ಸತ್ಯತೆ

ಸತ್ಯತೆ


ಚಿತ್ರ: ಅಲೆ ಫಾಲಸಂ

ಒಂದು ಸಿಂಹ ಒಂದು ತೋಳ ಹಾಗೂ ಒಂದು ನರಿ ಇವು ಬೇಟೆಯಾಡುತ್ತ ಅರಣ್ಯದಲ್ಲಿ ಕೂಡಿದವು ಅವು ಒಂದು ಕತ್ತೆ ಒಂದು ಚಿಗರಿ ಒಂದು ಮೊಲ ಹೀಗೆ ಮೂರು ಪ್ರಾಣಿಗಳನ್ನು ಹೊಡೆದವು.

ಬೇಟೆಗಳನ್ನು ಮುಂದೆ ಇರಿಸಿಕೊಂಡು ಸಿಂಹವು ತೋಳನಿಗೆ ಅಂದಿತು “ಮಿತ್ರನಾದ ತೋಳಪ್ಪಾ ಈ ಬೇಟೆಗಳ ಹಂಚುಪಾಲನ್ನು ಯಾವ ಪ್ರಕಾರ ಮಾಡಬೇಕು ಹೇಳಲಾ!”

ತೋಳನು ಮರುನುಡಿಯುತು- “ಈ ಮೂರು ಪಶುಗಳನ್ನು ಕಡಿದು ಕತ್ತರಿಸುವ ಕಾರಣವಿಲ್ಲ. ನೀವು ಕತ್ತೆಯನ್ನು ತೆಗೆದುಕೊಳ್ಳಿರಿ ನರಿಯು ಮೊಲವನ್ನು ತಕ್ಕೊಳ್ಳಲಿ ಮತ್ತು ನಾನಾದರೋ ಚಿಗರಿಯಿಂದಲೇ ಸಂತುಷ್ಟನಾಗುವೆನು.”

ಈ ಮಾತಿನ ಉತ್ತರದಲ್ಲಿ ಸಿಂಹವು ಒಂದು ಸಿಟ್ಟತುಂಬಿದ ಗರ್ಜನೆ ಮಾಡಿತು. ಹಾಗೂ ತೋಳನ ಸಲಹೆಗೆ ಒಪ್ಪಿಗೆಯಿಲ್ಲವೆನ್ನುವಂತೆ ಪಂಜರದ ಒಂದೇಟನಿಂದ ಅದರ ಕುತ್ತಿಗೆ ಹಿಸುಕಿತು. ಬಳಿಕ ಅದು ನರಿಯ ಕಡೆಗೆ ಹೊರಳಿ ನುಡಿಯಿತು.-

“ಇನ್ನು ನನ್ನ ಪ್ರೀತಿಯ ತಂಗಿಯಾದ ನರಿಯಕ್ಕಾ ನಿನ್ನ ಅಭಿಪ್ರಾಯವೇನು?”

ಇದೇನೋ ಬಹಳ ನೇರವಾದ ಮಾತಿದೆ ಶ್ರೀಮಂತರೇ! ಎನ್ನುತ್ತ ನರಿಯು ಒಂದು ಉದ್ದವಾಗಿ ದಂಡನಮಸ್ಕಾರ ಮಾಡಿ ಹೇಳಿತು- “ನಾಳಿನ ಬೆಳಗಿನೂಟಕ್ಕೆ ನೀವು ಕತ್ತೆಯನ್ನು ಉಪಯೋಗಿಸಿರಿ. ಹಾಗೂ ಚಿಗರಿಯನ್ನು ಸಂಜೆಯೂಟಕ್ಕೆ ಇಟ್ಟುಕೊಳ್ಳಿರಿ. ಇನ್ನುಳಿದ ಮೊಲವನ್ನು ಎರಡು ಊಟಗಳ ನಡುವೆ ತಿಂದು ನೀರು ಕುಡಿಯುಲು ತಕ್ಕೊಳ್ಳಿರಿ.”

“ಬಹಳ ಒಳ್ಳೆದು” ಎಲ್ಲಕ್ಕೆಲ್ಲಾ ಬೇಟೆಗಳು ತನಗೊಬ್ಬನಿಗೇ ಸಿಗುವುದನ್ನು ಕಂಡು ಸಿಂಹವು ಸಂತೋಷಪಟ್ಟು ನುಡಿಯಿತು- “ಭಾಪು! ಇಂಥ ಬುದ್ಧಿ ವಂತಿಕೆಯ ಹಾಗೂ ನ್ಯಾಯಪ್ರಿಯತೆಯ ಮಾತುಗಳನ್ನು ನುಡಿಯುಲು ನೀನು ಯಾರಿಂದ ಕಲಿತಿರುವಿ?”

“ತೋಳನಿಂದ” ಎಂದು ನರಿಯು ಚಾತುರ್ಯಪೂರ್ವಕವಾಗಿ ಉತ್ತರ ಕೊಟ್ಟಿತು. ನರಿಯು ಹೀಗೆ ನುಡಿದ ಕಾರಣವೇನು? ಅದು ತನ್ನ ಸತ್ಯ ಭಾವನೆಯನ್ನು ವ್ಯಕ್ತಮಾಡಿತೇ? ಇಲ್ಲ. ವಾಕುಲವೂ ಆಗಿರಲಿಲ್ಲ. ಹಾಗಾದರೆ ಆ ಸಿಂಹವನ್ನು ಸಂತುಷ್ಟಗೊಳಿಸುವ ಸತ್ಯವಾದ ಅಭಿಲಾಷೆಯನ್ನು ಇಟ್ಟಕೊಂಡಿದ್ದಿತೇ? ಅದೂ ಇಲ್ಲ. ಅದು ಭಯವಶವಾಗಿಯೇ ಹಾಗೆ ನುಡಿಯಿತು. ಹಾಗೂ ಆ ಕಾರಣದಿಂದಲೇ ಸ್ಪಷ್ಟವಾಗಿ ಒಳಿತು-ಕೆಡಕು ಎನ್ನಲಿಕ್ಕಾಗಲಿಲ್ಲ. ಆದರೆ ಅದರ ಹೇಳಿಕೆಯು ಸತ್ಯವಾಗಿರಲಿಲ್ಲವೆಂದೇ ಒಪ್ಪಿಕೊಳ್ಳಬೇಕಾಗುವದು. ಅದೂ ಕೇವಲ ಅದರ ಚಾತುರ್ಯವೇ ಆಗಿತ್ತು. ಮತ್ತು ಸಿಂಹವು ಸಹ ನರಿಯು ನಿರ್ಣಯಿಸಿದ್ದನ್ನೇ ಸರಿಯೆಂದ ಕಾರಣವೇನಂದರೆ-ಅದಕ್ಕೆ ಮಾಂಸದ ಮೇಲೆ ಪ್ರೀತಿಯಿತ್ತು. ಸತ್ಯಕ್ಕಾಗಿ ಅಲ್ಲ.

  • * * *

ಅಬು ಅಬ್ಬಾಸ ಎಂಬ ಹೆಸರಿನ ಒಬ್ಬ ಮುಸಲ್ಮಾನ ಲೇಖಕನು ರಾಜಾ ಸುಲೇಮಾನನ ಕೀರ್ತಿಕಥೆಯನ್ನು ಬರೆದಿದ್ದಾನೆ. ಆ ರಾಜನು ಯಹುದಿಯರ ಪವಿತ್ರನಗರವಾದ ಜರೂಸಲೇಮವನ್ನು ಆಳುತ್ತಿದ್ದನು. ಅವನ ಆಸ್ಥಾನ ಗೃಹದಲ್ಲಿ ಆರುನೂರು ಆಸನಗಳಿದ್ದವು. ಮುನ್ನೂರು ಆಸನಗಳ ಮೇಲೆ ಆಸ್ಥಾನ ಪಂಡಿತರು ಕುಳಿತಿದ್ದರು. ಹಾಗೂ ಇನ್ನುಳಿದ ಮುನ್ನೂರರ ಮೇಲೆ ವೇತಾಳದವರು ಆ ವೇತಾಳದವರು ತಮ್ಮ ರೌಳಿಯ ಬಲದಿಂದ ರಾಜನಿಗೆ ರಾಜ್ಯಕಾರ್ಯದಲ್ಲಿ ಸಹಾಯ ಮಾಡುತ್ತಿದ್ದರು.

ರಾಜನ ಒಂದು ಶಬ್ದದಿಂದ ಸಾವಿರಾರು ದೊಡ್ಡ ದೊಡ್ಡ ಪಕ್ಷಿಗಳು ಪ್ರಚಾರ ಕಾರ್ಯವನ್ನು ಮಾಡುತ್ತಿದ್ದವು. ಹಾಗೂ ಆ ಆರುನೂರು ಕೂಡು ಮಣೆಗಳ ಮೇಲೆ ಕುಳಿತ ಜನರ ಮೇಲೆ ತಮ್ಮ ನೆರಳು ಹರಹುತ್ತಿದ್ದವು. ಅವನ ಅಪ್ಪಣೆಯಂತೆಯೇ ಪ್ರತಿದಿವಸ ಮುಂಜಾನೆ ಹಾಗೂ ಸಂಜೆಗೆ ಒಂದು ಪ್ರತಾಪಯುಕ್ತವಾದ ವಾಯುವು ಸುಳಿಯುತ್ತಿದ್ದಿತು. ಅದು ಇಡಿಗೆ ಇಡಿಯು ಮಂದಿರವನ್ನೂ ನಿಮಿಷದಲ್ಲಿ ಅದೆಷ್ಟು ದೂರ ತೆಗೆದುಕೊಂಡು ಹೋಗುತ್ತಿದ್ದಿತೆಂದರೆ ಅಲ್ಲಿಗೆ ಹಾಗೇ ತಲಪುವುದಕ್ಕೆ ಒಂದು ತಿಂಗಳು ಹಿಡಿಯುತ್ತದೆ. ಈ ಪ್ರಕಾರ ರಾಜನು ತನ್ನ ರಾಜ್ಯಕ್ಕೆ ಒಳಪಟ್ಟ ದೂರದೇಶಗಳನ್ನು ಆಳುತ್ತಿದ್ದನು. ಇದರ ಹೊರತಾಗಿ ಸುಲೇಮಾನನು ಒಂದು ಅದೆಂಥ ಚಮತ್ಕಾರಿಕವಾದ ಸಿಂಹಾಸನವನ್ನು ರಚಿಸಿಕೊಂಡಿದ್ದನೆಂದರೆ – ಅದು ಯಾರ ಕಲ್ಪನೆಯಲ್ಲಿಯೂ ಬರಲಿಕ್ಕೆ ಶಕ್ಯವಿಲ್ಲ. ಆ ಸಿಂಹಾಸನವನ್ನು ಹೇಗೆ ರಚಿಸಿಕೊಂಡಿದ್ದನೆಂದರೆ-ರಾಜನು ಅದರ ಮೇಲೆ ಕುಳಿತುಕೊಂಡಾಗ ಅವನ ಮುಂದೆ ಯಾವ ವ್ಯಕ್ತಿಯೂ ಸುಳ್ಳು ಹೇಳುವ ಸಾಹಸ ಮಾಡಿದ್ದು ಕಂಡಿಲ್ಲ.

