ಹಳಿಯಬೇಡ ಕಾಮವನ್ನು
ಹಾಗೆ ಹೀಗೆಂದು
ಹಳಿಯುವಂತೆ ಹೆತ್ತ ತಾಯನ್ನೇ
ಹೋಗು ಹೋಗೆಂದು.
ನಿನ್ನನ್ನು ಕರೆಸಿದ್ದು
ಗರ್ಭಕ್ಕೆ ಇರಿಸಿದ್ದು,
ಹೊರಬಂದಮೇಲೂ ಮೈ ಸೇರಿ
ಪರಿಪರಿ ಮೆರೆಸಿದ್ದು
ಸುತ್ತಲ ಬದುಕಲ್ಲಿ ಸರಿಗಮ ಹರಿಸಿ
ಬಾಳೆಲ್ಲ ಪಟ್ಟೆ ಪೀತಾಂಬರ ಎನಿಸಿದ್ದು
ಬೇರಾರೂ ಅಲ್ಲ, ಕಾಮ ;
ಜೀವಕ್ಕೆ ಅವನೇ ಬೇರು
ಅವನೇ ನೀರು
ಆರಿದ ಗಂಟಲಿಗೆ ಇಳಿದ ಸೋಮ.

ಹೇಗೆ ಇಳಿಯುತ್ತಾನೋ ಅನಂಗ
ಮೈಯ ಅಂಗಾಂಗಕ್ಕೆ !
ಹೇಗೆ ತಳಿಯುತ್ತಾನೋ ಎಚ್ಚರ
ಜಡದ ಕಣಕಣಕ್ಕೆ !
ಕಣ್ಣಿಗೆ ಹೆಣ್ಣಾಗಿ
ಜಿಹ್ವೆಗೆ ಹಣ್ಣಾಗಿ
ದನಿಯ ಹದಕ್ಕೆ, ಸ್ಪರ್ಶದ ಮುದಕ್ಕೆ
ಘಮಘಮಿಸುವ ಪರಿಮಳದ ಸಹಸ್ರವಿಧಕ್ಕೆ !
ಹೇಗೆ ಸುತ್ತುತ್ತಾನೋ ಚದುರ
ಬುಗುರಿಗೆ ಹುರಿಯನ್ನು
ಬೀಸಿ ಹೂಡಲು ಆಟದ ಪರಮಪದಕ್ಕೆ !

ಆಹ!
ಹಾಡುವ ಹಕ್ಕಿಯೆ, ಮೋಡವೆ, ಓಡುವ ಮರಿತೊರೆಯೇ,
ಕಾಡುವ ಹೆಣ್ಣೇ, ಪರಿಮಳ ತೀಡುವ ಮಲ್ಲಿಗೆಯೇ,
ಎಳೆಯುವ ಸೆಳವೇ, ಜೀವವ ಸುಲಿಯುವ ಸವಿನೋವೇ,
ಕಾಮಿಸಿ ಮಾತ್ರವೆ ಕಾಣುವ ದರ್ಶನದಾ ಗೆಲುವೇ !

ಕಾಮ ಕರುಣಿಸಿದ ಈ ಲೋಕ
ಸುಖದ ಡೊಡ್ಡ ಕಿಚ್ಚು ;
ಅವನು ಹಚ್ಚಿದ ಈ ಕಿಚ್ಚಿನಲ್ಲಿ
ನನಗೆ ಸದಾ ಬೇಯುವ ಹುಚ್ಚು.
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)