ಸೃಷ್ಟಿ ಚಿಮ್ಮಿದೇ; ಪಕ್ಕ ಬಡೆದು ಹಾರಿದೆ
ಅತ್ತಲಿತ್ತ ಸುತ್ತು ಓಡಿ ಉಕ್ಕಿ ಹರಿದಿದೆ
ಮೊಗ್ಗೆಯಲ್ಲಿ ನೆಗೆದು ಪಕಳೆರೂಪ ತಾಳಿದೆ
ಅಗ್ಗ ಹುಲ್ಲಿನಲ್ಲಿ ಸಗ್ಗ ಸೊಗವ ತುಂಬಿದೆ
ಭ್ರಮರವಾಗಿ ಬಂದಿದೆ, ಹೂವಾಗಿ ಕರೆದಿದೆ
ಭ್ರಮೆಗೆಟ್ಟು ಭ್ರಮಿಸುವಾ ಕಬ್ಬಿಗನಾಗಿದೆ
ದಿಬ್ಬದಾ ಹುಲ್ಲಲ್ಲಿ ಕಾಲುದಾರಿ ಕೊರೆದಿದೆ
ಅಬ್ಬಾ ! ಅದರ ನೋಟ ಹರುಷ ತರಿಸಿದೆ
ಕೊಳದಲ್ಲಿ ತೆರೆಯಾಗಿ ಮುಂದೆ ನುಗ್ಗಿದೆ
ಹರುಷದಾ ಹೊಳೆಯಾಗಿ ಅಕೋ ಹಿಗ್ಗಿದೆ.
ಸರರಾಣಿ ತಿಲಕವೊಲ್ ಕಮಲಾಗಿ ಎದ್ದಿದೆ
ಕೋಗಿಲೆಯ ಗಾನದಲಿ ಬಲೆಯ ಬೀಸಿದೆ
ಗದ್ದೆಯಾ ಬದುವಿನಲಿ ಹಾವಾಗಿ ಸರಿದಿದೆ
ಗುಡ್ಡದಾ ಎದುರಿನಲಿ ತಗ್ಗಾಗಿ ಉಳಿದಿದೆ
ಟೆಂಗಿನಾ ಗರಿಯೊಳು ಗಾಳ್ಯಾಗಿ ಸುಳಿದಿದೆ
ಮುಳ್ಳಿನಾ ಬೇಲಿಯಲಿ ಬಳ್ಯಾಗಿ ಬೆಳೆದಿದೆ
ಮೋಡ ತೂರಿ ತಂಪು ಮಾಡಿ ಹರುಷ ಗೈದಿದೆ
ಗುಡುಗು ಮಿಂಚು ತಾಳಿ ಚಪ್ಪಾಳೆ ಹೊಯ್ದಿದೆ
ರಫಾ ಧಫಾ ನಿರತರೆಸಿ ಅರಬು ಜೈಸಿದೆ
ಅಪ್ಪಾ! ಅಬ್ಬಾ!! ಸೃಷ್ಟಿ ಸೊಬಗು ಸಗ್ಗವನೆ ಕೊಯ್ಸಿದೆ
ಕವಿಯ ಕಟ್ಟಿ ತಂದು ಕಪಿಯಾಗಿ ಮಾಡಿದೆ
ನಿನ್ನ ಬಲೆ! ಈ ಕಲೆ!! ಎಲೆಲೊ ಬಲೇ ಭಲೇ
ಅಹುದೆಲೋ ನಿನ್ನ ಮಂತ್ರ ಎನ್ನ ಮನ ಕದ್ದಿದೆ
ಎಂಥ ಮಾಟವೆನುತ ನಗಲೂ ಅಳಲೋ ಹೇಳಲೆ
*****