ಅದು ಆನೆಯ ಹಲ್ಲಿನದು ಅದರಲ್ಲಿ ಮುತ್ತು ಪಚ್ಚೆ ಮಾಣಿಕಗಳನ್ನು ಕೆಚ್ಚಿದ್ದರು. ಅದರ ನಾಲ್ಕೂ ಮಗ್ಗಲು ನಾಲ್ಕು ಬಂಗಾರದಿಂದ ಮಾಡಿದ ಕಜ್ಜೂರಿಯ ಗಿಡಗಳಿದ್ದವು. ಅವುಗಳ ಮೇಲೆಯೂ ಪಚ್ಚೆಮಾಣಿಕಗಳ ಹಣ್ಣುಗಳನ್ನು ಬೆಸೆದಿದ್ದರು. ಆ ಕಜ್ಜೂರಿಯ ಗಿಡಗಳೊಳಗಿನ ಎರಡು ತುದಿಗಳ ಮೇಲೆ ಬಂಗಾರದ ಎರಡು ನವಿಲುಗಳು ಕುಳಿತಿದ್ದವು ಹಾಗೂ ಎರಡರ ಮೇಲೆ ಬಂಗಾರದ ಎರಡು ರಣಹದ್ದುಗಳು ಸಿಂಹಾಸನದ ಎರಡೂ ಮಗ್ಗಲು ಎರಡು ಪಚ್ಚ ಕಂಬಗಳ ನಡುವೆ ಎರಡು ಬಂಗಾರದ ಸಿಂಹಗಳು ನಿಂತುಕೊಂಡಿದ್ದವು. ಕಜ್ಜೂರಿಯ ಬೊಡ್ಡಿಯ ಸುತ್ತಲೂ ಬಂಗಾರದ ಒಂದು ದ್ರಾಕ್ಷಿಯ ಬಳ್ಳಿ ಹಬ್ಬಿತು. ಅದಕ್ಕೆ ಮಾಣಿಕದ ದ್ರಾಕ್ಷೆಗಳನ್ನು ಅಂಟಿಸಲಾಗಿತ್ತು.

ಇಜರಾಯಿಲದ ದೊಡ್ಡ ದೊಡ್ಡ ಜನರು ಸುಲೇಮಾನನ ಎಡಗಡೆಯಲ್ಲಿ ಕುಳ್ಳಿರುತ್ತಿದ್ದರು. ಹಾಗೂ ಅವರ ಕೂಡುಮಣೆಗಳು ಬಂಗಾರದವಿದ್ದವು. ವೇತಾಳದವರ ಸ್ಥಾನವು ರಾಜನ ಬಲಗಡೆಯಲ್ಲಿ ಅವರು ಕೂಡುವ ಮಣೆ ಗಳು ಬೆಳ್ಳಿಯವಿದ್ದವು.

ರಾಜನು ತನ್ನ ನಾಯ ವ್ಯವಹಾರವನ್ನು ಮಾಡುತ್ತಿರುವಾಗ ಯಾರು ಬೇಕಾದವರು ಅವನ ಬಳಿಯಲ್ಲಿ ಬರಬಲ್ಲರಾಗಿದ್ದರು. ಆಗ ಯಾವನಾದರೂ ಮನುಷ್ಯನು ಇನ್ನೊಬ್ಬನ ಸಾಕ್ಷ್ಯವನ್ನು ಹೇಳುವನು ಹಾಗೂ ಅವನು ಸತ್ಯದಿಂದ ಸ್ವಲ್ಪವೇ ಸರಿದಾಡಿದರೂ ಒಂದು ಆಶ್ಚರ್ಯಜನಕವಾದ ಘಟನೆಯು ಒದಗಿಬಿಡುವದು. ಅವನ ಎದುರಿಗೇ ಸಿಂಹಾಸನ ಸಿಂಹ ಕಜೂರಿಯ ಗಿಡ ನವಿಲು ಹಾಗೂ ರಣಹದ್ದು ಇವೆಲ್ಲ ಒಮ್ಮೆಲೇ ಹೊರಳಿಬಿಡುವವು. ಸಿಂಹವು ತನ್ನ ಪಂಜರವನ್ನು ಮುಂದುಗಡೆ ಒಗೆಯುವದು. ಹಾಗೂ ಬಾಲವನ್ನು ನೆಲಕ್ಕೆ ಅಪ್ಪಳಿಸಹತ್ತುವದು. ನವಿಲು ಹಾಗೂ ರಣಹದ್ದುಗಳು ಅವನ ಮೇಲೆ ಎರಗಿ ಕುಕ್ಕತೊಡಗುವವು.

ಇದರಿಂದ ಸಾಕ್ಷಿದಾರನು ಭಯದಿಂದ ನಡುಗುವನು. ಸುಳ್ಳುಹೇಳುವ ಸಾಹಸವನ್ನು ಸ್ವಲ್ಪವೂ ಮಾಡಲಾರನು.

ನಿಸ್ಸಂದೇಹವಾಗಿ ಇದೆಲ್ಲ ರಾಜನ ಸಲುವಾಗಿ ಬಲು ಭಯಪ್ರದವಾಗಿತ್ತು. ಹಾಗೂ ಇದರಿಂದ ಅವನ ಕಾರ್ಯವು ಅತಿ ಸುಗಮವಾಗಿ ಬಿಡುತ್ತಿತು. ಅದರೆ ಭಯವೇನೋ ಯಾವಾಗಲೂ ಒಂದು ದುಃಖಕರ ವಾದ ವಸ್ತುವಾಗಿರುತ್ತದೆ. ಅದು ಸತ್ಯದೊಡನೆ ಸರಿಯಾಗಿ ಮೇಳವಿಸುವದಿಲ್ಲ.

ಅಬು ಅಬ್ಬಾಸನ ಕಥೆಗನುಸಾರವಾಗಿ ಭಯವು ಒಮ್ಮೊಮ್ಮೆ ಸತ್ಯವನ್ನು ಹೇಳುವುದಕ್ಕೆ ಮನುಷ್ಯನನ್ನು ಪ್ರವೃತ್ತಿಸುತ್ತಿದ್ದರೂ ಅವನನ್ನು ಸತ್ಯವಾದಿ ಯನ್ನಾಗಿ ಮಾಡಲಾರದು. ಯಾಕಂದರೆ ಅದು ಅವನನ್ನು ಕೆಲವೊಂದು ಸಮಯದ ತರುವಾಯ ಅಸತ್ಯ ಹೇಳುವುದಕ್ಕೂ ಪ್ರವೃತ್ತಗೊಳಿಸಬಹುದು. ನಮ್ಮ ಮೊದಲಿನ ಕಥೆಯಲ್ಲಿ ನರಿಯು ನಡೆಸಿದ ವ್ಯವಹಾರದಂತೆ ಪ್ರಾಯಶಃ ಆಗುತ್ತದೆ.

ಸತ್ಯ ಮಾತಾಡುವುದನ್ನು ಕಲಿಯುವ ಸಲುವಾಗಿ ಒಬ್ಬ ಸತ್ಯ ಮನುಷ್ಯನಿಗೆ ಸುಲೇಮಾನನ ಸಿಂಹಾಸನದ ಚಮತ್ಕಾರದ ಅವಶ್ಯಕತೆಯಿಲ್ಲ ಸತ್ಯದ ಸಿಂಹಾಸನವು ಅವರಿಗೆ ಸತ್ಯ ಮಾತನಾಡುವ ಸಲುವಾಗಿ ಪ್ರೇರಿತಗೊಳಿಸ ಬಲ್ಲದು. ಅವರಿಗೆ ಯಾವ ಶಿಕ್ಷಕನದಾಗಲಿ ಸ್ವಾಮಿಯದಾಗಲಿ ನ್ಯಾಯಾಧೀಶನದಾಗಲಿ ಅಂಜಿಕೆಯಿದೆಯೆಂಬ ಕಾರಣದಿಂದ ಅವರು ಸತ್ಯ ಮಾತಾಡುವದಿಲ್ಲ. ಇದೊಂದೇ ಸತ್ಯವು ಮನುಷ್ಯನಿಗೆ ಉಚಿತವಾಗಿದೆ. ಅದೊಂದು ಅವರ ಸ್ವಭಾವದ ಒಂದು ಅಂಗವಾಗಿದೆಯೆಂಬ ಕಾರಣದಿಂದ ಅವರು ಸತ್ಯ ಮಾತಾಡುತ್ತಾರೆ. ಸರ್ವಭಯಗಳಿಂದ ಅವನನ್ನು ನಿರ್ಭಯನನ್ನಾಗಿ ಮಾಡುವುದು ಸತ್ಯಪ್ರೇಮವೊಂದೇ ಸರಿ. ಅದರ ಸಲುವಾಗಿ ಭವಿಷ್ಯದಲ್ಲಿ ಅದೆಂಥ ಗಂಡಾಂತರ ಬಂದೊದಗಲಿ, ಅವನು ಮಾತಾಡಬೇಕಾಗಿರುವದನ್ನೇ ಮಾತಾಡುತ್ತಾನೆ.

ವಿಶ್ವಾಮಿತ್ರ ಎಂಬ ಹೆಸರಿನ ಒಬ್ಬ ಘನವಂತನೂ, ಶಕ್ತಿಶಾಲಿಯೂ ಆದ ರಾಜನು ವಿಶೇಷ ಪ್ರತಿಷ್ಠೆಯನ್ನು ಪಡೆಯಬೇಕೆಂದು ತಪಸ್ಸು ಮಾಡುವುದಕ್ಕೆ ನಿಶ್ಚಯಿಸಿದನು. ಅವನು ತನ್ನ ಕ್ಷತ್ರಿಯ ಜಾತಿಯಿಂದ ಸರ್ವೋಚ್ಚವಾದ ಬ್ರಾಹ್ಮಣ ಜಾತಿಯಲ್ಲಿ ಪ್ರವೇಶಿಸಬೇಕೆಂದು ಇಚ್ಛಿಸುತ್ತಿದ್ದನು. ಅದರ ಸಲುವಾಗಿ ಅವನು ಅವಶ್ಯಕವೆಂದು ತಿಳಿದ ಎಲ್ಲವನ್ನೂ ಮಾಡಿದನಲ್ಲದೆ ಎಲ್ಲರ ಬಾಯಿಯಲ್ಲಿಯೂ ರಾಜನು ಬ್ರಾಹ್ಮಣನಾಗಲಿಕ್ಕೆ ತುಂಬ ಯೋಗ್ಯನು ಎಂಬ ಮಾತೇ ನಲಿಯುವಂತೆ ಅವನು ಕಠೋರವಾದ ತಪಸ್ಸಿನ ಜೀವನವನ್ನು ಅನುಸರಿಸತೊಡಗಿದನು.

ಆದರೆ ಬ್ರಾಹ್ಮಣರಾದ ವಶಿಷ್ಟರು ಹಾಗೆ ತಿಳಿಯುತ್ತಿದ್ದಿಲ್ಲ. ಯಾಕಂದರೆ ವಿಶ್ವಾಮಿತ್ರನು ಅಭಿಮಾನವಶನಾಗಿ ಈ ಕಾರ್ಯವನ್ನು ಮಾಡುತ್ತಿದ್ದಾನೆಂದೂ ಅವನ ತ್ಯಾಗವು ನಿಜವಾದ ತ್ಯಾಗವಲ್ಲವೆಂದೂ ಅವರು ತಿಳಿಯುತ್ತಿದ್ದರು. ಆ ಕಾರಣದಿಂದ ಅವನನ್ನು ಬ್ರಾಹ್ಮಣನೆಂದು ಮನ್ನಿಸಿ ಪ್ರಣಾಮ ಮಾಡುವುದನ್ನು ವಶಿಷ್ಟರು ನಿರಾಕರಿಸಿದರು.

ರಾಜನು ಕ್ರೋಧವಶನಾಗಿ ವಶಿಷ್ಟರ ಕುಟುಂಬದ ಒಂದು ನೂರು ಬಾಲಕರನ್ನು ಕೊಲೆಹೊಡೆದನು. ಇಷ್ಟೊಂದು ದುಃಖಶೋಕವಾದ ಮೇಲೆ ಸಹ ಅವರು ನಮ್ಮ ವಿಚಾರದಲ್ಲಿ ಸತ್ಯವಲ್ಲದ್ದನ್ನು ಎಂದೂ ನುಡಿಯುವದಿಲ್ಲದೆಂಬ ಮಾತನ್ನೇ ಗಟ್ಟಿಹಿಡಿದರು.

