ಸಂಶೋಧನಾ ವಿಹಾರಿ ಪ್ರೊ. ಲಕ್ಷ್ಮಣ ತೆಲಗಾವಿ

ಸಂಶೋಧನಾ ವಿಹಾರಿ ಪ್ರೊ. ಲಕ್ಷ್ಮಣ ತೆಲಗಾವಿ

ಸಭ್ಯ, ಸಜ್ಜನ, ವಿನಯವಂತ, ವಿದ್ವಾಂಸ, ಸ್ನೇಹಮಯಿ, ನಿಗರ್ವಿ, ನಿಷ್ಠಾವಂತ, ಪ್ರಾಮಾಣಿಕ, ಕ್ರಿಯಾಶೀಲ, ಕಾರ್ಯತತ್ಪರ, ಇತಿಹಾಸತಜ್ಞ, ಚಿತ್ರಕಾರ, ಸಂಶೋಧನಾ ವಿಹಾರಿ ಹಾಗೂ ಬ್ರಹ್ಮಚಾರಿ! ಇಷ್ಟೆಲಾ ಗುಣವಾಚಕಗಳನ್ನು ಒಬ್ಬರೇ ಹೊಂದಿರಲು ಸಾಧ್ಯವೆ?

ಸಾಧ್ಯ! ಅವರು ತೆಲಗಾವಿ. ಹಂಪೆಯಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರಾಗಿದ್ದರೂ ಒಲವೆಲ್ಲ ಸಂಶೋಧನೆಯತ್ತ. ದುರ್ಗದ ಇತಿಹಾಸ ಸಂಶೋಧನೆಗಾಗಿ ತಮ್ಮ ಬಾಳನ್ನೇ ಮುಡಿಪಾಗಿಟ್ಟ ಯೋಗಿ, ಕಾವಿತೊಡದ ಸಂನ್ಯಾಸಿ. ಸಂಶೋಧನೆಯ ಗೀಳು ಹಿಡಿದು ಊರೂರು ಅಲೆವ ಜಂಗಮ. ಕ್ಷೇತ್ರ ಪರಿವೀಕ್ಷಣೆಗೆ ಹೆಚ್ಚು ಒತ್ತು ನೀಡುವ ತೆಲಗಾವಿ, ಒಂದೆಡೆ ಕೂತು ಭಾರಿ ಭಾರಿ ಪುಸ್ತಕಗಳನ್ನು ತಿರುವಿ ಹಾಕಿ ಮಾಡುವುದು ಸಂಶೋಧನೆಯಲ್ಲ ಅಕ್ಷರ ಶೋಧನೆ ಎಂದು ದೃಢವಾಗಿ ನಂಬಿದವರು.

