ನವಿಲುಗರಿ – ೧೦

ನವಿಲುಗರಿ – ೧೦

ನಡೆದ ಪ್ರಕರಣದಿಂದಾಗಿ ಪಾಳೇಗಾರರ ಮನೆಯವರು ಹೆಚ್ಚು ಹುಶಾರಾದರು. ಚಿನ್ನುವನ್ನು ನಡೆದ ಘಟನೆ ಬಗ್ಗೆ ಯಾರೊಬ್ಬರೂ ಪ್ರಶ್ನಿಸಲಿಲ್ಲ. ಸುದ್ದಿಯನ್ನೇ ಪ್ರಸ್ತಾಪಿಸಲಿಲ್ಲ. ಆಸ್ಪತ್ರೆಯಲ್ಲಿ ಚಿಗಪ್ಪನನ್ನು ಕಂಡಾಗಲೂ ಆತನೂ ಹಳೆಯದನ್ನು ಮೆಲುಕು ಹಾಕಲಿಲ್ಲ. ನಗುನಗುತ್ತಲೇ ಮಾತನಾಡಿದಾಗ ಭೂಮಿ ಬಾಯಿದೆರೆದು ತನ್ನನ್ನು ನುಂಗಬಾರದೇ ಎನಿಸಿದ್ದೂ ಅವಳಿಗೇ. ಮೈಲಾರಿಯ ಆವೇಶವನ್ನು ಹತೋಟಿಗೆ ತರಲು ಭರಮಪ್ಪ ಹರಸಾಹಸ ಪಟ್ಟಿದ್ದರು. ದಿನಗಳೆದಂತೆ ಅವನೂ ಸುಧಾರಿಸಿದನಾದರೂ ಈ ಪಡ್ಡೆ ಹುಡುಗ ಮುಂದೆಂದಾರೂ ತನ್ನ ನೇವೇದ್ಯದ ಎಡೆಯೇ ಎಂದು ಒಳಗೇ ಮತ್ಸರವನ್ನು ಹೆಚ್ಚಿಸಿಕೊಂಡ. ತನ್ನನ್ನು ಯಾರೂ ಏನನ್ನೂ ಕೇಳದಿದ್ದರೂ ಚಿನ್ನುಗೆ ಒಳಗೇ ಎದೆಗುದಿ ಇನ್ನಿಲ್ಲದ ನಾಚಿಕೆ ಕಳವಳ ಉಂಟಾಗಿತ್ತು, ನಡೆದುದ್ದರಲ್ಲಿ ರಂಗನ ತಪ್ಪೇನಿಲ್ಲವೆಂದು ವಿವರಿಸಬೇಕೆಂಬ ಆಸೆಗೆ ಧೈರ್ಯದ ರೆಕ್ಕೆಗಳೇ ಮೂಡದೆ, ಮನದಳಲನ್ನೂ ಯಾರ ಮುಂದೂ ತೋಡಿಕೊಳ್ಳಲಾಗದೆ ತುಂಬಿದ ಮನೆಯಲ್ಲಿ ಒಂಟಿಯಾಗಿ ಬಿದ್ದಿದ್ದಳು ಚಿನ್ನು. ಹಿಂದಿನಂತೆ ಅವಳು ಸ್ಕೂಟಿ ಏರುವ ಪ್ರಮೇಯವೇ ಬರಲಿಲ್ಲ. ತಂದೆಯೇ ಅವಳನ್ನು ಕಾರಿನಲ್ಲಿ ಕರೆದೊಯ್ದು ಕಾಲೇಜಿಗೆ ಬಿಡುವುದು ಕರೆತರುವುದೂ ನಡೆದಿತ್ತು. ತಂದೆ ಮಿಸ್ ಆದಲ್ಲಿ ಭರಮಪ್ಪನವರೇ ಸ್ವತಹ ಕಾರು ಏರುತ್ತಿದ್ದರು. ‘ಚಿನ್ನು ಈಗ ಕಾರಲ್ಲಿ ಬರ್ತಾಳೆ’ ಅಂತ ಗೆಳತಿಯರು ಖುಷಿಯಿಂದ ಕುಣಿವಾಗ ಚಿನ್ನು ಖಿನ್ನಳಾಗುತ್ತಿದ್ದಳು. ‘ನೀನೇ ಡ್ರೈವಿಂಗ್ ಕಲ್ತುಬಿಡೆ. ದೊಡ್ಡವರು ಬಂದ್ರೆ ಫ್ರೀ ಇರೋಲ್ಲ. ಗೆಳತಿಯರ ಉಚಿತ ಸಲಹೆಗೂ ಅವಳಲ್ಲಿ ನಗೆಯಿಲ್ಲ. ಹೆಚ್ಚು ಮಾತು ಸುರಿಸುತ್ತಿದ್ದ ಚಿನ್ನು ಈಗ ಮಿತಭಾಷಿ. ಚಿನ್ನು ಮತ್ತು ರಂಗ ಪರಸ್ಪರ ಮಾತಾಡದೆ ದೂರವೇ ಇರೋದೂ ಕೂಡ ಕ್ರಮೇಣ ಕಾಲೇಜಲ್ಲಿ ಸುದ್ದಿಯಾಯಿತು. ಅವರಿಬ್ಬರೂ ದೂರದಿಂದಲೇ ನೋಡುವುದನ್ನೂ ನೋಡಿ ಸಹಿಸದೆ ಕಂಗೆಟ್ಟವನು ಸಂಗ್ರಾಮ ಒಬ್ಬನೆ. ನಡೆದ ವಿಷಯ ಅಷ್ಟಿಷ್ಟು ಅವನು ಪತ್ತೆ ಹಚ್ಚಿದ್ದ. ಇದರ ಲಾಭವನ್ನು ತಾನು ಪಡೆವ ಬಗೆ ಹೇಗೆ ಎಂದು ಒಳಗೇ ಸ್ಕೆಚ್ ಹಾಕುತ್ತಲೂ ಇದ್ದ. ತನ್ನ ಮನೆತನ, ಸಿರಿವಂತಿಕೆ, ಅಧಿಕಾರ, ಅಂತಸ್ತುಗಳು ಪಾಳೆಗಾರರ ಮನೆತನಕ್ಕಿಂತ ಯಾವುದರಲ್ಲೂ ಕಡಿಮೆಯಿಲ್ಲವೆಂಬ ಅಹಂ ಹೆಡೆಯಾಡುತ್ತಿತ್ತು. ಪ್ರೀತಿಸಿ ಅವಳನ್ನು ಪಡೆಯಲಾಗದಿದ್ದರೇನಾಯಿತು. ಬೇರೆ ಮಾರ್ಗಗಳೂ ಇವೆಯಲ್ಲ. ಹೇಗೂ ರಂಗ ಅವಳ ತಂಟೆಗೆ ಹೋಗುವಂತಿಲ್ಲ. ಮೈಯಲ್ಲಿ ಎಷ್ಟೇ ಕೊಬ್ಬಿದ್ದರೂ ಹುಲಿಗುಂಡಿಗೆಯೇ ಆಗಿದ್ದರೂ ಕಾಂಚಾಣದ ಬಲವಿಲ್ಲವೆಂದ ಮೇಲೆ ಅವನಿಗೆಲ್ಲಿಯ ‘ವಿಲ್‌ಪವರ್?’ ಈ ದೌರ್ಬಲ್ಯವೇ ನನ್ನ ಬಲವಾಗಬೇಕು. ಅದನ್ನು ಬಳಸಿಕೊಂಡೇ ಅವಳನ್ನು ಪಡೆಯಬೇಕೆಂಬ ಹುಚ್ಚು ಉತ್ಸಾಹ ಅವನಲ್ಲುಂಟಾಗಿತ್ತು. ಅಪ್ಪನ ಅಭಿಪ್ರಾಯ ಹೇಗಿರುತ್ತದೋ ಎಂಬುದಷ್ಟೇ ಅವನ ಸಧ್ಯದ ಎದೆಗುದಿ.

ರಂಗ ತನಗರಿವಿಲ್ಲದಂತೆಯೇ ಮೊದಲಿನ ಉತ್ಸಾಹವನ್ನು ಕಳೆದುಕೊಂಡದ್ದು ಎಲ್ಲದರಲ್ಲೂ ಅವನು ಯಾಂತ್ರಿಕವಾಗಿ ತೊಡಗಿಸಿಕೊಳ್ಳುತ್ತಿದ್ದದು ಗೆಳೆಯರ ಗಮನಕ್ಕೆ ಬರಲು ಬಹಳ ದಿನಗಳೇನು ಬೇಕಾಗಲಿಲ್ಲ. ಇದನ್ನು ಚಮನ್‌ಸಾಬ್ ಕೂಡ ಗ್ರಹಿಸಿದ್ದ. ‘ಯಾಕೋ ಹೈವಾನ್, ಯಾವಾಗ್ಲೂ ಕಪ್ಪೆ ನುಂಗಿದ ಹಾವಿನತರಾ ಬಿಮ್ಮಗೆ ಬಿಕ್ಕಂಡು ಇರ್ತಿ ಕ್ಯಾ ಹೋಗಯಾರೆ ತುಮೆ?’ ಎಂದು ಪ್ರಶ್ನಿಸದಿರಲಿಲ್ಲ. ‘ಏನಿಲ್ಲ ಉಸ್ತಾದ್. ಹಿಂಗೆ ಮನೆ ತಾಪತ್ರಯಗಳು ಇರ್ತಾವಲ್ಲ’ ಅಂದ ರಂಗ. ‘ಈ ಮಾತ್ನ ನಂಬಬೇಕಾ ನಾನು? ಮನೆ ತಾಪತ್ರಯ ಏನು ಹೊಸ್ದಾ ನಿನ್ಗೆ, ಅದೇನ್ ನಂತಾವ ಯೊಳ್ಳಾ? ಆ ಪಾಳೇಗಾರರ ಹುಡುಗಿನೇನಾರ… ಪ್ಯಾರ್‌ಗೀರ್?’ ನಕ್ಕು ಅವನ ಮೊರೆ ನೋಡಿದ ಚಮನ್‌ಸಾಬು.

‘ಪಾಕೆಟಿನಾಗೆ ಪೈಸಾ ಇಲ್ಲದವರೆಲ್ಲಾ ಪ್ಯಾರ್ ಮಾಡಬಾರ್‍ದು ಅನ್ನೋವಷ್ಟು ಬುದ್ಧಿವಂತ್ಕೆ ನಿಮ್ಮ ಶಿಷ್ಯನಿಗೆ ಐತೆ ಉಸ್ತಾದ್’ ರಂಗನ ಖಿನ್ನತೆಯೇ ಮಾತಾಗಿತ್ತು.

‘ಪೈಸೆಗೂ ಪ್ಯಾರೂ ಎಲ್ಲಿ ಸಂಬಂಧ ಬಿಡ್ಲಾ. ದಿಲ್ ಇರ್‍ಬೇಕು ದಿಲ್’

‘ಅಂತದ್ಕೆಲ್ಲಾ ದುಡುಕೋನಲ್ಲ ನಾನು. ಆ ಹುಡ್ಗಿನೇ ನನ್ನ ತುಂಬಾ ಹಳ್ಕೊಂಡಿದ್ಳು, ಈಗ ಮನೆಯವರ ಸರ್ಪಗಾವಲಿದೆ… ದೂರ ಇದಾಳೆ. ಆಗಿದ್ದೆಲ್ಲಾ ಒಳ್ಳೇದಕ್ಕೆ ಅಂದುಕೊಂಡು ನನ್ನ ಪಾಡಿಗೆ ನಾನು ಕಾಲೇಜಿಗೆ ಹೋಕ್ಕಂಡು ಇದೀನಿ ಉಸ್ತಾದ್’.

‘ದೊಡೋರ ಸಾವಾಸ ದುಗ್ಗಾಣಿಕೊಟ್ಟು ದೂರ್ ಇಡಬೇಕಂತೆ ಕಣೋ… ಅವರನ್ನ ಕೆಣಕಿದಿಯಾ, ಅವರ ಕಣ್ಣು ನಿನ್ನ ಮೇಲೆ ಬಿದ್ದೈತೆ. ಏನು ಮಾಡೋಕೂ ಹೇಸದ ಮಂದಿ ಅದಾರೆ ಬೇಟಾ, ತೋಡಾ ಹೋಶಿಯಾರ್‍ಸೆ ರೆಹನಾ. ಆ ಮೈಲಾರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದ್ನಂತೆ?’ ಎಚ್ಚರಿಸುತ್ತಲೇ ಕೇಳಿದ.

‘ಬಂದಿದಾನೆ ಪಾಪ. ನಾನು ಆವತ್ತು ದುಡಿಕಿಬಿಟ್ಟೆನೇನೋ’ ರಾಗ ಎಳೆದ ರಂಗ.

‘ಆದ್ದಾತು ಮುಂದಾರ ಹುಶಾರಾಗಿರು ಬೇಟಾ, ಪೆಟ್ಟು ತಿಂದ ಹುಲಿ ಬೇಟೆ ಆಡ್ದೆ ಸುಮ್ಗಿರೋದಿಲ್ಲ’ ಪ್ರೀತಿಯಿಂದ ಶಿಷ್ಯನ ಮೈದಡವಿದ ಸಾಬಿ.