ಆಗ ರಾಜನು ಆ ಸತ್ಯವಾದಿ ಮನುಷ್ಯನನ್ನು ಸಹ ಕೊಂದುಹಾಕುವ ನಿಶ್ಚಯ ಮಾಡಿದನು. ಒಂದು ದಿನ ಸಾಯಂಕಾಲಕ್ಕೆ ಅವನು ಆ ದುಷ್ಕರ್ಮವನ್ನು ಮಾಡುವ ಸಲುವಾಗಿ ವಶಿಷ್ಟರ ಗುಡಿಸಲಿನ ಕಡೆಗೆ ನಡೆದನು.

ಬಾಗಿಲವರೆಗೆ ಬಂದಬಳಿಕ ವಶಿಷ್ಟರು ಒಳಗೆ ಯಾರೋ ಮಿತ್ರರೊಡನೆ ಮಾತನಾಡುತ್ತಿರುವುದನ್ನು ಅವನು ಕೇಳಿದನು. ಅವನ ಕಿವಿಯಲ್ಲಿ ತನ್ನ ಹೆಸರೇ ಬೀಳಲು ಅದನ್ನು ಕೇಳಿ ಅವನು ಅಲ್ಲಿಯೇ ಬೆಚ್ಚಿಬಿದ್ದನು. ಯಾವ ಮಾತು ಅವನು ಕೇಳಿದನೋ ಅದು ಶುದ್ಧವೂ ಪವಿತ್ರವೂ ಆಗಿರುವುದರ ಜೊತೆಗೆ ಕ್ಷಮಾಪೂರ್ಣವೂ ಆಗಿತ್ತು. ಪಶ್ಚಾತಾಪದಿಂದ ತುಂಬಿ ಅವನು ಒಳಗೆ ಹೋಗಿ ಋಷಿಗಳ ಚರಣಗಳಲ್ಲಿ ಎರಗಿದನು.

ರಾಜನ ಇಂಥ ಮಾನಸಿಕ ಅವಸ್ಥೆಯನ್ನು ನೋಡಿ ವಶಿಷ್ಟರು ಅವನನ್ನು ಪ್ರೇಮಪೂರ್ವಕವಾಗಿ ಸ್ವಾಗತಿಸಿ “ಬ್ರಹ್ಮರ್ಷಿ” ಎಂದು ನುಡಿದರು. ರಾಜನು ವಿನಯಪೂರ್ವಕವಾಗಿ ಕೇಳಿದನು- “ಇದಕ್ಕೂ ಮೊದಲು ತಾವು ನನ್ನ ತಪಸ್ಸನ್ನು ಅದೇಕೆ ಅದರಿಸಲಿಲ್ಲ?”

“ಯಾಕಂದರೆ ಆಗ ನೀವು ನಿಮ್ಮ ಶಕ್ತಿಯ ಮದದಿಂದ ಬ್ರಾಹ್ಮಣ ಪದವನ್ನು ಬೇಡುತ್ತಿದ್ದಿರಿ. ಆದರೆ ಈಗ ನಿಮಗೆ ಪಶ್ಚಾತಾಪವಾಗತೊಡಗಿದೆ. ಹಾಗೂ ಆ ಕಾರಣದಿಂದ ನೀವು ಬ್ರಾಹ್ಮಣನ ನೈಜವಾದ ವೃತ್ತಿಯುಲ್ಲಿ ಬಂದು ಬಿಟ್ಟಿರುವಿರಿ” ಎಂದು ವಶಿಷ್ಟರು ಉತ್ತರ ಕೊಟ್ಟರು.

ವಶಿಷ್ಟರು ನಿರ್ಭಯತಾಪೂರ್ವಕವಾಗಿ ಹಾಗೂ ಯಾವ ಪ್ರತಿಶೋಧದ ಭಾವನೆಯಿಲ್ಲದೆ ಸತ್ಯ ಮಾತಾಡುವುದನ್ನು ತಿಳಿದಿದ್ದರು.

  • * * *

“ಈ ಪ್ರಕಾರ ಸತ್ಯ ಮಾತಾಡುವುದು ಅದೆಷ್ಟು ಸುಂದರವಾಗಿದೆ. ಹಾಗೆ ಮಾಡುವುದರಲ್ಲಿ ವಿಪತ್ತುಗಳು ಉಂಟಾಗಲೊಲ್ಲವೇಕೆ.” ಎಂದು ನಿಮಗೇ ಅನಿಸುವದಿಲ್ಲವೇ?

ಮತ್ತು ಪ್ರಾಯಶಃ ಹೀಗೆ ನೋಡಬಹುದು-

ಯಾರು ಈ ಪ್ರಕಾರದ ವಿಪತ್ತುಗಳನ್ನು ಎದುರಿಸುವರೋ ಅವರಿಗೆ ಕೊನೆಯಲ್ಲಿ ಎಲ್ಲ ಸಂಗತಿಗಳು ಒಳ್ಳೆಯವಾಗಿ ಬಿಡುತ್ತವೆ ಆರಂಭದಲ್ಲಿ ಅವರಿಗೆ ಹಾಗೆ ಅನಿಸದಿರಲೊಲ್ಲದೇಕೆ. ಅಸತ್ಯದ ಸಫಲತೆಯು ಯಾವಾಗಲೂ ಅಸ್ಥಾಯಿಯಾಗಿರುತ್ತದೆ. ಆದರೆ ಅಧಿಕತರವಾಗಿ ಸತ್ಯ ಮಾತಾಡುವುದೇ ಚತುರನಾಗುವ ಎಲ್ಲಕ್ಕೂ ಹಿರಿಯ ಪದ್ಧತಿಯಾಗಿದೆ.

ಒಂದು ದಿವಸ ಮುಂಜಾನೆಯ ಹೊತ್ತಿನಲ್ಲಿ ದಿಲ್ಲಿಯ ಬಾದಶಹನು ಯೋಗ್ಯ ವ್ಯಕ್ತಿಗಳಿಗೆ ಬಿರುದು ಬಿಲ್ಲೆಗಳನ್ನು ಹಂಚಬೇಕೆಂದು ಸಿಂಹಾಸನದ ಮೇಲೆ ಕುಳಿತಿದ್ದನು. ಉತ್ಸವವು ಮುಗಿಯುವ ಹೊತ್ತಿಗೆ ಅವನು ಬರಮಾಡಿ ಕೊಂಡಿದ್ದ ವ್ಯಕ್ತಿಗಳಲ್ಲಿ ಸೈಯದ ಅಹಮ್ಮದನೆಂಬ ಹೆಸರಿನ ಒಬ್ಬ ಯುವಕನು ಈ ವರೆಗೂ ಬಂದಿಲ್ಲವೆಂಬುದನ್ನು ನೋಡಿದನು.

ಬಾದಶಹನು ಪಲ್ಲಕ್ಕಿಯನ್ನು ಹತ್ತುವದಕ್ಕಾಗಿ ಸಿಂಹಾಸನದಿಂದ ಇಳಿದೆದ್ದನು ಅದರಲ್ಲಿ ಕುಳಿತುಕೊಂಡು ಅವನು ತನ್ನ ವಿಶಾಲಮಂದಿರದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೊರಟಿದ್ದನು.

ಅದೇ ಹೊತ್ತಿಗೆ ಸರಿಯಾಗಿ ಆ ಯುವಕನು ಅವಸರದಿಂದ ಪ್ರವೇಶಿಸಿದನು.

“ನಿಮ್ಮ ಮಗನು ತಡಮಾಡಿ ಬಂದನು” ಎಂದು ಬಾದಶಹನು ತನ್ನ ಮಿತ್ರನಾದ ಸೈಯದನ ತಂದೆಗೆ ಹೇಳಿದನು. ಹಾಗೂ ಸ್ವಯಂ ಯುವಕನ ಕಡೆಗೆ ಕಿಡಿಗಣ್ಣಿನಿಂದ ನೋಡಿ “ಈ ವಿಲಂಬ ಏಕಾಯಿತು” ಎಂದು ಕೇಳಿದನು.

“ಬಾದಶಹರೇ ಒಳ್ಳಿತು” ಎಂದು ಸೈಯದನು ಸತ್ಯವಂತಿಕೆಯಿಂದ ನುಡಿದನು- “ನಾನು ಈ ಹೊತ್ತು ಬಹಳ ಹೊತ್ತಿನವರೆಗೆ ಮಲಗಿ ಕೊಂಡಿದ್ದೆನು.”

ಆಸ್ಥಾನಿಗರೆಲ್ಲರೂ ಸ್ತಂಭಿತರಾಗಿ ಆ ಯುವಕನ ಕಡೆಗೆ ನೋಡ ಹತ್ತಿದರು. ಅದೆಂಥ ದಿಟ್ಟತನದಿಂದ ಬಾದಶಹನ ಮುಂದೆ ಮಾತನಾಡುತ್ತಿದ್ದಾನೆ. ಇದಂತೂ ಯೋಗ್ಯವಾದ ನೆವವೇ ಅಲ್ಲ. ಹೀಗೆ ಮಾತಾಡುವುದರಿಂದ ಅವನಿಗೇ ತಿಳಿಯದಂತೆ ಯಾವ ಗಂಡಾಂತರವುಂಟಾಗುವುದೋ!

ಆದರೆ ಆದದ್ದು ಇದಕ್ಕೆ ವಿಪರೀತವಾಗಿ. ಬಾದಶಹನು ಒಂದು ಕ್ಷಣ ಯೋಚಿಸಿ ಸತ್ಯವಾದಿತ್ವದ ಸಲುವಾಗಿ ಪ್ರಶಂಸೆ ಮಾಡಿದನು. ಹಾಗೂ ಆತನ ಸಾಹಸದ ಸಲುವಾಗಿ ಅವನಿಗೆ ಮುತ್ತಿನ ಮಾಲೆಯನ್ನೂ ಕೊಟ್ಟನು.

ಈ ಪ್ರಕಾರ ಸತ್ಯವನ್ನು ಪ್ರೇಮಿಸುತ್ತಿದ್ದ ಹಾಗೂ ಬಾದಶಹನಿಂದ ಒಕ್ಕಲಿಗನವರೆಗೆ ಎಲ್ಲರ ಕೂಡ ಸತ್ಯ ಮಾತಾಡುತ್ತಿದ್ದ ಸೈಯದ ಅಹಮ್ಮದನಿಗೆ ಈ ಪ್ರತಿಫಲವು ಸಿಕ್ಕಿತು.

ಯಾವ ಕಷ್ಟವೂ ಇಲ್ಲದೆ ಸತ್ಯ ಮಾತಾಡುವುದಕ್ಕೆ ಶಕ್ಯವಾಗುವ ಸಲುವಾಗಿ ಎಲ್ಲಕ್ಕೂ ಒಳ್ಳೆಯ ದಾರಿ ಯಾವುದೆಂದರೆ- ನಮ್ಮ ಯಾವ ಕಾರ್ಯವನ್ನೂ ನಾವು ಬಯತಿಡುವ ಕಾರಣವಿಲ್ಲದ ಕರ್ಮಗಳನ್ನು ನಾವು ಯಾವಾಗಲೂ ಮಾಡುತ್ತಿರಬೇಕು. ಆ ಕಾರಣ ಪ್ರತಿಕ್ಷಣವೂ ನಾವು ಪರಮಾತ್ಮನ ಎದುರಿಗಿದ್ದೇವೆಂಬುದನ್ನು ನೆನಪಿಡಬೇಕು, ಯಾಕಂದರೆ ಮಾತಿನ ಸತ್ಯತೆಯು ಕಾರ್ಯದ ಸತ್ಯತೆಯನ್ನು ಬೇಡುತ್ತದೆ. ತನ್ನ ವಚನ ಹಾಗೂ ಕರ್ಮಗಳಿಂದ ಸರ್ವ ಬೂಟಾಟಿಕೆಗಳನ್ನು ಓಡಿಸಿಬಿಡುವವನೇ ಸತ್ಯ ಮನುಷ್ಯನು.

