ಯಾರದು?

ಯಾರದು! ಯಾರದು!! ಯಾರದು ಸೇನೆ?
ಯಾರಿಗೆ ಬಂದಿದೆ ಉಳಿಯದ ಬೇನೆ? ||
ಹಿಮಗಿರಿಗಳ ನಡು ಪರ್ವತಸಾನು
ತೆಪ್ಪಗೆ ಕುಳಿತಿಹನಲ್ಲಿಯೆ ಶಿವನು ||

ಬೆಂಕಿಯ ಕಣ್ಣನು ಅಡಗಿಸಿಕೊಂಡು
ಉಲುಹಿನ ಸುಳುಹನು ಮಡಗಿಸಿಕೊಂಡು ||
ಧ್ಯಾನದ ಮೌನದ ಆಳದ ತಳದಲಿ
ಸುಳಿವವರಾರೀ ರುದ್ರನ ಬಳಿಯಲಿ? ||

ಹುಚ್ಚಿನ ಬೆಚ್ಚಿನ ಹುಳುಗಳ ತಂಡೇ
ಇಲ್ಲಿಯು ನಡೆಸುತ್ತಿರುವುದು ಬಂಡೇ? ||
ಅಲ್ಲಿದೆ ಗಿರಿಜೆಯ ತವರಿನ ತೇಜ
ವಿದ್ಯುತ್ ಸಂಚಿತ ತವಸಿನ ಓಜ ||

ದುರ್‍ಗಾ ಮಾತೆಯ ಮಕ್ಕಳ ನಾಡು
ಭಾರತವೊಂದಿದೆ ಕ್ಷಿತಿಯಲ್ಲಿ ನೋಡು ||
ಷಣ್ಮುಖ ದಳಪತಿ ನವಿಲೇರಿದರೆ
ದಂಡಿನ ಹಿಂಡೇ ನೆರೆವುದು ಬೇರೆ ||

ಹಸಿವೆಯ ಹುಚ್ಚಿನ ಹೊಟ್ಟೆಯ ಕಿಚ್ಚಿಗೆ
ಕದನಕು ಕೃಷಿಹಿತವೆನಿಸಿದೆ ಹೆಚ್ಚಿಗೆ ||
ಹಗೆತನದಲಿ ನಾವ್ ಸಾವುದು ಬೇಡ
ಬದುಕುಳಿದರೆ ಗೆಳೆಗೆಳೆಯರು ನೋಡ ||

ಯಾಕೀ ಸಾವಿಗೆ ಬಲಿಯಾಗುವಿರಿ ?
ಚೀಣರೆ ತೋಲಗಿದರೇ ಬದುಕುವಿರಿ ||
*****

ಚೀನಾ ಆಕ್ರಮಣ ಸಂದರ್ಭದಲ್ಲಿ ರಚಿಸಿದ್ದು

ಕೀಲಿಕರಣ : ಎಂ ಎನ್ ಎಸ್ ರಾವ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಠಾಯಿ ಕೊಡುವೆನು ಮಳೆಯಣ್ಣಾ
Next post ಅಂತೂ ಸಾಹಿತಿಯಾಗಿಬಿಟ್ರಲ್ಲಾ……!

ಸಣ್ಣ ಕತೆ