ಚಿತ್ರಗಳೆಲ್ಲಾ ಒಂದೇ ಚೌಕಟ್ಟಿಗೆ
ಹೊಂದಿಕೊಳ್ಳುವಂತಿದ್ದರೆ
ಈಟಿ ಬಿಲ್ಲುಗಳು ಸೆಟೆದುಕೊಳ್ಳದಿದ್ದರೆ
ಮಲ್ಲಿಗೆಯ ಮಂಪರೇ
ನೆಲಮುಗಿಲ ಹಬ್ಬಿನಿಂತಿದ್ದರೆ,
ಹೀಗೆಲ್ಲ ಆಗುವಂತಿದ್ದರೆ,

ಕನಸುಗಳ ಜೀವ ಚಿಗುತುಕೊಳ್ಳುವುದೇ
ಹಾಗೆ
ಗಾಜು ಗುಜ್ಜಿನ ಬೆಳಕಿಗಿಂತ
ಹನಿ ಬಿಂದು ಮಣ್ಣಿನೆಲದ
ಕಣಕಣ ವ್ಯಾಮೋಹಿಸಿಬಿಡುತ್ತದೆ.
ದಿನಕಳೆದಂತೆಲ್ಲಾ ಬೆಳಕು ಹಿಗ್ಗುತ್ತಲೇ
ಬಯಲ ಬಿದಿರು ಬಿಮ್ಮನೆ
ಆಗಸಕ್ಕೆ ಏಣಿಯಾಗುತ್ತದೆ.
ಆಶೆ ಸ್ಥಾವರದ ದಿಕ್ಕಿನೆಡೆಗೆ ಸಣ್ಣ ನೋಟ
ಚಿಮುಕಿಸಿದರೂ ಸಾಕು
ತುಂಡು ತುಂಡು ನಕ್ಷತ್ರಗಳು
ಫಳ್ಳನೆ ಹೊಳೆದಂತಾಗುವುದು. ಆ
ನಕ್ಷತ್ರಗಳೇ ನಾವಾಗುವಂತಿದ್ದರೆ,

ಢಂಬ ಬದುಕಿನ ತುಂಬಾ
ಚಕಮಕಿ ಚೆಲ್ಲಿ ಬಿದ್ದರೂ ಜೀವ ತಹತಹ
ಅದೇಕೋ ನಿಲ್ಲುವುದೇ ಇಲ್ಲ
ನಾದದ ತಂಬೂರಿ ಮೀಟಿದಂತೆಲ್ಲಾ
ದಣಿವು ದುಮ್ಮಾನ ಬದಿಗೊತ್ತಿ
ಮಿಡುಕುವ ಮನಗಳು
ಉಕ್ಕಿದ ತೆನೆಗಳ ಬಳುಕಾಟಕ್ಕೆ
ಹೊಸೆದುಕೊಂಡರೆ
ಉದ್ದಕ್ಕೂ ಹಾಸಿ ಬೀಸುವ
ಮಲಯಪರ್ವತದ
ಕುಳಿರ್‍ಗಾಳಿ ಎದೆಯನ್ನೆ ಪುಷ್ಪವಾಗಿಸುತ್ತದೆ.
ಪುಷ್ಪವೇ ನಾವಾಗುವಂತಿದ್ದರೆ,

ನಾಳೆ ಬೀಳುವ ಎಲೆಗೂ ಗಾಳಿ
ಕುಲುಕಿಸಿ ಮೋಡಿ, ಮಗುವಿನ
ಕಿಲಕಿಲ ನಗು ಬೊಚ್ಚು ಬಾಯಿಯಲ್ಲೂ
ಮುದ್ದಾದ ಮಲ್ಲಿಗೆಯನ್ನೆ ಅರಳಿಸಿಬಿಡುತ್ತದೆ.
ಹಸಿರ ಕನಸೇ ಹಾಗೆ
ಕದಪು ಕೆಂದಾವರೆಯಾಗಿ ವಿನ್ಯಾಸಗೊಳ್ಳುತ್ತದೆ
ಮಣ್ಣೊಳಗೆ ಹೂಳಿದರೂ ಬೀಜ
ಚಿಗುರಾಗಿ ಹೊರಗಿಣುಕಿತು.
ಹೊಲದ ಅಂಚಿಗೆ ಅರೆಬರೆಯ ಬದುವು
ಇದ್ದರೂ ಅಂತರ್‍ಗತ ಜಿನುಗು
ಉಕ್ಕಿಸಿ ಬಿಡುತ್ತದೆ ಹಸಿರು
ನಾವೇ ಹಸಿರಾಗುವಂತಿದ್ದರೆ

ಪುಣ್ಯಕೋಟಿಯ ಕೆಚ್ಚಲು ಹಿಗ್ಗಿದಷ್ಟೂ
ಕರುವಷ್ಟೇ ಅಲ್ಲ,
ಕಾಳಿಂಗನ ಕರೆಮೊಗೆಯೂ ಹೀರಿ ಉಕ್ಕಿತು
ಪ್ರೀತಿ ಹೊಳೆವ ತಾರೆ ಹೂ ಹಸಿರು,
ಉಸಿರು ಬಸಿರು
ಪ್ರೀತಿಗೆ ಬೆತ್ತಲಾಗದಿದ್ದರೆ
ಬೆತ್ತಲೆ ಪದವೇ ಬಯಲಲ್ಲಿ ನಿಂತಿತು
ಬಯಲೇ ನಾವಾಗುವಂತಿದ್ದರೆ,
ನಾವೇ ಬಯಲಾದರೆ… ಬೆಳಕಾಗುವಂತಿದ್ದರೆ…
*****

ನಾಗರೇಖಾ ಗಾಂವಕರ