ಅಮರೋಹೆ ನಗರದಲ್ಲಿ ಒಂದು ವಿಶೇಷ ಪ್ರಕಾರದ ಪಾತ್ರೆಗಳು ಸಿದ್ಧವಾಗುತ್ತವೆ ಅವುಗಳಿಗೆ ‘ಕಾಗಜೀ’ ಎನ್ನುತ್ತಾರೆ. ಅವುಗಳ ಮೇಲೆ ಬೆಳ್ಳಿ ಕೆತ್ತಿರುವ ಕೆಲಸದ ಅಲಂಕಾರವಿರುತ್ತದೆ ಪಾತ್ರೆಗಳಂತೂ ಬಹು ಸುಂದರವಾಗಿರುತ್ತವೆ. ಆದರೆ ಅವು ಎಷ್ಟೊಂದು ಹಗುರು ಹಾಗೂ ಖೊಟ್ಟಿ ಇರುತ್ತವೆಂದರೆ ಒಂದಿಷ್ಟೇ ಉಪಯೋಗಿಸಿದರೂ ತಟ್ಟನೆ ಒಡೆದು ಹೋಗುತ್ತವೆ. ಆದರೂ ನೋಡುವುದಕ್ಕೆ ಅವು ಬಲು ಉಪಯುಕ್ತವೆಂದು ತೋರುತ್ತವೆ. ಆದರೆ ಅವುಗಳನ್ನು ನೋಡಿಯೇ ಮನಸ್ಸನ್ನು ಸಂತೋಷಪಡಿಸಬೇಕು.

ಅದೆಷ್ಟೋ ಜನರು ಆ ‘ಕಾಗಜೀ’ ಪಾತ್ರೆಗಳಂತೆ ಇರುತ್ತಾರೆ. ಅವರ ಸ್ವರೂಪವು ಸುಂದರವಿರುತ್ತದೆ, ಆದರೆ ನೀವು ಅವರನ್ನು ಯಾವುದಾದರೂ ವಿಷಯದಲ್ಲಿ ಒರೆಗಲ್ಲಿಗೆ ತಿಕ್ಕುವ ಪ್ರಯತ್ನ ಮಾಡಿದರೆ ಅವರಲ್ಲಿ ತೋರಿಕೆಯ ಹೊರತಾಗಿ ಇನ್ನೇನೂ ಇಲ್ಲವೆಂಬುದು ನಿಮಗೆ ಶೋಧವಾಗುವದು. ಅವರ ಮೇಲೆ ಎಳ್ಳಷ್ಟೂ ಭರವಸೆ ಇಡಬಾರದು. ಯಾಕಂದರೆ ದುರ್ಬಲತೆಯ ಕಾರಣದಿಂದ ಅವರು ಬಹು ದೊಡ್ಡ ಭಾರವಾಗಿರುತ್ತಾರೆ.

ಒಬ್ಬ ಬ್ರಾಹ್ಮಣನು ಒಮ್ಮೆ ತನ್ನ ಮಗನನ್ನು ಯಾವ ಪಂಡಿತನಿಂದಾದರೂ ವಿದ್ಯೇ ಕಲಿತು ಬರಲೆಂದು ಅಲ್ಲಿಗೆ ಕಳಿಸಿದನು.

ಹನ್ನೆರಡು ವರುಷಗಳಾದ ಮೇಲೆ ಆ ಯುವಕನು ತನ್ನ ನಗರಕ್ಕೆ ಮರಳಿ ಬಂದನು ಈಗ ಇವನು ಮಹಾ ವಿದ್ವಾನ ಪಂಡಿತನಾಗಿಬಿಟ್ಟಿದ್ದಾನೆಂದು ಅದೆಷ್ಟೋ ಜನರು ತಿಳಕೊಂಡರು. ಅವನನ್ನು ಕಾಣಬೇಕೆಂದು ಓಡಿಯೋಡಿ ಅವನ ಮನೆಗೆ ಬಂದರು. ಅವರು ಅವನೆದುರಿಗೆ ಸಂಸ್ಕೃತ ಭಾಷೆಯ ಒಂದು ಪುಸ್ತಕವನ್ನಿಟ್ಟು ಪೂಜ್ಯ ಪಂಡಿತರೇ ಇದರಲ್ಲಿರುವ ಜ್ಞಾನವನ್ನು ನಮಗೆ ಹೇಳಿಕೊಡಿರಿ ಎಂದು ನುಡಿದರು.

ಯುವಕನು ಸ್ಥಿರದೃಷ್ಟಿಯಿಂದ ಆ ಪುಸ್ತಕದ ಕಡೆಗೆ ನೋಡಹತ್ತಿದನು. ನಿಜವಾಗಿ ಅವನಿಗೆ ಅದರೊಳಗಿನ ಒಂದು ಶಬ್ದ ಸಹ ತಿಳಿಯಲಿಲ್ಲ. ಕಾಶಿಯಲ್ಲಿ ಅವನು ಅಕ್ಷರಜ್ಞಾನದ ಹೊರತು ಇನ್ನೇನೂ ಕಲಿತಿರಲಿಲ್ಲ. ಆ ಅಕ್ಷರಗಳು ಸಹ ಅವನ ಮೆದುಳಿನಲ್ಲಿ ಮೆಲ್ಲಮೆಲ್ಲನೆ ಏತಕ್ಕಾಗಿ ಪ್ರವೇಶಿಸಿದ್ದವೆಂದರೆ- ಅಲ್ಲಿ ಅವು ತುಂಬ ದೊಡ್ಡ ದೊಡ್ಡ ಆಕಾರದಲ್ಲಿ ಕರೆ ಹಲಗೆಯ ಮೇಲೆ ಬರೆದಿಡಲ್ಪಡುತ್ತಿದ್ದವು. ಹಾಗೂ ಅವನು ಅವುಗಳನ್ನು ಪ್ರತಿದಿನ ನೋಡುತ್ತಿದ್ದನು.

ಅವನು ಪುಸ್ತಕದ ಮುಂದೆ ಗಪ್ಪುಗಡದಾಗಿ ಕುಳಿತುಬಿಟ್ಟನು. ಇನ್ನು ಅವನ ಕಣ್ಣುಗಳಿಂದ ನೀರು ಸುರಿಯಲಿವೆಯೆಂದು ತೋರಹತ್ತಿತು.

ಬಂದವರು ಕೇಳಿದರು- “ಪಂಡಿತರೇ ನಿಜವಾಗಿ ಈ ಪುಸ್ತಕದ ಯಾವದೋ ವಿಷಯವು ತಮ್ಮ ಹೃದಯವನ್ನು ಇಷ್ಟೊಂದು ದ್ರವಿತಗೊಳಿಸಿದೆ ಏನಿದೇಯೋ ಅದನ್ನು ನಮಗೂ ಹೇಳಿಕೊಡಿರಿ.”

“ಈ ಅಕ್ಷರಗಳು ಕಾಶಿಯಲ್ಲಿ ದೊಡ್ಡವಾಗಿದ್ದವು ಅದರೆ ಇಲ್ಲಿ ಅವು ಚಿಕ್ಕವಾಗಿವೆ” ಎಂದು ಅವನು ಕೊನೆಯಲ್ಲಿ ನುಡಿದನು.

ಆ ಪಂಡಿತನು ಆ ‘ಕಾಗಜೀ’ ಪಾತ್ರೆಗಳಂತೆ ಇದ್ದಿರಲಿಲ್ಲವೇ

  • * *

ಒಂದು ತೋಳ ಗಂಗಾನದಿಯ ತೀರದಲ್ಲಿ ಒಂದು ಬಂಡಿಗಲ್ಲಿನ ಮೇಲೆ ಇರುತ್ತಿತ್ತು. ಪರ್ವತದ ಮೇಲೆ ಹಿಮ ಕರಗಿದ್ದರಿಂದ ನದಿಗೆ ಮಹಾಪೂರ ಬಂದಿತು. ಒಂದು ದಿನ ನೀರು ಅದೆಷ್ಟು ಎತ್ತರಕ್ಕೆ ಏರಿತೆಂದರೆ- ಅದು ಆ ಬಂಡೆಗಲ್ಲಿನ ನಾಲ್ಕೂ ನಿಟ್ಟಿನಲ್ಲಿ ಸುತ್ತುವರಿಯಿತು. ಆ ದಿವಸ ತೋಳನು ತನ್ನ ಊಟವನ್ನು ಹುಡುಕಲಿಕ್ಕೆ ಹೋಗುವುದು ಅಶಕ್ಯವಾಯಿತು. ಅಂದಿನೂಟಕ್ಕೆ ತನ್ನ ಬಳಿಯಲ್ಲಿ ಏನೂ ಇಲ್ಲದ್ದನ್ನು ಕಂಡು ಅದು ಅಂದುಕೊಂಡಿದ್ದೇನೆಂದರೆ- “ಒಳ್ಳೆಯದೇ ಆಯಿತು ಇಂದು ಪವಿತ್ರ ದಿನವೂ ಅದೆ. ಅದನ್ನು ಲಕ್ಷ್ಯದಲ್ಲಿರಿಸಿ ನಾನಿಂದು ವ್ರತ ಮಾಡುವೆನು.”

ಅದು ಬಂಡೆಗಲ್ಲಿನ ಒಂದು ಮೂಲೆಯಲ್ಲಿ ಕುಳಿತುಬಿಟ್ಟಿತು. ಹಾಗೂ ವ್ರತದ ಪವಿತ್ರ ದಿನವನ್ನು ಆಚರಿಸುವ ಸಲುವಾಗಿ ಅದು ತನ್ನ ಆಕೃತಿಯನ್ನು ತುಂಬ ಗಂಭೀರವನ್ನಾಗಿ ಮಾಡಿಕೊಂಡಿತು.

ಆದರೆ ಅದೇ ಸಮಯಕ್ಕೆ ಏನಾಯಿತೆಂದರೆ – ಒಂದು ಅಡವಿಯ ಆಡು ನೀರಿನ ಮೇಲಿನಿಂದ, ಒಂದು ಬಂಡೆಗಲ್ಲಿನಿಂದ ಇನ್ನೊಂದರ ಮೇಲೆ ಜಿಗಿಯುತ್ತ ಆ ಸ್ಥಳಕ್ಕೆ ಬಂದು ತಲಪಿತು. ಅಲ್ಲಿ ತೋಳ ತುಂಬ ಭಕ್ತಿಭಾವದಲ್ಲಿ ಕುಳಿತಿತ್ತು.

ಅದನ್ನು ನೋಡಿದ ಕೂಡಲೇ ತೋಳ ಒಮ್ಮೆಲೆ ಕಿರಚತೊಡಗಿತು- “ಓಹೋ! ಇದು ಇರಲಿ ತುಸು ತಿನ್ನೆಲಿಕ್ಕೆ.”

ಅದು ಆಡಿನ ಮೇಲೆ ಹಾರಿಬಿದ್ದಿತು. ಆದರೆ ಗುರಿ ತಪ್ಪಿಹೋಯಿತು. ಮತ್ತೊಂದು ಸಾರೆ ಹಾರಿ ಬಿದ್ದಿತು. ಆ ಸಾರೆಯೂ ತಪ್ಪಿಕೊಂಡಿತು. ಕೊನೆಯಲ್ಲಿ ಆಡು ವೇಗವಾಗಿ ಹರಿಯುತ್ತಿರುವ ಪ್ರವಾಹವನ್ನು ದಾಟಿ ಸಂಪೂರ್ಣವಾಗಿ ತೋಳನ ಅಳವಿನಿಂದ ದೂರ ಹೋಗಿ ಬಿಟ್ಟಿತು.

