ಮರದ ನೆಳಲ ತಂಪಿನಲ್ಲಿ
ಮೆಲ್ಲ ಮೆಲ್ಲನೇರುತಾ
ಗಿರಿಯ ಕಳೆದು ಸಂಜೆಯಲ್ಲಿ
ಕಚನ ಮನದಿ ಬಯಸುತಾ

ನಡೆದಳವಳು ದೇವಯಾನಿ
ಪ್ರಣಯ ಭರದಿ ಕುಗ್ಗುತಾ
ಬಿನದ ಬನದ ನಡುವೆ ನಿಂದು
ಕಣ್ಣನೀರು ಸುರಿಸುತಾ

ಸಂಜೆಗೆಂಪ ತಳಿರುಗೆಂಪ
ತುಟಿಯ ಕೆಂಪು ಮೀರಲು
ಅಲರ ಕಂಸ ಎಲರ ಕಂಪ
ಉಸಿರು ಕಂಪು ಜರಿಯಲು

ತಂಪಿನೆಲರು ಕಂಪಿನೆಲರು
ಮುಂಗುರುಳನು ತಿದ್ದಲು
ಮನದಿ ಪೊಸತು ರಾಗವೇರಿ
ಸುಖಕೆ ಪುಳಕವೇರಲು

ನಡೆದಳಂದು ನಿಂದಳಂದು
ಬೆಚ್ಚನುಸಿರು ಸುಯ್ಯುತಾ
ಕಚನ ನೆನೆದು ನೆನೆದು ಮನದಿ
ವಿರಹದುರಿಯ ತಾಳುತಾ

ಮೆಲ್ಲನೊಂದು ಮುಗಿಲು ಬಂದು
ತನ್ನ ತೋಳಲಪ್ಪಲು
ನಲ್ಲನೆಂದು ದೇವಯಾನಿ
ಹರುಷದಿಂದ ನಿಂದಳು

ಎಳೆಯ ತಳಿರು ಹೊಳೆವ ತಳಿರು
ನುಣ್ಗದಪನು ಚುಂಬಿಸೆ
ಸುಖದ ಭಾವ ಸುಗ್ಗಿ ದೋರಿ
ತಳಿರು ಮುಖದಿ ಬಿಂಬಿಸೆ

ನಡೆದು ಬಳಲಿ ಮರವ ನೆಮ್ಮಿ
ಬನದ ನಡುವೆ ನಿಂದಳು
ಕಚನ ಬರವನೆದುರುನೋಡಿ
ದೃಷ್ಟಿ ದೂರ ನೆಟ್ಟಳು

ಸುಖವು ದುಃಖವೊಂದೆ ಕಾಲ
ದಲ್ಲಿ ಮನದಿ ಮೂಡಲು
ನೋಡಿ ಹಿಗ್ಗಿ ಸುಯ್ಯು ತಗ್ಗಿ
ಕಚನ ಕಡೆಗೆ ನಡೆದಳು.

ಕಚನ ಬಳಿಗೆ ಬಂದು ನಿಂದು
ನಲ್ಮೆ ಕೋಡಿವರಿಯಲು,
ಮುಖವನೆತ್ತಿ ನೋಡಿ ನಾಚಿ
ಮೆಲ್ಲನಿಂತು ನುಡಿದಳು

“ಇಳಿಸು ಹೊರೆಯ ನಿನ್ನ ಹೊರೆಯ
ಎನ್ನ ಮನದ ಹೊರೆಯನು
ದೈತ್ಯರೊಡನೆ ಸೇರಿ ಸೇರಿ
ತಂದೆ ಕಠಿನನಾದನು.

ಇಳಿಸು ಹೊರೆಯ ದೂರವಿಲ್ಲ
ನಾನೆ ಹೊತ್ತು ತರುವೆನು
ನಲ್ಮೆ ನುಡಿಯನಾಡಿ ಪಾಡಿ
ನಿನ್ನ ದಣಿವ ಕಳೆವೆನು.”

ಕಚನು ನಿಂದು ಹೊರೆಯನಿಳಿಸಿ
ನುಡಿದ ದೇವಯಾನಿಯಂ
“ತಾಯೆ ! ನಿನ್ನ ಒಲುಮೆ ಹೆಚ್ಚು
ಇಲ್ಲಿಗೇಕೆ ಬಂದೆಯೌ

ಏಕೆ ಬಂದೆ ತಾಯೆ ನೀನು
ಮನೆಯ ಬಿಟ್ಟು ಕಾಡಿಗೆ
ಕಲ್ಲುಮುಳ್ಳು ಇರುವ ದಾರಿ
ತುಳಿದು ಬಂದೆಯಡವಿಗೆ.

