ಅಬ್ಬಬ್ಬಾ! ಇದೆಂಥ ಹೂ!

ಅಬ್ಬಬ್ಬಾ! ಇದೆಂಥ ಹೂ!

ಸಸ್ಯ ಪ್ರಪಂಚ ಅದ್ಭುತ ಪ್ರಪಂಚ. ಸಸ್ಯಪ್ರಪಂಚದಲ್ಲಿ ಕುತೂಹಲಕಾರಿಯಾದ, ವಿಸ್ಮಯಕಾರಿಯಾದ ಉದಾಹರಣೆಗಳಿಗೆ ಕೊನೆಮೊದಲಿಲ್ಲ. ಸಸ್ಯಗಳು ನಿರ್‍ವಹಿಸುವ ಕಾರ್‍ಯವೈಖರಿ, ಅವುಗಳ ಗಾತ್ರ, ಎತ್ತರ ಅಥವಾ ದೀರ್‍ಘಾಯುಷ್ಯಗಳಲ್ಲಿ ದಾಖಲೆ ಸ್ಥಾಪಿಸಿವೆ. ಅಂತಹ ಕುತೂಹಲಕಾರಿಯಾದ ಅಂಶ ರಾಫ್ಲೇಶಿಯಾ ಎಂಬ ಸಸ್ಯದ ಹೂ ರಚನೆಯಲ್ಲಿ ಕಾಣಬಹುದು.

ರಾಫ್ಲೇಶಿಯಾ ಎಂಬ ಸಸ್ಯವು ಮಲೇಶಿಯಾ, ಇಂಡೋನೇಶಿಯಾ ಮತ್ತು ಬರ್‍ಮಾ ದೇಶಗಳ ಅರಣ್ಯ ಪ್ರದೇಶಗಳಲ್ಲಿ ಬೆಳೆಯುತ್ತದೆ. ರಾಫ್ಲೇಶಿಯೇಶೀ ಕುಟುಂಬವು ೧೪ ಜಾತಿಗಳನ್ನು ಹೊಂದಿದ್ದು ಅವುಗಳಲ್ಲಿ ರಾಫ್ಲೇಶಿಯಾ ಅರ್‍ನಾಲ್ಡಿ (Rafflesia arnoldii)ಯೂ ಒಂದು. ಇದೊಂದು ವಿಚಿತ್ರ ಸಸ್ಯ. ಈ ಸಸ್ಯಕ್ಕೆ ಎಲೆ ಅಥವಾ ಕಾಂಡಗಳಿಲ್ಲ. ಇದೊಂದು ಬೇರು ಪರಾವಲಂಬಿ (Root Parasite). ಇದರ ಬೇರುಗಳು ಶಿಲೀಂದ್ರಗಳಂತೆ ಸೂಕ್ಷ್ಮವಾದ ದಾರಗಳಾಗಿ ಮಾರ್‍ಪಾಟಾಗಿವೆ. ದ್ರಾಕ್ಷಿ ಕುಟುಂಬದ ಮೇಲೆ ಇತರ ಸಸ್ಯಗಳ ಬೇರುಗಳಲ್ಲಿ ತನ್ನ ಬೇರನ್ನು ತೂರಿಸಿ ಆಹಾರ ಹೀರುತ್ತ ಬದುಕುತ್ತದೆ! ಹಾಗಾಗಿ ಇದಕ್ಕೆ ಎಲೆಗಳ ಅವಶ್ಯಕತೆಯಿಲ್ಲ. ಹೂಗಳು ಮಾತ್ರ ನೆಲದ ಮೇಲೆ ಅರಳುತ್ತವೆ. ಹೂಗಳೆಂದರೆ ಎಂತಹ ಹೂಗಳೆನ್ನುತ್ತೀರಿ? ಅಬ್ಬಬ್ಬ! ದೈತ್ಯ ಹೂವುಗಳು. ವ್ಯಾಸದಲ್ಲಿ ಸಸ್ಯಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದೆಂಬ ಖ್ಯಾತಿಗಳಿಸಿವೆ.