“ಬಹಳ ಒಳ್ಳೆಯದು” ಎಂದು ತೋಳ ತನ್ನ ಸಾಧುಭಾವವನ್ನು ಪುನಃ ಧಾರಣ ಮಾಡುತ್ತ “ನಾನು ಇಂದು ವ್ರತದ ಪವಿತ್ರ ದಿನದಲ್ಲಿ ಆಡಿನ ಮಾಂಸ ತಿಂದು ಅಪವಿತ್ರವಾಗಲಾರೆನು. ಛೀ! ಛೀ!! ಇಂದು ವ್ರತದ ದಿವಸ ಮಾಂಸ! ಎಂದಿಗೂ ಆಗದು.”

ಆ ತೋಳ ಅದರ ಭಕ್ತಿ ಹಾಗೂ ವ್ರತ ಮತ್ತು ಅದರ ಶ್ರದ್ಧೆಯ ವಿಷಯದಲ್ಲಿ ನಿಮ್ಮ ಅಭಿಪ್ರಾಯವೇನು? ನೀವು ಅದರ ಕಪಟತನಕ್ಕೆ ನಗುತ್ತೀರಿ. ಆದರೆ ಅದೆಷ್ಟೋ ಜನರು ಹೀಗೆಯೇ ಇದ್ದಾರೆ. ಅವರ ಸತ್ಯವಂತಿಕೆ ತೋಳನ ಸತ್ಯವಂತಿಕೆಯಂತೆಯೇ ಇರುತ್ತದೆ. ಅವರು ಸುಂದರವಾದ ಭಾವನೆಗಳ ದೋಣಿಯನ್ನು ಓಡಿಸುತ್ತಾರೆ. ಯಾಕಂದರೆ ಅದರಲ್ಲಿ ಅವರ ಸ್ವಾರ್ಥವಿರುತ್ತದೆ ಅವರು ಚಿಕ್ಕಪುಟ್ಟ ಭಕ್ತಿಭಾವದ ಕೆಲಸ ಮಾಡುತ್ತಾರೆ. ಯಾಕೆಂದರೆ ಅವರು ತಮ್ಮ ಕೆಟ್ಟ ಕೆಲಸಗಳನ್ನು ಪ್ರಕಟರೂಪದಲ್ಲಿ ಮಾಡು ವುದಕ್ಕೆ ಸಿದ್ಧರಾಗಿರುವದಿಲ್ಲ. ಆದರೆ ಇದೆಲ್ಲ ಚತುರತೆಯಾಗಿದ್ದರೂ ಆ ಕಪಟತನವು ಸತ್ಯವಂತರೂ, ನ್ಯಾಯವಂತರೂ ಆದ ಜನರೆದುರಿಗೆ ಬಹಳ ದಿವಸಗಳ ವರೆಗೆ ತಾಳಲಾರವೆಂದು ನೀವು ಯೋಚಿಸಬಹುದು.

  • * *

ಹನುಮಂತನ ಸೇನೆಯ ಕಪಿಗಳೂ ಕರಡಿಗಳೂ ರಾಮ ಹಾಗೂ ಅತನ ತಮ್ಮನಾದ ಲಕ್ಷ್ಮಣ ಇವರ ಸಲುವಾಗಿ ಹತ್ತು ತಲೆಯವನಾದ ರಾವಣ ರಕ್ಕಸನೊಡನೆ ಯುದ್ಧ ಮಾಡಿದರು. ಸೇನಾಸಮೂಹವು ನಾಲ್ಕೂ ನಿಟ್ಟಿನಿಂದ ಉಳಿದುಕೊಳ್ಳವುದಕ್ಕೆ ತಮ್ಮ ಶಕ್ತಿ ಸಾಲದಿರುವುದನ್ನು ಕಂಡು ರಾವಣನು ತನ್ನ ಠೌಳಿಯ ಶಕ್ತಿಯನ್ನು ಉಪಯೋಗಿಸಿದನು.

ಒಮ್ಮೆಲೆ ಠೌಳಿಯ ಬಲದಿಂದ ಅವರ ಸುತ್ತಲು ರಾಕ್ಷಸರ ನಡುವೆ ಬಹಳಷ್ಟು ರಾಮಲಕ್ಷ್ಮಣರು ಉತ್ಪನ್ನರಾಗಿಬಿಟ್ಟರು. ನಿಜವಾಗಿ ಅದು ಕೆಲವೊಂದು ಕಣ್ಕಟ್ಟೂ ಮೋಡಿಯೂ ಆಗಿತ್ತು. ಆದರೆ ಕಪಿಗಳೂ ಕರಡಿಗಳೂ ಅವರನ್ನು ನಿಜವಾದ ಮನುಷ್ಯರೆಂದು ತಿಳಿದವಲ್ಲದೆ ಒಮ್ಮೆಲೆ ಯುದ್ಧವನ್ನು ನಿಲ್ಲಿಸಿಬಿಟ್ಟವು. ಆಗ ಯುದ್ಧವು ಅದೆಂತು ಮುಂದುವರಿಯುವದು? ತಮ್ಮ ಪ್ರಿಯ ಸ್ವಾಮಿಯಾದ ರಾಮ ಹಾಗೂ ಲಕ್ಷ್ಮಣ ಇವರ ಮೇಲೆ ಅದೆಂತು ಕಲ್ಲುಗಳನ್ನು ಸುರಿಸುವುದು? ಅವರು ಹಾಗೆ ಚಿಂತಿತರಾಗಿದ್ದನ್ನು ಕಂಡು ಈ ಪ್ರಕಾರದ ಬೂಟಾಟವನ್ನು ಭಿನ್ನಭಿನ್ನಗೊಳಿಸುವುದರಲ್ಲಿಯೂ ಆ ಗಂಡಾಂತರಕ್ಷಣವನ್ನು ವ್ಯರ್ಥಗೊಳಿಸಿ ಸತ್ಯವನ್ನು ವಿಜಯಗೊಳಿಸುವುದರಲ್ಲಿಯೂ ಅವನಿಗೆ ಅದೆಷ್ಟು ಸಂತೋಷವಾಗಿರಬಹುದು? ಅವನು ತನ್ನ ಶಕ್ತಿಶಾಲಿಯಾದ ಧನುಷ್ಯದ ಮೇಲೆ ಒಂದು ಬಾಣವನ್ನೇರಿಸಿ ಹೊಡೆದನು. ಬಾಣವು ಆ ಎಲ್ಲ ಕಣ್ಕಟ್ಟಿನ ಛಾಯಾಮೂರ್ತಿಗಳೊಳಗಿಂದ ಸರಸರನೆ ಹಾಯ್ದು ಹೋಗುತ್ತಲೇ ಅವೆಲ್ಲವೂ ಮಾಯವಾಗಿ ಬಿಟ್ಟವು. ಎಲ್ಲವೂ ಚೊಕ್ಕಟವಾದದ್ದನ್ನು ಕಂಡು ಹನುಮಂತನ ಸೇನೆಗೆ ತಿರುಗಿ ಸಾಹಸ ಬಂದು ಬಿಟ್ಟಿತು. ಸತ್ಯವಾದಿಯಾದ ಮನುಷ್ಯನೊಡನೆ ಸತ್ಯವಚನವೂ ಆ ಬಾಣದಂತೆಯೇ ಇರುತ್ತದೆ. ಆದು ಸಾವಿರ ಸುಳ್ಳುಗಳನ್ನೂ ಕಪಟಗಳನ್ನೂ ನಷ್ಟಗೊಳಿಸುವ ಶಕ್ತಿಯನ್ನು ತಳೆದಿರುತ್ತದೆ.

ದಕ್ಷಿಣಭಾರತದ ಒಂದು ಪ್ರಾಚೀನ ಕಥೆಯಿದೆ ರಾಜಾಬೇಲಾ ಎಂಬ ಹೆಸರಿನ ರಾಜನ ವಿಷಯದಲ್ಲಿ ಪ್ರಸಿದ್ಧವಿರುವದೇನಂದರೆ- ಅವನ ನಗೆಯು ಮೈಲು ದೂರದ ಪ್ರದೇಶವನ್ನು ಮಲ್ಲಿಗೆ ಹೂವಿನ ಸವಿಯಾದ ಸುಗಂಧದಿಂದ ತುಂಬಿ ಬಿಡುತ್ತಿತ್ತು. ಆದರೆ ಅದಕಾಗಿ ಆ ನಗೆಯು ಅವನ ಹೃದಯದ ಆನಂದ ಮಯವೂ ಸ್ವಾಭಾವಿಕವೂ ಆದ ಪ್ರಫುಲ್ಲತೆಯಿಂದ ಹೊರಬೀಳುವುದು ಅವಶ್ಯಕವಾಗಿತ್ತು. ಅವನು ನಿಜವಲ್ಲದ ಪ್ರಫುಲ್ಲತೆಯಿಂದ ನಗುವುದಕ್ಕೆ ಪ್ರಯತ್ನಿಸಿದರೆ ಅವನಿಗೆ ಆ ಫಲವು ಎಂದಿಗೂ ಉಂಟಾಗುತ್ತಿರಲಿಲ್ಲ. ಯಾಕಂದರೆ ಅವನ ಮನವು ಪ್ರಸನ್ನವಾಗಿದ್ದಾಗ ಅವನ ನಗೆಯು ಒಂದು ಸುಗಂಧಿತ
ಪ್ರವಾಹವಾಗಿ ಪುಟಿಯುತ್ತಿತ್ತು.

ಆ ನಗೆಯ ಗುಣವು ಸಂಪೂರ್ಣವಾಗಿ ಆತನ ಸತ್ಯವಂತಿಕೆಯಲ್ಲಿತ್ತು.

ದುರ್ಯೋಧನ ರಾಜನ ಮಂದಿರದಲ್ಲಿ ಭೋಜನ ಮೊದಲಾದವು ತುಂಬ ಅರಸುಠೀವಿಯುಳ್ಳವಾಗಿದ್ದವು. ಬೆಳ್ಳಿ ಬಂಗಾರದ ಪಾತ್ರೆಗಳಿದ್ದವು. ಅವಕ್ಕೆ ಹವಳ ರತ್ನ ಹಾಗೂ ಹೊಳೆಹೊಳೆಯುವ ವಜ್ರಗಳನ್ನು ಕೆಚ್ಚಿದ್ದರು. ಶ್ರೀಕೃಷ್ಣನಿಗೆ ಭೋಜನದ ಸಲುವಾಗಿ ಔತಣ ಸಿಕ್ಕಿದ್ದರೂ ಅವನು ಹೋಗಲಿಲ್ಲ. ಅವನು ಅಂದೇ ಸಂಜೆಗೆ ಒಬ್ಬ ಬಡ ಶೂದ್ರನ ಮನೆಗೆ ಊಟಕ್ಕೆಂದು ಹೊರಟುಹೋದನು. ಅವನಿಂದ ಸಹ ಕೃಷ್ಣನು ಆಮಂತ್ರಿತನಾಗಿದ್ದನು. ಅಲ್ಲಿ ಸಾದಾ ಅಡಿಗೆಯಿತ್ತು. ಪಾತ್ರೆಗಳೂ ತೀರ ಸಾಧಾರಣವಾಗಿದ್ದವು. ಆದರೆ ಕೃಷ್ಣನು ಒಂದನ್ನು ಬಿಟ್ಟುಕೊಟ್ಟ, ಇನ್ನೊಂದನ್ನು ಆರಿಸಿಕೊಂಡನು. ಯಾಕಂದರೆ ಶೂದ್ರನಿಂದ ಅರ್ಪಿತವಾದ ಊಟವಿದ್ದರೂ ಅದು ನಿಜವಾದ ಪ್ರೇಮದಿಂದ ಹಾಸುಹೊಕ್ಕಾಗಿತ್ತು. ದುರ್ಯೋಧನರಾಜನ ರಾಜಸೀ ಭೋಜನದ ವ್ಯವಸ್ಥೆಯನ್ನು ವ್ಯರ್ಥವಾದ ತೋರಿಕೆಯ ಸಲುವಾಗಿ ಮಾಡಲಾಗಿತ್ತು.

