ಈ ಆಗಸ ಈ ತಾರೆ – ಜುಳು
ಜುಳನೆ ಹರಿವ ಜಲಧಾರೆ
ಮುಗಿಲ ಮಲೆಯೆ ಸಾಲೇ-ಆಹಾ
ಯಾರದೊ ಈ ಬಗೆ ಲೀಲೆ!

ಬೆಳಗ ಕಾಯ್ದ ಹಿಮವೋ – ಹಿಮವ
ಮೆಲ್ಲನೆ ನೇಯುವ ತಮವೋ
ತಮವ ಕಳೆದು ಹಿಮ ಓಡಿಸುವ
ಬೆಚ್ಚನೆ ಬಿಸಿಲಿನ ಕ್ರಮವೋ!

ಹೆಣ್ಣಿನ ಕಣ್ಣಿನ ದೀಪ
ಉರಿಸಿದೆ ರೂಪ ಪ್ರತಾಪ
ರೂಪದೀಪದಾಲಾಪದಿ ಪರಿ-
ಮಳಿಸಿದೆ ರಾಗದ ಧೂಪ

ಗಾಳಿಯೆ ಉರಿಯೇ ಜಲವೇ
ನಭವೇ ಅಡಿಗಿಹ ನೆಲವೇ?
ಯಾರು ಮಾಡಿ ಎಸೆದ ಬೊಂಬೆ ನಾವು
ಯಾರದು ಈ ಲೀಲೆ?
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)