“ಹೌದಲ್ಲ! ಪುಸ್ತಕಕ್ಕೆ ಗೆದ್ದಲ ಹತ್ಯಾಽವು
ಕನ್ನಡ ಬರೆಯೋದು ಓದೋಽದು ಮಾಡೋದಿಲ್ಲ ನೀವು
ಇಂಗ್ಲಿಷ್ ಪುಸ್ತಕ ಪತ್ರಿಕೆ
ಮನಿ ತುಂಬ ಹರಿವಿದ್ದೀರಲ್ಲ!
ನೀವು ಇಂಗ್ಲೀಷಿನವರ
ಸಂಬಂಧಿಕರೇಽನು ಮತ್ತಽ?
ಆರೇ ನಿಮ್ಮ ಟಿ.ವಿ. ಹೊಳ್ಯಾಕತ್ತತ್ಯಲ್ಲ ಎಷ್ಟ.
ಬಿಳಿ ಮಂದಿನ್ನಷ್ಟಽ ನೋಡ್ತಿರೇಽನ
ನಮ್ಮ ದೇಸದಾವ್ರು,
ಕನ್ನಡ ಮಂದಿ ಬರೋದಿಲ್ಲೇನ್ರಿ?
‘ಹೂಂ’
ದೇವ್ರ ದಿಂಡ್ರಗೆ
ಗುಡಿ ಗುಂಡಾರಕ ಹೋಗುದಿಲ್ಲೇಽನು
ಇದೇನು ಪಾರ್ಕು ಗಾರ್ಡನ್ ಅಂತ ಅಡ್ಡಾಡ್ತಿರಲ್ಲ!
ಯಕ್ಕಾಽ, ಚಮಚೆಯಿಂದನ ಊಟ ಮಾಡಿದ್ರ
ಕೈ ಇರೋದು ಯಾತಕ್ಕ”
ಎಂದು ನೂರೆಂಟು ಅಣಕು ಪ್ರಶ್ನೆ ಕೇಳಿ
“ನಮ್ಮ ಕನ್ನಡಾನ ನಮಗ ಛಲೋ ಬಿಡ್ರಿ”
ಅಂದ ಹೋದ ನಮ್ಮ
ಹೊಲದ ಬಸನಿಂಗನ ಮಾತು ಕೇಳಿ
ಯಾವುದಾದರೂ ವಾಟಾಳ್ ಪಕ್ಷನೋ
ಕನ್ನಡ ಚಳುವಳಿ, ಸಂಘರ್ಷ ಪಕ್ಷನೋ
ಸೇರಿ
‘ಕನ್ನಡಾ ಕನ್ನಡಾ’ ಅಂತ
ಚೀರಾಡು ಹಂಗಾಽತ ನನ ಮನಸು
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)