ಆಸ್ಪತ್ರೆಯಿಂದ ಮನೆ ಸೇರಿದ ಮೈಲಾರಿ ‘ತಾಕತ್ ಕಿ ದವಾ’ ಕುಡ್ದು ಬೇಗ ಚೇತರಿಸಿಕೊಂಡ. ಖಂಡ ಹೆಂಡಕ್ಕಂತೂ ಬರವಿರಲಿಲ್ಲ. ನಿಧಾನವಾಗಿ ಮೊದಲಿನ ಹಾಗೆ ಬಲಗೈ ಬಳಸುವುದನ್ನೂ ಪ್ರಾಕ್ಟಿಸ್ ಮಾಡಿದ. ಮೊದಲವನು ಕಲಿತಿದ್ದು ಗಟ್ಟಿಯಾಗಿ ಮಚ್ಚು ಹಿಡಿದು ಬೀಸುವುದನ್ನೂ. ಲಾಠಿ ತಿರುವುವುದು ದಂಡೆ ಹೊಡೆಯುವಷ್ಟರ ಮಟ್ಟಿಗೆ ಬಲಗೈಗೆ ಕೆಲಸ ಕೊಟ್ಟ, ವಯಸ್ಸು, ಆರೈಕೆ, ಹಣದ ಪ್ರಭಾವವಿರುವ ಮೈಲಾರಿ ಬಹಳ ಬೇಗ ಮೊದಲಿನಂತಾದ. ಬಲಗೈ ಸರಿಹೋದಂತೆಲ್ಲಾ ಕೈ ಕಡಿಯಲಾರಂಭಿಸಿತು. ಒಬ್ಬ ಯಕಶ್ಚಿತ್ ಹುಡುಗನಿಂದ ತನಗೆ ಅಪಮಾನವೆ? ಹೆಂಗಾರ ಮಾಡಿ ಇವನನ್ನು ಬಗ್ಗುಬಡಿಯಬೇಕು, ನಮಗೆ ದೊಗ್ಗು ಸಲಾಮ್ ಹೊಡೆಯುವಂತೆ ಮಾಡಬೇಕೆಂಬುದೇ ಅವನ ದಿನನಿತ್ಯದ ಜಪವಾಯಿತು. ಮನಸ್ಸಿಗೆ ಸಮಾಧಾನವಿಲ್ಲ. ಹೆಂಡತಿ ಯಾವತ್ತೂ ತಾನು ಬಲ ಎಂದರೆ ಎಡ ಅನ್ನೋಳು, ತೋಟದ ಮನೆಯಲ್ಲಿರೋ ನಿಂಗಿಯೇ ಕೆಂಚಿಗಿಂತ ನೂರು ಪಾಲುವಾಸಿ. ತನ್ನ ಇಚ್ಛೆಯಂತೆ ಆಡುತ್ತಾಳೆ ಆಡಿಸುತ್ತಾಳೆ. ತನ್ನ ವಿರೋಧಿಗಳನ್ನು ಅವಳೂ ವಿರೋಧಿಸಿ, ‘ನಾಶವಾಗೋಗ್ಲಿ ಚಿಲ್ರೆನನ್ನಕ್ಳು’ ಅಂತ ಶಾಪ ಹಾಕಿ ಮನವನ್ನು ಮುದಗೊಳಿಸುತ್ತಾಳೆ. ಎಲ್ಲಾ ಹೆಂಗಸರೂ ಸುಖ ಕೊಟ್ಟಾರು ಆದರೆ ನೆಮ್ಮದಿ ಕೊಡೋರು ಮಾತ್ರ ಕೆಲವರೆ, ಮುಗ್ಧರಾಗಿ ಪ್ರೀತಿಸ್ತಾರೆ. ಸುಖ ಕೊಟ್ಟವನು ಸುಖವಾಗಿರ್‍ಲಿ ಅಂತ ಹರಕೆ ಹೊರುತ್ತಾರೆ. ಗಂಡ ತಾವು ಹೇಳಿದಂತೆಯೇ ಕೇಳಬೇಕೆಂಬ ಹಮ್ಮು, ಹಕ್ಕು ಚಲಾಯಿಸುವ ದೌಲತ್ತಿನಲ್ಲಿ ಗಂಡನ ಸುಖ ಸಂಸಾರದ ನೆಮ್ಮದಿಯನ್ನೇ ನುಂಗಿಬಿಡುತ್ತಾರೆ. ಈಗ ಇವಳ ಕಣ್ಣಿಗೆ ರಂಗ ಹೀರೋ. ಅವನಿಂದಲೇ ತಾನು ಬದುಕಿದ್ದು ಎಂಬುದನ್ನು ಪರೋಕ್ಷವಾಗಿ ಆಡಿ ನೋಯಿಸುತ್ತಾಳೆ. ‘ಯಾವಳ ಸೆರಗು ಸೋಂಕಿ ಲತ್ತೆ ಹೊಡೀತೋ ನಿಮ್ಗೆ’ ಎಂದೂ ಹಂಗಿಸುತ್ತಾಳೆ. ತಾನು ಓದಿದ್ದೇನೆ. ತವರು ಮನೆಯವರು ಶ್ರೀಮಂತರೆಂಬ ಕೊಬ್ಬು ಕಾಲಿನಿಂದ ತಲೆ ತನಕ ತುಂಬಿಕೊಂಡಿದೆ. ಇಂಥವಳ ಕಣ್ಣಿಗೆ ಹೀರೋ ಆದವನನ್ನು ‘ಜಿರೋ’ ಮಾಡುವ ತವಕ ಮೈಲಾರಿಯದು. ರಂಗನ ತಾಕತ್ತಿನ ಅಂದಾಜಿದೆ. ತಾನು ಮತ್ತು ತನ್ನ ಪಟಾಲಮ್ಮುಗಳೆಲ್ಲಾ ಸೇರಿದರೂ ನೆಲಕ್ಕುರುಳೋರು ತಾವೇ ಎಂಬ ಸತ್ಯದ ಅರಿವಾಗಿದ್ದರಿಂದ ನೇರ ಹೊಡಿ-ಬಡಿ ದಾರಿ ಬಿಟ್ಟು ಬಳಸುದಾರಿ ಬಳಸಿ ರಂಗನನ್ನು ಬಗ್ಗು ಬಡಿಯಬೇಕೆಂಬ ಆಲೋಚನೆಗೆ ಬಿದ್ದವನು ಎಲ್ಲಕ್ಕೂ ಸಿದ್ಧನಾದ.

ರಂಗ ಗರಡಿ ಮನೆಯಿಂದ ಗೆಳೆಯರೊಂದಿಗೆ ಬರುವಾಗ ಮೊದಲೇ ನಿರ್ಧರಿಸಿದಂತೆ ಮೈಲಾರಿ ಅವನ ಕಡೆಯವರು ಬಸವನಿಗೆ ಬಿಯರ್ ಕುಡಿಸಿ ಕೊಬ್ಬಿಸಿದ್ರು. ರಂಗ ಒಬ್ಬನೇ ಮನೆಕಡೆಯ ದಾರಿಯ ತಿರುವಿಗೆ ಬಂದಾಗ ಬಸವನನ್ನು ಅತ್ತ ಓಡಿಸಿದರು. ಅದು ಅವನತ್ತಲೇ ಕೋಡುಗಳನ್ನೆತ್ತಿ ಬಿಸಿ ಉಸಿರು ಬಿಡುತ್ತಾ ನುಗ್ಗಿ ಬಂದಾಗ ಕ್ಷಣ ಅವಕ್ಕಾದ ರಂಗ. ಅದರ ಕೋಡುಗಳು ತನ್ನನ್ನು ಚಿಮ್ಮುವ ಮೊದಲೇ ತಪ್ಪಿಸಿಕೊಳ್ಳುವ ಚುರುಕುತನ ತೋರುವಷ್ಟರಲ್ಲೇ ಅವನನ್ನು ಅದು ಅನಾಮತ್ತು ಎತ್ತಿ ಎಸೆದಿತ್ತು. ನೆಲಕ್ಕೆ ಬಿದ್ದ ರಭಸಕ್ಕೆ ಬೇರೆಯವರಾಗಿದ್ದರೆ ಮತ್ತೆ ಮೇಲೇಳುತ್ತಿರಲಿಲ್ಲವೇನೋ. ಆದರೆ ರಂಗ ಪುಟಿದೆದ್ದು ಬಹಳ ವರ್ಷಗಳ ಹಳೆ ಸೇಡನ್ನು ತೀರಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದೆಂಬ ಹಠವಾದಿ ಉಸ್ತಾದನಂತೆ ಬಸವನಿಗೆ ಮುಖಾಮುಖಿಯಾದ. ಅತ್ತಿತ್ತ ಹೋಗುವವರೆಲ್ಲಾ ಗುಂಪು ಸೇರಿದರು. ಗಾಬರಿಯಿಂದ ಮುಂದೇನಾದೀತೆಂದು ಉಸಿರು ಬಿಗಿ ಹಿಡಿದು ನೋಡಿದರಾದರೂ ಯಾರೂ ಸಹಾಯ ಮಾಡಲು ಒಂದು ಹೆಜ್ಜೆ ಮುಂದಿಡದಷ್ಟು ಅಧೀರರಾದರು. ಗೂಳಿ ಕೈಗೆ ಸಿಕ್ಕರೆ ಕೈ ಕಾಲು ಮೂಳೆ ಜಖಂ ಖಂಡಿತ. ತೀರಾ ವಯಸ್ಸಾದವರು ಅದು ಗುಮ್ಮಿದ್ದೇ ನೆಪವಾಗಿ ಹಾಸಿಗೆ ಹಿಡಿದು ಶಿವನ ಪಾದಾರವಿಂದ ಸೇರಿದ ಲೀಸ್ಟೇ ಇದೆ. ರಂಗ ಬಸವ ಇಬ್ಬರೂ ಬಲಾಬಲ ತೋರಿ ಸೆಣಸಾಡಿದರು. ‘ಅಣ್ಣಾ, ಅದಕ್ಕೆ ಮೂಗುದಾರ ಹಾಕು… ತಗೋ ಭಾಳ ಕೊಬ್ಬು ಐತೆ’ ಒಬ್ಬ ರಂಗನತ್ತ ಮೂಗುದಾರ ಎಸೆದ. ‘ಯೋಯ್, ಅದು ದ್ಯಾವರ ಹೋರಿ ಕಣಾ… ಹಂಗೆಲ್ಲಾ ಮಾಡಂಗಿಲ್ಲಲೆ’ ಒಬ್ಬ ಗದರಿಕೊಂಡ. ‘ದೇವರು ಹೋರಿಗೆ ಮೂಗದಾರ ಹಾಕಿದ್ದರೆ ದೇವರೇನು ಪ್ರತ್ಯಕ್ಷನಾಗಿ ಬಂದು ಕೇಳಿತಿರಲಿಲ್ಲ… ಅದು ಪಾಳೇಗಾರರ ಮನೇದು, ಈವತ್ತು ಹೋರಿಯಿಂದ ಬಚಾವಾದರೂ ಅವರಿಂದ ಬಚಾವಾಗೋಕಾದೀತೆನ್ಲಾ?’ ಮತ್ತೊಬ್ಬ ಹೆದರುತ್ತಾ ಎಲ್ಲರನ್ನೂ ಹೆದರಿಸಿದ. ದೂರ ಮರದ ಮರೆಯಲ್ಲಿ ಮೈಲಾರಿ ಅವನ ದಂಡು ಗೂಳಿ ಮತ್ತು ರಂಗನ ಫೈಟ್ ರೆಪ್ಪೆ ಬಡಿಯದೆ ನೋಡುತ್ತಿದ್ದರು. ಬರುಬರುತ್ತಾ ಗೂಳಿ ಬಳಲಿ ರಂಗ ರಾಂಗ್ ಆದಾಗ ಮೈಲಾರಿ ಅಸಹಾಯಕತೆಯಿಂದ ಬಳಲಿದ. ನೆರೆದ ಜನರಲ್ಲಿ ಹಲವರು ಹರ್ಷೋದ್ಘಾರ ಮಾಡಿದರಾದರೂ ಬಹಳಷ್ಟು ಮಂದಿ ಬೆದರಿ ತೆಪ್ಪಗಿದ್ದರು. ಕೇಕೆ ಹಾಕಿದವರಲ್ಲಿ ಅರಿಯದ ಮಕ್ಕಳೇ ಹೆಚ್ಚು. ರಂಗ ಬಸವನಿಗೆ ಮೂಗುದಾರ ಬಿಗಿದು ತನ್ನ ಹಿಡಿತಕ್ಕೆ ತಂದುಕೊಂಡವನೇ ಅದನ್ನು ಮನಬಂದಂತೆ ಎಳೆದಾಡಿ ಮತ್ತಷ್ಟು ಸುಸ್ತುಮಾಡಿ, ಅಲ್ಲಿಗೇ ಬಿಡದೆ ದರದರನೆ ಎಳೆದೊಯ್ಯುವ ಪರಿ ಮೂಗುದಾರ ಜಗ್ಗಿ ಎಳೆದುಕೊಂಡು ಹೊರಟ. ಅಲ್ಲಿಗೇ ಬಿಟ್ಟಿದ್ದರೆ ಆಗೋದಪ್ಪಾ ಎಲ್ಲಿ ಎಳ್ಕೊಂಡು ಹೊಂಟ! ಜನ ನಿಬ್ಬೆರಗಾದರು. ಮೈಲಾರಿ ದಂಡು ಅಲ್ಲಿಂದ ಯಾವಾಗಲೋ ಮಾಯವಾಗಿತ್ತು.

