ಸುಂಸುಂಕೇನೆ ನಂಗ್ ಅಂತೀಯ
ಜಂಬದ ಕೋಳಿ ಅಂತ;
ಮನ್ಸನ್ ಮನಸನ್ ನೋಡ್ದೆ ಸುಂಕೆ
ಸಿಕ್ದಂಗ್ ಅಂದ್ರೆ-ಬಂತ! ೧
ತಿಳದೋರ್ ಇತರೋರ್ ಒಗಳೋದ್ಕೆಲ್ಲ
ಕುಣದಾಡ್ತಾರ ಬಿದ್ದಿ?
ತಿಳದೋರ್ ಎಕಡ ಮಂಡೇಲ್ ಮಡಗಿ
ಕಲ್ತೀನ್ ಒಸಿ ಬುದ್ದಿ! ೨
ಕುಡಿಯೋನ್ ನಾನು! ಆಡೋನ್ ನಾನಾ
ಮೂಳೆ ಮಾಂಸದ್ ಕಂಬ?
ಯೆಂಡ ಕುಂತ್ಕೊಂಡ್ ಆಡಿಸ್ತಿದ್ರೆ
ನಂಗ್ ಯಾಕಣ್ಣ ಜಂಬ! ೩
ಸೂತ್ರದ ಗೊಂಬೆ ಇದ್ದಂಗ್ ಇವ್ನಿ
ಯೆಂಡದ್ ಕೈಲಿ ನಾನು;
ಯೆಂಗ್ ಆಡಂದ್ರೆ ಅಂಗ್ ಆಡ್ಬೇಕು!
ನಂಗೀ ಜಂಬದಿಂದ್ ಏನು! ೪
ಮೈಯಿನ್ ತುಂಬ ತುಂಬ್ಕೊಂಡೈತೆ
ಆಡ್ಸೋ ಯೆಂಡದ್ ಮತ್ತು;
ಜಂಬ ಗಿಂಬ ಅನ್ನೋದ್ಕೆಲ್ಲ
ಜಾಗ ಎಲ್ಲಿಂದ್ ಬತ್ತು? ೫
ಲೋಕಕ್ ಕುಂತ್ಕೊಂಡಂಗೇ ಕುಂತಿ
ಸಿಕ್ದಂಗ್ ಆಡೋಕ್ ಗೊತ್ತು;
ಕಣ್ ಬಿಟ್ಕೊಂಡಿ ಅತ್ತಿರ್‍ಕೋಗಿ
ತಿಳಿಯೋ ಬುದ್ ಎಲ್ಬತ್ತು? ೬
ಲೋಕದ ಚಾಲೇ ಇಂಗೈತೇಂತ
ಕಂಡೇ ಅದೆ ಅದು;
ಆದ್ರೂ ಏನೋ ಕುಡದೋನ್ ಚಪಲ-
ಯೋಳಾದ್ ಯೋಳ್ಬಿಡಾದು! ೭
ಯೆಂಡ ಕುಡದೋನ್ ಕಂತೇಂತೇಳಿ
ಮೂಲೇಗ್ ಇದನ್ ಆಕ್ಬಾರ್‍ದು;
ಮನ್ಸನ್ ಜೀವ ತಿಳಕೊಳ್ದೇನೆ
ಸುಂಕೆ ನೋಯಿಸ್ಬಾರ್‍ದು. ೮
*****