ಇನ್ನೂ ಒಂದು ಕಥೆಯಿದೆ. ಪ್ರತಾಪಶಾಲಿಯಾದ ರಾಮನು ಒಬ್ಬ ಅತಿ ತುಚ್ಛಳೂ, ಹಕ್ಕಿ ಬಲೆಗಾರ್ತಿಯೂ ಆದ ಸ್ತ್ರೀಯಳಲ್ಲಿ ಭೋಜನ ಮಾಡಿದನು. ಅವಳು ಅವನ ಮುಂದೆ ಕೆಲವು ಹಣ್ಣುಹಂಪಲಗಳನ್ನೇ ಇಡಲಿಕ್ಕೆ ಸಾಧ್ಯವಿತ್ತು. ಯಾಕಂದರೆ ಅವಳ ಹತ್ತಿರ ಇನ್ನೇನೂ ಇರಲೇ ಇಲ್ಲ. ಆದರೆ ತನ್ನ ಹತ್ತರವಿದ್ದವುಗಳಲ್ಲಿ ಎಲ್ಲಕ್ಕಿಂತಲೂ ಶ್ರೇಷ್ಟವಾದ ವಸ್ತುವನ್ನೇ ಅವಳು ನಿರ್ಮಲ ಹೃದಯದಿಂದ ಅವನಿಗೆ ಕೊಟ್ಟಳು. ಅದರಿಂದ ರಾಮನ ಹೃದಯವು ಆಕರ್ಷಿತವಾಗಿ ಹೋಯಿತಲ್ಲದೆ ಅವನು ನಿಜವಾದ ಹೃದಯದಿಂದ ಕೊಡಲಾದ ಆ ಕಾಣಿಕೆಯ ನೆನಪು ಅಳಿಯಲಾರದೆಂದು ಇಚ್ಛಿಸಿದನು. ಇಂದು, ಕೆಲವೊಂದು ಶತಮಾನಗಳು ಕಳೆದುಹೋಗಿದ್ದರೂ ಜನರು ಆದಕ್ಕಾಗಿಯೇ ಆಕೆಯ ವರ್ಣನೆ ಮಾಡುತ್ತಾರೆ.

ಜಲಾಲನು ಒಬ್ಬ ಬುದ್ಧಿವಂತನೂ ಒಬ್ಬ ಪ್ರಸಿದ್ಧ ಉಪದೇಶಕನೂ ಆಗಿದ್ದನು. ಒಂದು ದಿನ ಇಬ್ಬರು ತುರ್ಕೀ ಜನರು ಕೆಲವೊಂದು ಕಾಣಿಕೆ ತಕ್ಕೊಂಡು ಅವನ ಬಳಿಗೆ ಬಂದರು. ಅವರು ಅವನಿಂದ ಉಪದೇಶ ಕೇಳುವ ಆಶೆಯನ್ನಿಟ್ಟುಕೊಂಡಿದ್ದರು. ಯಾಕಂದರೆ ಅವರು ತೀರ ಬಡವರಾಗಿದ್ದರು, ಅವರ ಕಾಣಿಕೆ ಸಹ ಸಾಧಾರಣವಾಗಿತ್ತು. ಕೇವಲ ಒಂದು ಹಿಡಿ ಬೇಳೆ, ಜಲಾಲನ ಕೆಲವು ಶಿಷ್ಯರು ಕಾಣಿಕೆಯ ಕಡೆಗೆ ತಿರಸ್ಕಾರ ದೃಷ್ಟಿಯಿಂದ ನೋಡಿದರು. ಆಗ ಜಲ್ಲಾಲನು ನುಡಿದದ್ದೇನಂದರೆ-

“ಒಮ್ಮೆ ಮಹಮ್ಮದ ಪೈಗಂಬರರಿಗೆ ತಮ್ಮ ಬಹಳಷ್ಟು ಕೆಲಸಗಳೊಳಗಿಂದ ಯಾವುದೋ ಒಂದನ್ನು ಸರಿಯಾಗಿ ನಡೆಸುವ ಸಲುವಾಗಿ ಧನದ ಅವಶ್ಯಕತೆ ಯುಂಟಾಯಿತು. ಕೊಡಲ್ಲಿಕ್ಕೆ ಶಕ್ಯವಿರುವಷ್ಟು ಕೊಡಿರೆಂದು ಅವರು ತಮ್ಮ ಶಿಷ್ಯರಿಗೆ ಬೇಡಿದರು. ಕೆಲವರು ತಮ್ಮ ಹತ್ತರವಿದ್ದುದರ ಅರ್ಧ ಭಾಗವನ್ನು ಕೊಟ್ಟರು. ಕೆಲವರು ಮೂರನೇ ಭಾಗವನ್ನು ಕೊಟ್ಟರು. ಅಬೂಬಕರನು ತನ್ನ ಸರ್ವ ಧನವನ್ನು ಅವರಿಗೆ ಕೊಟ್ಟುಬಿಟ್ಟನು. ಪೈಗಂಬರರಿಗೆ ಈ ಪ್ರಕಾರ ಶಸ್ತ್ರಾಸ್ತ್ರಗಳೂ ಪಶು ಮೊದಲಾದವುಗಳೂ ಬಹಳಷ್ಟು ಸಿಕ್ಕು ಬಿಟ್ಟವು. ಕೊನೆಯಲ್ಲಿ ಒಬ್ಬ ಬಡವಿಯಾದ ಸ್ತ್ರೀ ಬಂದಳು. ಅವಳು ತನ್ನ ಸರತಿಯಲ್ಲಿ ಮೂರು ಕಜ್ಜೂರಿಗಳನ್ನೂ ಗೋಧಿಯ ಒಂದು ರೊಟ್ಟಿಯನ್ನೂ ಕಾಣಿಕೆಯೆಂದು ಕೊಟ್ಟಳು. ಆಕೆಯ ಹತ್ತಿರ ಇದ್ದುದೇ ಇಷ್ಟು. ಅದನ್ನು ನೋಡಿ ಅದೆಷ್ಟೋ ಜನರು ನಕ್ಕರು. ಆದರೆ ಪೈಗಂಬರರು ಅವರಿಗೆ ತಮ್ಮದೊಂದು ಕನಸು ಹೇಳಿದರು. ಅದರಲ್ಲಿ ಕೆಲವು ಸ್ವರ್ಗದೂತರು ಒಂದು ತಕ್ಕಡಿ ತಂದಿದ್ದರು ಹಾಗೂ ಅವರು ಅದರ ಒಂದು ಪರಡಿಯಲ್ಲಿ ಆ ಎಲ್ಲರ ಕಾಣಿಕೆಯನ್ನು ಇಟ್ಟರು. ಇನ್ನೊಂದರಲ್ಲಿ ಕೇವಲ ಆ ಬಡ ಸ್ರೀಯಳ ಕಜ್ಜೂರಿಯ ಮೂರು ಬಟ್ಟುಗಳನ್ನೂ ಒಂದು ರೊಟ್ಟಿಯನ್ನೂ ಇಟ್ಟರು. ತಕ್ಕಡಿ ಸ್ಥಿರವಾಯಿತು. ಯಾಕಂದರೆ ಆ ಪರಡಿಯೂ ಮೊದಲಿನದರಷ್ಟೇ ಭಾರಿ ಆಗಿಬಿಟ್ಟಿತು.”

ಜಲಾಲನು ಮುಂದೆ ತಿಳಿಸಿ ಹೇಳಿದನು.-

“ಒಂದು ಸಾಧಾರಣ ಕಾಣಿಕೆಯನ್ನು ಸತ್ಯ ಹೃದಯದಿಂದ ಕೊಡಮಾಡಿದ್ದಾದರೆ ಅದು ಸಹ ಬಹು ಬೆಲೆಯ ಕಾಣಿಕೆಯಷ್ಟೇ ಬೆಲೆ ಬಾಳುತ್ತದೆ”

ಅದನ್ನು ಕೇಳಿ ಆ ತುರ್ಕಿಯರಿಬ್ಬರು ತುಂಬ ಸಂತುಷ್ಟರಾದರು ಹಾಗೂ ಅವರ ಹಿಡಿ ಬೇಳೆಯ ಸಲುವಾಗಿ ನಗೆಯಾಡುವ ಸಾಹಸವನ್ನು ಮತ್ತೊಮ್ಮೆ ಯಾರೂ ಮಾಡಲಿಲ್ಲ.

  • * *

ಸಣ್ಣ ಜಾತಿಯ ಒಬ್ಬ ಬಡ ಮನುಷ್ಯನು ತನ್ನ ಕುಟುಂಬದ ಪಾಲನ ಮಾಡುವ ಸಿಲುವಾಗಿ ಬೇಟೆಯನ್ನು ಹುಡುಕುವುದರಲ್ಲಿ ಇಡಿಯ ದಿವಸವನ್ನು ಕಳೆದನು. ಆದರೆ ಅವನ ಕೈಗೆ ಏನೂ ಹತ್ತಲಿಲ್ಲ. ರಾತ್ರಿಯಾಗಿ ಬಿಟ್ಟರೂ ಅವನಿನ್ನೂ ಅಡವಿಯಲ್ಲಿಯೇ ಇದ್ದನು. ಅವನು ಒಂಟಿಗನು ಹಸಿದು ನೀರಡಿಸಿದವನು ಹಾಗೂ ತನ್ನ ಅಸಫಲ ಪ್ರಯತ್ನಗಳಿಂದ ದಣಿದು ಹೋದವನು. ಯಾವುದೇ ಹಕ್ಕಿಯ ಗೂಡಾದರೂ ಸಿಗಬಹುದೆಂಬ ಆಶೆಯಿಂದ ಅವನು ಬೆಲ್ಲಪತ್ರಿಯ ಗಿಡವನ್ನೇರಿದನು. ಆ ಗಿಡದ ಮೂರೆಸಳಿನ ಪತ್ರಿಗಳು ಭಕ್ತರಿಂದ ಶಿವನಿಗೆ ಏರಿಸಲಾಗುತ್ತವೆ. ಆದರೆ ಅವನಿಗೆ ಅಲ್ಲಿ ಯಾವ ಹಕ್ಕಿಯ ಗೂಡೂ ಸಿಗಲಿಲ್ಲ. ಅವನಿಗೆ ತನ್ನ ಹೆಂಡತಿಯ ನೆನಪಾಯಿತು, ಬಳಿಕ ತನ್ನ ಹಾಗೂ ಊಟದ ಆಶೆಯಲ್ಲಿ ಕುಳಿತುಕೊಂಡಿದ್ದ ಮಕ್ಕಳ ನೆನಪು ಬಂತು. ಅವನು ಅಳತೊಡಗಿದನು, ಕರುಣೆಯ ಕಣ್ಣೀರಲ್ಲಿ ದೊಡ್ಡ ಬಲವಿರುತ್ತದೆಂದು ಕಥೆಯಲ್ಲಿ ಮುಂದೆ ಬರುತ್ತಿದೆ. ತನ್ನ ನಿಜವಾದ ದುಃಖದಿಂದ ಹರಿದು ಬರುವ ಕಣ್ಣೀರು ಹೆಚ್ಚು ಬೆಲೆಯುಳ್ಳದ್ದಾಗಿರುತ್ತದೆ.

