ಜರಗನಹಳ್ಳಿ ಶಿವಶಂಕರ್‍

ಅಂತರಾಳ

ಬೇಲಿಯ ಮೇಲಿನ ಬಡಕಲು ಬಳ್ಳಿಗಳು ಬಿರಿದು ಹೂಗಳು ಹಡೆದವು ಸೋರೆ ಕುಂಬಳ ಬೆರಗಾಗಿ ಕೊರಗಿ ಬಾಡಿ ಉದುರಿದವು ಬೀಗಿ ನಗುತ್ತಿದ್ದ ಸಂಪಿಗೆ ದಾಸವಾಳ *****

ಉಳಿಕೆ

ಗಿಡ ನನ್ನದು ಮರ ನನ್ನದು ತೋಟ ತೋಪು ಕಾಡು ನನ್ನದು ಎಂದವರ ಕೈಗೆ ಹಿಡಿಯಲು ಸಿಕ್ಕಿದ್ದು ಕೊನೆಗೆ ಒಂದು ಸಣ್ಣ ಊರುಗೋಲು *****

ಆಶಯ

ಬೇಲಿ ಭ್ರಮಿಸುತ್ತೆ ಬೇರ್‍ಪಡಿಸಿದಂತೆ ಮನುಜರನ್ನು ಮನ ಮನೆಗಳನ್ನು ಅವರ ನಾಡನ್ನು ಬಳ್ಳಿ ಹಬ್ಬಿಕೊಳ್ಳುತ್ತೆ ಆಶ್ರಯಿಸಿ ಬೇಲಿಯನ್ನು ಸ್ನೇಹದ ಸೇತುವೆಯಾಗಿ ಹೊಮ್ಮಿಸುತ್ತೆ ಹೂಗಳನ್ನು *****

ಪರಿಣಾಮ

ಹೊಲಸು ನೀರು ಹರಿವ ಕಡೆ ಹಲಸು ಹಣ್ಣಾಗಿ ಊರಿಗೆ ತುಂಬಿತು ಪರಿಮಳ ಗಂಗೆ ತುಂಗೆ ಕಾವೇರಿ ಮಿಂದು ಬಂದರು ಕಳೆದು ಹೋಗಲಿಲ್ಲ ಮನದ ಮಡಿ ಮೈಲಿಗೆ ಆಚಾರ […]

ಕರುಣೆ

ಎಲ್ಲ ಕಾಳುಗಳಲ್ಲಿ ಇರುವುದಿಲ್ಲ ಎಣ್ಣೆ ಎಲ್ಲ ಹಾಲುಗಳಲ್ಲಿ ಬರುವುದಿಲ್ಲ ಬೆಣ್ಣೆ ಹಾಗೆ ಎಲ್ಲ ನೋಟಗಳ ಹಿಂದೆ ಇರುವುದಿಲ್ಲ ಕರುಣೆ *****

ಪ್ರಾಪ್ತಿ

ಬೀಜ ಬಳ್ಳಿಯಾಗಿ ಹರಿದಿ ಬಿರಿವುದು ಮೂರು ತಿಂಗಳಲ್ಲಿ ಹೊರಲಾಗದ ಸೋರೆ ಕುಂಬಳ ಕಾಯಬೇಕು ಹತ್ತಾರು ವರುಷ ಮೆಲ್ಲಲು ಹೆಬ್ಬೆರಳಿನ ಗಾತ್ರದ ನೆಲ್ಲಿ ನೇರಳೆ ಬೇಲ *****

ಅಪ್ಪುಗೆ

ಬಳುಕುವ ಬಳ್ಳಿಗಳಿಗೆ ಕಾಲುಗಳಿಲ್ಲ ಕೈಗಳೂ ಇಲ್ಲ ಆದರೂ ಹತ್ತಿ ಕೂರುತ್ತವೆ ಮರಗಳ ತಲೆ ಮೇಲೆ ಬಿಗಿಯಾಗಿ ತಬ್ಬಿ ಬೀಸುತ್ತವೆ ಅಪ್ಪುಗೆಯ ಬಲೆ *****