ಕಣ್ಣ ನೀರು ಸುರಿವುದೇಕೆ
ಮನದಿ ದುಃಖವೇತಕೌ
ಆವ ಕಜ್ಜ ನಿನ್ನ ನೀಗ
ಕಾಡಿಗಿಲ್ಲಿ ತಂದಿತೌ.”

‘ತಾಯೆ’ ಮಾತು ಕಿವಿಗೆ ಶೂಲ
ಕಾದ ಸೀಸವಾಗಲು
“ಏನು ಮಾತು ಕಲಿತೆ ನೀನು
ಏನು ಮಾತು!” ಎಂದಳು.

“ಏನು ಕಲಿತರೇನು ಫಲವು
ದೇವಗುರುವ ಪುತ್ರನು
ಕಲಿಯಲಿಲ್ಲ ನಲ್ಮೆವಾತು
ದೇವಯಾನಿ ಕಲಿಪಳು

ಎಳೆಯ ಗರುಕೆ ಸೋಂಪು ಪಾಸು
ಮೇಲೆ ತಳಿರು ತೋರಣ
ಸಂಜೆಗೆಂಪಿನಾರತಿಯಲಿ
ನಲ್ಮೆವಾತು ಕಲಿಪಳು.

ಪ್ರಿಯಳು ಓಪಳೆಂಬ ಮಾತು
ನಿನ್ನ ಲೋಕದಿಲ್ಲವೆ?
ಚನ್ನೆ ರನ್ನೆ ಎಂಬ ಮಾತು
ಅಲ್ಲಿ ನುಡಿವರಿಲ್ಲವೆ?

ಏನು ಲೋಕ ದೇವಲೋಕ !
ಹಿಗ್ಗಿ ಎಲ್ಲ ನುಡಿವರು
ಒಳ್ಳೆ ಮಾತು ನಲ್ಮೆವಾತು
ನುಡಿವ ಜಾಣರಿಲ್ಲವು.

ಬಹಳ ದೂರ ನಡೆದು ಬಂದು
ನಿನ್ನ ಕಾಲು ನೋವುದು
ಕಾಲನೊತ್ತಿ ನೋವು ತೆಗೆದು
ನಲ್ಮೆವಾತು ಕಲಿಪೆನು.”

ಎಂದು ನುಡಿದು ದೇವಯಾನಿ
ಕಚನ ಮುಖವ ನೋಡಲು
ಮೃದು ಮೃಣಾಳ ಬಾಹುವಿಂದ
ಅವನ ಭುಜವ ಸೋಕಲು.

ಕಚನು ಸರಿದು ನುಡಿದ “ತಾಯೆ !
ಕಾಲುಗೀಲು ನೋಯದು.
ಕಾಡುಮೇಡು ತಿರುಗಿ ತಿರುಗಿ
ದಿನವು ಬಳಕೆಯುಂಟದು.”

“ನಿನ್ನ ನೋವು ನಿನಗೆ ಅರಿದು
ನಾನು ಜಾಣೆ ಅರಿವೆನು.
ನಲ್ಮೆ ಕಣ್ಗೆ ಕಾಂಬುದೆಲ್ಲ
ಬರಿಯ ಕಣ್ಗೆ ಕಾಣದು.”

ಎಂದು ನುಡಿಯೆ ದೇವಯಾನಿ
ಕಚನು ಹೊತ್ತು ನೋಡುತ
ನುಡಿದನೊಡನೆ “ನೋಡು ತಾಯೆ,
ಬಂತು ಕಪ್ಪು ಕವಿಯುತ

ಗುರುವು ಕರೆವ ಹೊತ್ತು ಬಂತು
ಮೂಡಿ ಬರುವ ಚಂದ್ರನು
ಹೊತ್ತುಮೀರಿ ಹೋದರಲ್ಲಿ
ಗುರುವು ಕೋಪಗೊಂಬನು.”

