ಮಗು,
ನೀನು
ಹುಟ್ಟುವ ಮೊದಲು
ನಾನಿನ್ನು ಹಾಲುಗಲ್ಲದ
ಹುಡುಗಿ!

ಆಡುತ್ತ
ಸಂಜೆಯ ನೆರಳಾಗಿ ಬೆಳೆದೆ
ದಂಡಗೆ
ಮೂಡುವ ಸೂರ್ಯ
ನಿಂತು
ನೋಡಿ ಬೆರಗಾದ
ನಾಚಿ
ಕೆಂಪಾದ

ಒಂದು ದಿನ
‘ದೊಡ್ಡವಳಾದೆ’
ದೇವರ ಹೆಸರಲ್ಲಿ
‘ದಾಸಿಯಾದೆ’.

ಕತ್ತಲಿಗೆ ಸಿಂಗಾರಗೊಂಡು
ಪ್ರತಿದಿನವೂ ಮುತ್ತೈದೆಯಾದೆ
ಮಗು,
ನೀನು ಹುಟ್ಟಿದಾಗ
ತಾಯಿಯಾದೆ

ನೀನೊಮ್ಮೆ
ಶಾಲೆಗೆ ಸೇರುವಾಗ
ಊರು ಮಾತಾಡುವಾಗ
ತಂದೆಯ ಹೆಸರು…?
‘ಅಮ್ಮ’
ಎಂಬೆರಡಕ್ಷರ
‘ಅಪ್ಪ’ನ ಖಾಲಿ ಜಾಗ
ತುಂಬುವುದಿಲ್ಲ

ಮಗು,
ನೀನುಂಡು ಬೆಳೆದ
ಈ ಎದೆಯ ಮೇಲೆ
ಅದೆಷ್ಟು ಕೈಗಳು
ಲೆಕ್ಕ ಹೇಳಲೆ?

ಲೋಕ ಹೇಳುವ ಮಾತು:
‘ತಂದೆ ಯಾರೆಂದು
ತಾಯಿಗಪ್ಟೇ ಗೊತ್ತು’
ನನಗಿನ್ನೂ ತಿಳಿಯದ
ಸತ್ಯ.
*****