ರಂಗ ಎಳೆದೊಯ್ಯುವಾಗ ಬಸವ ಪ್ರತಿಭಟಿಸಲಾಗದಷ್ಟು ಶಕ್ತಿಗುಂದಿದ್ದು ಎಳೆದೊಯ್ದಂತೆ ಹೆಜ್ಜೆ ಹಾಕಿತು. ಅಂತೆಯೇ ಕುತೂಹಲಿಗಳೂ ಹಿಂದೆ ಬಿದ್ದರು. ರಂಗ ಬಸವನನ್ನು ಪಾಳೇಗಾರರ ಮನೆ ಅಂಗಳಕ್ಕೆ ಎಳೆತಂದು ದೂಡಿದಾಗ ಅದು ದೊಪ್ಪನೆ ನೆಲಕ್ಕೆ ಕುಸಿಯಿತು. ಪಾಳೇಗಾರರ ಮನೆಯಲ್ಲಿ ಅಡಿಕೆ ಸುಲಿಯುವ ಕಾರ್ಯ ನಡೆದಿದ್ದರಿಂದ ಮನೆಯವರು ಕೂಲಿಯವರು ಅಂತ ಜಾತ್ರೆಯೇ ನೆರೆದಿತ್ತು. ಮನೆಯ ಗಂಡಸರು ಕೆರಳಿದರೆ ಹೆಂಗಸರು ಮತ್ತೇನು ಗಂಡಾತರವಪಾ ಎಂದು ಕಂಗೆಟರು. ಮೈಲಾರಿ ಏನೂ ಅರಿಯದವನಂತೆ ತಂದೆಯ ಆಸುಪಾಸುನಲ್ಲೇ ಇದ್ದ. ಸಮಸ್ತರ ಎದುರೂ ತಮ್ಮ ಮನೆ ಬಸವನ ಎಳೆತಂದು ಕೆಡುವುದೆಂದರೇನು? ಅದಕ್ಕಿದ್ದ ಇಮೇಜ್ ಎಂತದ್ದು! ಉಗ್ರಪ್ಪ ಅಪಾದಮಸ್ತಕ ಕೆಂಪಾದ. ‘ಏನ್ಲಾ ಇದು? ನಮ್ಮ ಬಸವನ ಮೇಲೆ ಕೈ ಮಾಡೋವಷ್ಟು ಧಿಮಾಕ್ ಬಂತೇನ್ಲಾ ನಿನ್ಗೆ ಸುವ್ವರ್’ ಅಬ್ಬರಿಸಿದ. ‘ನನ್ನ ಪಾಡಿಗೆ ನಾನಿದ್ದರೂ ಯಾರಾದ್ರೂ ನನ್ನ ಮೇಲೆ ಇಲ್ಲದ ಧಿಮಾಕು ತೋರಿದ್ರೆ ಪ್ರಾಣಿಯಾದರೂ ಇಷ್ಟೆ, ನರ ಪ್ರಾಣಿಯಾದರೂ ಇಷ್ಟೇ, ಮೂಗುದಾರ ಹಾಕೋನೇ ನಾನು, ನೆಟ್ಟಗೆ ಕೊಟ್ಟಿಗೆನಲ್ಲಿ ಕಟ್ಟಿಹಾಕ್ರಿ ಪಾಳೇಗಾರೇ. ಮೂಕಪ್ರಾಣಿಗೆ ಹೆಂಡ ಕುಡಿಸಿ ಜನರ ಮೇಲೆ ಬಿಡೋದು ಹೇಡಿತನ ಧಮ್ಮಿದ್ದರೆ ನೇರವಾಗಿ ನನ್ನ ಮೇಲೆ ಬರ್‍ಲಿ… ನನ್ನ ಮೇಲಷ್ಟೇ ಅಲ್ಲ ಇನ್ನು ಮೇಲೆ ಯಾವ ಬಡಪಾಯಿ ಮೇಲಾದ್ರೂ ಬಸವ ಕೊಬ್ಬು ತೋರಿಸಿದ್ರೆ…’ ಗುಟುರು ಹಾಕಿದ ರಂಗ ತೋರುಬೆರಳು ತೋರಿ, ‘ಹುಶಾರ್. ನಾನೇನ್ ಮಾಡ್ತಿನೋ ನನಗೇ ಗೊತ್ತಿಲ್ಲ’ ಎಂದು ಹೇಳಿ ತಿರುಗಿ ಹೊರಟ. ಕಾವಲುಗಾರನ ಕೈನಲ್ಲಿದ್ದ ಬಂದೂಕವನ್ನು ತಟ್ಟನೆ ಎತ್ತಿಕೊಂಡ ಉಗ್ರಪ್ಪ ಹೆಗಲಿಗೇರಿಸಿ ಗುರಿಯಿಟ್ಟ. ಎಲ್ಲರೂ ಗರಬಡಿದವರಂತಾದರು. ‘ಅಪ್ಪಾ… ಬೇಡಪ್ಪಾ’ ಚೀರಿದಳು ಚಿನ್ನು. ಗುಂಡು ಹಾರಿದ ಶಬ್ದಕ್ಕೆ ಗಂಡಸರ ತೊಳೆಗಳು ನಡುಗಿದರೆ ಹೆಣ್ಣಾಳುಗಳ ಒಳ ಉಡುಪು ಒದ್ದೆಯಾದವು. ರಂಗ ಹೋಗೆಬಿಟ್ಟನೆಂದುಕೊಂಡರು ನೆರೆದ ಮಂದಿ. ಆದರೆ ಗುಂಡು ಬಿದ್ದದು ರಂಗನಿಗಲ್ಲ – ಬಸವನಿಗೆ. ಮೊದಲೇ ಬಸವಳಿದಿದ್ದ ಬಸವನ ಹಣೆಗೆ ಗುಂಡು ಬೀಳುತ್ತಲೇ ರಕ್ತ ಚಿಮ್ಮಿತ್ತು. ಕೈಕಾಲು ಒದರಾಡಿದ ಬಸವ ಗೋಣು ಚೆಲ್ಲಿದ. ‘ಇದೆನ್ಲಾ ಮಾಡ್ದೆ ಬದ್ಮಾಷ್?’ ಭರಮಪ್ಪ ಅನಿರೀಕ್ಷಿತ ಘಟನೆಗೆ ತಲ್ಲಣಿಸಿದರು. ‘ಅಪ್ಪಾ, ಸೋಲು ಸೋತವರು ಸೋಲುವವರಿಗೆ ಈ ಮನೆನಾಗೆ ಜಾಗ ಇಲ್ಲ’ ಸಿಡಿಲೆರಗಿದಂತೆ ಬಂದ ಮಾತು ಕೊನೆಯಲ್ಲಿ ನಿಂತ ನೋಟ, ಮೈಲಾರಿಯನ್ನು ಇರಿಯಿತು. ಚಿನ್ನು ತರತರನೆ ನಡುಗುತ್ತಿದ್ದಳು. ಚಿನ್ನಮ್ಮ ಕೆಂಚಮ್ಮ ಅವಳನ್ನು ಮೈದಡವಿ ಸಂತೈಸುತ್ತಿದ್ದರು. ಇಷ್ಟೆಲ್ಲಾ ರಾದ್ದಾಂತ ನಡೆದರೂ ಅದಕ್ಕೆ ಕಾರಣನಾದ ರಂಗ ಒಮ್ಮೆಯೂ ತಿರುಗಿ ಸಹ ನೋಡದೆ ರಾಜಠೀವಿಯಿಂದ ನಡೆದು ಹೋದದ್ದನ್ನು ಕಂಡ ಉಗ್ರಪ್ಪನ ರಕ್ತದೊತ್ತಡ ಜರ್ರನೆ ಏರಿತ್ತು.

‘ಇಂಥ ನಾಮರ್ದ ಕೆಲಸ ಯಾಕ್ಲಾ ಮಾಡೋಕೆ ಹೋಗಿದ್ದೆ ನಾಲಾಯಕ್?’ ಭರಮಪ್ಪ ಮೈಲಾರಿಯತ್ತ ಹರಿಹಾಯ್ದರು. ‘ನಾನ್ ಹಂಗೆಯಾ. ನನಗೆ ಆಗದೋರು ಈ ಭೂಮಿಮ್ಯಾಲೆ ಬದುಕಿರಬಾರ್‍ದು’ ಮಾತು ತೀರ್ಪಿನಂತೆ ಹೊರಬಂದಾಗ ನೊಂದುಕೊಂಡ ಭರಮಣ್ಣ, ‘ಇನ್ನು ನಮ್ಮ ಕಾಲ ಮುಗೀತು. ತಪ್ಪು ಸರಿ ಅನ್ನೋ ತಿಳಿವಳ್ಕೇನೆ ಕಳ್ಕೊಂಡ ಮಕ್ಕಳ ಜೊತೆ ಮುಂದಿನ ಬಾಳ್ವೆ ಹೆಂಗಪ್ಪಾ!’ ಎಂದು ಒಳಗೇ ಕೃಶರಾದರು.

ರಂಗ ಮನೆಗೆ ಬರುವಷ್ಟರಲ್ಲಿ ಬೀದಿರಂಪವಾದ ವಿಷಯ ಮನೆಯಲ್ಲೂ ಬಿತ್ತರವಾಗಿತ್ತು. ಅಣ್ಣಂದಿರು ರಂಗನನ್ನು ಎಂದೂ ಮೆಚ್ಚಿದವರೇ ಅಲ್ಲ. ಚುಚ್ಚಿಯೇ ಗೊತ್ತವರಿಗೆ. ಅತ್ತಿಗೆಯವರ ಪಾಲಿಗವನು ಮನೆಗೆ ಮಾರಿ ಪರರಿಗೆ ಉಪಕಾರಿ. ಸರಿಯಾಗಿ ಕುಂತು ಪುಸ್ತಕ ಹಿಡಿದು ಓದೊಲ್ಲ ಟಿವಿ ನೋಡ್ತಾನೆ. ಗರಡಿ ಮನೆಲೇ ಹೆಚ್ಚು ಕಳಿತಾನೆ. ಅವರಿವರ ಮೇಲೆ ಬಡಿದಾಡ್ತಾನೆ. ಹೆಚ್ಚು ತಿಂತಾನೆ ಎಂಬುದೆಲ್ಲಾ ಈವರೆಗಿನ ದೂರು. ಈ ಮಧ್ಯೆಯೂ ಮನೆಯಲ್ಲಿ ಕೆಲಸ ಮಾಡುತ್ತಾನೆ. ಯಾರು ಏನೇ ಕೆಲಸ ಹೇಳಿದರೂ ಮರು ಮಾತನಾಡದೆ ತಟ್ಟನೆ ಮಾಡಿ ಮುಗಿಸುತ್ತಾನೆ ಎದುರು ಮಾತಿಗಿಳಿದರು ಜಗಳದ ಮಟ್ಟಿಗೆ ಹೋಗಿಲ್ಲ ಅಂತ ಮನೆಯವರು ಹೇಗೋ ಸೈರಿಸಿಕೊಂಡಿದ್ದರು. ಆದರೀಗ ಅವನು ಸವಾರಿಗಿಳಿದಿರೋದು ಊರ ಪಾಳೇಗಾರರ ಫ್ಯಾಮಿಲಿ ಮೇಲೆ. ಸಾವಿನೊಡನೆ ಸರಸವೆ! ದೀಪಕ್ಕೆ ಹಾರುವ ಹುಳ ಉಳಿದೀತೆ. ಅವನು ಉಳಿದರೇನು ಉರಿದು ಸುಟ್ಟು ಕರಕಲಾದರೇನು ಇವನ ಮೇಲಿನ ಹಗೆಯಿಂದ ಪಾಳೇಗಾರರು ನಮ್ಮ ಮನೆಯ ಮೇಲೆ ಹಗೆಗೆಲ್ಲಾದರೂ ಇಳಿದರೆ ಬಿರುಗಾಳಿಯ ಮುಂದಿನ ತರಗೆಲೆಗಳು ನಾವು. ಇವನಿಂದ ಮನೆಗೆ ನೆಮ್ಮದಿಯಿಲ್ಲ. ಒಳ್ಳೆ ಹೆಸರಿಲ್ಲವೆಂಬ ಹಪಾಹಪಿ ಅವರದು. ಬಂದೊಡನೆ ಅವರೆಲ್ಲಾ ಒಟ್ಟಾಗಿ ಸೇರಿ ಗೂಳಿಯಂತೆಯೇ ರಂಗನ ಮೇಲೆ ಧಾಳಿಯಿಟ್ಟರು.

‘ಏನಲೆ ಬತಾಬರ್ತಾ ನಿಂದು ಅತಿಯಾಯ್ತು? ಅವರೇನು ನಾವೇನು? ಅವರ ಮನೆ ಗೂಳಿಗೆ ಮೂಗದಾರ ಹಾಕ್ತಿಯಾ? ಮನೆಗೂಳಿನೇ ಮುಲಾಜಿಲ್ದೆ ಉಡಾಯಿಸ್ದೋರು ನಿನ್ನನ್ನು ಹಂಗೆ ಬಿಡ್ತಾರೇನೋ ಕತ್ತೆ?’ ಸಿಡಿದುಬಿದ್ದ ಲಾಯರ್‌. ‘ನನ್ನ ಉಡಾಯಿಸೋಕೆ ಆಗದಿದ್ದಕ್ಕೆ ಗೂಳಿಗೆ ಗುಂಡಿಟ್ಟಿದ್ದು… ಕೈಲಾಗದವರು ಮೈಪರಚಿಕೊಂಡಾಗೆ’ ನಕ್ಕ ರಂಗ.

‘ನಗಬೇಡ ನೀನು. ಈ ಮನೆ ನಗು, ಸಂತೋಷನಾ ಹಾಳು ಮಾಡೋಕಂತ್ಲೆ ಹುಟ್ಟಿರೋ ಶನಿ ನೀನು, ನಿನ್ನ ಮೇಲಿನ ಕೋಪಕ್ಕೆ ಆ ರಾಕ್ಷಸರು ನಮಗೇನಾದರೂ ಮಾಡಿದರೆ ಹೆಂಡ್ತಿಮಕ್ಕು ಕಳ್ಕೊಂಡು ನಾವೆಲ್ಲಿಗೋ ಹೋಗೋದು?’ ಲಕ್ಟರರ್ ಅಂಗಾರಾದ.

‘ನೋಡಯ್ಯ, ನಾವು ಕ್ಲಾಸ್‌ಒನ್ ಜನ. ನಿಂದೋ ಥರ್ಡ್ ಕ್ಲಾಸ್ ಬಿಹೇವಿಯರ್. ಜಿದ್ದು ಜಗಳ ದೊಂಬಿ ಮಾಡೋಕಂತ್ಲೆ ಹುಟ್ಟಿ ಬಂದೋನಂಗೆ ಕಾಣ್ತದೆ ನೀನು… ನಿಂದು ಕಂಪ್ಲೇಂಟ್ ಜಾಸ್ತಿ ಆತು. ಹಾದಿಬೀದೀಲಿ ರಂಪಮಾಡಿ, ಕಾಲೇಜಿನಾಗೂ ಗದ್ದಲ ಮಾಡ್ತಿ, ಈಗ ಊರಿನ ಹಿರೀಕರೆ ಎದುರು ಹಾಕ್ಕೊಂಡಿ. ಓದೋ ಹುಡುಗರ ಲಕ್ಷಣನಾ ಇದು? ಅಸಲಿಗೆ ಸ್ಟೂಡೆಂಟ್ಟಾ ನೀನು? ಸ್ಟುಪಿಡ್’ ಹೈಸ್ಕೂಲ್ ಟೀಚರ್ ಟೀಚ್‌ಗಿಳಿದಳು. ‘ಇಂಥವನಿಂದ ಮನಸ್ಸಿಗೂ ನೋವು ಮನೆಗೂ ಕೆಟ್ಟ ಹೆಸರು… ಎಷ್ಟು ಬುದ್ದಿ ಹೇಳಿದರೂ ನಾಯಿ ಬಾಲ ಡೊಂಕೆ, ರೇಗಿದಾಗ ಸಾರಿ ಕೇಳುತ್ತೆ. ಮಾರನೆ ದಿನ ಗುರ್ ಅನ್ನುತ್ತೆ… ಹುಟ್ಟುಗುಣ ಸುಟ್ಟರೂ ಹೋಗೋಲ್ಲ. ಇಂಥವರಿಗೆ ಆಚೆ ತಳ್ಳಿ ಬುದ್ದಿ ಕಲಿಸಬೇಕು. ದುಡ್ಕೊಂಡು ತಿಂದು ಹೊಟ್ಟೆ ತುಂಬಿಸಿಕೊಳ್ಳೋದು ಎಷ್ಟು ಕಷ್ಟ ಅಂತ ತಿಳಿದಾಗ್ಲೆ ಕೊಬ್ಬು ಇಳಿಯೋದು… ಪಾರ್ವತಿಯ ಮುನಿಸು.

