಿ
ಹರಳಿನಂತ್ಹಾಕಿ ತಾಯವ್ವ ||

ಹುಗ್ಗಿ ಹೂರಣಗಡುಬು, ಮಗ್ಗಿ ತಾಳಲಗಾಯಿ
ಒಗ್ಗರಣಿ ಸೋರಿ ಹದಿನಾರು | ಹಡದವ್ನ
ಒಡ್ಡೀನ ಹೊಲದ ಚೆರಗಾವ ||

ಬಂಡಿ ಬಂಡೀಯವರು, ಬಂಡಿಸಾಗರದವರು
ಹಿಂಡೆತ್ತಿನವರು ತವರವರು | ಬರುವಾಗ
ಒಂದೆತ್ತಿನಣ್ಣ ಬದಿಗಾಗೊ ||

ಅಣ್ಣನ ಆರೆತ್ತು, ತಮ್ಮನ ಮೂರೆತ್ತು
ನಮ್ಮಪ್ಪನೆತ್ತು ಹದಿನಾರು | ಬರುವಾಗ
ನನ್ನೂರ ಭೂಮಿ ನಡುಗ್ಯಾವ ||

ತಂದೆ ನನ್ಹಡದವ್ವ, ಒಂದು ಬಳುವಲಿ ಕಳಿಸು
ಅಂಗಳ ತುಂಬ ಎಳೆಗಽರ | ತವರೂರ
ಜಂಗೂಳಿ ಬಂದ್ರ ಕರೆಯಾಕ ||

ತಾಯಿ ಕಟ್ಟಿದ ಬುತ್ತಿ, ತರತರಕ ಯಾಲಕ್ಕಿ
ತಾಯಿ ನನ್ನವ್ವ ಗರತಿಽಯ | ಕಟ್ಟೀದ
ಬುತ್ತಿ ಬಿಚ್ಚೇನ ಹೊಳಿಯಾಗ ||

ದಾಸ್ಯಾಳ ಹೂವೀಲೆ, ನೇಸ್ಯಾಳ ಕುಂಚೀಗಿ
ದೇಶಕ ಹಡದವ್ವ ಕಳುಹ್ಯಾಳ | ನನ್ನೂರ
ದೇಸಾಯಿ ಕಂಡು ಬೆರಗಾದ ||

ಬೇದಂತ ಬೇಗಳ, ಬೆನ್ಹತ್ತಿ ಬಾರಽವ
ಕೋದಂತ ಕುಸುಬಿ ಚಿಗಿಯಽವ | ಹಡದವ್ನ
ಬೇದವರ ವಂಶ ಹುರಿಯಽಲೆ ||

ಲಿಂಬಿಯ ಗಿಡ ಹುಟ್ಟಿ, ಲಿಂಗಕ ನೆರಳಾಗಿ
ನೆಂಬಿಗಿ ಬಕುತ ನನ ತಮ್ಮ | ಮನಿಯಾಗ
ಜಂಗಮರುಣ್ಣುದು ಕಡೆಯಿಲ್ಲ ||
*****

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...