“ಎನ್ನಲಿಹುದು ಗುರುವ ಹರಣ
ಮಗಳ ಸುಖವ ಬಯಸುವ
ಎನ್ನ ನಿನ್ನ ಇಲ್ಲಿ ನೋಡೆ
ಮೆಚ್ಚಿಮಿಕ್ಕಿ ಹರಸುವ.

ನಿನ್ನ ನೊಂದು ಕೇಳಲೆಂದು
ಮನವು ತವಕಗೊಳ್ವುದು
ಇತ್ತ ನೋಡಿ ನಾಚದೆನಗೆ
ಮಾರುನುಡಿಯ ಕೊಡುವುದು.

ದೇವಲೋಕದಿರುವರಂತೆ
ರಂಭೆ ಮೇನಕಾದ್ಯರು
ತಮ್ಮ ಚೆಲುವು ಮಿಗಿಲದೆಂದು
ಗರ್ವದಿಂದ ನುಡಿವರು.

ನೀನು ನೋಡಿಯಿರುವುದುಂಟೆ
ಅವರ ರೂಪು ಬೆಡಗನು
ಇಂಥ ಚೆಲುವು ಅವರಲುಂಟೆ
ಕಿವಿಯೊಳುಸಿರು ಕೇಳ್ವೆನು.”

ಎಂದು ನುಡಿದು ದೇವಯಾನಿ
ಕಚನ ಕರವ ಹಿಡಿಯಲು
ಬಿಡಿಸಿಕೊಂಡು ಸರಿದು ದೂರ
ಮೆಲ್ಲನಿಂತು ನುಡಿದನು.

“ಓದು ಕಲಿವ ಹುಡುಗ ನಾನು
ರಂಭೆ ಗಿಂಭೆ ತಿಳಿಯೆನು ;
ಚೆಲುವು ಗಿಲುವು ಎಂದರೇನೋ
ಗುರುವು ತಿಳಿಸಲಿಲ್ಲವು.”

“ಆರು ಬಂದು ತಿಳಿಸಲೇಕೆ
ಕಣ್ಗೆ ಚೆಲುವು ರೂಪನು
ವರುಷ ವರುಷ ತುಂಬಿ ಬರಲು
ತನಗೆ ತಾನೆ ತಿಳಿವುದು.

ದಿನಕೆ ದಿನಕೆ ತಿಳಿವು ತುಂಬಿ
ಮೀನಗಣ್ಣು ಚಲಿಪುದು,
ಚೆಲುವು ಬಲೆಯ ಕಣ್ಣಿನಲ್ಲಿ
ಸಿಕ್ಕಿ ಚಲಿಸದಿರುವುದು.

ನಿನ್ನ ಹಡೆದ ತಾಯಿ ತಂದೆ
ಏನು ನೋಂಪಿ ನೋಂತರೊ
ಇನಿತು ಸುಗುಣ ಇನಿತು ರೂಪು
ನಿನ್ನೊಳೆಂತು ಸೇರಿತೋ !

ನಿನ್ನ ನೆಪದಿ ಮನದಲೊಂದು
ಕಿಚ್ಚು ಉರಿಯುತಿರುವುದು
ನಿನ್ನ ಬಿಟ್ಟು ಜೀವವಿರದು
ನೀನೆ ಪೊರೆಯಬೇಹುದು.

ನಿನ್ನ ಕೊರಳ ಹಾರ ಪದಕ
ಎನ್ನ ನೀನು ಧರಿಪುದು,
ನಿನ್ನ ಮಡದಿ ರನ್ನೆ ಯೆಂದು
ದೇವಲೋಕಕೊಯ್ವುದು.

ನಾನು ನೀನು ಮದುವೆಯಾಗೆ
ಗುರುಗಳವರು ಬೀಗರು.
ದೈತ್ಯ ಗುರುವು ದೇವ ಗುರುವು
ಸೇರಿ ಸಂಧಿಮಾಳ್ಪರು.

ಇಂದಿನಿಂದ ಕಲಹಮಿಲ್ಲ
ದೇವ ದೈತ್ಯ ಜಾತಿಗೆ,
ಮುಂದೆ ಅಣ್ಣ ತಮ್ಮ ಎಂದು
ಪ್ರೇಮದಿಂದ ಸೇರುಗೆ.”

ಇಂತು ನುಡಿಯೆ ದೇವಯಾನಿ
ಕಚನು ಎದ್ದು ನಿಂದನು.
“ಏಳು ತಾಯೆ, ಗುರು ಕುಮಾರಿ
ನಿನಗೆ ಕೈಯ ಮುಗಿವೆನು.

