ಕಣ್ಣು ಕಣ್ಣು ಕೂಡಿದಾಗ
ಸರ್ಪಕಂಡ ಗರುಡ ಹಾಕಿದ ಹೊಂಚು
ಸೆಣೆಸಿ ಸೆಳಕೊಳ್ಳುವ ಸಂಚು
ಮಿನುಗುವ ಕಣ್ಣಮಿಂಚು
ಕುಣಿಕೆ ಕಣ್ಣಿಯ ಸುತ್ತಿ
ಎಣಿಕೆಯ ಹೆಣಿಕೆ ಹಾಕುತ್ತದೆ

ತಿನಿಸು ಕಂಡ ನಾಲಗೆ ಚಾಚಿ
ಸಿಕ್ಕರೆ ಸಾಕು ಸಂದು
ಗಬಕ್ಕನೆ ತಿಂದು
ಹಸಿವಿಂಗಿಸಲು ಕಾಯುತ್ತದೆ

ಹಕ್ಕಿಯು ಕೂಡಿಟ್ಟ ಗೂಡಿನಲಿ
ರೆಕ್ಕೆ ಬಿಚ್ಚಿ ಕೊರಚಾಡಿ
ಹೊರಬರಲಾರದೆ
ಕಳವಳವ ತುಳುಕಿಸುತ್ತದೆ

ಬಲೆಯಲ್ಲಿ ಬಿದ್ದ ಮೀನು
ಪಳಪಳನೆ ಎಗರ್ಯಾಡಿ
ಹೊರ ತೂರಲಾರದೆ
ನಿರ್ಜೀವವಾದರೂ
ಕಣ್ಣು ಮಿಟುಕಿಸಿ
ತೃಪ್ತಿಗೊಳ್ಳುತ್ತದೆ
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)