‘ನೀನ್ ಹೇಳೋದೂ ಕರೆಕ್ಟ್ ಅಕ್ಕ. ಇವನಿಗೆ ಮನೆಯಿಂದಾಚೆ ದಬ್ಬಿದರೇನೇ ಬುದ್ದಿ ಬರೋದು’ ಮಾಧುರಿ ರಾಗಿಣಿ ಪಾರ್ವತಿಗೆ ಸಾಥ್ ನೀಡಿದರು. ಆ ಮಹಿಳಾ ಮಣಿಯರ ದೃಷ್ಟಿ ಈಗ ಗಂಡಂದಿರತ್ತ ನೆಟ್ಟಿತು. ಅವರಿಗೆ ಒಳಗೇ ಅಳುಕು, ಹೇಗೂ ಒಂದು ಸನ್ನಿವೇಶ ಕ್ರಿಯೇಟ್ ಆಗಿದೆ. ಒಂದಿಷ್ಟು ರೋಪ್ ಹಾಕಿದರೆ ಮನೆಯಿಂದ ತೊಲಗಿಯಾನು… ಸ್ವಾಭಿಮಾನಿ ಅದಾನೆ, ತೋಲಗಿಬಿಟ್ಟರೆ ತಾಯಿ ಮಗಳೂ ಸಂಬಳವಿಲ್ಲದೆ ದುಡಿಯೋ ಪರ್‍ಮನೆಂಟ್ ಸೇವಕಿಯರು. ರಂಗ ಒಬ್ಬನಿದ್ದಾನೆಂಬ ತುಸು ಧೈರ್ಯದಿಂದಲೇ ಈ ಮನೆ ತಮ್ಮದೆಂಬಂತೆ ವರ್ತಿಸುತ್ತಾರೆ. ಅವನು ತೊಲಗಿದರೆ ತಾಯಿಮಗಳಿಗೆ ಅನ್ಯಥಾ ಶರಣಂ ನಾಸ್ತಿ. ಒಳಗೇ ತುಪ್ಪ ತಿಂದರು. ‘ಹೇಳ್ತಿರೋದು ಕೇಳ್ತಿಲ್ಲವೇನೋ ಲೋಫರ್, ರೌಡಿಸಂ ಮಾಡ್ತಿಯಾ? ಮರ್ಯಾದಸ್ಥರ ಮನೇಲಿ ಇರೋಕೆ ನಾಲಾಯಕ್ ನೀನು, ಈವತ್ತೇ… ಈಗ್ಲೆ ತೊಲಗಾಚೆ… ಗೆಟ್‌ಔಟ್’ ದೊಡ್ಡಣ್ಣ ಲಾಯರ್ ವೆಂಕಟ ಸಂಕಟದಿಂದ ಚೀರಿದ, ಇದನ್ನು ರಂಗನೂ ನಿರೀಕ್ಷಿಸಿರಲಿಲ್ಲವಾಗಿ ನಿಂತಲ್ಲೇ ತಡಬಡಾಯಿಸಿದ.

‘ಕತ್ತು ಹಿಡಿದು ತಳ್ಳೋ ಮೊದ್ಲು ನಡಿ ಆಚೆ’ ರಾಗಿಣಿ ಮೂಗು ತೂರಿಸಿದಳು. ಕಮಲಮ್ಮ ಕಾವೇರಿ ಕೂಡ ಮನೆಯವರ ಈ ಅನಿರೀಕ್ಷಿತ ಧಾಳಿಯಿಂದ ಕಂಗೆಟ್ಟರು. ‘ಅಮಾ’ ಎಂದು ದೀನಳಾಗಿ ತಾಯಿಯ ಮೊರೆ ನೋಡುವ ಕಾವೇರಿಯ ಕಂಗಳಲ್ಲಿ ‘ಅಣ್ಣನ್ನ ಕಾಪಾಡು’ ಎಂಬ ಕಳಕಳಿಯಿತ್ತು.

‘ನಡಿಯೋ ಭಂಡ ಎಷ್ಟು ಸಾರಿ ಹೇಳ್ಬೇಕೋ ಹೋಗಾಚೆ ಗೂಂಡಾ’ ಒರಲಿದ ಮೇಷ್ಟ್ರು.

‘ಗೂಂಡಾ ಅವನಲ್ಲ ಕಣೋ’ ದನಿ ಏರಿಸಿ ಅಡಿಗೆ ಕೋಣೆಯ ಹೊಸ್ತಿಲು ದಾಟಿ ಪಡಸಾಲೆಗೆ ಬಂದಳು ಕಮಲಮ್ಮ. ಉಳಿದವರಿಗೆ ಇದೂ ಅನಿರೀಕ್ಷಿತವೆ! ಎಲ್ಲರೂ ಪಿಳಿಪಿಳಿಸಿದರು. ‘ಗೂಂಡಾ ಅವನಲ್ಲ, ಗೂಂಡಾಗಳನ್ನು ಎದುರಿಸೋ ನಿಜವಾದ ಗಂಡು ಅವನು…’ ಕಮಲಮ್ಮನ ದನಿ ತೇವವಾಗಿತ್ತು.

‘ಹಣೆ ಗಟ್ಟಿಗೈತೆ ಅಂತ ಬಂಡೆಗೆ ಬಡ್ಕೊತಾರೇನು?’ ಲಾಯರ್ ಗದರಿಸಿದ.

‘ಪಾಳೇಗಾರರು ಬಂಡೆ… ಬಂಡೆ ಇದ್ದಾಗೆ’ ಲಚ್ಟರರ್ ಹೆದರಿಸಿದ.

‘ಎಂಥ ಬಂಡೆನೂ ಒಡೆಯೋಕೆ ಒಂದು ಚಿಕ್ಕ ಚಾಣ ಸಾಕು’ ಕಮಲಮ್ಮ ತಿರುಗೇಟು ನೀಡಿದಳು. ‘ಅಂದ್ರೆ… ಪಾಳೇಗಾರರ ವಿರುದ್ದ ಹೋಗೋದಕ್ಕೆ ನಿನ್ನ ಕುಮ್ಮಕ್ಕೂ ಇದೆ ಅನ್ನು?’ ಆಕ್ಷೇಪಿಸಿದ ಪರಮೇಶಿ.

‘ಪಾಳೇಗಾರರ ಕಾಲ ಹಿಂದಕ್ಕಾಯ್ತು. ಇದು ಪ್ರಜಾಪ್ರಭುತ್ವ, ಇಲ್ಲಿ ಎಲ್ರೂ ಒಂದೇ… ಅವರ ವಿರುದ್ಧ ಅವನು ಹೋಗ್ತಾ ಇಲ್ಲ ಕಣೋ. ಕುಸ್ತಿಲಿ ಗೆದ್ದು ಅವರ ಮನೆ, ಮನೆತನ ಅವರ ಮನೆ ಹುಡ್ಗಿ ಮರ್ಯಾದೆನಾ ಉಳಿಸಿದಾನೆ ನನ್ನ ಮಗ… ಅವನು ಗೂಂಡಾನೆ?’ ಕಮಲಮ್ಮ ಎಲ್ಲರತ್ತ ದುರುಗುಟ್ಟಿದಳು.

‘ಹಂಗಂತ ಈಗ ಅವರ ಮರ್ಯಾದೆ ಕಳೆಯೋಕೆ ಹೊರಟಿರೋದು ಸರಿನೋ?’ ಲಾಯರ್ ಲಾ ಪಾಯಿಂಟ್ ಎಸೆದ.

‘ಮರ್ಯಾದೆ ಉಳಿಸಿದ ಹುಡುಗನ್ನ ಪ್ರೀತಿಸಬೇಕಾಗಿತ್ತು. ದ್ವೇಷಿಸೋಕೆ ಹೊರಟಿದ್ದಾರೆ. ಇದು ಸರಿನಾ?’

‘ಅವರು ದೊಡ್ಡವರು…’

‘ತಪ್ಪು ಮಾಡೋರು ಯಾರೇ ಆಗಿರಲಿ ದೊಡ್ಡವರಲ್ಲ. ಈ ಮನೆಯಲ್ಲಿ ನಿಮಗಿರೋವಷ್ಟು ಹಕ್ಕು ಅವನಿಗೂ ಇದೆ. ಅವನು ತಪ್ಪು ಮಾಡಿದಾನೆ. ಕ್ಷಮಿಸಲಾರದಂತಹ ತಪ್ಪದು ಅಂತ ನನಗೆ ಅನ್ನಿಸಿದಾಗ ನಾನೇ ಅವನನ್ನು ಒದ್ದು ಹೊರಗೆ ಹಾಕ್ತೆನೆ…’ ಕಮಲಮ್ಮ ಒಂದಿಷ್ಟೂ ದಾಕ್ಷಿಣ್ಯ ತೋರದೆ ಅಂದು, ಮಕ್ಕಳ ಸೊಸೆಯರಿಂದ ಬರುವ ಯಾವ ಮಾತಿಗೂ ಉತ್ತರ ನೀಡಬಲ್ಲೆ ಎಂಬಂತೆ ನಿಂತಾಗ, ಆ ನಿಲುವನ್ನು ಕಂಡೇ ಅಳುಕಿದ ಅವರ ನಾಲಿಗೆಯ ದ್ರವ ಆರಿತು. ಒಣಗಿದ ತುಟಿಗಳ ಮೇಲೆ ನಾಲಿಗೆ ಆಡಿಸಿಕೊಂಡರು. ಈ ಮುದುಕಿಯೊಬ್ಬಳು ಯಾವಾಗ ಸಾಯುತ್ತಾಳೋ ಎಂದು ಹಲುಬಿದರು.

‘ಅಮ್ಮ, ನನ್ನನ್ನ ಹೊರಗಡೆ ಹಾಕಿ ಅಂತ ಪಾಳೇಗಾರರೇನಾದೂ ಎಂಜಲು ಕಾಸು ಕೊಟ್ಟಿರಬಹುದೆ ಇವರುಗಳಿಗೆ ಅಂತ ನಂದೊಂದು ಡೌಟು’ ರಂಗನಕ್ಕ.

‘ಮುಚ್ಚೋಬಾಯಿ ನಾಯಿ, ನಿನಗ್ಯಾಕೋ ಬೇಕು ಊರು‌ಉಸಾಬರಿ. ನೀನೆಲ್ಲಿ ಹುಟ್ಟಿದೆಯಪ್ಪಾ ನನ್ನ ಹೊಟ್ಟೇಲಿ? ಶತ್ರುಗಳೇ ಮಕ್ಕಳಾಗಿ ಹುಟ್ಟಿಬರ್ತಾರೆ ಅನ್ನೋ ಮಾತು ನನ್ನ ಜೀವನದಲ್ಲಂತೂ ಸುಳ್ಳಾಗ್ಲಿಲ್ಲ. ಯಾಕೋ ನನ್ನ ಹೊಟ್ಟೆ ಉರಿಸ್ತಿಯಾ ಚಂಡಾಲ’ ಸಿಟ್ಟಿನಿಂದ ದಬದಬನೆ ಮಗನನ್ನು ಗುದ್ದಿದಳು.

‘ಸ್ಟಾಪ್ ಸ್ಟಾಪ್ ಸ್ಟಾಪ್… ನಿನ್ನ ಕೈಗೇ ನೋವಾಗುತ್ತೆ ನಿಲ್ಲಿಸಮ್ಮ ಪ್ಲೀಸ್’ ಎಂದು ತಾಯಿಯ ಕೈ ಹಿಡಿದುಕೊಂಡು ನಕ್ಕ. ‘ಅವರುಗಳು ಅಣ್ಣನ್ನ ಅಂದಿದ್ದು ಸಾಲ್ದಾ? ನೀನು ಬೇರೆ ಶುರು ಹಚ್ಕೋಬೇಡ’ ಎಂದು ಸಣ್ಣಗೆ ಆಕ್ಷೇಪಿಸಿದ ಕಾವೇರಿ ‘ಬಾರಣ್ಣಾ ಊಟಕ್ಕೆ’ ಎಂದು ಅಡಿಗೆ ಕೋಣೆಯತ್ತ ಸರಿದಳು. ರಂಗ ಸದ್ದಿಲ್ಲದೆ ಹಿಂಬಾಲಿಸಿದ.

ಕಾಲೇಜಿನ ಬಳಿ ಬಂದಾಗ ತಾನಿನ್ನೂ ಲಾಂಗ್‌ಬುಕ್ ತೆಗೆದುಕೊಂಡಿಲ್ಲವೆಂದು ನೆನಪಾಗಿ ಬುಕ್‌ಸ್ಟಾಲ್ ಬಳಿ ಸೈಕಲ್ ನಿಲ್ಲಿಸಿದ ರಂಗ, ಅಲ್ಲಿ ಕಾಣಿಸಿದ ಮುಖವನ್ನೆಲ್ಲೋ ನೋಡಿದ್ದೇನಲ್ಲ ಎಂಬಂತೆ ಪದೆಪದೆ ನೋಡಿದ. ಆತನೂ ಇವನತ್ತಲೇ ನೋಡುತ್ತಿದ್ದವನು, ‘ಹೇಗಿದ್ದೀರಾ?’ ಎಂದು ತಾನೆ ಮಾತನಾಡಿಸಿದ.

‘ಹೀಗಿದ್ದೀನಿ ನೋಡಿ’ ತನ್ನ ಮೇಲೆ ಇವನದೇನು ಪುಕಾರೋ ಎಂಬಂತೆ ನೋಡಿದ.

‘ನಾನು ಗುರ್ತು ಸಿಗಲಿಲ್ವೆ?’ ಆತನೇ ನೆನಪನ್ನು ಕೆದಕಿದ. ಇಲ್ಲವೆಂಬಂತೆ ರಂಗ ತಲೆಯಾಡಿಸಿದ ಸಂಕೋಚದಿಂದ.

‘ಕೆಲವೇ ತಾಸು ನೋಡಿದ್ದು ನೆನಪಿರಲ್ಲ ಬಿಡಿ. ನಾನೂ ನಮ್ಮ ಮನೆಯವರು ನಿಮ್ಮ ತಂಗಿನಾ ನೋಡೋಕೆ ಬಂದಿದ್ವಿ ಕಣ್ರಿ’ ಆತನೂ ತೊದಲಿದ. ಎಷ್ಟೋ ಜನ ಬಂದರು ಹೊದರು. ‘ಇವನ್ಯಾರು?’ ರಂಗ ಕ್ಷಣ ನೆನಪಿಗೆ ಗಾಳ ಹಾಕಿದ. ತೀರಾ ಇತ್ತೀಚೆಗೆ ನೋಡಿದ್ದ ಮುಖ! ಮುಖ್ಯವಾಗಿ ತನ್ನ ತಂಗಿಯನ್ನು ನೋಡಿ ಮನಸಾರ ಒಪ್ಪಿಕೊಂಡವನಾದ್ದರಿಂದ ರಂಗನ ಮನದಾಳದಲ್ಲಿ ಆ ಮುಖ ಮುದ್ರೆ ಒತ್ತಿತ್ತು.

‘ಅರೆರೆರೆರೆ… ನೀವು ಒಂದು ಲಕ್ಷ…’ ಎಂದು ಆಡಬಾರದಿತ್ತೆಂಬಂತೆ ಅವಡುಗಚ್ಚಿದ ರಂಗ, ಅದನ್ನೇನು ಆತ ಗಂಭೀರವಾಗಿ ಪರಿಗಣಿಸಲಿಲ್ಲ. ‘ನೋಡಿ, ನಾನೂ ವರದಕ್ಷಿಣೆ ವಿರೋಧಿನೇ ಆದರೆ ಹಿರಿಯರು… ಹೀಗಾಗಿ ನಾನು ಹೆಲ್ಪ್‍ಲೆಸ್ ಕಣ್ರಿ. ಮದುವೆಯಾದ್ರೆ ಆದೇ ಹುಡ್ಗಿನೇ ಅಂತ ನಾನು ತಂದೆಯವರ ಬಳಿ ಹಠಕ್ಕೆ ಬಿದ್ದಿದ್ದೇನೆ. ಗೆಲುವು ಯಾರಾದಾಗುತ್ತೋ ನೋಡೇಕು. ಕಾವೇರಿ ಚೆನ್ನಾಗಿದಾರಾ?’ ಕೇಳಿದ ರಂಗನಿಗೆ ಅಚ್ಚರಿಯಾಗದಿರಲಿಲ್ಲ. ‘ಹೆಸರು ಕೂಡ ನೆನಪಿಟ್ಟುಕೊಂಡಿದಿರಾ!?’ ಹುಬ್ಬೇರಿಸಿದ. ‘ಇಷ್ಟವಾದರ ಹೆಸರನ್ನು ಮರೆಯೋಕೆ ಸಾಧ್ಯವೆ… ಅಂದ್ಹಾಗೆ ನಿಮ್ಮ ಹೆಸರು?’ ಆತ ಕೇಳಿದ. ‘ನಿಜನಿಜ, ನಮ್ಮ ಹೆಸರು ಯಾರಿಗೂ ನೆನಪಿರಲ್ಲ ಬಿಡಿ… ರಂಗ ಅಂತಾರೆ ನನ್ನ’ ನಕ್ಕ ರಂಗ.

‘ನನ್ನ ಹೆಸರು ಶಂಕರ ಕಣ್ರಿ. ನಿಮ್ಮ ಮನೆಯವರು ದಯವಿಟ್ಟು ದುಡ್ಡಿಗೇನಾದ್ರೂ ಮಾಡ್ರಿ… ಹುಡುಗಿ ನನಗಿಷ್ಟವಾಗಿದಾಳೆ’ ಅಲವತ್ತುಕೊಂಡ ಶಂಕರ.

‘ಖಂಡಿತ ಸಾರ್… ಹಾಗೆ ನೀವೂ ನಿಮ್ಮ ತಂದೆಯವರನ್ನ ನಿಮ್ಮ ದಾರಿಗೆ ತಂದ್ರೆ ಧಾರೆ ಎರೆದು ಕೊಡೋದೇನು ದೂರವಿಲ್ಲ… ಬೆಸ್ಟ್ ಆಫ್ ಲಕ್’ ಎಂದವನ ಕೈಕುಲುಕಿದ ರಂಗ, ಭಾರವನ್ನು ಗಂಡಿನ ಮೇಲೆ ಹೊರೆಸಿದನಲ್ಲದೆ ಸೂಕ್ಷ್ಮವಾಗಿ ಮನೆ ಪರಿಸ್ಥಿತಿಯನ್ನು ಅರುಹಿದ. ಶಂಕರನ ಮೋರೆ ಕಳೆಗುಂದಿತು. ‘ಸಾರಿ… ಕಾಲೇಜಿಗೆ ಟೈಂ ಆಯ್ತು ಬರ್ತಿನಿ ಸಾರ್’ ರಂಗ ಅಲ್ಲಿಂದ ಕಾಲೇಜಿನತ್ತ ಸೈಕಲ್ ಹೊಡೆದ. ಅವನ ಮುಂದುಗಡೆಯೇ ಚಿನ್ನು ಕುಳಿತಿದ್ದ ಕಾರು ಧೂಳೆಬ್ಬಿಸಿ ಹಾದುಹೋಯಿತು.

ಚಿನ್ನುಗೆ ಕಾಲೇಜಿಗೆ ಬರಲೂ ಮನಸ್ಸಿರಲಿಲ್ಲ. ಕನಿಷ್ಠ ಬಂದರೆ ರಂಗನನ್ನು ದೂರದಿಂದಲಾದರೂ ನೋಡಬಹುದಲ್ಲ ಎಂಬ ಆಶೆ. ಅವಳನ್ನು ಕಾಲೇಜಂತೂ ಯಾವ ವಿಧದಲ್ಲೂ ಆಕರ್ಷಿಸಿರಲಿಲ್ಲ. ಓದುವುದೂ ಬೇಸರ ದಿನಗಳೆವುದೇ ದುಸ್ತರ. ಅಷ್ಟು ಆಶೆಯಿಂದ ಕಾಲೇಜಿಗೆ ಬಂದರೆ ತನ್ನತ್ತ ತಿರುಗಿಯೂ ನೋಡದೆ ಪಾಠದತ್ತ ಗಮನವೀಯುವ ರಂಗ ಅದೆಂತಹ ಕಟುಕ ಅನ್ನಿಸದಿರಲಿಲ್ಲ. ಅವನೊಡನೆ ಮಾತನಾಡದೆ ಎಷ್ಟೋ ವರ್ಷಗಳಾದಂತಾಗಿತ್ತು. ಇನ್ನು ಮಾತನಾಡದಿದ್ದರೆ ತನಗೆ ಹುಚ್ಚ ಹಿಡಿದುಬಿಡಬಹುದೆಂಬ ಭಯ. ತನಗೋ ಸರ್ಪಗಾವಲು. ರಂಗ ಕೂಡ ಏಕಿಷ್ಟು ನಿರ್ದಯಿಯಾಗಬೇಕು? ಮನ ಒಪ್ಪಲಿಲ್ಲ. ಅವನದ್ದು ಯಾರಿಗೂ ಅಂಜದ ಜಾಯಮಾನ. ತನ್ನ ಬಗ್ಗೆ ಪ್ರೀತಿಯಿಲ್ಲವೆ? ‘ಇದೆ’ ಎಂದೇ ಅವಳ ಮನ ತುಡಿಯುತ್ತದೆ. ಇಲ್ಲದಿದ್ದಲ್ಲಿ ಅಪಾಯವೆಂದು ತಿಳಿದೂ ಅವನೇಕೆ ತನ್ನನ್ನು ಸೈಕಲ್ ಮೇಲೆ ಕರೆತರುತ್ತಿದ್ದ? ತನ್ನೊಡನೆ ಮಾತನಾಡುವಾಗ ಅವನಲ್ಲಿ ಇನ್ನಿಲ್ಲದ ಉಲ್ಲಾಸವನ್ನವಳು ಕಂಡಿದ್ದಳು. ಖಂಡಿತ ಪ್ರೀತಿಸುತ್ತಾನೆ. ನಿನ್ನ ಯೋಗ್ಯತೆಗೆ ನಾನು ಸರಿಜೋಡಿಯಲ್ಲ ಅಂದಿದ್ದೂ ಉಂಟು. ಇದೆಲ್ಲಾ ಅಂತಸ್ತುಗಳ ಪರಿಣಾಮ. ತಾನೇಕಾದರೂ ದೊಡ್ಡ ಮನುಷ್ಯರ ಮನೆಯಲ್ಲಿ ಹುಟ್ಟಿದೆನಪ್ಪಾ ಎಂದು ಮೊದಲ ಬಾರಿ ಜಿಗುಪ್ಸೆ ಪಟ್ಟುಕೊಂಡಳು. ನೀರಸ ದಿನಗಳು ಉರುಳುತ್ತಿದ್ದವು. ಇನ್ನು ಅವನ ಬಳಿ ಮಾತನಾಡದಿದ್ದರೆ ತಾನು ಬದುಕಲಾರೆ ಎಂಬ ಡಿಪ್ರೆಶನ್ನೆ ಒಳಗಾದ ಅವಳು ವಾರೊಪ್ಪತ್ತಿನಲ್ಲೇ ಸೊರಗಿ ಕೃಶವಾದಳು. ದಂತಗೊಂಬೆಯಂತಿದ್ದ ಚಿನ್ನು ದಟ್ಟದರಿದ್ರ ಹೊತ್ತವಳಂತೆ ಸಿಕ್ಕಾದಾಗ ಮನೆಯವರೂ ಗಮನಿಸಿದರು. ತಾಯಿ ಜೀವ ನೊಂದುಕೊಂಡು ಇಲ್ಲದ ಆರೈಕೆಗೆ ನಿಂತಿತು. ತಾಯಿಯ ಮೇಲೆ ಮುನಿದ ಚಿನ್ನು ತಿನ್ನುವ ವಸ್ತುವನ್ನೆಲ್ಲಾ ಎಸೆದು ರಂಪಾಟ ಮಾಡಿದಳು. ಥೇಟ್ ಹುಚ್ಚಿಯಂತೆ ಒಂದು ಕಡೆ ನೋಡುತ್ತಾ ಕೂತು ತಾಯಿಯ ಎದೆಗೆಡಿಸಿದಳು. ಕೆಂಚಮ್ಮ ಕೂಡ ಚಿನ್ನುವನ್ನು ಸಂತೈಸಲು ತಾನು ಕಲಿತ ಬುದ್ದಿಯನ್ನೆಲ್ಲಾ ಖರ್ಚು ಮಾಡಿದಳಾದರೂ ಪ್ರಯೋಜನವಾಗಲಿಲ್ಲ. ಬೇರೆಯವರ ಮೇಲೆಲ್ಲಾ ಕೂಗಾಡಿ ರಂಪರಾದ್ದಾಂತ ಮಾಡುವ ಚಿನ್ನು ಕೆಂಚಮ್ಮನೊಂದಿಗೆ ಸೈರಣೆಗೆಡುತ್ತಿರಲಿಲ್ಲ. ಎಲ್ಲರ ಬಳಿ ಸಿಟ್ಟಿನಿಂದ ಕೂಗಾಡುವ ಅವಳು ಕೆಂಚಮ್ಮನನ್ನು ತಬ್ಬಿ ಸಮಾಧಾನವಾಗುವವರೆಗೂ ಅಳುವಷ್ಟು ವರ್ತನೆಯಲ್ಲಿ ಸೌಮ್ಯಳಾಗುತ್ತಿದ್ದಳಷ್ಟೆ. ಇದನ್ನೆಲ್ಲಾ ಮನೆಯ ಗಂಡಸರು ಗಮನಿಸಿದರೂ ತಲೆಹಾಕಲಿಲ್ಲ. ಪ್ರೇಮದ ಮಂಜು ಮುಸುಕಿದಾಗ ಈ ವಯಸ್ಸಿನ ಹುಡುಗಿಯರು ಹೀಗೇ. ಸರಿಯಾದ ಗಂಡು ನೋಡಿ ಮದುವೆ ಮಾಡಿದರೆ ಸರಿಹೋಗುತ್ತಾರೆ ಎಂಬ ತತ್ವಕ್ಕೆ ಜೋತುಬಿದ್ದರು. ಎಷ್ಟು ಜನ ಪ್ರೇಮಿಸಿದವರು ಮದುವೆಯಾಗಿದ್ದಾರೆ? ಯಾರನ್ನೋ ಪ್ರೇಮಿಸಿ ಮತ್ತೆ ಯಾರನೊ ಮದುವೆಯಾಗಿ ಹಳೆಯದನ್ನೆಲ್ಲಾ ಮರೆತು ಬಾಳ್ವೆ ಮಾಡಿದವರೆಷ್ಟಿಲ್ಲ. ಆದರೂ ನಾಜೂಕಾದ ವಯಸ್ಸು, ಜೀವಕ್ಕೇನಾದರೂ ಮಾಡಿಕೊಳ್ಳಲೂ ಭಯಪಡದ ಹುಂಬತನ. ತನ್ನ ಪ್ರೇಮಕ್ಕೆ ಅಡ್ಡಿಯಾದ ಎಲ್ಲರ ಮೇಲೂ ಇನ್ನಿಲ್ಲದ ಹಗೆತನ, ಇದು ದುರಂತ ಪ್ರೇಮಿಗಳ ಲಕ್ಷಣ. ಕಾರಣ ಅವಳ ಮೇಲೆ ಸದಾ ನಿಗಾ ಇಡುವಂತೆ ಭರಮಪ್ಪನವರು ಎಲ್ಲರನ್ನೂ ಎಚ್ಚರಿಸಿದ್ದರು. ಆದರೆ ಅವಳ ಖಿನ್ನಗೊಂಡ ಮುಖವನ್ನವರಿಗೆ ನೋಡಲಾಗುತ್ತಿರಲಿಲ್ಲ. ಚಿನ್ನು ನಗುತ್ತಾ ಮನೆತುಂಬಾ ನೆಗೆದಾಡುತ್ತಾ ತಮಾಷೆ ಮಾಡುತ್ತಾ ಮನೆಯವರನ್ನೆಲ್ಲಾ ಗೋಳುಗುಟ್ಟಿಸುತ್ತಾ ಜಗಳ ಕಾಯುತ್ತ ಇಡೀ ಮನೆಗೆ ಜೀವಕಳೆ ತುಂಬುವಂಥ ಚಿಗುರೆಮರಿ ಈಗ ಸದಾ ಅಂತರ್ಮುಖಿಯಾಗಿದ್ದರೆ ಮನೆಯಲ್ಲಿ, ಮನೆಯವರಲ್ಲಿ ನಿರ್ಜಿವಭಾವ. ಮನೆಯೆಲ್ಲಾ ಬಣಬಣ, ಸಾಕಿಸಲಹಿದವರು ಜನ್ಮ ಕೊಟ್ಟವರು ಹೆತ್ತು ಹೊತ್ತವರು ಬಂಧು-ಬಳಗ ಸುಖದ ಸುಪ್ಪತ್ತಿಗೆಗಿಂತ ಪ್ರೇಮ ಹೆಚ್ಚೆ!? ಹುಡುಗಾಟದ ವಯಸ್ಸು ಸರಿಹೋಗುತ್ತಾಳೆ. ಕಾಲ ಇರುವುದೇ ಎಲ್ಲವನ್ನೂ ಮರೆಸಲು ಎಂದು ತಮ್ಮನ್ನು ತಾವೇ ಸಂತೈಸಿಕೊಂಡರು ಭರಮಪ್ಪ, ಪ್ರೇಮಾನುಭವ ಅದರ ಶಕ್ತಿ ದುರ್ಬಲತೆಯ ಅರಿವನ್ನು ಅರಿಯದ ಅವರಿಗೆ ಕಾಲದ ಮೇಲೆಯೇ ನಂಬಿಕೆ. ಪ್ರೇಮಿಗಳು ಕಾಲಾತೀತರೆಂಬ ಕಲ್ಪನೆ ಅವರಿಗೆ ಬರುವುದಾದರೂ ಹೇಗೆ? ಕೇವಲ ದರ್ಪದೌಲತ್ತು ಹಿಂಸೆ ತಮ್ಮ ಮಾತೇ ವೇದವಾಕ್ಯ ತಮಗೆ ಎದುರುಂಟೆ ಎಂದೇ ಹಳೆಪಾಳೇಗಾರಿಕೆಯ ಮತ್ತಿನಲ್ಲಿ ಮೈಮರೆತವರು ಎಳೆಯರ ಮನದ ಆಂದೋಲನ ಗ್ರಹಿಸುವುದಾದರೂ ಹೇಗೆ? ಆದರೆ ಏಳುಸುತ್ತಿನ ಕೋಟೆಯಂತಹ ಆ ಮನೆಯಲ್ಲಿಯೂ ಪ್ರೇಮದ ವೇದನೆ ಸಂವೇದನೆಯನ್ನರಿತ ಜೀವ ಒಂದಿತ್ತು. ಆಕೆಯೇ ಕೆಂಚಮ್ಮ ಅಲಿಯಾಸ್ ಸುಮ. ಆಕೆ ಪ್ರೀತಿಸಿದ್ದೂ ತನ್ನ ಕಾಲೇಜಿನ ಸಹಪಾಠಿಯನ್ನು, ಜಾತಿ ಬೇರೆ. ತಮ್ಮವರು ತಮ್ಮ ಜಾತಿಯೇ ಹೆಚ್ಚೆಂದು ತಿಳಿದವರು. ಅವನು ಬ್ರಾಹ್ಮಣ ಜಾತಿಯ ಹುಡುಗ ನಮಗಿಂತ ದೊಡ್ಡಜಾತಿ ಎಂಬುದವಳವಾದ. ಅವನೊಬ್ಬ ಜಾತಿಯಿಂದ ದೊಡ್ಡವ ಅಷ್ಟೆ, ನಮ್ಮ ಅಂತಸ್ತಿಗೆ ಅಂವಾ ಸರಿಸಾಟಿಯೆ? ತಿನ್ನುಣ್ಣುವ ಜಾತಿ ನಮ್ಮದು, ತಿನ್ನಲೂ ಗತಿಯಿಲ್ಲದ ಜಾತಿ ಅವನದು ಎಂದೆಲ್ಲಾ ನಿಕೃಷ್ಟದ ಮಾತಾಡಿದ್ದಲ್ಲದೆ ಅವನ ಮೇಲೆ ಅಟ್ಯಾಕ್ ಮಾಡಿಸಿದರು. ಪಾಪ ಅವನೇನು ಸಿನಿಮಾ ಹಿರೋನೆ. ಊರೇಬಿಟ್ಟು ಓಡಿದ. ಸುಲಗ್ನ ಸಾವಧಾನ ಅಂತ ಕೆಂಚಮ್ಮ ಪಾಳೇಗಾರರ ಮನೆ ಸೇರಿ ಪಾವನವಾದಳು. ಹೊಂದಿಕೊಂಡಳು ಸಂಸಾರ ನೊಗವನ್ನು ಹೊತ್ತಳು. ಜೊತೆಗೂಡಿ ನೊಗ ಎಳೆಯಬೇಕಾದ ಜೋಡಿಯೇ ಎಲ್ಲೆಲ್ಲೂ ಮೇದು ಬರುತ್ತಿದ್ದರೂ ಮನೆಯಲ್ಲಿ ಪ್ರಶ್ನಿಸುವರಿಲ್ಲ. ಅದು ಕೂಡ ಪ್ರತಿಷ್ಠೆಯ ವಿಷಯವೆಂಬಂತಹ ವರ್ತನೆ, ಉದಾಸೀನ. ಇದ್ದುದ್ದರಲ್ಲಿ ಒಂದಿಷ್ಟು ಮಾನವೀಯತೆ ಲಕ್ಷಣ ಕಂಡದ್ದವಳು ಭರಮಪ್ಪನವರಲ್ಲೇ. ಮಕ್ಕಳವರಿಗೆ ಅಂಜುತ್ತಿದ್ದರೇನೋ ನಿಜ. ಅಂಜುತ್ತಲೇ ಕಂಡಂತೆ ಕಾಣದಂತೆ ತಪ್ಪು ಮಾಡುತ್ತಲೇ ಇದ್ದರು. ಈಗಿನ ಕಾಲದ ಮಕ್ಕಳನ್ನು ಎದುರುಹಾಕಿಕೊಂಡು ಹಗುರಾಗುವುದೇಕೆಂದು ಭರಮಪ್ಪ ಕಂಡುಕಾಣದಂತೆ ಇರುವುದನ್ನು ಅಭ್ಯಾಸ ಮಾಡಿಕೊಂಡಂತೆ ಅವಳಿಗೆ ಭಾಸವಾಗುತ್ತಿತ್ತು. ಚಿನ್ನುವನ್ನವಳು ಅರ್ಥಮಾಡಿಕೊಂಡಿದ್ದಳು. ಅವಳ ಮನಸ್ಸಿನ ಮೇಲಾಗಿರುವ ಆಘಾತದ ಅಗಾಧತೆಯನ್ನು ಆಕೆಯೊಬ್ಬಳು ಮಾತ್ರ ಅರಿಯಬಲ್ಲವಳು.

ಚಿನ್ನು ಸದಾ ಕೋಣೆಯಲ್ಲಿ ಮೂಲೆ ಹಿಡಿದು ಮುಸುಮುಸು ಅಳುತ್ತಲೋ ಕಿಟಕಿಗೆ ಮುಖವಿಟ್ಟು ದಿಗಂತವನ್ನು ಓದುವವಳಂತೆ ತದೇಕ ಚಿತ್ತಳಾಗಿ ನೋಡುತ್ತಲೇ ಕುಳಿತಿರುವ ಅವಳ ಮನದಳಲನ್ನು ಅರಿತ ಕೆಂಚಮ್ಮನ ಜೀವ ತಹತಹಿಸಿತು. ಅವಳಿಗೂ ತನ್ನ ಪಾಡೇ ಆದೀತೆಂಬುದರಲ್ಲಿ ಯಾವ ಅನುಮಾನವೂ ಆಕಿಗಿರಲಿಲ್ಲ. ಆದರೆ ಆಕೆಗೆ ತನ್ನ ಸ್ಥಿತಿ ಒದಗದಂತೆ ನೋಡಿಕೊಂಡು ಈ ಪ್ರೇಮಿಗಳನ್ನೇಕೆ ಒಂದುಗೂಡಿಸುವ ಮೂಲಕ ತನಗಾದ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಳ್ಳಬಾರದೆಂಬ ಜಿದ್ದಿಗೆ ಬಿದ್ದ ಕೆಂಚಮ್ಮ ಚಿನ್ನು ಕೋಣೆಯನ್ನು ಹೊಕ್ಕಳು. ಮೈದಡವಿದಳು ತಲೆ ನೇವರಿಸಿದಳು. ಚಿನ್ನು ಕೆನ್ನೆಯ ಮೇಲಿಳಿವ ಕಣ್ಣೀರನ್ನು ತೊಡೆದಳು.

‘ಹಿಂಗ್ಯಾಕ್ ಮಾಡ್ತಿಯೇ ಹುಚ್ಚು ಹುಡ್ಗಿ?’ ಎಂದು ಗಲ್ಲ ಹಿಡಿದಳು.

‘ಹಿಂಗೆ ಸ್ವಲ್ಪ ದಿನ ಕಳೆದ್ರೆ ನಾನು ಖಂಡಿತ ಹುಚ್ಚಿ ಆಗಿಬಿಡ್ತೀನಿ ಚಿಗಮ್ಮ’ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು.

‘ಸಮಾಧಾನ ಮಾಡ್ಕೋ ಯಾರಾದ್ರೂ ಬಂದಾರು’ ಎಚ್ಚರಿಸಿದಳು ಕೆಂಚಮ್ಮ.

‘ಬರ್‍ಲಿಬಿಡು… ಏನು ಮಾಡ್ತಾರೆ? ಕೊಂದು ಹಾಕ್ತಾರಾ… ಹಾಕ್ಲಿ’ ಚಿನ್ನುವಿನ ಹಠ.

‘ಕೊಂದು ಹಾಕಿದ್ರೆ ನೆಮ್ಮದಿಯಿಂದ ಸಾಯಬಹುದು. ಯಾವನೋ ಹಿಡಿದು ನಿನಗೆ ಗಂಟು ಹಾಕ್ತಾರೆ. ತಮ್ಮ ಪ್ರತಿಷ್ಠೆ ಉಳಿಸ್ಕೊಂತಾರೆ ಕಣೆ… ಹೋಗ್ಲಿ ಆ ರಂಗ ಏನಂತಾನೆ? ನಿನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸ್ತಾನಾ? ಕೇಳಿದಳು.

‘ಏನೋ ಚಿಗಮ್ಮ ಒಂದೂ ತಿಳೀವಲ್ದು ನನಗೆ’

‘ಹಂಗಂದ್ರೆ ಹೆಂಗೆ! ಕಾಲೇಜಿನಾಗ ನೀವಿಬ್ಬರೂ ಕದ್ದುಮುಚ್ಚಿಯಾರ ಮಾತಾಡ್ತಿಲ್ಲೇನ್ ಮತ್ತೆ’

‘ಇಲ್ಲ… ನಾನಾಗಿ ಮಾತನಾಡಿಸಲು ಹೋದರೂ ತಪ್ಪಿಸ್ಕೋತಾನೆ. ಅವನಾಗಿ ಮಾತಾಡಿಸೋದು ಎಲ್ಲಿಂದ ಬಂತು?’

‘ಅವನು ಯಾಕ್ಹೀಗೆ ನೆಡ್ಕೋತಾನೆ! ನಿನ್ನಷ್ಟೇ ಪ್ರೀತಿ ಅವನಿಗೆ ನಿನ್ನ ಮೇಲೆ ಇಲ್ಲೇನು?’

‘ಏನೋ ಚಿಗಮ್ಮ. ಅವನು ನನ್ನನ್ನು ಪ್ರೀತಿಸ್ತಾನೇ ಇಲ್ಲವೇನೋ ಅಂತ ನನಗೆ ಅನುಮಾನ ಕಾಡ್ಲಿಕ್ ಹತ್ತೇತ್ ನೋಡು’ ಮತ್ತೆ ಅತ್ತಳು ಚಿನ್ನು.

‘ಪ್ರೀತಿ ಅದೆ ಕಣ್ ಬಿಡೆ. ಇಲ್ಲದಿದ್ದರೆ ಪಾಳೇಗಾರರ ಮನೆ ಹುಡುಗಿ ಸಹವಾಸ ಪ್ರಾಣಕ್ಕೆ ಕುತ್ತು ಅಂತ ತಿಳಿದೂ ನಿನ್ನ ಸೈಕಲ್ ಮೇಲೇಕೆ ಕರ್‍ಕೊಂಡು ಬಂದಾನು? ನನ್ನ ಗಂಡನ ಮೇಲೆ ಯಾಕೆ ಹೊಡೆದಾಡಿಯಾನು? ಅವನಿಗೆ ತಾನು ಬಡವ ಅಂತ ಇನ್ಫಿರಿಯಾರಿಟಿ ಇರಬಹುದು… ತಾನಾಗಿ ಮುಂದುವರೆದು ನಾಳೆ ನೀನು ಹಿಂಜರಿದರೆ ಎಂಬ ಭಯವೂ ಇರಬಹುದು. ನೀನಾಗಿಯೇ ಅವನ ಬಳಿ ಹೋಗಿ ನಾನು ನಿನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸ್ತೀನಿ ಅಂತ ಹೇಳಿ ನೋಡು. ನನ್ನ ಕೈ ಬಿಡಬೇಡ ಅಂತ ಕೈಹಿಡ್ಕೋ… ಖಂಡಿತ ಕರಗಿಹೋಗ್ತಾನೆ. ಇನ್ನ ಧೈರ್ಯಕ್ಕೇನು ಕೊರತೆಯಿಲ್ಲದೋನು ಎಂಥೋನ್ನೂ ಬಡಿದು ತನ್ನ ಪ್ರೇಮ ದಕ್ಕಿಸಿಕೊಳ್ಳೋ ಛಾತಿನೂ ಐತೆಕಣೆ ಅವನಿಗೆ. ಯಾರಾದ್ರೂ ಒಬ್ಬರು ಮುಂದುವರಿಲೇಬೇಕು ಇಲ್ಲದಿದ್ದರೆ ಕಳೆದುಹೋಗ್ತೀರಿ ನೋಡವ್ವಾ’ ಚಿಗಮ್ಮನ ಮಾತು ಕೇಳುತ್ತಲೇ ಯೋಚನೆಯ ಸುಳಿಗೆ ಸಿಕ್ಕಳು ಚಿನ್ನು.

‘ಅಲ್ಲ ಕಣ್ ಚಿಗಮ್ಮ’ ಕಾಲೇಜಿನಾಗೆ ನಾನು ಅವನ್ನ ಮಾತಾಡಿಸಿದ್ರೆ ಅಪ್ಪನಿಗೆ ಹೇಳೋರವರೆ. ನಾನು ಎಲ್ಲಿ ಅಂತ ಅವನ್ನ ಹಿಡೀಲಿ. ನನ್ನ ಸುತ್ತ ಬಿಗಿ ಕಾವಲು ಹಾಕವರೆ?’

‘ಕಾಲೇಜಿನಾಗೆ ಕಂಡು ಮಾತಾಡಿ ಕತೆಯಾಡೋದ್ರಾಗೆ ನಿನ್ನನ್ನ ಯಾವನಿಗಾನ ಕೊಟ್ಟು ಲಗ್ನ ಮಾಡ್ತಾರಷ್ಟೆ, ಈಗಾಗ್ಲೆ ಗಂಡು ಹುಡುಕ್ತಿದಾರೆ. ಇನ್ನು ನೀನು ತಡ ಮಾಡಂಗಿಲ್ಲ ನೋಡವ್ವ’ ತನ್ನ ಎದೆಗುದಿಯನ್ನವಳ ಮುಂದೆ ತೆರೆದಿಟ್ಟಳು.

‘ನನ್ನ ಏನು ಮಾಡು ಅಂತೀಯ ಚಿಗಮ್ಮ?’ ಮುಗ್ಧ ಪ್ರಶ್ನೆ ಹೊರಬಂತು.

‘ಪ್ಯಾರ್‌ಕಿಯಾ ತೊ ಡರ್‍ನಾ ಕ್ಯಾ ಅಂತ ಕೇಳಿಯಿಲ್ಲೋ, ಸೀದಾ ನೀನೇ ಅವನ ಮನೆಗೆ ಹೋಗು. ಅವರ ಮನೆಯವರಂತೂ ನಿನ್ನ ಉಪೇಕ್ಷೆ ಮಾಡೋರಲ್ಲ…. ಪಾಳೇಗಾರರ ಹುಡ್ಗಿ ಅನ್ನೋ ಭಯಕ್ಕಾರ ಉಪಚಾರ ಮಾಡ್ತಾರೆ. ರಂಗನತಾವ ನೇರಾನೇರ ಹೇಳಿಬಿಡು. ನನ್ನ ಮದುವೆ ಮಾಡ್ತಾರೆ ನನಗಿಷ್ಟವಿಲ್ಲ. ನಿನ್ನನ್ನ ಬಿಟ್ಟು ಬದುಕೋಕೆ ನನ್ನಿಂದಾಗಲ್ಲ. ನನ್ನ ಮನೆಯೋರ ಒಪ್ಪಿಸಿ ಮದುವೆಯಾಗು… ಇಲ್ಲ, ಅವರ ಮುಲಾಜೇ ಬೇಡ ಎಲ್ಲಾದರೂ ದೂರಹೋಗಿ ಮದುವೆಯಾಗೋಣ ನಡಿ… ಇಲ್ಲ ನಾನು ನೇಣು ಹಾಕ್ಕೊಂಡು ಸಾಯ್ತಿನಿ ಅಂತ ಡ್ರಾಮಾ ಮಾಡು, ಕಣ್ಣೀರು ಹಾಕು, ಹೆಣ್ಣಿನ ಕಣ್ಣೀರಿಗೆ ಕರಗ್ದೆ ಇರೋ ಗಂಡು ಯಾವನದಾನೆ ಹೇಳು? ಈಗ ನೀನು ಧೈರ್ಯ ಮಾಡದಿದ್ದರೆ ಯಾವನೋ ಅಬ್ಬೆಪಾರಿ ಸಂಗಡ ಜೀವನಪೂರಾ ಏಗಬೇಕಾಗ್ತದೆ ನೋಡವ್ವ’ ಕೆಂಚಮ್ಮ ಚಿನ್ನುವಿನಲ್ಲಿ ಇಂಚು ಇಂಚೇ ಧೈರ್ಯ ತುಂಬಿದಳು.

‘ಆದರೆ… ಆದರೆ… ನಾನು ಅವನ ಮನೆಗೆ ಹೋಗೋದು ಹೆಂಗೇ ಚಿಗಮ್ಮ?’ ಬಿಕ್ಕಿದಳು ಚಿನ್ನು.

‘ಸಂಜೆಗತ್ತಲಾದ ಮೇಲೆ ಮನೆಬಿಡು. ಹಿತ್ತಲ್ಲಾಗ ಒಂದು ದಿಡ್ಡಿ ಬಾಗಿಲೈತೆ. ಅಲ್ಲಾಸಿಂದ ನಾನು ನಿನ್ನ ಕಳಿಸೋ ಏರ್ಪಾಡು ಮಾಡ್ತೀನಿ… ಧೈರ್ಯ ತಗೋ ಚಿನ್ನು’ ಚಿನ್ನುವಿನ ಕಣ್ಣೊರೆಸಿದಳು ಕೆಂಚಮ್ಮ.

ಚಿನ್ನುಗೆ ಊಟ ತಿಂಡಿ ಏನೂ ರುಚಿಸಲಿಲ್ಲ. ಬಲವಂತವಾಗಿ ತಾಯಿ ಉಣ್ಣಿಸಿದರೂ ತುತ್ತು ಗಂಟಲಿಗಿಳಿಯದು. ಒಳಗಿನ ಒತ್ತಡ ತೆಗೆದುಕೊಳ್ಳುವ ನಿರ್ಧಾರದ ತೂಗುಯ್ಯಾಲೆಯಲ್ಲಿದ್ದಳು. ‘ಯಾಕವ್ವ ತಾಯಿ ಹಿಂಗ್ ಮಾಡ್ತಿ, ಹೆಣ್ಣಿಗೆ ಹಠ ಒಳ್ಳೇದಲ್ಲ. ನೀನು ಉಣ್ಣದೆ ನಾನ್ ಹೆಂಗೆ ಮಗ್ಳೆ ಉಣ್ಣಲಿ’ ಚಿನ್ನಮ್ಮ ಮಗಳನ್ನು ತಬ್ಬಿ ಅತ್ತಳು. ಕೆಂಚಮ್ಮನ ಮಾತುಗಳ ವಿನಹ ಬೇರೆ ಯಾವ ಮಾತುಗಳು ಅವಳ ಕಿವಿಯ ಸನಿಯವೂ ಸುಳಿಯಲಿಲ್ಲ. ಸಂಜೆಗಾಗಿ ಚಾತಕದಂತೆ ಕಾದಳು, ಕೆಂಚಮ್ಮನಿಗೂ ಮಧ್ಯಾಹ್ನದ ನಿದ್ದೆ ಪರಾರಿ, ಚಿನ್ನು ಪ್ರೇಮ ಉಳಿಯಲಿ ಎಂದವಳು ಮನದಲ್ಲೇ ನಾಯಕನ ಹಟ್ಟಿ ತಿಪ್ಪೇರುದ್ರಸ್ವಾಮಿಗೆ ಹರಕೆಹೊತ್ತಳು. ಬೇಗ ಕತ್ತಲಾಗುವ ಮಳೆಗಾಲದ ದಿನಗಳವು. ಏಳುಗಂಟೆಗೇ ಕತ್ತಲಾವರಿಸಿಕೊಂಡಿತು. ಕೆಂಚಮ್ಮ ಚಿನ್ನು ಕೋಣೆಗೆ ಬಂದಾಗ ಇಬ್ಬರ ಎದೆ ಬಡಿತವೂ ಏರುಪೇರಾಯಿತು. ‘ಅಂಜಬೇಡ ನಮ್ಮವ್ವ… ದೇವರದಾನೆ ಹೋಗು’ ಗಲ್ಲ ಹಿಡಿದು ಮುದ್ದು ಮಾಡಿದಳು.

‘ನಾವು ಹೋದ್ವಿ ಎಲ್ಲಾದರೂ ಅಂತಿಟ್ಕೋ, ಆಮೇಲೆ ಇಲ್ಲೇನೇನ್ ಆಗದೋ ಗ್ರಹಚಾರ ಕಮ್ಮಿಯಾಗಿ ಇಬ್ಬರೂ ಸಿಕ್ಕಿಬಿದ್ವಿ, ಆಗೇನೇ ಗತಿ ಚಿಗಮ್ಮ?’

‘ನೋಡೆ, ಒಂದೇ ಒಂದು ದಿನ ನೀನ್ ಅವನ ಜೊತೆ ಹೊರಗಿದ್ದು ಬಿಡು ಸಾಕು ಊರು ಸುದ್ದಿಯಾಗ್ತದೆ. ಆಮೇಲೆ ನಿನ್ನ ಮದುವಿ ಆಗೋಕೆ ಯಾವಾನ್ ಬಂದಾನು? ಬೇರೆ ದಾರಿಯಿಲ್ದೆ ರಂಗನಿಗೇ ಗಂಟುಹಾಕ್ತಾರೆ. ಪ್ರೇಮಿಸ್ದೋರಿಗೆ ಎಂಟೆದೆ ಇರ್‍ಬೇಕು. ಇಲ್ಲದಿದ್ದರೆ ಈ ಉಸಾಬರಿ ಯಾಕೆ ಅಂತ ತಂದೆ-ತಾಯಿ ಹೇಳಿದೋನ್ನ ಕಟ್ಕೊಂಡು ಬಾಳ್ವೆ ಮಾಡೇಕು… ಮನಸ್ಸು ಗಟ್ಟಿಮಾಡ್ಕೋ… ಹುಂ ನಡಿಯೆ’ ಕೆಂಚಮ್ಮ ಹುರಿದುಂಬಿಸಿದಳು. ಹಿತ್ತಲಿಗೆ ಕರೆತಂದಳು. ಅಲ್ಲಿ ದೆವ್ವದಂತಹ ಬಾಗಿಲಿತ್ತು. ಅದು ತೆರೆದರೆ ಆರು ಮನೆಗೆ ಕೇಳೋವಷ್ಟು ಕಿರುಗುಟ್ಟುತ್ತಿತ್ತು. ಪಕ್ಕದಲ್ಲಿದ್ದ ದಿಡ್ಡಿ ಬಾಗಿಲೊಂದು ಟಾರ್ಚ್ ಬೆಳಕಲ್ಲಿ ಕಂಡಿತು. ಚಿನ್ನು ರೋಮಾಂಚನಗೊಂಡಳು.

ಅಳುಕುತ್ತಲೇ ಅತ್ತಿತ್ತ ನೋಡುತ್ತಾ ರಂಗನ ಮನೆಗೆ ಚಿನ್ನು ಬಂದಾಗ ಮನೆಯವರಿಗೆಲ್ಲಾ ಪರಮಾಶ್ಚರ್ಯ ಒಂದೆಡೆಯಾದರೆ ಪ್ರಾಣಸಂಕಟ ಮತ್ತೊಂದೆಡೆ. ‘ಅಯ್ಯಯ್ಯೋ ಬಾಮ್ಮಾ ಬಾ ಚಿನ್ನು’ ಎಂದು ರಂಗನ ಸೋದರರು, ಅತ್ತಿಗೆಯರು ಉಪಚಾರಕ್ಕೆ ನಿಂತರು. ತೂಗುಯ್ಯಾಲೆಯಲ್ಲಿ ಕೂರಿಸಿದರು. ‘ಏನ್ ತಗೋತಿಯಮ್ಮಾ?’ ಎಂದು ಸಡಗರಪಟ್ಟರು. ಆದರೆ ಅಡಿಗೆ ಕೋಣೆಯ ಬಾಗಿಲಲ್ಲೇ ನಿಂತು ಪಿಳಿಪಿಳಿಸುವ ರಂಗನ ತಾಯಿ ತಂಗಿಯತ್ತ ನೋಡಿದಳು ಚಿನ್ನು. ಅವರದ್ದು ನೀರಸ ಪ್ರತಿಕ್ರಿಯೆ. ರಂಗನೇ ಕಾಣುತ್ತಿಲ್ಲ. ಮನೆಯವರ ಪ್ರೀತ್ಯಾದರಗಳಿಂದ ಅವಳ ಎದೆಗುದಿ ಒಂದಿಷ್ಟು ಕಡಿಮೆಯಾಗಿತ್ತು. ಮನೆಯವರದು ಬರೀ ಬಾಯಿಮಾತಿನ ಉಪಚಾರ. ಕಾವೇರಿ ಶರಬತ್ತು ತಂದುಕೊಟ್ಟಳು. ಅದೂ ಚಿನ್ನು ಗಂಟಲಲ್ಲಿ ಇಳಿಯದು. ಕುಡಿದಳು. ತಂಪಾಗುವ ಬದಲು ಅವಳ ಮೈಮನವನ್ನು ದಹಿಸುವಾಗ, ರಂಗನಿಗಾಗಿ ಮನೆತುಂಬಾ ಅವಳ ಕಂಗಳು ಬೆದಕಿದವು. ಮನೆಗೆ ಹಿಂದಿರುಗುವುದೊ ಅವನೊಡನೆ ಓಡಿ ಹೋಗುವುದೋ ಯಾವುದೇ ಆಗಲಿ ಬೇಗ ನಿರ್ಧರಿಸಬೇಕಿತ್ತು. ತಾನು ಇಲ್ಲದ್ದು ಮನೆಯವರಿಗೆ ಗೊತ್ತಾಗಿ ಇಲ್ಲಿ ಬಂದು ರಂಪ ಮಾಡಿದರೆ ತಲೆಗಳೇ ಉರುಳಿಯಾವೆಂಬ ಆಲೋಚನೆ ತಲೆಗೆ ಬಂದೊಡನೆ ಅವಳಿಗೇ ತಿಳಿಯದಂತೆ ದೇಹಾದ್ಯಂತ ನಡುಕ. ಅವಳು ಇದ್ದಕ್ಕಿದ್ದಂತೆ ಬೆವರುತ್ತಾ ಕಂಪಿಸುವಾಗ ಮನೆಯವರಿಗೂ ಗಾಬರಿ, ‘ಯಾಕಮ್ಮ? ಹುಶಾರಿಲ್ವೆ…?’ ಕಮಲಮ್ಮನೇ ಬಳಿ ಬಂದು ಪ್ರೀತಿಯಿಂದ ಮೈಕೈ ಮುಟ್ಟಿ ವಿಚಾರಿಸಿದಾಗ ಪಿಳಿಪಿಳಿ ಅವರನ್ನೇ ನೋಡಿದ ಚಿನ್ನುಗೆ ‘ರಂಗ ಎಲ್ಲಿ?’ ಎಂದು ಕೇಳುವಷ್ಟೂ ಉಸಿರಿಲ್ಲ. ಅಷ್ಟರಲ್ಲಿ ರಂಗನ ಪ್ರವೇಶವಾಯಿತು. ಚಿನ್ನುವನ್ನು ತನ್ನ ಮನೆಯಲ್ಲಿ ಕಂಡು ಕ್ಷಣ ಅವಕ್ಕಾದ. ಕೋಪವೂ ಬಂತು ಅದು ಮಾತಿನ ರೂಪದಲ್ಲೂ ಹೊರಬಂತು.

‘ಯಾಕೆ ಬಂದೆ ನೀನು?’

ಅಷ್ಟೊಂದು ಜನರ ಎದುರು ಮೈಮೇಲೆರಗಿದ ಪ್ರಶ್ನೆಯಲ್ಲಿದ್ದ ಕೋಪ ಅಸಡ್ಡೆಯಿಂದಾಗಿ ಅವಳ ಉಸಿರೇ ನಿಂತಂತಾಯಿತು. ತೇಲುಗಣ್ಣಾದಳು.

‘ಏಯ್ ಯಾಕೆ ಹಂಗೆ ರೇಗ್ತಿಯೋ ಕತ್ತೆ, ದೊಡ್ಡವರ ಮಗಳೂ, ಮನೆಗೆ ಬಂದಿದಾಳೆ… ಮನೆಗೆ ಬಂದ ಹೆಣ್ಣು ಮಕ್ಕಳನ್ನು ಹಿಂಗಾ ನಡೆಸ್ಕೊಳ್ಳೋದು’ ಕಮಲಮ್ಮನೇ ಮಗನಿಗೆ ಛೀಮಾರಿ ಹಾಕಿದಳು. ‘ಯಾಕೆ ಬಂದೆ ಮಗು… ಹೇಳಮ್ಮ?’ ಆಕೆಯೇ ಕೇಳಿದಳು. ಚಿನ್ನು ತಾನು ಇಂತಹ ಪರಿಸ್ಥಿತಿ ಎದುರಿಸಬೇಕಾದೀತೆಂದು ನೆನೆದವಳೇ ಅಲ್ಲ. ತಬ್ಬಿಬ್ಬಾದಳು. ‘ರಂಗನ್ನ ನೋಡಬೇಕೆನಿಸಿತು ಅದಕ್ಕೆ…’ ತೊದಲಿದಳು ಚಿನ್ನು. ‘ನೋಡಿದ್ದಾಯಿತಲ್ಲ… ಹೋಗಬಹುದು’ ರಂಗನ ಉತ್ತರ ಕೆನ್ನೆಗಪ್ಪಳಿಸಿತು. ಈಗವಳು ಅಂಜಲಿಲ್ಲ. ಬಂದಿದ್ದಾಗಿದೆ ಬಂದಿದ್ದನ್ನು ಎದುರಿಸಿಯೇ ಬಿಡೋಣವೆಂಬ ನಿಶ್ಚಯಕ್ಕೆ ಬಂದಳು.

‘ನಿನ್ನೊಡನೆ ಪರ್ಸನಲ್ ಆಗಿ ಮಾತಾಡಬೇಕು ಕಣೋ’ ನೇರವಾಗಿ ನೋಡಿ ಅಂದಳು.

