ಇರುಳು ಸುಮ್ಮನೆ ಬೆಳಕಾಗಿ ಅರಳುವುದಿಲ್ಲ
ಮುಗಿಲು ಸುಮ್ಮನೆ ಮಳೆ ಸುರಿಸುವುದಿಲ್ಲ

ಶಿಲುಬೆಗೇರಿದ ಕತ್ತಲು
ನೋವುಗಳಿಗೆ ಮೈಯೊಡ್ಡಿ
ಹದ ಬೆಂದು ಬೆಳಕಾಗಬೇಕು
ತಕ್ಕಡಿಯಲಿ ಕೂತ ತುಂಬು
ಬಸುರಿನ ಮುಗಿಲು
ಹಿಂಸೆಯನುಭವಿಸುತ್ತಲೇ
ಈಗಲೋ – ಆಗಲೋ ಅನುಮಾನಿಸುತ್ತಾ
ವರುಣನ ಹಡೆದು ಬಿಡಬೇಕು.

ಕೊತಕೊತನೆ ಕುದಿವ ಘಳಿಗೆ
ಬಟ್ಟಲಿನೊಳಗೆ ಬಿದ್ದ ನಿಶೆ
ಪದರುಪದರಾಗಿ ಸುಲಿದುಕೊಳ್ಳುತ್ತಲೇ
ತನ್ನೊಳಗಿನೊಳಗಿನ ಬೆಳಕು ಹೊಮ್ಮಿಸುತ್ತಾ
ಉಷೆಯಾಗಬೇಕು
ಕೆಂಪು ಗುಲಗಂಜಿಗೆ ಸಣ್ಣಬೊಟ್ಟಿಟ್ಟ
ಕಪ್ಪಿನಂದದ ಕಾರ್ಮುಗಿಲು
ಮೆಲ್ಲಮೆಲ್ಲಗೆ ವಿಸ್ತಾರಕ್ಕೆ ಚಾಚಿ
ಕೆಂಪೆಲ್ಲ ನುಂಗಿ ಕಾಳಕಪ್ಪಾಗಿ
ಕುಡಿದ ಕೆಂಪಿನ ವಿಷವ ಆಮೃತವಾಗಿಸುತ್ತಲೇ
ನಿಧಾನಕ್ಕೆ ಹನಿಯೊಡೆಯುತ್ತಲೇ
ತೀವ್ರಗೊಂಡು ಜಡಿಮಳೆಯಾಗಬೇಕು.

ಇಲ್ಲಿ ಇರುಳು ಸುಮ್ಮನೆ ಬೆಳಕಾಗಿ ಅರಳುವುದಿಲ್ಲ
ಮುಗಿಲು ಸುಮ್ಮನೆ ಮಳೆ ಸುರಿಸುವುದಿಲ್ಲ.
*****