ಅವಳು ಕಣ್ಣ ತೆರೆದಳು ಮೆಲ್ಲಗೆ
ಮೂಲೆ ಮೂಲೆ ಮೈಮುರಿದೆದ್ದಳು
ಹೊಂಗದಿರ ಪೊರಕೆಯಿಂದ ಸಂದು ಗೊಂದುಗಳ
ಝಾಡಿಸಿ ಕತ್ತಲು ಕಸ ಗುಡಿಸಿದಳು
ಮೂಡಲ ಬಾಗಿಲ ತೆರೆದು ಇರುಳ ಹೊದಿಕೆಯನೋಸರಿಸಿ
ತನ್ನಿನಿಯನ ಮೈತಟ್ಟಿ ಎಬ್ಬಿಸಿದಳು ಕಣ್ಣ ತೆರೆಸಿದಳು
ಗಾಳಿಯೂದಿನಕಡ್ಡಿಯ ಪರಿಮಳವೆಲ್ಲೆಡೆ
ಕುಂಕುಮದೋಕುಳಿಯ ಚಳೆ ಅಂಗಳಕೆ
ಬಣ್ಣ ಬಣ್ಣದ ಗೆರೆ ಮೋಡಿಯಿಂದ ರಂಗೋಲಿ ಹಾಕಿದಳು
ಚಿಕ್ಕೆ ಹೂಗಳನುದುರಿಸಿ ಹಸಿರುಡಿಯಲ್ಲಿ ತುಂಬಿಕೊಂಡಳು
ಪರಚಿಂತನ ಜಲದಿ ಮೈತೊಳೆದು
ನಿತ್ಯನೂತನ ಬಿಳಿ ಮಡಿಯುಟ್ಟು
ಅರಳಿದ ಸುಮನಗಳ ತಲೆಯಲ್ಲಿಟ್ಟುಕೊಂಡಳು
ಸೋರೆಕಾಯ ತಂತಿಗಳ ಮೀಟಿ ಮೀಟಿ
ಝೇಂಕರಿಸಿ ರಸರಂಜನೆಯಲ್ಲಿ ಎದೆದುಂಬಿ
ಕಂಠಕೇಸರ ದಾಟಿ ಜೇನುರಾಗ ಹೊಮ್ಮಿ
ಹೊರಮೊರೆಯುವಂತೆ ಹಾಡಿದಳು
ಗುಡಿಗಂಟೆ ಗಿಡಗಂಟೆಗಳ ಚಿಲಿಪಿಲಿ ಗೆಜ್ಜೆದನಿಗೆ
ಓಹೋ ಏನವಳ ನರ್ತನ
ಎಲ್ಲಿಡೆಯಲಿ ಮಧುರಂ ಮಧುರಂ ಸಂಕೀರ್ತನ
*****