ಗಾಳಿ, ಮಳೆ, ಬಿಸಿಲನ್ನು ಲೆಕ್ಕಿಸದೆ ತಿರುಗಾಡಿ ಗುಡ್ಡ – ಬೆಟ್ಟ ಏರಿ ಇಳಿದು, ಹಳ್ಳ – ಕೊಳ್ಳಗಳನ್ನು ದಾಟಿ ಸಿಕ್ಕಿದ್ದನ್ನೇ ಉಂಡು, ಜಾಗ ಸಿಕ್ಕಲ್ಲಿ ರಾತ್ರಿಗಳನ್ನು ಕಳೆವ ವಿಚಿತ್ರ ಪರಿಸರದಲ್ಲಿ ಅಡ್ಡಾಡಿ ನಾವೆಲ್ಲಾ ಊಹಿಸಲಾಗದಂಥ ಗುಹೆಗಳನ್ನು ಹೊಕ್ಕು ಹಳ್ಳಿಗರ ಮನಕ್ಕೆ ಖನ್ನ ಹಾಕಿ ಊರಿನ ಐತಿಹ್ಯ, ಐತಿಹಾಸಿಕ ಅಂಶಗಳನ್ನು ತಿಳಿದು ಕಲೆ ಹಾಕಿ, ಊಹೆಗಳಿಗೂ ಸಹ ಕರಾರುವಾಕ್ ರೂಪ ಕೊಡುವ ಸರಿ ಆಧಾರಗಳನ್ನು ಇತಿಹಾಸ ಪ್ರಿಯರ, ವಿದ್ವಾಂಸರ ಮುಂದಿಡುವ ತಮ್ಮ ತಾಜಾ ಅನುಭವಗಳ ಬಗ್ಗೆ ಪಾಳೇಗಾರರ ಶೋಚಕ ಇತಿಹಾಸದ ಬಗ್ಗೆ, ಸಿಕ್ಕ ಸತ್ಯಾಸತ್ಯ ಮಾಹಿತಿಗಳ ಬಗ್ಗೆ ಅನೇಕ ಲೇಖನಗಳನ್ನು ಬರೆದು, ಹೊತ್ತಿಗೆಗಳನ್ನು ಹೊರತಂದು ಐತಿಹಾಸಿಕ ಚಿತ್ರದುರ್ಗಕ್ಕೆ, ದುರ್ಗದ ಜನತೆಗೆ ನೀಡುತ್ತಿರುವ ಕೊಡುಗೆ ಸಾಮಾನ್ಯವೆನ್ನುವಂತಿಲ್ಲ, ಅದಕ್ಕೆಂದೇ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಸತತ ಅಧ್ಯಯನ, ಕ್ಷೇತ್ರ ಪರಿವೀಕ್ಷಣೆಯಲ್ಲಿಯೇ ತಮ್ಮ ಜೀವನದ ಸಾರ್ಥಕ್ಯವನ್ನು ಕಂಡ ಸಾಧಕನೀತ.

