ಕಂಬನಿಯ ಕಪ್ಪು ಸಮುದ್ರದ ಆಚೆ ಅಗೋ
ಉಪ್ಪು ಹರಳುಗಟ್ಟಲಾರಂಭಿಸಿದೆ
ಪ್ರಾಣಾಯಾಮಕ್ಕೆ ಬಿಗಿ ಹಿಡಿದ ಉಸಿರು
ಈಚೆ ಕಡೆಯಿಂದ ಹೊರ ಜಿಗಿದಿದೆ
ಸ್ಥಿತಪ್ರಜ್ಞೆ ಕಲ್ಲುಬಂಡೆಯ ಕೊರಕು
ಹೂ ಬಿಡಲು ಎದ್ದಿರುವ ಜೀವಕ್ಕೆ
ತಾಯಾಗಿದೆ
ಅವಕಾಶದ ಅವಗೃಹೀತ ಖಾಲಿ ಜಾಗಕ್ಕೆ
ಉಲ್ಕೆಯೊಂದು ಮೇಲೇರಿದೆ
ಮಳೆಗಾಲದ ಕೆಸರಿನ ತುಷಾರ
ಸಿಂಚನ ಗೈದು ಓ-
ಡಿದೆ ವಾಹನ
ಕೊಳಕಾದ ಬಟ್ಟೆಯೊಳಗೆ
ಕೆಂಪಾಗಿ ಕುಪಿಸಿದೆ ಜೀವ
ಚಳಿಯ ಒತ್ತರ ತಾಳಲಾರದೆ ದಮ್ಮು
ಉತ್ತರಾಯಣಕ್ಕೆ ದಿನ ಎಣಿಸಿದೆ
ಸ್ವರ್ಗದ ಬಾಗಿಲು ತೆರಯುವ ಅಮೂರ್ತ ಮುಹೂರ್ತಕ್ಕೆ
ಜೀವ ಜೀವದಲ್ಲಿ ಸ್ವರ ಸಂಚಾರ ಸ್ವರ ಸಂ
ಚಾರ
ನಾನು ಭೌತ ವಿಜ್ಞಾನದ ಹುಡುಗ
ಅಳೆದೇಬಿಡುವೆ ಅದರ
ಕಂಪನ ವಿಸ್ತಾರ
*****
Latest posts by ಚಿಂತಾಮಣಿ ಕೊಡ್ಲೆಕೆರೆ (see all)
- ಈ ಲೋಕ ಎಷ್ಟೊಂದು ಸುಂದರ ! - May 17, 2014
- ನನ್ನ ಹಾದಿ - May 10, 2014
- ದಟ್ಟ ನಗರದ ಈ - June 23, 2013