ಪ್ರೀತಿ ನೆಲೆಯಲ್ಲೇನೊ ನಾವಿಬ್ಬರೂ ಒಂದೆ,
ಆದರೂ ಅಂತಸ್ತಿನಲ್ಲಿ ಭಿನ್ನ ವಿಭಿನ್ನ :
ನನಗೆ ಹತ್ತಿದ ಕಳಂಕವನೆಲ್ಲ ಅದಕೆಂದೆ
ಒಬ್ಬನೇ ಹೊರುವೆ ಬಯಸದೆ ನಿನ್ನ ನೆರವನ್ನ
ನಮ್ಮ ಬಾಳಿನಲ್ಲಿ ಅಂತರವೇನೆ ಇದ್ದರೂ
ಏಕ ಬಗೆ ಗೌರವ ಪರಸ್ಪರರ ಪ್ರೀತಿಯಲಿ ;
ಸವಿಯೊಲವ ಗಳಿಗೆಗಳನೆಷ್ಟೊ ಅದು ಕದ್ದರೂ
ವ್ಯತ್ಯಾಸವನು ತರದು ಪ್ರೀತಿಪರಿಣಾಮದಲಿ.
ತೋರಿಸಿಕೊಳ್ಳಲೊಲ್ಲೆ ನಮ್ಮ ಪರಿಚಯ ಹೊರಗೆ,
ನನ್ನ ತಪ್ಪಿಗೆ ನಿನ್ನ ನಾಚಿಸುವ ನಾನಲ್ಲ;
ಎಲ್ಲರೆದುರಲಿ ಮನ್ನಣೆಯ ಮಾಡಿದರೆ ನನಗೆ
ನಿನ್ನ ಘನತೆಗೆ ಕುಂದು ಬಾರದುಳಿಯುವುದಿಲ್ಲ.
ಮಾಡದಿರು ಹಾಗೆ ; ನಿನ್ನಲ್ಲಿರುವ ಪ್ರೀತಿಗೆ
ಕುಂದುಬರದಂತೆ ನಡೆಯುವೆ ನಿನ್ನ ಕೀರ್ತಿಗೆ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 36
Let me confess that we two mush be twain