ರಾಫ್ಲೇಶಿಯಾ ಹೂವಿನ ವ್ಯಾಸ ಅಷ್ಟಿಷ್ಟಲ್ಲ. ೫೦ ಸೆಂ.ಮೀ.ಗಳು ಎಂದರೆ ನಂಬುತ್ತೀರಾ? ದಪ್ಪ ೧.೯ ಸೆಂ.ಮೀ.ಗಳು. ಇದು ನಿಜ. ಅದರ ಐದು ದಳಗಳನ್ನು ಹೊಂದಿದ್ದು ಅವುಗಳ ಉದ್ದ ೩ ಅಡಿಗಳು. ಈ ದಳಗಳ ತೂಕ ೧೪೫ ಪೌಂಡ್‌ಗಳು ಅಂದರೆ ಸುಮಾರು ೭ ಕಿ.ಗ್ರಾಂ ಗಳು! ಒಂದೇ ಒಂದು ಹೂವಿನ ಒಟ್ಟು ತೂಕ ೧೧ ಕಿ.ಗ್ರಾಂಗಳು!

ಹೂಗಳು ಕೆಂಪು ಅಥವಾ ಊದಾಮಿಶ್ರಿತ ಕಂದು ಬಣ್ಣ ಇಲ್ಲವೇ ಪಟ್ಟೆಗಳನ್ನು ಹೊಂದಿದ್ದು, ದಪ್ಪ ಮತ್ತು ಮಾಸಲವಾಗಿರುತ್ತವೆ. ೫ ರಿಂದ ೭ ದಿನಗಳವರೆಗೆ ಅರಳಿರುತ್ತವೆ ಮತ್ತು ಏಕಲಿಂಗಿಯಾಗಿವೆ. ಈ ಹೂನಲ್ಲಿ ಐದು ಒರಟು ದಳಗಳಿದ್ದು ಅವುಗಳ ಮೇಲೆ ಬೊಬ್ಬೆಗಳಂತಹ ಬುಗುಟುಗಳಿವೆ. ಹೂ-ದೈತ್ಯಾಕಾರವಾಗಿದ್ದರೂ ಬೀಜ ಮಾತ್ರ ಗಸಗಸೆ ಕಾಳಿನಂತಿದೆ.

ಭೂಮಿಯಲ್ಲಿಯ ಹೆಚ್ಚಾನೆಚ್ಚು ಹೂಗಳು ಅವು ಬೀರುವ ಸುವಾಸನೆಗಳಿಗೆ ಹೆಸರುವಾಸಿಯಾಗಿವೆ. ಅವುಗಳ ಸುಗಂಧಕ್ಕೆ ನಾವೆಲ್ಲ ಮನಸೋತಿದ್ದೇವೆ. ಆದರೆ ರಾಫ್ಲೇಶಿಯಾ ಹೂವಿನಿಂದ ಹೊರಹೊಮ್ಮುವುದು ಸುಗಂಧವಲ್ಲ. ದುರ್‍ಗಂಧ ಅದೂ ಕೊಳೆತ ಮಾಂಸದಂತೆ. ಯಾವುದಾದರೂ ಪ್ರಾಣಿ ಕೊಳೆತು ನಾರುತ್ತಿದೆಯೋ ಏನೋ ಎಂಬಂತೆ. ಹಾಗಾಗಿ ಮನುಷ್ಯ ಅಥವಾ ಪ್ರಾಣಿಗಳು ಅದರ ಹತ್ತಿರ ಸುಳಿಯಲಾರವು. ಈ ದುರ್‍ಗಂಧಕ್ಕೆ ಆಕರ್‍ಷಿತವಾಗುವುದು ನೊಣಗಳು ಮಾತ್ರ. ಹಾಗಾಗಿ ನೊಣಗಳಿಂದಲೇ ಪರಾಗಣವಾಗುತ್ತದೆ.