ಚಿತ್ರದುರ್ಗದ ಯುವಕರಲ್ಲಿ ತಮ್ಮೂರಿನ ಇತಿಹಾಸ ಪುರಾತನ ಶಾಸನಗಳ ಪರಿಶೀಲನೆ – ಅವಲೋಕನ, ಅಧ್ಯಯನ ಇವುಗಳ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಲಕ್ಷ್ಮಣ್, ಒಂದು ಸಂಶೋಧನಾ ತಂಡವನ್ನೇ ಕಟ್ಟಿ ಬೆಳೆಸಿದ್ದಾರೆ. ತಂಡದಲ್ಲಿ ಸುಮಾರು ಐವತ್ತು ಜನ ಯುವಕರಿದ್ದಾರೆ. ಪ್ರಾತ್ಯಕ್ಷಿಕ ತರಬೇತಿ ನೀಡುವುದರೊಂದಿಗೆ ಸಂಶೋಧನೆ ಕೂಡ ಕಲೆ, ವಿಜ್ಞಾನ, ಬದುಕಿಗೆ ಹಾಗೂ ಬೌದ್ಧಿಕತೆಗೆ ಎಸೆದ ಸವಾಲು ಎಂಬುದನ್ನು ತಂಡದ ಸದಸ್ಯರಿಗೆ ಮನದಟ್ಟು ಮಾಡಿಕೊಡಲು ಶ್ರಮಿಸುತ್ತಿದ್ದಾರೆ. ತೆಲಗಾವಿಯ ದೇಹ ಹಂಪಿ ವಿಶ್ವವಿದ್ಯಾಲಯದಲ್ಲಿದ್ದರೂ ಮನಸ್ಸು ಮಾತ್ರ ದುರ್ಗದ ಮೇಲುದುರ್ಗದಲ್ಲೇ ವಿಹರಿಸುತ್ತಿರುತ್ತದೆಂಬ ನನ್ನ ಮಾತು ಖಂಡಿತ ಉತ್ಪ್ರೇಕ್ಷೆಯಲ್ಲ. ರಜೆಯಲ್ಲಿ ದುರ್ಗಕ್ಕೆ ಬರುವ ತೆಲಗಾವಿ ಮನೆಯಲ್ಲಿ ಸಿಗುವುದು ಅಪರೂಪ. ಅವರನ್ನು ನೋಡುವ ಅಭಿಲಾಷೆ ಇದ್ದರೆ ಬೆಟ್ಟಗುಡ್ಡಗಳನ್ನು ಹತ್ತಲೇಬೇಕು. ನನ್ನಂಥ ಹಲವು ಮಿತ್ರರಿಗಿದು ಸಿಹಿಯಾದ ಶಿಕ್ಷೆ. ೨೫ ವರ್ಷಗಳಿಂದ ಕೈಗೊಳ್ಳಲಾದ ಈ ಬಗೆಯ ಇತಿಹಾಸ ಶೋಧನೆಗಾಗಿ ಇವರು ಮಾಡಿರುವ ವೆಚ್ಚ ಎರಡು ಲಕ್ಷಗಳನ್ನು ಮೀರುತ್ತದೆ. ಯಾವ ಸಂಸ್ಥೆ ಮತ್ತು ವ್ಯಕ್ತಿಗಳ ನೆರವಿಲ್ಲದೆ ನಡೆಸಿರುವ ಈ ಕಾರ್ಯ ಏಕವ್ಯಕ್ತಿ ಸಾಹಸ ತಂಡದಲ್ಲಿ ವಿವಿಧ ಬಗೆಯ ಕ್ಯಾಮರಾಗಳು, ಮೂವಿ ಕ್ಯಾಮರಾ, ಫೋಟೋ ಪ್ರಿಂಟಿಂಗ್ ಅಂಡ್ ಡೆವಲಪಿಂಗ್ ವ್ಯವಸ್ಥೆ ಇಟ್ಟುಕೊಂಡಿರುವ ಪ್ರೊ. ತೆಲಗಾವಿ ಏಳು ಸಾವಿರಕ್ಕೂ ಅಧಿಕ ಫೋಟೋಗಳನ್ನು ತೆಗೆದಿದ್ದಾರೆ. ಇವರ ಆಸಕ್ತಿ ಕೇವಲ ದುರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ. ಬಳ್ಳಾರಿ, ಹಂಪಿ, ಕೊಪ್ಪಳ, ರಾಯಚೂರು, ಧಾರವಾಡ ಇತ್ಯಾದಿ ಕಡೆಗಳಲ್ಲೂ ತಮ್ಮ ಸಂಶೋಧನಾ ಹೆಜ್ಜೆಗಳನ್ನು ಊರಿದ್ದಾರೆ. ಇದು ಗಮನಾರ್ಹ ಸಂಗತಿ.