ಧರ್ಮವನ್ನು ನೀನು ಬಲ್ಲೆ
ಗುರುವು ಎನಗೆ ಪಿತನಲೆ
ಪಿತನ ಮಗಳು ಎನ್ನ ತಂಗಿ
ಜಾಣೆ ನೀನು ತಿಳಿಯದೆ.”

ಎನಲು ಕಚನು, ದೇವಯಾನಿ
ಕಣ್ಣನೀರು ಸುರಿದಳು
“ಜಾಣತನದ ಮಾತು ಬೇಡ
ಧರ್ಮವನ್ನು ಬಲ್ಲೆನು.

ಹೆಣ್ಣು ಕೊಟ್ಟ ಮಾವನೊಬ್ಬ
ತಂದೆಯೆಂಬರಲ್ಲವೆ
ತಂದೆಯೆಂದರರ್ಥವೇನು
ಜಾಣ ನಿನಗೆ ತಿಳಿಯದೆ.

ನೀನೆ ಎನ್ನ ಜೀವಮಣಿಯು
ನೀನೆ ಎನ್ನ ದೈವವು
ಕಂಡ ದಿನವೆ ಮನದಿ ವರಿಸಿ
ನೀನೆ ಪತಿಯದೆಂದೆನು.

ಎನ್ನ ಬಿಟ್ಟು ನೀನು ಪೋಗೆ
ವಿಷವ ಕುಡಿದು ಸಾವೆನೊ
ವಿರಹದುರಿಯ ತಾಳದೀಗ
ಕಮರಿ ಬಿದ್ದು ಸಾವನೋ”

ಎಂದು ನುಡಿದು ದೇವಯಾನಿ
ಬಿಕ್ಕಿ ಅಳುತ ನಿಲ್ಲಲು
ದೈತ್ಯ ಗುರುವು ಎತ್ತಲಿಂದೊ
ಅಲ್ಲಿ ಬಂದು ನಿಲ್ಲಲು

ಕಚನು ನೋಡಿ ದೂರ ಸರಿದು
ಭಯದಿ ಕೈಯ ಮುಗಿದನು
ತಾನು ನಿರಪರಾಧಿಯೆಂದು
ದೃಷ್ಟಿಯಲ್ಲೆ ನುಡಿದನು.

ಒಮ್ಮೆ ಮಗಳ ಒಮ್ಮೆ ಕಚನ
ಗುರುವು ನೋಡಿ ನಿಂದನು,
ತಪದ ಬಲುಮೆ ಮನದ ಒಲುಮೆ
ತೂಗಿ ತೂಗಿ ಸುಯ್ದನು.

ದೇವ ಜಾತಿ ದೈತ್ಯ ಜಾತಿ
ಋಷಿಗಳೆಂಬುದಿಲ್ಲವು
ಹೆಣ್ಣು ಹಡೆದು ಕರಗದಿರುವ
ತಂದೆತಾಯಿಯಿಲ್ಲವು.

ತನ್ನ ಹೃದಯ ಕರಗೆ ನೋಡಿ
ಮಗಳ ಮುಖದ ದೈನ್ಯವಂ
ಕಚನ ಕೈಯಲಿಟ್ಟ ಗುರುವು
ಮಗಳ ಕರಸರೋಜವಂ.

“ಮೆಲ್ಲನಿವಳ ಕರೆದುತಾರ
ಎನ್ನ ಮುದ್ದು ಮಗಳನು
ಇವಳ ಸುಖದಿ ಪೊರೆವ ಭಾರ
ನಿನಗೆ ವಹಿಸಿಕೊಟ್ಟೆನು.”

ಎಂದು ಗುರುವು ಮುಂದೆ ನಡೆಯೆ
ಕೋಕಿಲೊಂದು ಮಂತ್ರ ಪಾಡೆ
ತಾರೆ ಹೂವನೆರಚಿ ಚಂದ್ರ
ಅಮೃತವರ್ಷ ಕರೆದನು.

“ದೇವಯಾನಿ ಪುಣ್ಯಶಾಲಿ
ಬಹಳ ಕಾಲ ಸುಖದಿ ಇರಲಿ”
ಎಂದು ಹರಸಿ ಶುಕಮಹರ್ಷಿ
ನಗುತ ತಪಕೆ ನಡೆದನು.
*****