ಶಬ್ದಕೋಶವ ಎಸೆದು ಜನದ ನಾಲಿಗೆಯಿಂದ
ಮಾತನೆತ್ತಿದ ಜಾಣ, ನೇರಗಿಡದಿಂದಲೇ
ಹೂವ ಬಿಡಿಸುವ ಧ್ಯಾನ; ತೊಟ್ಟ ಮಾತೆಲ್ಲವೂ
ಗುರಿಗೆ ತಪ್ಪದ ಬಾಣ. ಕವಿತೆ ಜೊತೆ ಮೊದಲೆಲ್ಲ
ಮನ್ಮಥ ಮಹೋತ್ಸವ, ಪ್ರೀತಿಗೆ ರಥೋತ್ಸವ.
ಮಲ್ಲಿಗೆಯ ಹೆದೆಯಲ್ಲಿ ಹೂಡಿ ಚಿಮ್ಮಿದ ನುಡಿಗೆ
ಇಡಿಯ ನಾಡೇ ಸ್ತಬ್ಧ, ಸಂತೃಪ್ತ. ಆದರೂ
ಜೊತೆಯವರ ಕೊಂಕುನುಡಿ: “ಎಷ್ಟು ದಿನ ನಡೆದೀರಿ
ಸೀರೆಯ ಸೆರಗ ಹಿಡಿದು? ಬಿಟ್ಟು ಬಿಡಿ” ಬಿಟ್ಟ ಕವಿ,
ಹತ್ತಿ ಹಚ್ಚಿದ ಶಿಖಿರದಿಂದ ಶಿಖಿರಕ್ಕೇರಿ
ಬೆಟ್ಟದ ಮುಡಿಗೆ ಬೆಳಕ. ಕಣಿವೆಯೊಳಕ್ಕೂ ಈಗ
ಮಾತನಾಡುವ ತವಕ, ಟೀಕಾಕಾರ ಮೂಕ.

ನಿಮ್ಮಂತೆ ಅರಳಿ, ಸುತ್ತೆಲ್ಲ ಪರಿಮಳ ಚೆಲ್ಲಿ ಯಾರು ಬಾಳಿದರು?
ಜನದ ಎದೆ‌ಎದೆಯಲ್ಲೂ ಸಿಂಹಾಸನವನೇರಿ ಯಾರು ಆಳಿದರು ?
*****

Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)