ನಿನ್ನ ರುದ್ರ ಭಯಂಕರ ಆರ್ಭಟದ ಸ್ಪರ್‍ಷ ಒಂದಿಷ್ಟಾದರೂ
ಈ ಕವಿಕರ್ಮದ ಏದುಬ್ಬಸದ ಲಯಕ್ಕೆ ದೊರೆಯುವಂತಿದ್ದರೆ!
ನನ್ನೆತೊದಲು ನಡಿಯೊಡನೆ ನಿನ್ನ ದನಿಯ ಮಿಲನವಾಗುವಂತಿದ್ದರೆ!

ನಿಸರ್‍ಗದೊಡನೆ ಕಲೆಯೂ ಬೆಸೆದುಕೊಂಡ ಉಪ್ಪಿನಂಥ ಪದಗಳನ್ನು
ನಿನ್ನಿಂದ ಲಪಟಾಯಿಸುವ ಕನಸು ಕಂಡಿದ್ದೆ ನಾನ-
ನನ್ನ ದುಃಖ ಮತ್ತಷ್ಟು ಉಪ್ಪು-ಮೊನಚಾಗಿ
ಬೆಳೆದ ಮಗುವಿನಂಥ ನನ್ನ ಅಳು ಎಲ್ಲರಿಗೆ ತಾಗಲೆಂದು.

ಪುರಾತನ ನಿಘಂಟಿನ ಮಾಸಿದ ಪುಟಗಳ
ಸವೆದ ಪದಗಳಷ್ಟೇ ನನ್ನ ಸಂಪತ್ತು.
ಅಪರೂಪಕ್ಕೊಮ್ಮೆ ಒಲುಮೆ ಮಿಂಚಲ್ಲಿ ಮಿನುಗಿದ್ದ ಮಾತು
ಈಗ ನಿಶ್ಯಕ್ತವಾಗಿ ಗೋಳಿನ ಅಲಂಕಾರವಾಗಿದೆ.
ಈ ಪದಗಳು, ಎಂಟಾಣೆಗೆ ಸೆರೆಗು ತೆರೆವ ಬೀದಿ ಸೂಳೆಯರು.
ಈ ಪದಗಳು, ತಟ್ಟಾಡುವ ಸುಸ್ತಾದ ನುಡಿಗಟ್ಟುಗಳು.
ಮಂತ್ರಿಗಳು, ರೌಡಿಗಳು, ಗೈಡು ಬರೆಯುವವರು,
ಕುಕವಿಗಳು ನಾಳೆಯೇ ಇವನ್ನೂ ಕದ್ದುಬಿಟ್ಟಾರು.

ನಿನ್ನಮೊರೆತ, ನಿನ್ನ ಆರ್ಭಟ ಏರಿದೆ.
ಸಾಗರ ನೀಲಿಯ ಮೇಲೆ ಹೊಸ ನೆರಳು ಆಡಿದೆ.
ಭಾವ ನನ್ನೆ ಬಿಟ್ಟು ತೆರಳಿದೆ.
ರೂಪವಿಲ್ಲ, ಸ್ಪರ್ಶವಿಲ್ಲ, ಗಂಧವಿಲ್ಲ, ರುಚಿಯಿಲ್ಲ.
ಇಲ್ಲ, ಅರ್ಥವೂ ಇಲ್ಲ, ನನಗೆ ಸೀಮೆಯೂ ಇಲ್ಲ.
*****
ಮೂಲ: ಯೂಜೀನ್ ಮಾಂಟೇಲ್ / Eugenio Montale