ಸಿಂಗಾಪೂರ ದೇಶದ ಸ್ಥಾಪಕನಾದ ಈಸ್ಟ್ ಇಂಡಿಯ ಕಂಪನಿಯ ಗವರ್‍ನರ್‍ ಸರ್‍ ಸ್ಟ್ಯಾಂಫೋರ್‍ಡ್ ರಾಫಲ್ಸ್ ಅವರ ಹೆಸರನ್ನು ಈ ಸಸ್ಯಕ್ಕೆ ಇಡಲಾಗಿದೆ. ಏಕೆಂದರೆ ಈ ಸಸ್ಯವನ್ನು ಕಂಡುಹಿಡಿದದ್ದು ಅವನೇ. ೧೮೨೧ರಲ್ಲಿ ಬ್ರಿಟಿಶ್ ಸಸ್ಯ ವಿಜ್ಞಾನಿ ರಾಬರ್‍ಟ್ ಬ್ರೌನ್ ಈ ದೈತ್ಯ ಪುಷ್ಪದ ವಿವರಣೆಯನ್ನು ನೀಡಿದ.

ಈ ಹೂವು ಶೇಖರಿಸುವ ಮಕರಂದವೆಷ್ಟು ಗೊತ್ತೆ? ಪೂರ್‍ತಿ ೧೨ ಪಿಂಟ್‌ಗಳಷ್ಟು, ಅಂದರೆ ಸುಮಾರು ೭ ಲೀಟರ್‌ಗಳಷ್ಟು!

ರಾಫ್ಲೇಶಿಯಾ ಸಸ್ಯವು ಬೀಜರಹಿತ ತಿರುಳುಳ್ಳ ಹಣ್ಣು (Berry) ಉತ್ಪಾದಿಸುತ್ತದೆ. ಬೃಹದಾಕಾರದ ಹೂವಿನ ಗಿಡದ ಬೀಜಗಳ ಪ್ರಸಾರಕ್ಕೆ ಬೃಹದಾಕಾರದ ಪ್ರಾಣಿಗಳಾದ ಆನೆಗಳು ಕಾರಣವಾಗಿವೆ. ಬೀಜಗಳು ಅಂಟು-ಅಂಟಾಗಿದ್ದು, ಆನೆಗಳ ಕಾಲಿಗೆ ಅಂಟಿಕೊಂಡು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೊಂಡೊಯ್ಯಲ್ಪಡುತ್ತವೆ.

ಸುಮಾತ್ರ, ಜಾವಾ ಮತ್ತವುಗಳ ನೆರೆಯ ದೇಶಗಳ ಅರಣ್ಯಗಳಲ್ಲಿಯೂ ರಾಫ್ಲೇಶಿಯಾ ಸಸ್ಯಗಳು ಬೆಳೆಯುತ್ತವೆ. ಈ ಪ್ರಬೇಧಕ್ಕೆ ಸೇರಿದ ಸಸ್ಯಗಳು ನಮ್ಮ ದೇಶದ ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್‌ಗಳ ಅರಣ್ಯಗಳಲ್ಲಿ ಬೆಳೆಯುತ್ತವೆ. ಸಪ್ರಿಯಾ ಹಿಮಾಲಯಾನಾ ಅವುಗಳಲ್ಲೊಂದು. ಇದೂ ಪರಾವಲಂಬಿ ಸಸ್ಯವಾಗಿದ್ದು ಭಾರತದಲ್ಲಿ ಅತ್ಯಂತ ದೊಡ್ಡದಾದ (ವ್ಯಾಸದಲ್ಲಿ) ಹೂ ಬಿಡುವ ಸಸ್ಯ ಎಂಬ ಹೆಸರು ಪಡೆದಿದೆ. ಈ ಸಸ್ಯದ ಹೂಗಳ ವ್ಯಾಸ ೧೫ ರಿಂದ ೩೦ ಸೆಂಟಿಮೀಟರ್‍ಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುಡುಕ
Next post ಬೆಳಕು ಬಂದಿದೆ ಬಾಗಿಲಿಗೆ

ಸಣ್ಣ ಕತೆ

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys