ಹಸಿದ ಹೊಟ್ಟೆಯ ಹೇರ ಹೊರಲಾರದಿಹ ಜನರ
ಕಾಸಿನಾಸೆಯ ತೋರಿ ಹೇಸಿಗೆಯ ನರಕದಲಿ
ದೂಡಿದುಡಿಸುವ ದುಡ್ಡಿನಪ್ಪಗಳ ವಿಶ್ವವನು,
ನಾಗರಿಕ ಜೀವನದ ಮೇಲ್ಮುಸುಕ ಮರೆಯಲ್ಲಿ
ಬಚ್ಚಿಟ್ಟ ಬ್ರಹ್ಮಾಂಡ ಬಯಲು ಮಾಡಿದ ಬ್ರಹ್ಮ   ೫
ಸಿಂಕ್ಲೇರ ಅಪ್ಟನನೆ ನಿನಗೆ ಜಗ ಚಿರಋಣಿಯು!
ಬಾಳ ಕಗ್ಗಾಡಿನಲಿ ಸಿಕ್ಕಿ ಸೊರಗಿದ ದೀನ
ಕೂಲಿಗಾರನ ಜೀವ-ನೋವು ಕಾವಿನ ಬಾಳು
ಕಾಸುಗಾರನ ಕೈಯ ರಾಕ್ಷಸೀ ಹಿಡಿತದಲಿ
ದಬ್ಬಾಳಿಕೆಯ ಕ್ರೂರಯಂತ್ರದಲಿ ನಶಿಸುತಲಿ   ೧೦
ಅಂಧಕಾರದಿ ಬರಿಯ ಧೂಳಾಗಿ ಬೀಳುವುದ
ತೋರಿಸಿದೆ.  ದೂರದಿಂ ನೋಡಿದೊಡೆ ಕಾರ್ಖಾನೆ
ಬಾಳೂ ಬಲು ಬಲು ಚಂದ, ಕಾಸ ಕೂಡಿಸಬಹುದು
ಎಂಬ ಭ್ರಮೆ ಮುಸುಕುವುದು, ಬೆಳಕಿಲ್ಲೆ ಇಹುದೆಂಬ
ಹಿಗ್ಗಿನಲಿ ಬಂದೊಡನೆ, ಬಯಕೆಗಳು ಬಯಲಾಗಿ   ೧೫
ಎದೆಯೊಡೆದು ನೀರಾಗಿ-ಕತ್ತಲಲಿ ಕುಗ್ಗುವುದು!
ಜೀವ ಮೊದಲಿಂ ತುದಿಗೆ ಮೋಸ, ಮೋಸದಸಂತೆ!
ಕಸವನೇ ರಸವೆಂದು ಮರುಳುಗೊಳಿಸುವ ಜಾಲ!
ಅಮೆರಿಕದ ಜೀವವಿದು!  ಒಳಗನರಿಯದೆ ಬರಿಯ
ಹೊಳೆವ ಹೊರಗನೆ ಕಂಡು ಮುಗ್ಧರಾಗುತ ಓಡಿ   ೨೦
ಸಾರಿ ಬಂದವರೆನಿತು ಜಾರಿಬಿದ್ದರು ಬಲೆಗೆ!
ಕೂಲಿಗಾರನ ಕಷ್ಟ ಬಣ್ಣನೆಯ ಬಣ್ಣಕ್ಕೆ
ನಿಲುಕದಿದೆ.  ಕಲ್ಕೂಡ ಕರಗುವುದು ಕೇಳುತದನು!
ಎಲ್ಲವನು ವರ್ಜಿಸುತ, ಕಷ್ಟಗಳ ಬೆಟ್ಟಗಳ
ಬೆನ್ನ ಮೇಲ್ಹೊರುವುದಕೆ ಸುಖವಿರಹಿ ಬಂದಿಹನು!   ೨೫
ಆವುದನು ಅಮೃತವೆಂದೆಣಿಸಿ ಬಂದಿರ್ದನದೆ
ಸರ್ಪವಿಷ!  ಜೀವನವ-ರಸವನ್ನು-ಕಾವನ್ನು
ಮೆಲ್ಲಮೆಲ್ಲನೆ ಹಿಂಡಿ ಹಿಪ್ಪೆಯಾಗಿಪ ಯಂತ್ರ!
ಕಂಪಸೂಸುವ ಹೂವಹಾರವೆಂದಿರ್ದುದದು
ಫೂತ್ಕಾರ ಮಾಡುತಿಹ ಉರಿವ ಹಾವಿನ ಹೆಡೆಯು!   ೩೦
ಬಂಡವಾಳದ ಬಾಳು!  ಮೊದಲಿನಿಂ ಕೊನೆವರೆಗು
-ಕಾರ್ಖಾನೆ, ಸಹಕಾರ ಸಂಘಗಳು, ಸರ್ಕಾರ-
ಎಲ್ಲ ಮೋಸದ ಬೀಡು!  ಮೋಸವೇ ಉಸಿರವಕೆ!
ಮೇಲ್ಮಾತ್ರ ಬಲು ಚೆನ್ನ!  ಮನಸೆಳೆವ ಮುಗ್ಧಬಗೆ!
