ನಾವಿಂದು ಮಾತಾಡಬೇಕಾಗಿರುವುದು
ಮಂದೆಗಳ ಮುಂದೆ ಒಡಿಕುಗಡಿಗೆಗಳ ಕುಡುಕ ಶಬ್ದಗಳನ್ನಲ್ಲ
ಕಪ್ಪು ಮುಖವ ಬಿಳಿ ಮುಖವಾಡದಿಂದ ಮುಚ್ಚುವ
ಕಡ್ಡಿಯನ್ನೂ ಚಲಿಸಲಾಗದ ಸ್ವರ್ಗ ಪುರಾಣವನ್ನಲ್ಲ.
ಮಂಕು ಹಿಡಿದ ಮಂತ್ರಗಳನ್ನಲ್ಲ, ತುಕ್ಕುಹಿಡಿದ ತಂತ್ರಗಳನ್ನಲ್ಲ
ದಂತಗೋಪುರಗಳಲ್ಲಿ ಕುಳಿತು
ಹೂವು-ಜೇನು, ನಾರಿ-ಸೀರೆ, ಇಂದ್ರ-ಚಂದ್ರರ, ಗಾಳಿಬುರುಡೆಯನ್ನಲ್ಲ
ನೆಲಕಿಳಿಯದ ಭೂತ ಬೆಂತರಗಳೊಡನಲ್ಲ
ಮಣ್ಣ ರುಚಿಕಾಣದ ಅಪ್ಸರೆಯರೊಡನಲ್ಲ
ಇಹದಲ್ಲಿಳಿದುಬರದ ಪರದ ಪರದಾಟವನ್ನಲ್ಲ

ಮಾತಾಡಲು ಮಾತೇ ಬೇಕೇನು?

ಬಾಯೆಂಬ ತೂತೇ ಬೇಕೇನು?

ಕರೆವ ಕರಿಭವಿಷ್ಯದೊಡನೆ, ಕಲ್ಲಾದ ಮಣ್ಣಿನೊಡನೆ
ಮಣ್ಣಾದ ಮಾನವತೆಯೊಡನೆ
ಉರಿಬಿಸಿಲು ಮೊರೆಗಾಳಿ ಹರಿನೀರು ಸುರಿಮಳೆ ಬರಿವಾಸ್ತವದೊಡನೆ
ಅಳುಮೊಗ ಕೊಳೆತ ಮತಿ ಎಲುಬುಗೂಡಿನ ಗುಡಿಸಲುಗಳೊಡನೆ
ಬೆವರ ಹನಿ ರಕ್ತ ಬಿಂದುಗಳಿಂದ
ಕೈ ಬೆರಳು, ತೋಳು ಕಾಲುಗಳ ಉಕ್ಕಿನ ಖಂಡಗಳಿಂದ
ಒಡಲ ವೀರ್ಯದಿಂದ ಸಾಹಸದ ತೂರ್ಯದಿಂದ
ಹಾರೆ ಸಲಿಕೆ ಸುತ್ತಿಗೆ ಚಮ್ಮಟಿಗೆಗಳಿಂದ
ಗ್ರಂಥ ದೀಪಗಳಿಂದ ಪ್ರನಾಳ ಭೂತಕನ್ನಡಿಗಳಿಂದ
ಎಲ್ಲಕ್ಕೂ ಒಳಗಿಳಿದು ಮಿದುಳುಬಳ್ಳಿಯಿಂದ ಮನದ ಮಾನದಿಂದ
ಬಿಚ್ಚದೆಯ ಮಿಡಿತದಿಂದ ಮಾನವತೆಯ ಏಕನಾಡಿ ಸೂತ್ರದಿಂದ
ನಾವಿಂದು ಮಾತಾಡಬೇಕು
ಅಂದರೆ ಮಾಡಬೇಕು
ಮಾತು ಮಾಡಿದಂತಿರಬೇಕು
ಮಾಡಿದ್ದೇ ಮಾತಾಗಬೇಕು
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)