ಬೇಟೆಗಾರನ ಕಣ್ಣೀರು ಬೆಲ್ಲಪತ್ರಿಯ ಗಿಡದ ಎಲೆಗಳ ಮೇಲೆ ಉರುಳಿ ಹಾಗೂ ಅವುಗಳನ್ನು ತೆಗೆದುಕೊಂಡು ಅವು ಆ ಗಿಡದಡಿಯಲ್ಲಿ ನೆಲದ ಮೇಲೆ ಇಟ್ಟ ಶಿವಲಿಂಗದ ಮೇಲೆ ಹೋಗಿಬಿದ್ದವು. ಅದೇ ಹೊತ್ತಿಗೆ ಒಂದು ಹಾವು ಆ ಮನುಷ್ಯನನ್ನು ಕಚ್ಚಿಬಿಟ್ಟಿತು. ಅದರಿಂದ ಅವನು ಆಗಲೇ ಸತ್ತು ಹೋದನು. ಯಮದೂತರು ಆತನ ಆತ್ಮವನ್ನು ದೇವಲೋಕಕ್ಕೆ ತೆಗೆದು ಕೊಂಡು ಹೋದರು. ಮತ್ತು ಅದನ್ನು ಶಿವನ ಮುಂದೆ ಇಳಿಸಿದರು.

ಸ್ವರ್ಗದ ದೇವತೆಗಳು ಒಂದೇ ಸ್ವರದಲ್ಲಿ ಕೂಗೆಬ್ಬಿಸಿದರು – ಇಲ್ಲಿ ಈ ಮನುಷ್ಯನ ಆತ್ಮಕ್ಕೆ ಯಾವ ಸ್ಥಾನವೂ ಇಲ್ಲ ಇವನು ನೀಚ ಜಾತಿಯವನು ಇವನು ವ್ರತನಿಯಮಗಳನ್ನು ಅಲ್ಲಗಳೆದಿದ್ದಾನೆ. ಅಪವಿತ್ರವಾದ ತಿನಸುಗಳನ್ನು ತಿಂದಿದ್ದಾನೇ ಹಾಗೂ ದೇವತೆಗಳ ಮೇಲೆ ಯಾವಾಗಲೂ ಮುಡಿಸ ಬೇಕಾಗುವ ಯಾವ ಮುಡಿಪುಗಳನ್ನೂ ಇವನು ಮುಡಿಸಿಲ್ಲ.

ಆದರೆ ಶಿವನು ಅವರಿಗೆ ಹೇಳಿದ್ದೇನಂದರೆ – “ಇವನು ನನ್ನ ಮೇಲೆ ಬೆಲ್ಲಪತ್ರಿಗಳನ್ನು ಏರಿಸಿದ್ದಾನೆ ವಿಶೇಷವಾಗಿ ಇವನು ತನ್ನ ನಿಜವಾದ ಕಣ್ಣೀರನ್ನು ನನಗೆ ಅರ್ಪಿಸಿದ್ದಾನೆ. ಸತ್ಯ ಹೃದಯದ ಜಾತಿಯು ನೀಚವಾಗಲಾರದು.”

ಶಿವನು ಅವನನ್ನು ತನ್ನ ಸ್ವರ್ಗದಲ್ಲಿ ಸೇರಿಸಿಕೊಂಡನು.

  • * *

ಈ ಎಲ್ಲ ಕಥೆಗಳು ನಮಗೆ ತೋರಿಸುವವೇನಂದರೆ ಸರ್ವ ದೇಶಗಳಲ್ಲಿಯೂ ಸರ್ವ ಕಾಲಗಳಲ್ಲಿಯೂ ಮನುಷ್ಯ ಹಾಗೂ ಅವನ ದೇವತೆಗಳು ಸತ್ಯವಂತಿಕೆಯನ್ನು ಮನ್ನಿಸುತ್ತಿದ್ದಾರೆ. ಅವರು ಸರ್ವ ವಸ್ತುಗಳಲ್ಲಿರುವ ಸತ್ಯವನ್ನೂ ಸರಲತೆಯನ್ನೂ ಪ್ರೇಮಿಸುತ್ತಾರೆ.

ಅಸತ್ಯದಲ್ಲಿ ನೆಲೆಸಿದವರು ಮನುಷ್ಯಜಾತಿಗೆ ಶತ್ರುಗಳು.

ಸರ್ವ ಮಾನವರಿಗೆ ಸಂಬಂಧಿಸಿದ ವಿಜ್ಞಾನ ಹಾಗೂ ದರ್ಶನ, ಖಗೋಲ ವಿದ್ಯೆ, ಗಣಿತ, ರಸಾಯನ ವಿದ್ಯೆ ಹಾಗೂ ಭೌತಿಕ ವಿಜ್ಞಾನ ಇವು ಸತ್ಯದ ಸಂಶೋಧನ ಮಾಡುವವು. ಆದರೆ ಸಣ್ಣ ಸಣ್ಣ ಸಂಗತಿಗಳಿಗೆ ಸಹ ದೊಡ್ಡ ಸಂಗತಿಗಳಿಗಿದ್ದಷ್ಟೇ ಸತ್ಯದ ಅವಶ್ಯಕತೆಯಿದೆ.

ಚಿಕ್ಕ ಮಕ್ಕಳು ಸತ್ಯವಾದಿಗಳಾಗುವುದನ್ನು ಕಲಿಯಬೇಕಾದರೆ ಅವರು ದೊಡ್ಡವರಾಗುವ ದಾರಿ ಕಾಯಬಾರದು. ಸತ್ಯವಾದಿಯಾಗುವ ಹಾಗೂ ಸತ್ಯದಲ್ಲಿ ಸ್ಥಿರವಾಗಿ ನಿಲ್ಲುವ ಪಾಠವನ್ನು ಹಾಕಿಕೊಡುವ ಸಲುವಾಗಿ ಯಾವ ಸಮಯವೂ ಅತಿ ಶೀಘ್ರತೆಯದಾಗುವದಿಲ್ಲ.

ಅದಕ್ಕಾಗಿ ಸತ್ಯ ಮಾತಾಡುವ ಇಚ್ಛೆಯಿದ್ದರೂ ಒಮ್ಮೊಮ್ಮೆ ಮನುಷ್ಯನಿಗೆ ಹಾಗೆ ಮಾತಾಡುವುದು ಅತಿ ಕಠಿಣವಾಗಿ ಬಿಡುತ್ತದೆ. ಆದಕಾರಣ ಎಲ್ಲಕ್ಕೂ ಮೊದಲು ಮನುಷ್ಯನಿಗೆ ಸತ್ಯವನ್ನು ತಿಳಿಯುವುದೂ ಅದನ್ನರಸುವುದೂ ಬೇಕು ಹಾಗೂ ಅದು ಯಾವಾಗಲೂ ಅಷ್ಟೊಂದು ಸರಲವಾಗಿರುವುದಿಲ್ಲ.

ಕಾಶಿಯ ರಾಜನಿಗೆ ನಾಲ್ವರು ಯುವಕ ಪುತ್ರರಿದ್ದರು. ಪ್ರತಿಯೊಬ್ಬರು ತಮ್ಮ ತಂದೆಯು ರಥಿಕನಿಗೆ- “ನಾನು ಪಲಾಶ ಎಂಬ ಗಿಡವನ್ನು ನೋಡ ಬೇಕೆನ್ನುತ್ತೇನೆ” ಎಂದರು.

“ನಾನು ನಿಮಗೆ ತೋರಿಸುವೆನು” ಎಂದು ರಥಿಕಿನು ಮರುನುಡಿದನು ಹಾಗೂ ಎಲ್ಲರಿಗಿಂತ ಹಿರಿಯವನಿಗೆ ಅವನು ತನ್ನೊಡನೆ ಹೊರಟುಬರಲು ಹೇಳಿದನು.

ಅಡವಿಯಲ್ಲಿ ಅವನು ರಾಜಕುಮಾರನಿಗೆ ಪಲಾಶ ವೃಕ್ಷವನ್ನು ತೋರಿಸಿದನು ಆ ಸಮಯಕ್ಕೆ ಯಾವ ಋತುಗಾಲವಿತ್ತೆಂದರೆ ಅದರ ಮೇಲೆ ಚಿಗುರು, ಎಲೆ, ಹೂ ಇವೇನೂ ಇರಲಿಲ್ಲ. ಆದಕಾರಣ ರಾಜಕುಮಾರನು ಕೇವಲ ಒಂದು ಒಣಗಿ ಮೊರಟಾದ ಕಟ್ಟಿಗೆಯ ಬೊಡ್ಡಿಯನ್ನೇ ನೋಡಿದನು.

ಅದಾದ ಕೆಲವು ವಾರಗಳಾದ ಬಳಿಕ ಎರಡನೇ ರಾಜಕುಮಾರನು ರಥದಲ್ಲಿ ಸಂಚಾರ ಹೊರಟನು. ಅವನು ಪಲಾಶವನ್ನು ನೋಡಿದನು. ಅದನ್ನವನು ಎಲೆಗಳಿಂದ ಹೊತ್ತುದಾಗಿ ಕಂಡನು.

ಅದೇ ಋತುವಿನಲ್ಲಿ ಇನ್ನೂ ಕೆಲವು ದಿನಗಳಾದ ಮೇಲೆ ಮೂರನೆಯವನ ಸರತಿ ಬಂತು. ಅವನು ಹೂಗಳಿಂದ ಕೆಂಪಾಗಿ ಬಿಟ್ಟ ಗಿಡವನ್ನು ನೋಡಿದನು.

ಎಲ್ಲಕ್ಕೂ ಹಿಂದುಗಡೆಯಲ್ಲಿ ನಾಲ್ಕನೆಯವನು ಗಿಡವನ್ನು ನೋಡಿದನು. ಆಗ ಅದರ ಫಲಗಳು ಪಕ್ವವಾಗಿ ಬಿಟ್ಟಿದ್ದವು.

ಒಂದು ದಿನ ನಾಲ್ವರೂ ಬಂಧುಗಳು ಒತ್ತಟ್ಟಿಗೆ ಸೇರಿದಾಗ ಒಬ್ಬನು ಕೇಳಿದನು- “ಪಲಾಶ ಗಿಡವು ಹೇಗಿರುತ್ತದೆ?”

ಎಲ್ಲಕ್ಕೂ ಹಿರಿಯವನು ಹೇಳಿದನು- “ಒಂದು ಬಚ್ಚ ಬರಿಯ ಬೊಡ್ಡೆಯ ಹಾಗೆ.”

ಎರಡನೆಯವನು ಹೇಳಿದನು- “ಫಲಪುಷ್ಪಗಳಿಂದ ಬಾಳೆಯ ಗಿಡದ ಹಾಗೆ.”

ಮೂರನೆಯವನು-“ಕೆಂಪು ಗುಲಾಬಿ ಹೂವಿನ ಗೊಂಚಲಿನ ಹಾಗೆ.”

ಹಾಗೂ ನಾಲ್ಕನೆಯವನು- “ಅದೊಂದು ಪ್ರಕಾರದ ಜಾಲಿಯ ಗಿಡದಂತೆ ತೋರುತ್ತದೆ, ಅದರಲ್ಲಿ ಹಣ್ಣುಗಳೂ ಅಗುತ್ತವೆ”

ನಾಲ್ವರ ಅಭಿಪ್ರಾಯಗಳೂ ಒಂದುಗೂಡುವಂತೆ ಕಾಣಿಸಲಿಲ್ಲ. ಅವರೆಲ್ಲರೂ ಕೂಡಿಕೊಂಡು ತೀರ್ಮಾನಗೊಳಿಸುವ ಸಲುವಾಗಿ ತಮ್ಮ ತಂದೆಯ ಬಳಿಗೆ ಹೋದರು. ಒಬ್ಬನಾದ ಮೇಲೆ ಒಬ್ಬನು ಪಲಾಶ ಗಿಡವನ್ನು ನೋಡಿದ್ದರಿಂದ ಅವರು ನಗೆಗೀಡಾದರೆಂದು ರಾಜನು ಕೇಳಿದನು. ಆಗ ಅವನು ಅವರಿಗೆ ಹೇಳಿದ್ದೇನಂದರೆ-

ನೀವು ನಾಲ್ವರೂ ಸರಿಯಾಗಿ ಹೇಳುತ್ತೀರಿ. ಆದರೆ ಗಿಡವು ಎಲ್ಲ ಋತುಗಳಲ್ಲಿ ಒಂದೇ ತೆರನಾಗಿ ಇರುವದಿಲ್ಲೆಂಬದನ್ನು ನೀವು ನಾಲ್ವರೂ ಮರೆತಿರುವಿರಿ.”

