ಅಟ್ಟ ಏಣಿಗಳ
ಅದೇ ಹಳೇ ಕಥೆ
ಅಟ್ಟವೇರಲು ಏಣಿ
ಏಣಿ ಕೊನೆಗೆ ಅಟ್ಟವಂತೆ!

ಒಂದೊಂದು ಏಣಿ
ಮೆಟ್ಟಿಲೇರಲೂ ಪ್ರಯಾಸ
ದೀರ್ಘ ಪ್ರವಾಸ
ಹಠ ಹಿಡಿದು ಉಪವಾಸ!

ಎರಡನೇ ಮೆಟ್ಟಿಲೇರಿದರೆ
ಮೊದಲ ಮೆಟ್ಟಿಲ ಮರೆವು
ಏರುತ್ತಾ ಹೋದಂತೆ
ಕೆಳಗಿನದೆಲ್ಲವೂ ಕೆಲಸಕ್ಕೆ ಬಾರದವು!

ಒಮ್ಮೆ ಅಟ್ಟವೇರಿ ಕುಳಿತರೆ
ಮತ್ತೆ ಕೆಳಗಿಳಿಯುವರೇ?
ಮೆಟ್ಟಿಲು ಹತ್ತಿದ್ದು ಉಸಿರುಬಿಟ್ಟಿದ್ದೆಲ್ಲಾ
ಸುಖಾಸುಳ್ಳೇ ? ಅಟ್ಟವೇ ದೇವರೇ?

ಅಟ್ಟದ ಮುಂದೆ ಏಣಿ
ಸದಾ ಸೊನ್ನೆ
ಇಂದೆಂಬ ಗುರಿ ಸೇರಿದ ಮೇಲೆ
ದಾರಿ – ಕಳೆದು ಹೋದ ನೆನ್ನೆ.

ಅಟ್ಟ ಏಣಿಗಳ
ಅದೇ ಹಳೇ ಕಥೆ
ಅಟ್ಟವೇರಿದವರು
ಏಣಿ ಒದ್ದರಂತೆ!
*****