ಅಗೋಚರ

ಹೆಗಲಿಲ್ಲದೆ ಹೊರತ್ತಿದೆ ಆಕಾಶ ಗ್ರಹ ನಕ್ಷತ್ರಗಳನ್ನು ಕೊಡಗಳಿಲ್ಲದೆ ಹೊತ್ತು ತರುತ್ತಿದೆ ಮುಗಿಲು ನೀರನ್ನು ಕಣ್ಣಿಗೆ ಕಾಣದೆ ಪಾಶದ ಕುಣಿಕೆ ಕದ್ದು ಹೋಗುತ್ತಿದೆ ತುಡಿವ ಪ್ರಾಣಗಳನ್ನು *****

ಸ್ವಯಂವರ

ಭೋರ್‍ಗರೆದು ಹರಿಯುತಿದ್ದ ಹರೆಯದ ನೀರು ಕೊಳದಲ್ಲಿ ಮುಳುಗಿ ಮೈ ಮರೆತು ಮಲಗಿ ತಾವರೆಗಳು ಹುಟ್ಟಿ ವಧುಗಳಾಗಿ ಬಿರಿದು ದುಂಬಿಗಳು ಸಾಲು ಕಟ್ಟಿ ವರಗಳಾಗಿ ನೆರೆದು ಸುಂದರ ಸರೋವರ *****

ಯೋಗ

ಕಾರಂಜಿಗಳಲ್ಲಿ ಪುಟಿಯುತ್ತೆ ನಡಿಗಳಲ್ಲಿ ಹರಿಯುತ್ತೆ ಜಲಪಾತಗಳಲ್ಲಿ ಧುಮುಕುತ್ತೆ ಜಲಾಶಯಗಳಲ್ಲಿ ನಿಲ್ಲುತ್ತೆ ಚರಂಡಿಗಳಲ್ಲಿ ನಾರುತ್ತೆ ನೀರು ಆವಿಯಾಗಿ ಆಕಾಶಕ್ಕೆ ಹಾರಿ ಮುಗಿಲಾಗಿ ಪರಿಶುದ್ಧ ಮಗುವಾಗಿ ಮರುಜನ್ಮ ತಾಳಿ ಮಳೆಯಾಗಿ ಭೂಮಿಯ ಮಡಿಲಿಗೆ ಬೀಳುವ ಭಾಗ್ಯ ಎಲ್ಲ...

ಗುಪ್ತ ಜನ್ಯ

ಆಕಾಶ ಬರಿ ಶೂನ್ಯ ಎನ್ನುವುದು ಅಸತ್ಯ ಅಲ್ಲೂ ನಡೆದಿದೆ ಕಣ್ಣಿಗೆ ಕಾಣದ ದಾಂಪತ್ಯ ಇಲ್ಲವಾದರೆ ಮುಗಿಲು ಗುಡುಗು ಮಿಂಚು ನೀರಾಗಿ ಹುಟ್ಟಿ ಸುರಿಯಲು ಹೇಗೆ ತಾನೆ ಸಾಧ್ಯ *****