ಸರಿಯೇನೆ ದೀಪಿಕಾ ಇದು ಸರಿಯೇನೇ?
ಈ ಜಂಭ, ನಾಲಿಗೆಯಲಿ ಬೆನ್ನಿರಿಯುವ ಉರಿವ್ಯಂಗ್ಯ
ಅಡಬಹುದೇನೇ ದೀಪಿಕಾ ಕಾಡಬಹುದೇನೇ?
ಮಾತಲ್ಲಿ ಕೂದಲು ಸೀಳಿ ಬಗೆಯಬಹುದೇನೇ ಎದೆಯ
ನನ್ನ ಮನೆಯಲ್ಲೇ ನನ್ನ
ಹುಗಿಯಬಹುದೇನೇ?
ಇಲ್ಲವೆ, ಕೈಗೆ ಬಿದ್ದರೂ ನಾ ಕೇಳದೆ ಹಣ್ಣು ಸುಲಿಯುವುದಿಲ್ಲವೆ,
ಮಾರುಗಾಲಿದ್ದರೂ ನಿನ್ನ ನೀತಿಯ ಕಂದರ ಜಿಗಿಯುವುದಿಲ್ಲವೆ.
ನಿನ್ನ ಕಣ್ಣಬೆಳಕಲ್ಲಿ ನಾಲ್ಕು ಕನಸು ಹಚ್ಚಿಕೊಳ್ಳುತ್ತೇನೆ
ನಿನ್ನ ತುಟಿರಂಗಿನಲ್ಲಿ ನನ್ನ ಹೃದಯ ಸ್ವಲ್ಪ ತೊಳೆಯುತ್ತೇನೆ
ನಿನ್ನ ಜಡೆಯಲ್ಲೇ ಅಡಿಸಿಕ್ಕಿ ಒದ್ದಾಡುವ ನನ್ನ ಕಲ್ಪನೆಗೆ
ಅಲ್ಲೇ ಆ ನುಣುಪುಗಲ್ಲದ ಮೇಲೇ ಮಲಗಿಬಿಡು ಮರಿ ಎನ್ನುತ್ತೇನೆ.
ನಿನ್ನ ಒಂದೊಂದು ಮಾತೂ ಕಿವಿಯಲ್ಲಿ ಕೂತು
ನೂರು ಅರ್ಥ ಬಿಚ್ಚುತ್ತದೆ,
ಕಚ್ಚುತ್ತದೆ ಎದೆಯೊಳಗೆ ಯಾವುದೋ ಮಿದುಭಾಗವನ್ನ
ಗೆಜ್ಜೆಕಟ್ಟಿ ಜೀವ ಕಾಲು ಬಡಿಯುತ್ತದೆ
ತೋಟಕ್ಕೆಲ್ಲ ನೀರು ನುಗ್ಗಿ
ಬಾಳೆಯಗೊನೆ ನೆಲಕ್ಕೆ ಜಗ್ಗಿ
ಉರುಹೊಡೆದ ಎಲ್ಲ ಮಗ್ಗಿ ಮರೆತುಹೋಗುತ್ತದೆ.
ನೀ ಬರುವಾಗ ನಿನ್ನ ಸಮಾಜನೀತಿಯನ್ನೆಲ್ಲ ಉಟ್ಟು ಬರುವುದ?
ಅದರ ಮೈಗಾವಲಲ್ಲಿ ಒರಗಿ ಕಣ್ಣಲ್ಲಿ ಹಣ್ಣಿನಂಗಡಿ ತೆರೆಯುವುದ?
ಉರಿಮಾತೋ ನರಿಮಾತೋ ಆಡಿ
ಮಾಸುತ್ತಿರುವ ನೀತಿಯ ಗೆರೆ ತೀಡಿ
ನೀರಲ್ಲಿ ಕುಣಿಯುವ ಮೀನನ್ನ ದಡಕ್ಕೆ ಎಸೆಯುವುದ?
ಒಂದು ದಿನ ಈ ಕಂದರಕ್ಕೆ
ನೀನೇ ಕಲ್ಲು ಹಾಕುತ್ತೀಯ ದೀಪಿಕಾ;
ಗುದ್ದಲಿ ಹಿಡಿದು ಇಡೀ ದಿನ ಅಗೆದು
ನೀನೇ ಮಣ್ಣು ಎಳೆಯುತ್ತೀಯ.
ಆಗ ಗುಲಾಬಿ ತೋಟಕ್ಕೆ ನುಗ್ಗುತ್ತೇನೆ,
ಗೊಂಚಲು ಗೊಂಚಲನ್ನೇ ತಬ್ಬುತ್ತೇನೆ.
ಹಚ್ಚಿಕೊಂಡ ಹಿಲಾಲಿನಲ್ಲಿ
ಕತ್ತಲೆಯನ್ನು ಬೆತ್ತಲೆ ಸುಡುತ್ತೇನೆ.
*****
ದೀಪಿಕಾ ಕವನಗುಚ್ಛ