ಗತಕಾಲದಿತಿಹಾಸ ಪುಟಗಳಲಿ ಮೆರೆದಿರುವ
ಸಿರಿ ಚೆನ್ನಿಗರ ಪ್ರಶಂಸೆಗೆ ಕಣ್ಣು ಹರಿದಾಗ,
ಮಡಿದ ನಾರಿಯರ, ಮನಸೆಳೆವ ವೀರರ ಚೆಲುವ
ಹೊಗಳಿ ಹಳೆಕವಿತೆ ಥಳಥಳಿಸುವುದ ಕಂಡಾಗ,
ತುಟಿ ಹುಬ್ಬು ಕಣ್ಣು ನಿಡಿದೋಳು ಅಡಿಗಳ ಸಿರಿಯ
ಪರಿಪರಿಯ ಲಯವ ಹಿಡಿದಿಟ್ಟ ಹಳೆ ಕವಿಗಳಿಗೆ
ಕಣ್ಣ ತಣಿಸುವ ನಿನ್ನ ಚೆಲುವನೂ ಹಿಡಿವ ನಯ
ಇತ್ತು ಎನಿಸುವುದು. ನಿನ್ನಿಂದಿನೀ ಚೆಲುವಿಗೇ
ಮುಂಚೆ ನಡೆದಂಥ ಕನವರಿಕೆ ಆ ಹೊಗಳಿಕೆ.
ಚೆಲುವಿನಾಳಕ್ಕಿಳಿಯಬಲ್ಲ ಪ್ರತಿಭೆಯ ಕಣ್ಣು
ಇದ್ದರೇನಂತೆ, ಇರದಾಯ್ತು ಆ ಕಾಲಕ್ಕೆ
ಹಾಡಿ ಹೊಗಳಲು ನಿನ್ನ ಸಮದ ಚೆಲುವಿನ ಹೊನ್ನು.
ನಮಗೊ ಎದುರೇ ಇದೆ ಬೆರಗುಗೊಳಿಸುವ ಚೆಲುವು,
ಕಣ್ಣು ಮಿನುಗಿದರು ನಾಲಿಗೆ ಇಲ್ಲ ಹಾಡಲು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 106
When in the chronicle of wasted time