ಎಣ್ಣೆ ದೀವಿಗೆ ಹಿಡಿದು ಪಥವನರಸುವ ವೀರ
ತಿಳಿಯಲಾರೆಯಾ ತಿಂಗಳನ ಬೆಳಕು ?
ಸವಿಯ ತಂಗಿರಣ ಛಾಯೆಗಂಜಿಹುದು ತಿಮಿರ !
ಬಾ ಇಲ್ಲಿ ಕಂಡಿಹುದು ದಿವ್ಯ ಬೆಳಕು!

ಭಕ್ತಿ ಬಾನಿನ ತಿಲಕ ಚಂದಿರನು ಬಸವಣ್ಣ
ಆ ಶರಣ ಸಾತ್ವಿಕತೆಯ ಸವಿಯ ಬಾ
ಲಾಸ್ಯ ಲಾವಣ್ಯದ ಲೀಲಾ ಬಲೆಗೆ ನೀನು
ಬಲಿಯಾಗದೇ ಭಾಗ್ಯವರಸ ಬಾ

ಮಿಂಚಿ ಬಂದಿಹವು ಮಾಯಜಾಲದ ಹಕ್ಕಿಗಳು
ಬಣ್ಣ ಬಲುಚಂದ; ನಾದ ಅಂದ
ಹಿಡಿಯಲೆಳಸಿ ಬೆಂಬತ್ತಿದೊಡೆ ಬಾಳು ಹಾಳು
ಕೇಳಿ ತಿಳಿದೇಳು ಶರಣರಿಂದ

ಶ್ಯಾಮವರ್ಣದ ಮಾಯ ಮುಗಿಲಿನಲಿ ಮಿಂಚಾಗಿ
ಚಿಮ್ಮಿಯದ್ದಳದೋ ಮಹದೇವಿಯಕ್ಕ
ಕಾರಿರುಳ ಕರಗಿಸಿ ಸಿಡಿವ ಕಡು ಸಿಡಿಲಾಗಿ
ಬಡಿದಳದೋ ಕಾಡಿಗೆ ಎಮ್ಮ ಭಾಗ್ಯದಕ್ಕ

ಸತ್ಯ ಮಿಥ್ಯದ ಘೋರ ರೌದ್ರ ರಣವು
ಬೆಳಕು ಕತ್ತಲೆಯ ವೀರ ಬಣವು
ನಮ್ಮ ಶರಣವೃಂದದ ಭಕ್ತಿ ಕಹಳೆ ಕೂಗಿದವು
ಶರಣರಿಗಿದಿರಾದ ಅಸುರರಿನ್ನಾವು?

ಮೌಡ್ಯ ಜಾಡ್ಯದ ಜಾಲ ಆವರಿಸಿ ನಿಂದಾಗ
ಬಂದರದೋ ಅವತಾರಿ ಅಲ್ಲಮರು
ಕಲ್ಯಾಣ ಮೇಲೆದ್ದು ; ಶೂನ್ಯಸಿಂಹಾಸನ ನಿಂದಾಗ
ಕ್ರೌರ್ಯ ತಿಮಿರದ ರೌದ್ರ ಶಾಂತ ಮಾಡಿದರು

ಸಾಸಿರಕು ಮಿಗಿಲಾದ ಲಿಂಗದೇವನ ದೂತರು
ಬಂದು ನಿಂದಾಗ ಬಸವಳಿದ ನೀನಾರು?
ದಾರಿಯರಿಯದ ನಿನಗೆ ಕಾದುನಿಂದಾಗ ಶರಣರು
ಎಣ್ಣೆದೀವಿಗೆ ಹಿಡಿದ ಧೀರ ಇನ್ನಾರು ?
*****