ಎಂ.ಎಚ್.ಕೃಷ್ಣ, ಬಿ.ಎಲ್.ರೈಸ್, ಶ್ರೀ ಹುಲ್ಲೂರು ಶ್ರೀನಿವಾಸ ಜೋಯಿಸರ ನಂತರ ದುರ್ಗದ ಇತಿಹಾಸದ ಬಗ್ಗೆ ಬಹಳಷ್ಟು ದುಡಿಯುತ್ತಿರುವವರು ತೆಲಗಾವಿ ಎಂದರೆ ಅತಿಶಯೋಕ್ತಿಯೇನಲ್ಲ. ಕೇವಲ ಇತಿಹಾಸವಲ್ಲ. ಇಲ್ಲಿನ ಪ್ರಾಗೈತಿಹಾಸಿಕ, ರೇಖಾ ಚಿತ್ರಗಳು ಇಲ್ಲಿಯವರೆಗೆ ಪ್ರಕಟವಾದ ಶಾಸನಗಳನ್ನು ಪತ್ತೆ ಹಚ್ಚುವ ಕಾಯಕದಲ್ಲಿ ನಿರತರಾಗಿರುವ ಶ್ರೀಯುತರು ದುರ್ಗದ ಜಲಾಶಯಗಳ ಬಗ್ಗೆ ವಿಶೇಷ ಅಧ್ಯಯನ ನಿರತರಾಗಿದ್ದಾರೆ. ಪ್ರಾಕ್ಚಾರಿತ್ರಿಕ ಮತ್ತು ಚಾರಿತ್ರಿಕ ವಸ್ತುಗಳನ್ನು (ಶಿಲಾಯುಧ, ಮಡಿಕೆ, ಕುಡಿಕೆ, ನಾಣ್ಯ, ಮಣ್ಣಿನ ವಸ್ತು, ಮಣೆ ಹಸ್ತಪ್ರತಿ, ಪತ್ರದಾಖಲೆ ಇತ್ಯಾದಿ) ಹೇರಳವಾಗಿ ಸಂಗ್ರಹಿಸಿದ್ದು ವ್ಯವಸ್ಥಿತವಾಗಿ ಜೋಡಿಸಿಟ್ಟು ಪ್ರದರ್ಶಿಸುವ ಹಂಬಲ ಇವರಿಗಿದೆ. ಸ್ಮಾರಕಗಳ, ಚಿತ್ರ – ವಿಚಿತ್ರ ಬಂಡೆಗಳ, ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಿ ಈವರೆಗಿನ ಮಾಹಿತಿಗಳನ್ನು ಕಂಪ್ಯೂಟರ್ ವ್ಯವಸ್ಥೆಗೆ ಅಳವಡಿಸುವ ಕಾರ್ಯವನ್ನು ಆರಂಭಿಸಿರುವುದು ಅವರ ಕಾಯಕದ ಬಗ್ಗೆ ಅವರಿಗಿರುವ ಗೌರವದ ಪ್ರತೀಕ.

‘ಚಿತ್ರದುರ್ಗದ ನಾಯಕ ಅರಸರು’ ಎಂಬ ಇವರ ಲೇಖನಗಳ ಕಿರುಹೊತ್ತಿಗೆ ನನ್ನಂಥ ಕಾದಂಬರಿಕಾರರಿಗೆ ಐತಿಹಾಸಿಕ ಕೃತಿಗಳನ್ನು ರಚಿಸಲು ಇಂಬು ನೀಡಿದೆ. ‘ಇದು ಚಿತ್ರದುರ್ಗ’ ಎಂಬ ಐತಿಹಾಸಿಕ ಮಹತ್ವಗಳನ್ನೊಳಗೊಂಡ ಕೃತಿ ಹೊರತಂದಿರುವ ಪ್ರೊಫೆಸರ್ (ಇದೀಗ ಪ್ರತಿಗಳು ಮುಗಿದಿದ್ದು ಎಂಟು ಸಾವಿರ ಪ್ರತಿಗಳು ಒಮ್ಮೆಗೇ ಪ್ರಕಟಗೊಂಡು ಹೊರಬರಲಿವೆ). ‘ದುರ್ಗದಲ್ಲೊಂದು ಸುತ್ತು’ ಕೃತಿಯನ್ನು ಮತ್ತು ‘ಚಿನ್ನದ ಗಿರಿ’ ಎಂಬ ಕಾದಂಬರಿಯೊಂದನ್ನು ಸಿದ್ದಪಡಿಸುತ್ತಲಿದ್ದಾರೆ. ಚಿತ್ರದುರ್ಗದಲ್ಲಿ ಇತಿಹಾಸ ಮಂಡಳಿಯೊಂದನ್ನು ೧೯೭೨ರಲ್ಲಿ ಮಿತ್ರರೊಡಗೂಡಿ ಹುಟ್ಟು ಹಾಕಿದ ಇವರು ಜಿಲ್ಲೆಯ ಕುರಿತು ಅರ್ಧ ಡಜನ್ ಪುಸ್ತಕಗಳ ಪ್ರಕಟಣೆಗೆ ಸಹಕರಿಸಿದ್ದಾರೆ. ಶ್ರೀ ಹುಲ್ಲೂರು ಶ್ರೀನಿವಾಸ ಜೋಯಿಸರ ಲೇಖನಗಳು ಭಾಗ – ೧ ಮತ್ತು ಭಾಗ – ೨ ವಿದ್ವಾಂಸರುಗಳ, ವಿಮರ್ಶಕರ ಮೆಚ್ಚುಗೆ ಗಳಿಸಿದ್ದು ಉಲ್ಲೇಖನಾರ್ಹ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಗೌರವ ಕಾರ್ಯದರ್ಶಿಯಾಗಿಯೂ ಶ್ರಮಿಸಿದ ತೆಲಗಾವಿ, ಕರ್ನಾಟಕ ಗೆಜೆಟಿಯರ್ ನಲ್ಲೂ ಸೇವೆಗೈದುದುಂಟು.

