ಪದವ ಬರದುಕೊಟ್ಟೆ ನಿನಗ
ಅದನ್ನರಿತು ಹಾಡುವದು ನಿನ್ನೊಳಗ               ||ಪ||

ಸದಮಲ ಜ್ಞಾನದಿ ಕುದಿಉಕ್ಕಿ ಬರುವಾಗ
ಚದುರನಾದರೆ ತಿಳಿ ಹೃದಯ ಕಮಲದೊಳು
ಪದವ ಬರೆದು…     ||ಅ.ಪ||

ಅಡಿಪ್ರಾಸ ಗುರು ಲಘು ಶೂನ್ಯ ಕಟ್ಟ-
ಕಡೆಯರಡಕ್ಷರ ಕನ್ಯಾ
ಸಡಗರ ತಾಳಲಯಂಗಳ ಕಡೆಗಿಟ್ಟು
ನುಡಿಶಬ್ದ ಗುರವಿನ ಬಿಡದೆ ಭಜಿಸೆಂದು
ಪದವ ಬರೆದು…        ||೧||

ಹಸನಾದೈದಕ್ಷರ ಬಂದು ಅದರಮೃತ
ರಸವನು ಸವಿದು
ವಸುಧೆಯೊಳು ಶಿಶುನಾಳಧೀಶನ ಕರುಣದಿ
ಉಸುರಿದ ಈ ಮಾತು ಹುಸಿಯಲ್ಲ ನೋಡಿಕೋ
ಪದವ ಬರೆದು…       ||೨||

*****