ತಾನು ಕಂಡಿದ್ದನ್ನು ಪ್ರತಿಯೊಬ್ಬನೂ ಹೇಳಿದನು. ಹಾಗೂ ಇನ್ನೊಬ್ಬನು ಅರಿತಿದ್ದನ್ನು ಒಡಂಬಡಲು ಪ್ರತಿಯೊಬ್ಬನೂ ಅಸ್ವೀಕಾರ ಮಾಡಿದನು.

ಈ ಪ್ರಕಾರ ಜನರು ಪ್ರಾಯಶಃ ಸತ್ಯದ ಒಂದು ಚಿಕ್ಕದಾದ ಅಂಶವನ್ನು ಮಾತ್ರ ತಿಳಿಯುತ್ತಾರೆ. ಹಾಗೂ ತಾವು ಅದನ್ನು ಪೂರ್ಣವಾಗಿ ಬಲ್ಲೆವೆಂದು ತಿಳಕೊಳ್ಳುವುದೇ ಅವರ ಭ್ರಾಂತಿ.

ಬಾಲ್ಯದಲ್ಲಿಯೇ ಸತ್ಯದ ಶೋಧವನ್ನು ಹೆಚ್ಚು ಹೆಚ್ಚಾಗಿ ಮಾಡುವ ಸಲುವಾಗಿ ಅದನ್ನು ಯೋಗ್ಯವಾಗಿ ಪ್ರೇಮಿಸಲು ಕಲಿತುಬಿಡುವುದರಿಂದ ಈ ತರದ ಭ್ರಾಂತಿಯು ಅದೆಷ್ಟೋ ಕಡಿಮೆಯಾಗಿ ಬಿಡುತ್ತದೆ.

  • * *

ಹಿಮಾಲಯ ಪರ್ವತ ಪ್ರದೇಶದ ಕುಮಾಯು ಎಂಬ ಹೆಸರಿನ ಸ್ಥಾನದ ರಾಜನು ಒಂದು ಸಾರೆ ಅಲ್ಮೋಡೆಯ ಘಟ್ಟದಲ್ಲಿ ಬೇಟೆಯಾಡಲು ಹೋದನು. ಆ ಕಾಲಕ್ಕೆ ಆ ಸ್ಥಾನವು ನಿಬಿಡವಾದ ಅರಣ್ಯದಿಂದ ಬಿಗಿದಿತ್ತು.

ಒಂದು ಮೊಲವು ಪೊದೆಯೊಳಗಿಂದ ಹೊರಬಿದ್ದಿತು. ರಾಜನು ಅದನ್ನು ಬೆಂಬಳಿಸಿದನು. ಒಮ್ಮಿಂದೊಮ್ಮೆ ಏನಾಯಿತೆಂದರೆ ಆ ಮೊಲವು ಚಿರತೆಯಾಗಿ ಮಾರ್ಪಾಡುಗೊಂಡು ಶೀಘ್ರವೇ ದೃಷ್ಟಿಯಿಂದ ಮಾಯವಾಗಿ ಹೋಯಿತು.

ಆ ಆಶ್ಚರ್ಯಜನಕವಾದ ಘಟನೆಯಿಂದ ಸ್ತಂಭಿತನಾದ ರಾಜನು ಬುದ್ದಿವಂತರ ಒಂದು ಸಭೆ ಕರೆದು ಅವರಿಗೆ ಅದರ ಅರ್ಥವನ್ನು ಕೇಳಿದನು.

ಅವರು ಉತ್ತರ ಕೊಟ್ಟಿದ್ದೇನಂದರೆ- “ಯಾವ ಸ್ಥಳದಲ್ಲಿ ಚಿರತೆಯು ಕಣ್ಮರೆಯಾಯಿತೋ ಅಲ್ಲಿ ತಾವೊಂದು ನವನಗರವನ್ನು ನಿರ್ಮಿಸಬೇಕು. ಯಾಕಂದರೆ ಕೇವಲ ಮನುಷ್ಯರು ದೊಡ್ಡ ಸಂಖ್ಯೆಯಲ್ಲಿ ಕುಳಿತುಕೊಳ್ಳ ಬೇಕಾಗಿರುವ ಸ್ಥಳದಲ್ಲಿ ಮಾತ್ರ ಅದು ನಿಲ್ಲದೆ ಓಡಿಹೋಗುವದು-ಎಂದು ಅದರರ್ಥ.”

ಈ ಪ್ರಕಾರ ನವನಗರವನ್ನು ಕಟ್ಟಿಸುವ ಸಲುವಾಗಿ ದುಡಿಮೆಗಾರರು ಕೆಲಸಕ್ಕೆ ಹಚ್ಚಲ್ಪಟ್ಟರು. ಕೊನೆಗೆ ಒಂದು ಸ್ಥಳದಲ್ಲಿ ನೆಲದ ಬಿರುಸುತನ ನೋಡುವ ಸಲುವಾಗಿ ಅವರು ಕಬ್ಬಿಣದ ಒಂದು ದೊಡ್ಡ ಮೊಳೆಯನ್ನು ನೆಡಸಿದರು. ಆ ಸಮಯಕ್ಕೆ ಒಮ್ಮಿಂದೊಮ್ಮೆ ನೆಲವು ತುಸು ನಡುಗಿತು.

“ತಡೆಯಿರಿ” ಎಂದು ಬಲ್ಲವರು ಕೂಗಿದರು “ಅದರ ತುದಿಯು ಸರ್ಪರಾಜನಾದ ಶೇಷನಾಗನ ದೇಹದಲ್ಲಿ ಚುಚ್ಚಿಹೋಗಿದೆ. ಈ ಸ್ಥಾನದಲ್ಲಿ ಇನ್ನು ನಗರವನ್ನು ಕಟ್ಟಿಸುವುದು ಸಾಧ್ಯವಿಲ್ಲ”

ಕೊನೆಯಲ್ಲಿ ಆ ಕಥೆಯೊಳಗೆ ಸಹ ಹೇಳಲಾಗಿದೆ ಏನಂದರೆ- ಆ ಕಬ್ಬಿಣದ ಮೊನೆಯನ್ನು ಪೃಥ್ವಿಯಿಂದ ಹೊರಗೆ ತೆಗೆದು ಬಿಟ್ಟರೆ ಅದೆಲ್ಲ ಶೇಷನಾಗನ ರಕ್ತದಿಂದ ಕೆಂಪಾಗಿ ಬಿಟ್ಟಿತ್ತು.

“ಇದಂತೂ ಬಹು ದುಃಖದ ಸಂಗತಿ”ಯೆಂದು ರಾಜನು ನುಡಿದನು. “ಆದರೆ ಇಲ್ಲಿ ನಗರವನ್ನು ನಿರ್ಮಿಸುವುದೆಂದು ನಾವು ನಿಶ್ಚಯಿಸಿಬಿಟ್ಟಿದ್ದರಿಂದ ಈಗ ನಿರ್ಮಿಸಲೇಬೇಕಾಗುವದು.”

ಆ ಪಂಡಿತರು ಸಿಟ್ಟು ತುಂಬಿ ಭವಿಷ್ಯ ನುಡಿದದ್ದೇನಂದರೆ- “ನಗರದ ಮೇಲೆ ಏನೋ ಭಾರವಾದ ವಿಪತ್ತು ಬರುವದು. ಅಲ್ಲದೆ ರಾಜನ ವಂಶವೂ ಶೀಘ್ರವಾಗಿ ನಷ್ಟಭ್ರಷ್ಟವಾಗಿ ಬಿಡುವದು.”

ಅಲ್ಲಿಯ ನೆಲವು ಬೆಳೆಯುಳ್ಳದ್ದು. ಹಾಗೂ ನೀರು ಸಹ ವಿಪುಲ. ಆರು ನೂರು ವರ್ಷಗಳಿಂದ ಆಲ್ಮೋಡಾ ನಗರವು ಆ ಅರಣ್ಯದಲ್ಲಿ ನೆಲೆಸಿ ನಿಂತಿದೆ ಹಾಗೂ ಅದರ ನಾಲ್ಕೂ ಮಗ್ಗಲು ಹಬ್ಬಿರುವ ಹೊಲಗದ್ದೆಗಳು ಕಾಳುಕಡಿಗಳನ್ನು ಬೆಳೆದು ಕೊಡುತ್ತವೆ.

ಈ ಪ್ರಕಾರ ಆ ಪಂಡಿತರು ಬುದ್ದಿವಂತರಾಗಿದ್ದರೂ ತಮ್ಮ ಭವಿಷ್ಯ ವಾಣಿಯಲ್ಲಿ ಭ್ರಾಂತರಾಗಿ ಬಿಟ್ಟಿದ್ದರು. ಅವರು ಸತ್ಯವಂತರೆನ್ನುವುದಕ್ಕೆ ಸಂಶಯವಿಲ್ಲ. ಹಾಗೂ ತಾವು ಸತ್ಯವನ್ನೇ ಆಡುತ್ತಿದ್ದೇವೆಂದು ಅವರಿಗೇ ವಿಶ್ವಾಸವಿತ್ತು. ಪ್ರಾಯಶಃ ಜನರು ಹೀಗೆ ಭ್ರಾಂತರಾಗುತ್ತಾರಲ್ಲದೆ ಅದನ್ನೇ ವಾಸ್ತವಿಕತೆಯೆಂದು ತಿಳಿದುಕೊಳ್ಳುತ್ತಾರೆ. ಅದು ಕೇವಲ ಅಂಧವಿಶ್ವಾಸವೆನಿಸುತ್ತದೆ.

ಪುಟ್ಟ ಬಾಲಕರೇ ಜಗತ್ತು ಅಂಧವಿಶ್ವಾಸಗಳಿಂದ ತುಂಬಿ ತುಳುಕುತ್ತಿದೆ. ಅಧಿಕಕ್ಕಿಂತ ಅಧಿಕವಾಗಿ ಸತ್ಯವನ್ನು ಹುಡುಕುವದಕ್ಕೆ ಎಲ್ಲಕ್ಕಿಂತ ಒಳ್ಳೆಯ ಪದ್ಧತಿಯಾಗಿ ಮನುಷ್ಯನಿಗೆ ನಿಲುಕಬಲ್ಲದ್ದಾವುದೆಂದರೆ- ಯಾವಾಗಲೂ ತನ್ನ ವಿಚಾರ, ಕಾರ್ಯ ಹಾಗೂ ವಚನಗಳಲ್ಲಿ ಹೆಚ್ಚು ಹೆಚ್ಚು ನಿಷ್ಕಪಟವಾಗಿರುವುದು. ಯಾಕಂದರೆ ಎಲ್ಲ ಸಂಗತಿಗಳಲ್ಲಿಯೂ ಹೆರರಿಗೆ ಮೋಸವನ್ನೊಡುವುದನ್ನು ಬಿಟ್ಟುಕೊಡುವುದರಿಂದಲೇ ಮನುಷ್ಯನು ತನ್ನ ತಾನು ಕಡಿಮೆ ಕಡಿಮೆ ಮೋಸಕ್ಕೀಡು ಮಾಡಿಕೊಳ್ಳುವುದನ್ನು ಕಲಿಯುತ್ತಾನೆ.


Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳಕಿನಲೆ ದೀಪಾವಳಿ
Next post ಬರ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

cheap jordans|wholesale air max|wholesale jordans|wholesale jewelry|wholesale jerseys