ಪ್ರೊ. ತೆಲಗಾವಿಯದು ವರ್ಣರಂಜಿತ ವ್ಯಕ್ತಿತ್ವ ಎಂಬುದನ್ನು ಬಲ್ಲವರು ಕಡಿಮೆ. ಯಾವಾಗಲೂ ಗಂಭೀರ ಮುಖಮುದ್ರೆಯ ಮಿತ ಮಾತಿನ, ಜಿಪುಣನಗೆಯ, ಚೂಪು ನೋಟದ, ಐವತ್ತರ ಹರೆಯದ ಕನ್ನಡಕ ದಾರಿ, ಕುರುಚಲು ಗಡ್ಡದ ಈ ಮನುಷ್ಯನಲ್ಲಿ ಅದೆಂಥ ಕಲಾವಂತಿಕೆ ಅಡಗಿದೆ ಅಂತೆಯೇ ಎಲ್ಲದರ ಬಗ್ಗೆ ಅರಿಯುವ ಅದಮ್ಯ ಉತ್ಸಾಹ ತುಂಬಿದೆ ಎಂಬುದನ್ನು ಅರಿತವರು ವಿರಳ. ಪ್ರೊ. ತೆಲಗಾವಿ ಕೇವಲ ಸಂಶೋಧಕರು ಅಷ್ಟೇ ಅಲ್ಲ, ಚಿಲನಚಿತ್ರಗಳಿಗೆ ಸಹ ನಿರ್ದೆಶಕರಾಗಿಯೂ ದುಡಿದವರು, ‘ಪಯಣಿಗ’, ‘ಕುತೂಹಲ’ ಚಿತ್ರಕ್ಕೆ ಸಹನಿರ್ದೇಶನ ನೀಡಿದ್ದಲ್ಲದೆ, ‘ಕುತೂಹಲ’ ಚಿತ್ರಕ್ಕೆ ಇವರದ್ದೇ ಸಂಭಾಷಣೆ. ‘ಐತಿಹಾಸಿಕ ಚಿತ್ರದುರ್ಗ’ ಎಂಬ ಸಾಕ್ಷ್ಯ ಚಿತ್ರಕ್ಕೆ ನಿರೂಪಣಾ ಸಾಹಿತ್ಯ ಒದಗಿಸಿದ ಇವರದು ಬತ್ತದ ಉತ್ಸಾಹ. ಕಿರುತೆರೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸ್ವಾತಂತ್ರ ಸಮರದಲ್ಲಿ ಹೋರಾಡಿದ ಧೀಮಂತ ಪರಿಚಯ ಮಾಡಿಸುವ ಸುನೀಲ್ ಪುರಾಣಿಕ್ ಅವರ ‘ಚಿರಸ್ಮರಣೆ’ ಎಂಬ ಧಾರಾವಾಹಿಯ ನಿರ್ವಹಣೆಯಲ್ಲಿ ಸಲಹೆಗಾರರಾಗಿ ನಿಂತಿದ್ದಲ್ಲದೆ ಮುಖಕ್ಕೆ ಬಣ್ಣ ಹಚ್ಚಿ ಹಲವು ಬಗೆಯ ಪಾತ್ರಗಳಲ್ಲಿ ಯಶಸ್ವಿಯಾಗಿ ನಟಿಸಿದ್ದು ಕೂಡ ವ್ಯಕ್ತಿ ವೈಶಿಷ್ಟ್ಯ.

