ಮೂಢತನವು ಸೇರಿತೇ
ರೂಢೀಶ ನಿನ್ನಗೆ
ಬ್ಯಾಡ ಶಿವನ ಕೂಡ ಹಗೆ ||ಪ||

ಜನನ ಸ್ಥಿತಿ ಸಂಹಾರ ಕರ್ತ
ಘನ ಮಹೇಶನು|
ತಾ ಯಾರಿಗೆ ಸಿಲುಕನು ||೧||

ಮನಕೆ ತಿಳಿಯೋ
ಜನಕ ನಿನ್ನ
ತನುಜೆ ಮಾತನು |
ನಾ ಮುಗಿವೆ ಕೈಯನು ||೨||

ಅದಿ ಅಂತ್ಯವಿಲ್ಲದ
ಪರನಾದ ಭಾವವೋ
ತಿಳಿಯದೋ
ಮಹಿಮವು ||೩||

ವೇದಗಳಿಗೆ ನಿಲುಕದಂಥ
ನಾದ ವಸ್ತುವೋ
ಬಿಡು ನೀನಿನ್ನ
ವೈರವೊ ||೪||

ಬ್ರಹ್ಮ-ವಿಷ್ಣು-ಸಂತರುಗಳು
ಒಮ್ಮೆ ಕಾಣರೋ
ಇನ್ನೂ
ಧ್ಯಾನಿಸುತಲಿಹರೋ ||೫||

ಹಮ್ಮಿದ್ಯಾತಕೆ
ಈ ಯಜ್ಞ
ಸಾಕು ಮಾಡಿನ್ನು
ಕೇಳೆಮ್ಮ ಮಾತನ್ನು ||೬||

ಶಿವನು ಇಲ್ಲದಂಥ ಯಜ್ಞ
ಹವಿಯ(ಸ್ಸು?) ಭಾಗವ
ಮತ್ತಾರು
ಕೊಂಬುವಾ ||೭||

ಭುವನದೊಡೆಯ ಕೇಳೋ
ಬೇಗ ನಡೆಯದ್ಯಾಗವ
ಬಿಡು ಸುಮ್ಮನೆ
ವೈರವ ||೮||

ಇಷ್ಟು ಬಗೆಯ ಬುದ್ದಿ
ಹುಟ್ಟಿತ್ಹೇಗೆ
ಇವನೊಳು
ಬಿಡನೆ ಕೆಟ್ಟತನಗಳು ||೯||

ಸಿಟ್ಟಿನಿಂದ ಹೋಮಗೊಂಡ
ಮೆಟ್ಟಿ ಹಾರಲು
ಸತಿ ತಾ
ನಷ್ಟವಾದಳು ||೧೦||
*****