‘ಪರ್ಸನಲ್ಲು ಪಬ್ಲಿಕ್ಕು ಅಂತ ನನಗೆ ಗೊತ್ತಿಲ್ಲ. ಅದೇನು ಇಲ್ಲೇ ಹೇಳು’ ಕಂಬಕ್ಕೊರಗಿ ಸಿಡುಕಿದ.

‘ಏಯ್ ಒರಟ. ಹೆಣ್ಣಿಗೆ ನಾಚಿಕೆ ಇರುತ್ತೆ… ಅದೇನು ರೂಮಿಗೆ ಕರ್‍ಕೊಂಡು ಹೋಗಿ ವಿಚಾರಿಸೋ’ ಕಾವೇರಿ ಚಿನ್ನುಗೆ ಬೆಂಬಲವಾಗಿ ನಿಂತಳು.

‘ನಾಚಿಕೆಯಿದ್ದೋಳಾದ್ರೆ ಹಿಂಗೆ ಮನೆಬಿಟ್ಟು ರಾತ್ರಿ ಹೊತ್ತು ಬರೋಲ್ಲ’ ರಂಗ ಅಂದ.

‘ಬರೋಹಾಗೆ ಮಾಡಿದ್ದು ನೀನೇ ಕಣೋ’ ಏರುದನಿಯಲ್ಲಿ ಅಂದಳು ಚಿನ್ನು.

‘ನಾನೇನ್ ಮಾಡ್ದೆ ಅಂತದ್ದು?’ ಅವಳನ್ನೇ ದುರುಗುಟ್ಟಿದ.

‘ನೀನು ನನ್ನನ್ನು ಪ್ರೀತಿಸಿದ್ದು ಸುಳ್ಳಾ?’ ನಾಚದೆ ಅಂಜದೆ ಪ್ರಶ್ನಿಸಿದಳು.

‘ಸ್ನೇಹನಾ ಪ್ರೇಮ ಅಂಡ್ಕೊಂಡಿದ್ದು ನಿನ್ನ ತಪ್ಪು’

‘ಸ್ನೇಹ ಪ್ರೇಮದ ವ್ಯತ್ಯಾಸ ಏನು ಅಂತ ನನಗೆ ಗೊತ್ತಿದೆ. ಆವತ್ತು ನೀನು ಏನ್ ಹೇಳ್ದೆ, ನನಗೆ ಜವಾಬ್ದಾರಿಗಳಿವೆ, ಅದೆಲ್ಲಾ ಪೂರೈಸಿದ ಮೇಲೆ ಮದುವೆ ಮಾತು ಅಂದೆ. ಅನ್ನಲಿಲ್ವಾ ನೀನು? ಏನಿದರ ಅರ್ಥ?’

‘ಸ್ಪಷ್ಟವಾಗೇ ಇದೆಯಲ್ಲ, ಈವತ್ತು ನಾನು ಅದನ್ನೇ ಹೇಳೋದು’

‘ನಮ್ಮ ಮನೇಲಿ ಗಂಡು ನೋಡ್ತಿದಾರೆ. ಯಾವ ಕ್ಷಣದಲ್ಲಾದರೂ ನನ್ನ ಮದುವೆಯಾಗಬಹುದು’.

‘ದಟ್ಸ್‍ಗುಡ್ ಮದುವೆಯಾಗು’

‘ನಾನು ನಿನ್ನನ್ನ ಪ್ರೀತಿಸ್ತಿದೀನಿ… ನೀನಿಲ್ಲದೆ ನಾನು ಬದುಕೋಕೆ ಸಾಧ್ಯವಿಲ್ಲ… ನಾನು ಸತ್ತು ಹೋಗ್ತಿನಷ್ಟೆ’ ಅತ್ತೇಬಿಟ್ಟಳು ಚಿನ್ನು. ಕಮಲಮ್ಮ ಕಾವೇರಿ ಕರಗಿ ನೀರಾದರು. ರಂಗನ ಅಣ್ಣಂದಿರು ಅತ್ತಿಗೆಯರಿಗೆ ಪರಿಸ್ಥಿತಿಯ ತೀವ್ರತೆ ಗಂಭೀರತೆ ಅರ್ಥವಾಗಿತ್ತು. ಇವಳಿಂದ ತಮ್ಮ ಮನೆಗೆ ಕೇಡೇ, ರಂಗನಿಂದ ಈ ಮನೆಗೆ ಯಾವಾಗ ತಾನೆ ಒಳ್ಳೇದಾಗಿತ್ತು ಎಂದು ಅವರವರೇ ಪಿಸುಗುಟ್ಟಿಕೊಂಡರು. ಪೀಡೆ ತೊಲಗಿದರೆ ಸಾಕೆನ್ನಿಸಿತ್ತವರಿಗೆ. ಪಾಳೇಗಾರರ ಮನೆಯವರು ಎಲ್ಲಾದರೂ ಬಂದರೆ ತಮ್ಮ ಕಥೆ ಮುಗಿದಂತೆಯೇ ಎಂದು ಪತರಗುಟ್ಟಲಾರಂಭಿಸಿದರು.

‘ಹುಚ್ಚು ಹುಚ್ಚಾಗಿ ಆಡ್ಬೇಡ್ವೆ, ಮೂರುಕಾಸೂ ದುಡಿಯದ ನನ್ನ ಕಟ್ಕೊಂಡು ಏನೇ ಸುಖಪಡ್ತಿಯಾ ಹುಚ್ಚಿ…? ಕುಲಗೆಟ್ಟರೂ ಸುಖ ಪಡಬೇಕಂತೆ… ವಿವೇಚನೆ ಇಲ್ಲದೆ ನೀನು ಮನೆಬಿಟ್ಟು ಬಂದು ಬಿಟ್ಟರೆ ಪರಿಹಾರ ಸಿಗುತ್ತೆ ಅಂದ್ಕೊಂಡ್ಯಾ…?’ ಆವೇಶಕ್ಕೆ ಒಳಗಾಗದೆ ನಿಧಾನವಾಗಿ ಕೇಳಿದ.

‘ಏಕಿಲ್ಲ ಪರಿಹಾರ. ಇಬ್ಬರಿಗೂ ಬಾಳೋಕೆ ಸಾಧ್ಯವಾಗದಿದ್ರೆ ಸತ್ತು ಒಂದಾಗೋಣ’

‘ಇದೆಲ್ಲಾ ಸಿನಿಮಾ ಡೈಲಾಗ್ ಯೂಸ್‌ಲೆಸಮ್ಮ, ಸಾಯೋರು ಹೇಡಿಗಳು ಪ್ರೇಮಿಗಳಲ್ಲ… ಅಸಲಿಗೆ ನಾವು ಪ್ರೇಮಿಗಳೇ ಅಲ್ಲ. ಹಿರಿಯರು ನೋಡಿದವರನ್ನ ಒಪ್ಪಿ ಮದುವೆಯಾಗೋದೇ ಸೇಫ್ಟಿ… ನಡಿನಡಿ ಮನೆಗೆ ಬಿಟ್ಟು ಬರ್ತಿನಿ’ ರಂಗ ಯಾವ ಉದ್ವೇಗಕ್ಕೂ ಒಳಗಾಗದೆ ಹೇಳಿದಾಗ ಚಿನ್ನು ಬೆಚ್ಚಿಬಿದ್ದಳು. ಅವಳಲ್ಲೀಗ ಅನಾಥ ಪ್ರಜ್ಞೆ.

‘ಅವನು ಹೇಳೋದು ಸರಿಯಮ್ಮ, ನೀವೆಲ್ಲಿ ನಾವೆಲ್ಲಿ? ಆಕಾಶ ಭೂಮಿ ಎಲ್ಲಾರ ಒಂದಾಗೋಕೆ ಸಾಧ್ಯವೆ? ಮನೆಗೆ ಹೋಗುಮಗು’ ಲಾಯರ್ ತೀರ್ಪು ಹೊರಬಿತ್ತು.

‘ಹೌದಮ್ಮ. ಈ ಪ್ರೀತಿಪ್ರೇಮ ಎಲ್ಲಾ ಸಿನಿಮಾದಲ್ಲಿ ನೋಡೋಕ್ ಬೆಸ್ಟು… ಜೀವನದಲ್ಲಿ ವೇಸ್ಟು, ಮೊದಲೇ ರಂಗ ವೇಸ್ಟ್ ಪಾರ್ಟಿ, ಅವನನ್ನ ಮದುವೆ ಆಗಿ ಯಾವ ಸುಖ ಸುರ್‍ಕೋತಿಯಾ… ಹೋಗಿ ಬಾ ನನ್ನಮ್ಮ’ ಪಾರ್ವತಿ ತಿಳಿ ಹೇಳಿದಳು. ಅವರಿಬ್ಬರನ್ನು ಸುಟ್ಟುಬಿಡುವಂತೆ ನೋಡಿದಳು ಚಿನ್ನು.

‘ಅಮ್ಮಾ ನೀವೇನ್ ಹೇಳ್ತಿರಾ?’ ಕಮಲಮ್ಮನ ಕೈಹಿಡಿದಳು ಚಿನ್ನು, ಕಮಲಮ್ಮ ಕ್ಷಣ ಗಲಿಬಿಲಿಗೊಂಡಳು. ನಂತರ ನಿರ್ಲಿಪ್ತರಾಗಿ ಮನದಲ್ಲಿದ್ದುದನ್ನು ಹೇಳಿದಳು. ‘ರಂಗನ ಇಷ್ಟವೇ ನನ್ನಿಷ್ಟ, ಅವನಿಗೆ ನೀನು ಬೇಕಾದರೆ ನಮಗೂ ಬೇಕು’ ಮಾತು ಅಡ್ಡಗೋಡೆಯ ಮೇಲಿಟ್ಟ ದೀಪದಂತೆ ತೋರಿತು ಚಿನ್ನುಗೆ.

‘ಅಮ್ಮಾ, ಇಲ್ಲಿ ಇಷ್ಟ ಅನಿಷ್ಟದ ಪ್ರಶ್ನೆ ಮುಖ್ಯವಾಗೋದಿಲ್ಲಮ್ಮ, ಮುಂದಿನ ಜವಾಬ್ದಾರಿಗಳ ಬಗ್ಗೆ ಯೋಚಿಸಿ ನಿರ್ಧಾರಕ್ಕೆ ಬರಬೇಕಲ್ವೆ…? ಚಿನ್ನು ಸುಖವಾಗಿ ಬೆಳೆದವಳು. ಅವಳು ಸುಖವಾಗಿರ್‍ಬೇಕು. ಅದು ನನ್ನ ಉದ್ದೇಶ. ಪ್ರೀತಿ-ಪ್ರೇಮ ಎಲ್ಲಾ ವಯಸ್ಸಿನ ಹುಡುಗಾಟ’ ರಂಗ ಅಂದ.

‘ನಾನು ಹುಡುಗಾಟ ಆಡೋಳಾಗಿದ್ದರೆ ಇಷ್ಟು ಧೈರ್ಯವಾಗಿ ಮನೆಬಿಟ್ಟು ಬರ್ತಾ ಇರಲಿಲ್ಲ’ ಗಟ್ಟಿಸಿ ವಾದ ಹೂಡಿದಳು ಚಿನ್ನು.

‘ಇದು ಧೈರ್ಯ ಅಲ್ಲ. ಮನೆಯವರನ್ನ ಒಪ್ಪಿಸಿ ಮದುವೆಯಾಗೋದು ಧೈರ್ಯ. ಮನೆಬಿಟ್ಟು ಬರೋದು ಹುಡುಗಾಟವಲ್ದೆ ಮತ್ತೇನು… ನಡಿನಡಿ’

‘ಎಲ್ಲಿಗೆ?’ ಅವನನ್ನು ಸೀಳಿಬಿಡುವಂತೆ ನೋಡಿದಳು ಚಿನ್ನು.

‘ಎಲ್ಲಿಂದ ಬಂದ್ಯೋ ಅಲ್ಲಿಗೆ… ಅಣ್ಣಾ ‘ಕೀ’ ಕೊಡು’ ರಂಗ ಸಿದ್ಧನಾದ. ಗಣೇಶ ಬೀಗದ ಕೈ ಎಸೆದ.

‘ನಾನು ಹೇಗೆ ಬಂದ್ನೋ ಹಾಗೆ ಹೋಗ್ತಿನಿ. ನಿನ್ನ ಸಹಾಯ ನನಗೆ ಬೇಕಿಲ್ಲ… ನೀನು ಪುಕ್ಕಲ ಚೀರಿದಳು ಚಿನ್ನು,

‘ನೀನು ನಮ್ಮ ಮನೆಗೆ ಬಂದಿದೀಯಾ, ಕ್ಷೇಮವಾಗಿ ನಿನ್ನನ್ನ ನಿಮ್ಮ ಮನೆಗೆ ತಲುಪಿಸಬೇಕಾದ್ದು ನನ್ನ ಜವಾಬ್ದಾರಿ… ಬಾ ಭವಾನಿ’ ಅವಳ ಕೈ ಹಿಡಿದು ಒಂದರ್ಥದಲ್ಲಿ ಎಳೆದುಕೊಂಡೇ ಹೊರಟ. ಮನೆಯವರೆಲ್ಲಾ ನಿರಾಳವಾಗಿ ನಿಂತು ನೋಡಿದರು. ನೆರೆಯವರೂ ಇಣುಕಿದರು. ಕಮಲಮ್ಮ ಕಾವೇರಿಯ ಕಣ್ಣುಗಳು ಮಾತ್ರ ತುಂಬಿದ ಕೊಳಗಳಾಗಿದ್ದವು. ಅವರದ್ದು ಮೂಕವೇದನೆ.

‘ಹುಂ… ಹಿಂದುಗಡೆ ಕೂತ್ಕೊ’ ಆಜ್ಞಾಪಿಸಿದ ರಂಗ, ನಿಸ್ತೇಜಳಾದ ಚಿನ್ನು ಇನ್ನು ಮಾತನಾಡಿ ಉಪಯೋಗವಿಲ್ಲವೆಂದು ಬೈಕ್ ಏರಿದಳು. ಮನೆಯಲ್ಲಿ ಏನಾದೀತೆಂಬ ಅಳಕು ಎಳ್ಳಷ್ಟೂ ಅವಳನ್ನು ಕಾಡಲಿಲ್ಲ. ಎಲ್ಲಕ್ಕೂ ಅವಳು ಸಿದ್ಧಳಾಗಿದ್ದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನರ-ವಾನರ
Next post ಹೇಗೆ ಪ್ರೀತಿಸದೆ ಇರಲಿ ಚಂದ್ರನನ್ನು

ಸಣ್ಣ ಕತೆ

 • ಕಳ್ಳನ ಹೃದಯಸ್ಪಂದನ

  ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

 • ಆವರ್ತನೆ

  ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

 • ನಿರೀಕ್ಷೆ

  ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

 • ಪ್ರಕೃತಿಬಲ

  ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

 • ಮೃಗಜಲ

  "People are trying to work towards a good quality of life for tomorrow instead of living for today, for many… Read more…