ಬಾರೊ ಬಾರೊ ಮುಗಿಲಿನ ಗೆಳೆಯಾ
ಮಿಠಾಯಿ ಕೊಡುವೆನು ಮಳೆಯಣ್ಣಾ ||

ಅಗಲದ ಮುಗಿಲಲಿ ಹಗಲಿನ ಹೆಗಲಲಿ
ಹಲಿಗೆಯ ಬಾರಿಸಿ ಬಾರಣ್ಣಾ
ಸುಣ್ಣಾ ಬಣ್ಣಾ ಹಣ್ಣಾ ಕೊಡುವೆನು
ಕಳ್ಳೇ ಮಳ್ಳೇ ಕುಣಿಯಣ್ಣಾ

ನೆಲ ನೆಲ ಕಾಯಿತು ಕುಲಿಮೆಯು ಸಿಡಿಯಿತು
ಬೆಂಕಿ ಬಿತ್ತೋ ಮಳೆಯಣ್ಣಾ
ಗೂಡಲಿ ಗುಬ್ಬಿಗೆ ಹನಿಗುಟುಕಿಲ್ಲಾ
ಮರಿಗಳು ಅತ್ತವು ನನ್ನಣ್ಣಾ

ಬಾಬಾ ಭರದಿಂ ತಾತಾ ಕರದಿಂ
ಆಣಿಯ ಕಲ್ಗಳ ತೂರಣ್ಣಾ
ಗುಡುಗುಡು ಗುಡುಗಿಂ ಸಂಚಿಂ ಮಿಂಚಿಂ
ಅತ್ತರ ವಾಸನಿ ಚಿಮ್ಮಣ್ಣಾ

ಮುಗಿಲಿಗೆ ಹಿಡಿಹಿಡಿ ಮಳೆ ಮಳೆ ಚತ್ತರಿ
ಸುತ್ತಲು ಬಿತ್ತಲು ಬೀಳಣ್ಣಾ
ಒಳಗೋ ಹೊರಗೋ ಬೆಳಗೋ ಬೆಳಗೋ
ಬೆಳ್ಳಿಯ ಸಾಗರ ಸುರಿಯಣ್ಣಾ
*****