ಸದಾ ಚಟುವಟಿಕೆಯ ಚಿಲುಮೆಯಂತಿರುವ ತೆಲಗಾವಿ ತಮ್ಮ ಇಂದಿನ ಯಶಸ್ಸಿಗೆ ಬಿ.ವಿ. ವೈಕುಂಠರಾಜು, ಡಾ. ಎಂ.ವಿ. ಶ್ರೀನಿವಾಸ್, ಡಾ. ಚಿದಾನಂದಮೂರ್ತಿ, ಡಾ. ಹಂಪನಾ, ಡಾ. ಸೂರ್ಯನಾಥ ಕಾಮತ್, ಡಾ. ಚಂದ್ರಶೇಖರ ಕಂಬಾರರಂಥ ಹಿರಿಯರ ಸಹವಾಸವೇ ಕಾರಣವೆಂದು ಸ್ಮರಿಸುವ ಸರಳ ಸಜ್ಜನಿಕೆಯ ಸಂಗಮದಂತಿರುವ ಅಪರೂಪದ ವ್ಯಕ್ತಿ. ದಲಿತನಾಗಿ ಹುಟ್ಟಿ ಕಡುಬಡತನವನ್ನು ಅನುಭವಿಸಿದರೂ ತಮ್ಮ ಸ್ವಾಭಿಮಾನ, ಸ್ವಂತಿಕೆ, ಸ್ವಸಾಮರ್ಥ್ಯ, ಸತತ ಅಧ್ಯಯನ ಶೀಲತೆಯಿಂದ ದುರ್ಗದ ಮನೆಮತಾದ ಶ್ರೀಯುತರು ದಲಿತ ಯುವಕರ ಪಾಲಿಗೆ ಆದರ್ಶವಾಗಬಲ್ಲರು. ಚಿತ್ರದುರ್ಗ ಜಿಲ್ಲೆಯಲ್ಲಿ ಇತಿಹಾಸದ ಎಂ.ಎ. ಮಾಡಿದ ಅದೆಷ್ಟೋ ಜನರಿದ್ದಾರೆ. ಆದರೆ ದುರ್ಗದ ಇತಿಹಾಸವನ್ನೇ ತನ್ನ ದೇಹದ ಒಂದು ಅಂಗವೆಂದು ಭಾವಿಸಿ ಅದರಲ್ಲೇ ಜೀವನದ ಸುಖ ವೈಭೋಗಗಳನ್ನು ಕಂಡು ದುರ್ಗದ ಋಣ ತೀರಿಸಿದವರು ತೆಲಗಾವಿ ಮಾತ್ರ.

ಇಂಥವರನ್ನು ಚಿತ್ರದುರ್ಗ ನಗರಸಭೆಯವರು “ಪೌರ ಸನ್ಮಾನ” ನೀಡಿ ಗೌರವಿಸುತ್ತಿರುವುದು ಅತ್ಯಂತ ಶ್ಲಾಘನೀಯ ಸಂಗತಿ. ತನಗೂ ಕಲೆ ಸಂಸ್ಕೃತಿಯ ಬಗ್ಗೆ ಆಸ್ತೆ ಇದೆ ಎಂಬುದನ್ನು ಈಗಲಾದರೂ ತೋರಿದ ನಗರಸಭೆಯವರು ನಿಜಕ್ಕೂ ಅಭಿನಂದನಾರ್ಹರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೀವಾಗ್ನಿ
Next post ನೀ ಎಳೆ ಬಾಲೆ ನೀರೆ

ಸಣ್ಣ ಕತೆ

 • ಮೌನರಾಗ

  ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

 • ಅವರು ನಮ್ಮವರಲ್ಲ

  ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

 • ಇನ್ನೊಬ್ಬ

  ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

 • ತನ್ನೊಳಗಣ ಕಿಚ್ಚು

  ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

 • ಮಲ್ಲೇಶಿಯ ನಲ್ಲೆಯರು

  ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…