ಸಮುದ್ರ ಹನಿಗಳು

-೧-
ಸಮುದ್ರ ಅಬ್ಬರಿಸುತ್ತಿದೆ
ಮನಸಿನಂತೆ
ದಂಡೆಗೆ ತಿಳಿದಿದೆ ತಳಮಳ
ನನ್ನವರಿಗೆ?


-೨-
ದಂಡೆಯ ಭಾಷೆ
ಪ್ರೇಮ
ಇಲ್ಲಿ ನಡೆದವರಿಗೆ
ದಂಡೆ ಅರ್ಥವಾಗಿಲ್ಲ
ಕಡಲ ಧ್ವನಿ …..ಕೂಡಾ


-೩-
ದಂಡೆಯಲ್ಲಿ
ಅವರು ಆಗಿನಿಂದಲೂ
ತರ್ಕಿಸುತ್ತಿದ್ದಾರೆ
ಅನುಸಂಧಾನ ಆಗುತ್ತಲೇ ಇಲ್ಲ
ಅಲ್ಲೇ ….ಪಕ್ಕದ
ಮುರಿದ ಹಡಗಿನ ಮೇಲೆ
ಕುಳಿತ ಎರಡು ಹಕ್ಕಿಗಳು
ಮುಸಿ ಮುಸಿ ನಕ್ಕವು


-೪-
ದಂಡೆಯಲ್ಲಿ
ಒಬ್ಬನೇ ಅಲೆಯುತ್ತಿದ್ದೇನೆ
ಗಾಳಿಗೂ
ಕನಿಕರ ಬಂದಿದೆ
ಕಡಲ ಅಲೆ
ಪಾದ ತೊಳೆಯುತ್ತಿದೆ
ಎಲ್ಲಿ ಹೋದೆ ನೀನು?

-೫-
ಕಾಯುತ್ತಲೇ ಇರುತ್ತೇನೆ
ದಂಡೆ ಕಡಲು ಇರುವವರೆಗೆ
ನೀನು ಬರುವ
ಭರವಸೆಯೊಂದಿಗೆ


Previous post ದಕ್ಷಿಣೆ
Next post ಲಕ್ಷಣರೇಖೆ

ಸಣ್ಣ ಕತೆ