ದೂರದಿಂ ನೋಡುತಲೆ ಹೃದಯ ಸಾರುವುದಲ್ಲಿ!   ೩೫
ಬಳಿಗೆ ಸಾರುತಲೊಮ್ಮೆ ಬಿದ್ದರಾಯಿತು ಬಲೆಗೆ,
ಹೊಂಡದಿಂ ಹೊರಬೀಳ್ವ ಆಸೆ ಬರಿ ಹುಡಿಗನಸು!
ಸುತ್ತೆಲ್ಲ ಹಸುರುವನ-ಒಳಗೆ ಗಾಢಾಂಧತೆಯು
ಮುಸುಕಿರುವ ಹೆಗ್ಗವಿಯು! – ಜೀವ ಬರಿ ಕಗ್ಗಾಡು!
ಕಗ್ಗಾಡು! ಗಾಢಾಂಧ!  ಕರೆದೊಯ್ಯುವವರಿಲ್ಲ!   ೪೦
ನೂರಾರು ಕವಲುಗಳು-ಎಲ್ಲ ಒಂದೆಡೆಗೇ!
ದಾರಿಯರಿಯದು, ವೇಳೆಯರಿಯದೆಯೆ ಮುನ್ನಡೆದು,
ಕಾದು ಕುಳಿತಿಹ ಕ್ರೂರ ಧನಪ್ರೇತಗಳ ಬಾಯ್ಗೆ
ತುತ್ತಾಗಿ, ತೊತ್ತಾಗಿ, ಸಾಯುವುದು!  ಕೂಲಿಗಳ
ಜೀವನಕೆ ಬೆಳಕಿಲ್ಲ! ಗಾಢಾಂಧತೆಯ ಬೀಡು!   ೪೫
ಅಂತಾರದರಿದರಿಂದ ಕೂಲಿಗಾರಗೆ ಮುಕ್ತಿ
ದೊರೆಯದೇ?  ಕನಸುಗಳ ಬಯಕೆಗಳ ಬಸಿರಿನಲೆ
ಬಡಿದು ಕೊಲ್ಲುವುದೇನು?  ಬೇರೇನು ಗತಿಯಿಲ್ಲ!
ಬಂಡವಾಳದ ಹಿಡಿತ ಬಲು ಭದ್ರ-ಜಗವೆಲ್ಲ
ಕಾಸಿಗೊಡೆಯರ ಕೈಲಿ ನಶಿಸಿಹೋಗುತಲಿಹುದು!   ೫೦
ದುಡ್ಡಿನಲ್ಲಿದೆ ಜೀವ! ದುಡ್ಡಿನಿಂದಲೆ ಜೀವ!
ಉಳಿದಿಹುದು ಏನೆಮಗೆ?  ಕೂಲಿಗಾರರಿಗೇನು?
ದುಡಿದು ದುಡಿದೂ ಇಂತೆ ಮಡಿಯುವುದೆ ಫಲವೇನು?
ಕಗ್ಗಾಡಿನಂಧತೆಯ ಬೆಳಗಿ ದಾರಿಯತೋರ್ವ
ಕಿರಣವೆಮಗಿಲ್ಲವೇ?- ಆಸೆಯಿದೆ! ಧೈರ್ಯವಿದೆ!   ೫೫
ಬಂಡವಲದಂಗಾಂಗ ಛಿದ್ರಛಿದ್ರವ ಮಾಡಿ
ಕಿತ್ತೊಗೆದು, ಕೂಲಿಗಳ ಜೀವ ಸವಿಯಾಗಿಪುದು
ಕಗ್ಗಾಡ ಬೆಳಗಿಸುವ ಕಿರಣ ಹೊರಹೊಮ್ಮುತಿದೆ
ಕೂಲಿಗಾರರ ಶಕ್ತಿ! ಸಾಮ್ಯವಾದದ ಕತ್ತಿ
ಸಾಮ್ಯವಾದವದೊಂದೆ ಶತ್ರುವಿಗೆ ಹಿರಿಮದ್ದು!   ೬೦
ಸಾಮ್ಯವಾದವದೊಂದೆ ಶತ್ರಿವಿಗೆ ಸಿಡಿಮದ್ದು!
“ಎಮ್ಮದಾಯ್ತು ಚಿಕಾಗೊ! ಎಮ್ಮದಾಯ್ತು ಚಿಕಾಗೊ!”
ಎಂಬ ಕೊನೆಯಾಕೂಗು ಬಂಡವಲದೆದೆ ಒಡೆದು
ದಿಕ್ಕುದಿಕ್ಕುಗಳಲ್ಲಿ ಮೊಳಗುವುದು – ಗುಡುಗುವುದು!
“ಎಮ್ಮದಾಯ್ತು ಚಿಕಾಗೊ!” ಕೂಗು ಬದಲಿಸುತಿಂದು   ೬೫
ಕೂಲಿಗಾರರ ಕೊರಳಿನಿಂದಿಂತು ಹೊರಡುತಿದೆ!
“ವಿಶ್ವವೇ ನಮ್ಮದಿದೆ, ನಮ್ಮ ಹಕ್ಕಿದು ವಿಶ್ವ!
ವಿಶ್ವ ನಮ್ಮದೆ ಅಹುದು! ನಮ್ಮದಾಯ್ತೀ ವಿಶ್ವ!”   ೬೮

“ದಿ ಜಂಗಲ್” ಕಾದಂಬರಿಯನ್ನು ಓದಿದಮೇಲೆ ಬರೆದುದು.
*****