ಪುಟ್ಟ ಹೃದಯನಾದೊಡೆ ಏನು? ಹರುಷ ಹೊನಲು!
ವಿರಸವರಿಯದ ಸರಸ ಸೊಗಸು ಏನು?
ನಿಮ್ಮ ಜೀವನರಾಗ ಎನಗಿಂತ ಬಲು ಮಿಗಿಲು
ಸುಖಜನ್ಮ ಸಾರ್ಥಕತೆ ನಿಮಗೆ ಏನು?

ಸರ್ರೆಂದು ಬುರ್ರೆಂದು ಹಾರುವಿರಿ! ಎಲ್ಲಿಗೋ ?
ಆಚೆಯಾ ಗಿಡದ ಪಕ್ಕದಾ ಹೊಲಕೋ?
ಗುಡ್ಡದೋರೆ‌ಇಂದಿಳೆವ ತಿಳಿ ಝರಿಯ ಸುಧೆಗೋ ?
ಓ ನಿಮ್ಮ ತಿಳ್ಳಿಯಾಟ ತಿಳಿಯದೇಕೋ!

ಎನಿತು ಸೊಗಸಿನ ಇರವು! ಜೀವ ಪಾವನವು!!
ಅರಮನೆಯ ಆ ವಾಸ ಇದಕೆ ಇನ್ನೇನು?
ಮಾರುತನು ತೂಗುವಾ ಟೊಂಗೆಯೊಳು ನಿಮ್ಮ ಬಿಲವು
ಎತ್ತರದ ಮನೆಯಲ್ಲೂ ನಿಮ್ಮ ಇರವೇನು!

ಚಿಕ್ಕ ಒಡಲಿನ ಮೇಲೆ ಕಿರಿಯ ರೆಕ್ಕೆಗಳಿಹವು
ಏನು ಗಾರುಡಿ! ಅಂದದುಕ್ಕೇನು, ಜಂಭವೇನು!
ಹಾರುತೆ ಗಾಳಿ ಬಯಲೊಳಗೆ ಆಡುವ ನೀವು,
ಸರ್ಗ ಜೀವಿಗೂ ನಿಮಗೂ ಅಂತರವೇನು?

ಮುತ್ತಿನುಂಡೆಯ ಕಾಳೇ ನಿಮ್ಮ ಆಹಾರವು
ಹಾ! ಎನಿತು ಸವಿಯಹುದು ನಿಮ್ಮ ಬಾಳು!
ಹಾಲ್ಗಾಳು-ಸಜ್ಜೆ-ಕಡಲೆ-ಹೆಸರು ನಿಮ್ಮವು
ಈ ಸೃಷ್ಟಿ ಸೌಖ್ಯ ಇನ್ನಾರಿಗೆ ಹೇಳು

ನಿಮ್ಮ ಮೆಲುಧ್ವನಿಯಲಿ ಮೆಲ್ಲುವಿರಿ ಕಾಳನ್ನು
ಗುಬ್ಬಿಗಳೋ ನೀವು ? ಅಬ್ಬ ನಿಜವು!
ತಾಯ ಗುಟುಕಿನ ಕಾಳ್ಗೆ ಬಾಯ್ಗೊಡುವ ಮರಿಯನ್ನು
ನೋಡಬೇಕು; ಕಣ್ಗಳಿಗೆಂತ ನುಣ್ಗಬ್ಬವು!
*****